×
Ad

ಹರಪನಹಳ್ಳಿ: ಫಸಲ್ ಬಿಮಾ ಯೋಜನೆಯಲ್ಲಿ ಭಾರಿ ಅಕ್ರಮ ತನಿಖೆಗೆ ಒತ್ತಾಯ

Update: 2026-05-08 00:49 IST

ಹರಪನಹಳ್ಳಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಬೆಳೆ ವಿಮೆ)ಅಡಿಯಲ್ಲಿ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳಿಂದ ಭಾರಿ ಅಕ್ರಮ ನಡೆದಿದ್ದು, ಸಮರ್ಪಕ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಹಾರಕನಾಳು ಭಾಗದ ರೈತ ಮುಖಂಡರು ವಿಜಯನಗರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅವರಿಗೆ ಗುರುವಾರ ಹರಪನಹಳ್ಳಿಯಲ್ಲಿ ಮನವಿ ಸಲ್ಲಿಸಿದರು.

ಬೆಳೆ ವಿಮೆಗೆ ಸಂಬಂಧಪಟ್ಟಂತೆ ಸ್ಥಳೀಯ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಹಾಗೂ ನ್ಯಾಯಯುತವಾಗಿ ಕೆಲಸ ನಿರ್ವಹಿಸಿಲ್ಲ, ಬದಲಾಗಿ ಫಸಲ್ ಬಿಮಾ ಯೋಜನೆಯಲ್ಲಿ ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದರು.

ಬೆಳೆ ಕಟಾವು ಪ್ರಯೋಗ ಪ್ರಕ್ರಿಯೆಯಲ್ಲಿ ಒಣ ಬೇಸಾಯ (ಬೆದ್ದಲು) ಮತ್ತು ನೀರಾವರಿ ಭೂಮಿಯ ನಡುವೆ ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡಲಾಗಿದೆ. ನೀರಾವರಿ ಜಮೀನಿನ ಸಿಸಿ ಕಟಿಂಗ್ ಅನ್ನು ಬೆದ್ದಲು ಭೂಮಿಗೆ ಸೇರಿಸಿ ದಾಖಲೆ ತಿರುಚಲಾಗಿದೆ ಎಂದರು.

ವಿಮಾ ಕಂಪನಿಯ ನಿಯಮಾವಳಿಗಳ ಪ್ರಕಾರ, ರೈತರ ಮೊಬೈಲ್‌ಗೆ ಒಟಿಪಿ ಬಂದ ನಂತರವಷ್ಟೇ ಸಿಸಿ ಕಟಿಂಗ್ ಪ್ರಕ್ರಿಯೆ ನಡೆಸಬೇಕು. ಆದರೆ, ಇಲ್ಲಿ ಒಟಿಪಿ ಬಾರದಿದ್ದರೂ ಕಟಾವು ಪ್ರಕ್ರಿಯೆ ತೋರಿಸಿ ಏಕಪಕ್ಷೀಯವಾಗಿ ಮುಕ್ತಾಯ ಗೊಳಿಸಲಾಗಿದೆ. ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ಶೇ.75ರಷ್ಟು ನೀರಾವರಿ ಹಾಗೂ 127 ಬೆದ್ದಲು ಭೂಮಿಗೆ ಸಿಸಿ ಕಟಿಂಗ್ ತೋರಿಸಲಾಗಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ದೂರಿದರು.

ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಅವೈಜ್ಞಾನಿಕ ವರದಿ ಸಲ್ಲಿಸಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು, ಹೊಸ ಸಮಿತಿ ರಚಿಸಿ, ಪುನಃ ಮರುಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ರೈತರಾದ ಎಲ್.ಬಿ.ಹಾಲೇಶ ನಾಯ್ಕ, ಎಚ್.ಎಂ.ಬಸವರಾಜಯ್ಯ, ಭಾಷುಸಾಬ್, ಪುಟ್ಟನಾಯ್ಕ್, ಮಲ್ಲನಾಯ್ಕ ಹಾಲೇಶ, ಹರೀಶ್ಚಂದ್ರ, ಮಂಜನಾಥ ನಾಯ್ಕ್ ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News