ಹೊಸಪೇಟೆ/ವಿಜಯನಗರ: ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿಗೆ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಸೋಮವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಲಾಯಿತು.

ಅತಿಥಿ ಉಪನ್ಯಾಸಕರು ಕಳೆದ 10ರಿಂದ 20 ವರ್ಷಗಳಿಂದ ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿ ಹಲವು ವರ್ಷಗಳಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಹಲವು ತಿಂಗಳಿಂದ ವೇತನ ಪಾವತಿಯಾಗದೆ ಸಿಬ್ಬಂದಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅತಿಥಿ ಉಪನ್ಯಾಸಕರಿಗೆ ಹಿಂದಿನ 11 ತಿಂಗಳ ಬಾಕಿ ಹಾಗೂ ಪ್ರಸಕ್ತ ಸಾಲಿನ 5 ತಿಂಗಳು ಸೇರಿದಂತೆ ಒಟ್ಟು 16 ತಿಂಗಳ ವೇತನ ಪಾವತಿಯಾಗಬೇಕಿದೆ. ಅದೇ ರೀತಿ ತಾತ್ಕಾಲಿಕ ಆಡಳಿತ ಸಿಬ್ಬಂದಿಗೆ ಹಿಂದಿನ 7 ತಿಂಗಳು ಹಾಗೂ ಪ್ರಸಕ್ತ ಸಾಲಿನ 5 ತಿಂಗಳು ಸೇರಿ ಒಟ್ಟು 12 ತಿಂಗಳ ವೇತನ ಬಾಕಿ ಉಳಿದಿದೆ ಎಂದು ತಿಳಿಸಿದರು.

ವೇತನವಿಲ್ಲದೆ ಮನೆ ಬಾಡಿಗೆ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ಸೇರಿದಂತೆ ದಿನನಿತ್ಯದ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗಿದೆ. ಈ ಕುರಿತು ಕುಲಪತಿಗಳು, ಕುಲಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಬಾಕಿ ವೇತನ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಎರಡು ವಾರಗಳ ಗಡುವು :

ಮುಂದಿನ ಎರಡು ವಾರಗಳೊಳಗೆ ಸಮಗ್ರ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಹಂತದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು. ಇದರಿಂದ ಉಂಟಾಗುವ ಪರಿಸ್ಥಿತಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕುಲಪತಿ ಪರಶಿವಮೂರ್ತಿ, ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಹಾಗೂ ಉಪಕುಲಸಚಿವರ ಸಮ್ಮುಖದಲ್ಲಿ ಅತಿಥಿ ಉಪನ್ಯಾಸಕರಾದ ಡಾ. ತಿಮ್ಮಣ್ಣ ಭೀಮರಾಯ, ಡಾ. ಕೃಷ್ಣೆಗೌಡ, ಕೃಷ್ಣ ನಾಯಕ್, ವಿರೂಪಾಕ್ಷಪ್ಪ ಇಟಗಿ ಸೇರಿದಂತೆ ಹಲವರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor