Harapanahalli | ಜಂಟಿ ಬ್ಯಾಂಕ್ ಖಾತೆ ವ್ಯವಸ್ಥೆ ಪರಿಷ್ಕರಣೆಗೆ ಶಿಕ್ಷಕರ ಸಂಘದ ಆಗ್ರಹ
ಮುಖ್ಯೋಪಾಧ್ಯಾಯ–ಮುಖ್ಯ ಅಡುಗೆದಾರರ ಹೆಸರಲ್ಲಿ ಖಾತೆ ನಿರ್ವಹಣೆಗೆ ಅವಕಾಶ ನೀಡುವಂತೆ ಮನವಿ
ಹರಪನಹಳ್ಳಿ : ಪಿ.ಎಂ.ಪೋಷಣ್ ಯೋಜನೆಯ ಅನುದಾನ ನಿರ್ವಹಣೆಗೆ ಸಂಬಂಧಿಸಿದ ಜಂಟಿ ಬ್ಯಾಂಕ್ ಖಾತೆ ವ್ಯವಸ್ಥೆಯನ್ನು ಪರಿಷ್ಕರಿಸಿ, 2022ರ ಪೂರ್ವದಲ್ಲಿ ಜಾರಿಯಲ್ಲಿದ್ದಂತೆ ಮುಖ್ಯೋಪಾಧ್ಯಾಯರು ಹಾಗೂ ಮುಖ್ಯ ಅಡುಗೆದಾರರ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಬಡ್ತಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅರ್ಜುನ್ ಪರಸಪ್ಪ ಆಗ್ರಹಿಸಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯ ಬಳಿಕ ತಾಲೂಕು ಪಂಚಾಯಿತಿ ಇಒ ವೈ. ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಪ್ರಸ್ತುತ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯೋಪಾಧ್ಯಾಯರ ಹೆಸರಿನಲ್ಲಿರುವ ಜಂಟಿ ಖಾತೆಯಿಂದ ಸಮನ್ವಯದ ಕೊರತೆ ಉಂಟಾಗುತ್ತಿದೆ. ಅಗತ್ಯ ಸಮಯದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಅಥವಾ ಮುಖ್ಯೋಪಾಧ್ಯಾಯರು ಲಭ್ಯವಿಲ್ಲದ ಕಾರಣ ಬ್ಯಾಂಕ್ ವ್ಯವಹಾರಗಳಲ್ಲಿ ವಿಳಂಬವಾಗುತ್ತಿದ್ದು, ಶಾಲಾ ಮಕ್ಕಳ ಬಿಸಿಯೂಟಕ್ಕೆ ಅಗತ್ಯ ಆಹಾರ ಸಾಮಗ್ರಿಗಳನ್ನು ಸಕಾಲದಲ್ಲಿ ಖರೀದಿಸಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯ ಅಡುಗೆದಾರರು ಪ್ರತಿದಿನ ಶಾಲೆಯಲ್ಲೇ ಕಾರ್ಯನಿರ್ವಹಿಸುವುದರಿಂದ ಮುಖ್ಯೋಪಾಧ್ಯಾಯರು ಹಾಗೂ ಮುಖ್ಯ ಅಡುಗೆದಾರರ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ನಿರ್ವಹಿಸಿದರೆ ಯೋಜನೆ ಸುಗಮವಾಗಿ ಜಾರಿಯಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಮರು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ಪಿ.ಎಂ. ಪೋಷಣ್ ಯೋಜನೆಯಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಗಳ ಖರೀದಿ ದರವನ್ನು ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಜಿ. ಪದ್ಮಲತಾ, ಜಿಲ್ಲಾ ಸಹ ಕಾರ್ಯದರ್ಶಿ ಬಿ. ರಾಜಶೇಖರ, ತಾಲೂಕು ಅಧ್ಯಕ್ಷ ಎಂ. ಪ್ರಭು, ತಾಲೂಕು ಕಾರ್ಯದರ್ಶಿ ಎಂ. ರಮೇಶ್, ಖಜಾಂಚಿ ಶಿವಯೋಗಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.