×
Ad

Vijayanagara | KSP ಮೊಬೈಲ್ ಆಪ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ

Update: 2026-05-04 20:38 IST

ಹೊಸಪೇಟೆ/ವಿಜಯನಗರ : ಹೊಸಪೇಟೆ ನಗರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ KSP ಮೊಬೈಲ್ ಆಪ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಾಹ್ನವಿ ಅವರು ಕೈಗೊಂಡಿದ್ದಾರೆ.

ನಗರದ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ನಾಗರಿಕರಿಗೆ ಆಪ್‌ನ ಉಪಯೋಗ ಮತ್ತು ವೈಶಿಷ್ಟ್ಯಗಳ ಬಗ್ಗೆ ವಿವರಿಸಿದರು. ತುರ್ತು ಪರಿಸ್ಥಿತಿಯಲ್ಲಿ ನಾಗರಿಕರ ಭದ್ರತೆಗಾಗಿ ರೂಪುಗೊಂಡಿರುವ ಈ ಆಪ್ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮೊಬೈಲ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿಶೇಷವಾಗಿ SOS ಬಟನ್ ಮೂಲಕ ವಿಶ್ವಾಸಾರ್ಹ ಸಂಪರ್ಕಗಳಿಗೆ ತಕ್ಷಣ ಸಂದೇಶ ಕಳುಹಿಸುವ ವ್ಯವಸ್ಥೆ ಹಾಗೂ GPS ಮೂಲಕ ಸ್ಥಳ ಮಾಹಿತಿ ಹಂಚಿಕೊಳ್ಳುವ ಸೌಲಭ್ಯವು ಅಪಾಯದ ಸಂದರ್ಭಗಳಲ್ಲಿ ಜೀವ ರಕ್ಷಕವಾಗುತ್ತದೆ ಎಂದು ಹೇಳಿದರು.

ಇದರ ಜೊತೆಗೆ, ಹತ್ತಿರದ ಪೊಲೀಸ್ ಠಾಣೆಯ ಮಾಹಿತಿ, ಗೂಗಲ್ ಮ್ಯಾಪ್ಸ್ ಮೂಲಕ ನೇರ ದಾರಿ, ತುರ್ತುವಲ್ಲದ ದೂರುಗಳನ್ನು ಫೋಟೋ, ವಿಡಿಯೋ, ಆಡಿಯೋ ಹಾಗೂ ದಾಖಲೆಗಳೊಂದಿಗೆ ಕಳುಹಿಸುವ ಸೌಲಭ್ಯಗಳು ಈ ಆಪ್‌ನಲ್ಲಿ ಲಭ್ಯವಿವೆ. ರಾಜ್ಯದ ಪೊಲೀಸ್ ಕಚೇರಿಗಳ ವಿಳಾಸ, ಸಂಪರ್ಕ ವಿವರಗಳು, ಕಾಣೆಯಾದ ವ್ಯಕ್ತಿಗಳ ಮಾಹಿತಿ ಹಾಗೂ ಪ್ರಮುಖ ನೋಟಿಫಿಕೇಶನ್‌ಗಳನ್ನೂ ಪಡೆಯಬಹುದು.

ನಾಗರಿಕರಿಂದ ಬರುವ ದೂರುಗಳಿಗೆ ಸಂಬಂಧಿತ ಜಿಲ್ಲಾ ಅಥವಾ ಕಮಿಷನರೇಟ್ ಪೊಲೀಸ್ ಕಂಟ್ರೋಲ್ ರೂಮ್‌ಗಳು ತಕ್ಷಣ ಸ್ಪಂದಿಸಲಿದ್ದು, ದೂರು ಸಲ್ಲಿಸಿದವರಿಗೆ SMS ಮೂಲಕ ದೃಢೀಕರಣ ಹಾಗೂ ವರದಿ ಸಂಖ್ಯೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಈ ಜಾಗೃತಿ ಅಭಿಯಾನದಲ್ಲಿ ಪೊಲೀಸ್ ಸಿಬ್ಬಂದಿ ಸಹ ಭಾಗವಹಿಸಿ, ಸಾರ್ವಜನಿಕರಿಗೆ ಆಪ್ ಡೌನ್‌ಲೋಡ್ ಮಾಡುವ ವಿಧಾನವನ್ನು ತಿಳಿಸಿದರು. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆಪ್ ಬಳಕೆ ಕುರಿತು ಆಸಕ್ತಿ ತೋರಿದರು.

ಕೊನೆಯಲ್ಲಿ, ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ KSP ಮೊಬೈಲ್ ಆಪ್‌ನಂತಹ ಸೇವೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಸ್‌ಪಿ ಜಾಹ್ನವಿ ಕರೆ ನೀಡಿದರು.

ಪ್ರತಿಯೊಬ್ಬ ನಾಗರಿಕರ ಭದ್ರತೆ ನಮ್ಮ ಮೊದಲ ಆದ್ಯತೆ. ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಸಹಾಯ ಪಡೆಯಲು KSP ಮೊಬೈಲ್ ಆಪ್ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. SOS ವ್ಯವಸ್ಥೆ, ಸ್ಥಳ ಹಂಚಿಕೆ ಹಾಗೂ ನೇರವಾಗಿ ಪೊಲೀಸ್ ಸೇವೆಗಳನ್ನು ಪಡೆಯುವ ಸೌಲಭ್ಯಗಳಿಂದ ಜನರು ತಮ್ಮ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು.

–ಜಾಹ್ನವಿ ಎಸ್, ಪೊಲೀಸ್ ವರಿಷ್ಠಾಧಿಕಾರಿ, ವಿಜಯನಗರ ಜಿಲ್ಲೆ



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News