Harapanahalli | ಹಲುವಾಗಲು ಪೊಲೀಸ್ ಠಾಣೆಗೆ 24 ವಸತಿ ಗೃಹ ನಿರ್ಮಾಣಕ್ಕೆ ಚಾಲನೆ
ಹರಪನಹಳ್ಳಿ: ತಾಲೂಕಿನ ಹಲುವಾಗಲು ಪೊಲೀಸ್ ಠಾಣೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 24 ಪೊಲೀಸ್ ವಸತಿ ಗೃಹಗಳ ಕಾಮಗಾರಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಗೆ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ನಿರ್ಮಾಣವಾಗುವ ವಸತಿ ಗೃಹಗಳನ್ನು ಸಿಬ್ಬಂದಿ ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಮಗಾರಿಯನ್ನು 11 ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಅವರು, ಹರಪನಹಳ್ಳಿ ಪೊಲೀಸ್ ಠಾಣೆಗೂ ಹೆಚ್ಚುವರಿ ವಸತಿ ಗೃಹಗಳ ಅಗತ್ಯವಿದ್ದು, ಶೀಘ್ರದಲ್ಲೇ ಅವುಗಳಿಗೂ ಮಂಜೂರಾತಿ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
“ಪೊಲೀಸರನ್ನು ಜನರು ಭಯದಿಂದಲ್ಲ, ವಿಶ್ವಾಸದಿಂದ ಸಂಪರ್ಕಿಸಬೇಕು. ಸಾರ್ವಜನಿಕರೊಂದಿಗೆ ಸ್ನೇಹಪೂರ್ವಕವಾಗಿ ನಡೆದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು” ಎಂದು ಪೊಲೀಸರಿಗೆ ಸಲಹೆ ನೀಡಿದರು.
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಮಾತನಾಡಿ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ವಸತಿ ಗೃಹಗಳಿದ್ದರೆ ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆ ಸುಲಭವಾಗುವುದರ ಜೊತೆಗೆ ಸಾರ್ವಜನಿಕ ಸೇವೆಯ ಗುಣಮಟ್ಟವೂ ಹೆಚ್ಚಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಡಿವೈಎಸ್‌ಪಿ ಸಂತೋಷ್ ಚವ್ಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್‌ಐ ಎ. ಕಿರಣ್ ಕುಮಾರ್, ಶಂಭುಲಿಂಗ ಹರೇಮಠ್ ಹಾಗೂ ಸ್ಥಳೀಯ ಮುಖಂಡರು, ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.