Vijayanagara | ದೇವದಾಸಿ ಮಹಿಳೆಯರಿಗೆ ಸರ್ಕಾರಿ ಭೂಮಿ, ನಿವೇಶನ ನೀಡಲು ಆಗ್ರಹ
ಹೊಸಪೇಟೆ/ವಿಜಯನಗರ: ತಾಲೂಕಿನ ಬೈಲಹೊದ್ದಿಗೆರೆ ಗ್ರಾಮದ ದೇವದಾಸಿ ಮಹಿಳೆಯರಿಗೆ ಉಳುಮೆಗಾಗಿ ಸರ್ಕಾರಿ ಭೂಮಿ ಹಾಗೂ ವಾಸಕ್ಕಾಗಿ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗಾಕೂಸ್) ನೇತೃತ್ವದಲ್ಲಿ ಮಹಿಳೆಯರು ಹೊಸಪೇಟೆ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ಬೈಲಹೊದ್ದಿಗೆರೆ ಗ್ರಾಮದಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದು, ಅದನ್ನು ದೇವದಾಸಿ ಮಹಿಳೆಯರಿಗೆ ಉಳುಮೆಗಾಗಿ ಮಂಜೂರು ಮಾಡಬೇಕು. ಅಲ್ಲದೆ, ವಾಸಿಸಲು ನಿವೇಶನಕ್ಕಾಗಿ ಭೂಮಿಯನ್ನು ಕಾಯ್ದಿರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ದೇವದಾಸಿ ಮಹಿಳೆಯರಾದ ತಾವು ಬಡತನದ ಕಾರಣದಿಂದ ಮಕ್ಕಳ ಲಾಲನೆ-ಪಾಲನೆಯಲ್ಲೇ ಜೀವನ ಕಳೆಯುವಂತಾಗಿದೆ. ವಯಸ್ಸಾಗುತ್ತಿದ್ದರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತಿಲ್ಲ. ಉಳುಮೆ ಮಾಡಲು ಭೂಮಿ ಹಾಗೂ ವಾಸಿಸಲು ಸ್ವಂತ ನಿವೇಶನ ಇಲ್ಲದಿರುವುದರಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಭೂಮಿ ಹಾಗೂ ನಿವೇಶನಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರೂ, ಗ್ರಾಮದಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದರೆ ದೇವದಾಸಿ ಪುನರ್ವಸತಿ ನಿಗಮದ ಮೂಲಕ ಭೂಮಿ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಇದೀಗ ಗ್ರಾಮದಲ್ಲಿರುವ ಸರ್ಕಾರಿ ಭೂಮಿಯ ವಿವರವನ್ನು ಸರ್ವೆ ನಂಬರ್ ಹಾಗೂ ಪಹಣಿ ದಾಖಲೆಗಳೊಂದಿಗೆ ಸಲ್ಲಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಭೂಮಿ ಮತ್ತು ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ದೇವದಾಸಿ ಮಹಿಳೆಯರಿಗೆ ಸ್ವಾವಲಂಬಿ ಹಾಗೂ ಗೌರವಯುತ ಜೀವನ ನಡೆಸಲು ಅಗತ್ಯವಾದ ಭೂಮಿ ಮತ್ತು ನಿವೇಶನ ಕಲ್ಪಿಸುವಂತೆ ತಹಶೀಲ್ದಾರ್ ಅವರನ್ನು ಕೋರಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಲ್ಲೇಶ್, ಜಿಲ್ಲಾ ಕಾರ್ಯಕರ್ತರಾದ ಶೈನಾಜ್, ಅಕ್ಕಮ್ಮ, ರತ್ನಮ್ಮ, ಜಲಾಲಿ ಸೇರಿದಂತೆ ದೇವದಾಸಿ ಮಹಿಳೆಯರಾದ ಮಾರಮ್ಮ, ಸುಡುಗಾಡಮ್ಮ, ಸಣ್ಣ ವೀರೇಶಮ್ಮ, ಮೀನಾಕ್ಷಿ, ದೊಡ್ಡ ಮಲ್ಲಮ್ಮ, ಗಂಗಮ್ಮ, ಸಣ್ಣ ಗಾಳಮ್ಮ, ತಾಯಮ್ಮ, ಸಾವಿತ್ರಮ್ಮ, ದೊಡ್ಡ ವೀರೇಶಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.