ಹರಪನಹಳ್ಳಿ: ಅಧಿಕಾರದಲ್ಲಿದ್ದಾಗ ಜನರು ನಮ್ಮ ಮೌಲ್ಯವನ್ನು ಅಳೆಯುತ್ತಾರೆ. ಈ ನಿಟ್ಟಿನಲ್ಲಿ ನಾವು ಕರ್ತವ್ಯ ನಿರ್ವಹಿಸಬೇಕು ಎಂದು ಡಿವೈಎಸ್ಪಿ ಡಾ. ಸಂತೋಷ್ ಚವ್ಹಾಣ್ ಹೇಳಿದರು.

ಪಟ್ಟಣದ ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ಬುಧವಾರ ಸಂಜೆ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ಪಿಎಸ್‌ಐ ಶಂಭುಲಿಂಗ ಸಿ. ಹಿರೇಮಠ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಂಭುಲಿಂಗ ಹಿರೇಮಠ ಅವರನ್ನು ಒಲ್ಲದ ಮನಸ್ಸಿನಿಂದ ಬೀಳ್ಕೊಡುತ್ತಿದ್ದೇವೆ. ಅವರು ಕಳೆದ ಮೂರು ವರ್ಷಕ್ಕೂ ಹೆಚ್ಚು ಕಾಲ ಹರಪನಹಳ್ಳಿಯಲ್ಲಿ ಸೇವೆ ಸಲ್ಲಿಸಿ ಜನರ ವಿಶ್ವಾಸ ಗಳಿಸಿದ್ದರು. ಇಲಾಖೆಯಲ್ಲಿಯೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ನಮ್ಮ ಸಮವಸ್ತ್ರ ಯಾವಾಗಲೂ ನಂಬಿಕೆ, ವಿಶ್ವಾಸ ಹಾಗೂ ನ್ಯಾಯಸಮ್ಮತತೆಯ ಪ್ರತೀಕವಾಗಿರಬೇಕು ಎಂದರು.

ಸಿಪಿಐ ಮಹಾಂತೇಶ ಜಿ. ಸಜ್ಜನ್ ಮಾತನಾಡಿ, ಶಂಭುಲಿಂಗ ಹಿರೇಮಠ ಅವರು ನಮ್ಮ ಇಲಾಖೆಗೆ ಶಕ್ತಿಯಾಗಿದ್ದರು. ಅವರಿಗೆ ವಹಿಸಲಾದ ಎಲ್ಲ ಜವಾಬ್ದಾರಿಗಳನ್ನು ಚಾಚೂತಪ್ಪದೆ ನಿರ್ವಹಿಸುತ್ತಿದ್ದರು. ಎಲ್ಲರೊಂದಿಗೆ ಸಾಮರಸ್ಯದಿಂದ ನಡೆದುಕೊಳ್ಳುತ್ತಿದ್ದರು ಎಂದು ಹೇಳಿದರು.

ವರ್ಗಾವಣೆಗೊಂಡ ಪಿಎಸ್‌ಐ ಶಂಭುಲಿಂಗ ಹಿರೇಮಠ ಮಾತನಾಡಿ, ಹರಪನಹಳ್ಳಿಯಲ್ಲಿ ಸೇವೆ ಸಲ್ಲಿಸಿರುವುದು ನನಗೆ ತೃಪ್ತಿ ತಂದಿದೆ. ಆರಂಭದಲ್ಲಿ ದೊಡ್ಡ ಠಾಣೆಯನ್ನು ಹೇಗೆ ನಿರ್ವಹಿಸುವುದು ಎಂಬ ಭಯವಿತ್ತು. ಆದರೆ ಜನರ ಸಹಕಾರ ಹಾಗೂ ಮೇಲಾಧಿಕಾರಿಗಳ ನೆರವಿನಿಂದ ಇಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು. ಹರಪನಹಳ್ಳಿಯಲ್ಲಿ ಸಲ್ಲಿಸಿರುವ ಸೇವೆಯನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಶಂಭುಲಿಂಗ ಹಿರೇಮಠ ಅವರು ಇಲಾಖೆಗೆ ಅಗತ್ಯವಾದ ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಜನರ ಸರಿ-ತಪ್ಪುಗಳನ್ನು ಸಮಾಧಾನದಿಂದ ಆಲಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಅಧಿಕಾರಿಗಳು ಹಂತಹಂತವಾಗಿ ಉನ್ನತ ಹುದ್ದೆಗಳಿಗೆ ತೆರಳಬೇಕು. ಈ ನಿಟ್ಟಿನಲ್ಲಿ ಶಂಭುಲಿಂಗ ಹಿರೇಮಠ ಅವರು ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ಎಸ್ಪಿಯಾಗಿ ಬರಲಿ ಎಂದು ಶುಭ ಹಾರೈಸಿದರು.

ನ್ಯಾಯವಾದಿ ಬಂಡ್ರಿ ಗೋಣಿಬಸಪ್ಪ ಮಾತನಾಡಿ, ಶಂಭುಲಿಂಗ ಹಿರೇಮಠ ಅವರು ಕರ್ತವ್ಯದಲ್ಲಿ ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ವಿಚಲಿತರಾಗದೆ, ಸಮಚಿತ್ತದಿಂದ ಸಮಸ್ಯೆಗಳನ್ನು ಗ್ರಹಿಸುವ ಶಕ್ತಿ ಹೊಂದಿದ್ದರು ಎಂದು ಹೇಳಿದರು.

ಅರಸೀಕೆರೆ ಪಿಎಸ್‌ಐ ವಿಜಯಕೃಷ್ಣ, ನಿವೃತ್ತ ಪಿಎಸ್‌ಐ ರುದ್ರಪ್ಪ, ಎಎಸ್‌ಐ ನಿಂಗಪ್ಪ, ಪ್ರೊಬೇಷನರಿ ಪಿಎಸ್‌ಐ ಮಂಜುನಾಥ, ಲಾಟಿ ದಾದಪೀರ ಹಾಗೂ ಪ್ರಕಾಶಗೌಡ ಅವರು ಶಂಭುಲಿಂಗ ಸಿ. ಹಿರೇಮಠ ಅವರ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಿಗಟೇರಿ ಪಿಎಸ್‌ಐ ಕೆ. ನಾಗರತ್ನ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕನಕಬಸ್ಸಾಪುರ ಮಂಜುನಾಥ, ಮಾಜಿ ಅಧ್ಯಕ್ಷ ಲಾಟಿ ದಾದಪೀರ, ನಗರಸಭೆ ಮಾಜಿ ಸದಸ್ಯರಾದ ಉದ್ದಾರ ಗಣೇಶ, ಗುಡಿ ನಾಗರಾಜ, ವಾಗೀಶ, ಮುಜಬರ್ ರಹಿಮಾನ್, ಜಾಯದ್, ಅಂಜಿನಪ್ಪ, ಎಲ್. ಮಂಜ್ಯಾನಾಯ್ಕ್, ನದೀಮ್, ಕೂಲ್ ಇರ್ಫಾನ್, ಜಿಶಾನ್, ರಿಯಾಜ್, ಅಬ್ಬು ಸಲೇಹಾ ಸೇರಿದಂತೆ ಪೊಲೀಸ್ ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor