Harapanahalli | ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಹರಪನಹಳ್ಳಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) 2025-26ನೇ ಸಾಲಿನಲ್ಲಿ 11,41,399 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ತೆಲಿಗಿ ತಳವಾರ ಉಮಾಕಾಂತ ತಿಳಿಸಿದರು.
ನಗರದ ಟಿಎಪಿಸಿಎಂಎಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 96ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಪ್ರಸಕ್ತ ಸಾಲಿನಲ್ಲಿ ರಸಗೊಬ್ಬರ ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟದ ಮೂಲಕ 12,80,73,666 ರೂ. ವ್ಯವಹಾರ ನಡೆಸಿದೆ ಎಂದು ಹೇಳಿದರು.
2026ರ ಮಾರ್ಚ್ 31ರ ಅಂತ್ಯದ ವೇಳೆಗೆ ವ್ಯವಹಾರ, ಬಾಡಿಗೆ ಆದಾಯ ಹಾಗೂ ಬಿಡಿಪಿ ಯೋಜನೆಯಡಿ ಒಟ್ಟು 11.41 ಲಕ್ಷ ರೂ. ನಿವ್ವಳ ಲಾಭ ದಾಖಲಿಸಲಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಸಂಘದ ಮೂಲಕವೇ ರಸಗೊಬ್ಬರ ಖರೀದಿಸಿ ಸಹಕಾರ ಸಂಘವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಸಂಘವು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ, ಇಫ್ಕೋ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳು, ರಾಷ್ಟ್ರೀಯ ಪತ್ರಗಳು ಹಾಗೂ ಹೆಚ್‌ಪಿಸಿಎಲ್ ಬ್ಯಾಂಕ್‌ಗಳಲ್ಲಿ ಸೇರಿ ಒಟ್ಟು 72.44 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದೆ ಎಂದು ಮಾಹಿತಿ ನೀಡಿದರು.
ರೈತರ ಅನುಕೂಲಕ್ಕಾಗಿ ಸಿಎನ್‌ಜಿ ಗ್ಯಾಸ್ ಬಂಕ್ ಆರಂಭಿಸಲು ಅಗತ್ಯ ಆಡಳಿತಾತ್ಮಕ ಅನುಮತಿ ಈಗಾಗಲೇ ದೊರೆತಿದ್ದು, ಯೋಜನೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸದಸ್ಯ ಗೌಳಿ ಯಲ್ಲಪ್ಪ ಬರಗಾಲದ ಹಿನ್ನೆಲೆಯಲ್ಲಿ ಷೇರುದಾರ ರೈತರ ಖಾತೆಗೆ ಪರಿಹಾರ ಭತ್ಯೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಕಾರ್ಯದರ್ಶಿ ಎಚ್. ತಿರುಪತಿ, ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಮೇಲಾಧಿಕಾರಿಗಳ ಅನುಮತಿ ದೊರೆತರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪ್ರಭಾರ ಕಾರ್ಯದರ್ಶಿ ಎಚ್. ತಿರುಪತಿ ವಾರ್ಷಿಕ ವರದಿ ಮಂಡಿಸಿ ಸರ್ವ ಸದಸ್ಯರ ಒಪ್ಪಿಗೆ ಪಡೆದರು.
ಸಭೆಯಲ್ಲಿ ಉಪಾಧ್ಯಕ್ಷೆ ಉಪ್ಪಾರ ಹೂವಕ್ಕ, ನಿರ್ದೇಶಕರಾದ ಚಿಕ್ಕೇರಿ ಬಸಪ್ಪ, ಎಚ್. ತಿಮ್ಮನಾಯ್ಕ, ಬಿ. ವಾಗೀಶ, ಮುಜುಬರ್ ರಹಿಮಾನ್, ಎಂ. ಸೋಮನಾಥ, ಎಂ. ನಾಗರಾಜ, ಕೆ. ಮಹಾದೇವಪ್ಪ, ವಿ. ಹನುಮಂತಪ್ಪ, ಬಿ. ಮೂರ್ತಿನಾಯ್ಕ, ಶಾರದಮ್ಮ, ಶಹಜಾದ್ ಬಿ. ಕುಲುಮಿ, ಸರ್ಕಾರದ ನಾಮ ನಿರ್ದೇಶಕ ಟಿಎಚ್‌ಎಂ ಮಂಜುನಾಥ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.