×
Ad

Vijayanagara | ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ : ಡಿಸಿ ಕವಿತಾ ಮನ್ನಿಕೇರಿ

ಮುಂಗಾರು ಹಂಗಾಮಿಗೆ ಅಗತ್ಯ ದಾಸ್ತಾನು ಖಚಿತಪಡಿಸಲು ಸೂಚನೆ

Update: 2026-07-02 19:58 IST

ವಿಜಯನಗರ (ಹೊಸಪೇಟೆ): ಮುಂಗಾರು ಹಂಗಾಮು ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಳ್ಳುತ್ತಿರುವುದರಿಂದ ರೈತರಿಗೆ ಯಾವುದೇ ರೀತಿಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಟಿಸುವ ಹಾಗೂ ಅಧಿಕ ದರಕ್ಕೆ ಮಾರಾಟ ಮಾಡುವ ವರ್ತಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜುಲೈ ಮೊದಲ ವಾರದಿಂದ ಮುಂಗಾರು ಮಳೆ ಚುರುಕುಗೊಳ್ಳುವ ನಿರೀಕ್ಷೆಯಿದ್ದು, ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 2,49,638 ಎಕರೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಮಳೆ ಕೊರತೆಯಿಂದಾಗಿ ಇದುವರೆಗೆ 76,710 ಎಕರೆಯಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.30ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ನೋಂದಾಯಿತ ಖಾಸಗಿ ಮಾರಾಟಗಾರರ ಬಳಿ ಯೂರಿಯಾ, ಡಿಎಪಿ, ಪೊಟ್ಯಾಶ್ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳ ಅಗತ್ಯ ಪ್ರಮಾಣದ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ರಸಗೊಬ್ಬರ ಖರೀದಿಗೆ ರೈತರನ್ನು ಬೇಡಿಕೆಯಿಲ್ಲದ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸಲು ಒತ್ತಾಯಿಸುವುದು ಅಥವಾ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಪಿಒಎಸ್ ಯಂತ್ರದ ಮೂಲಕ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ರಸಗೊಬ್ಬರ ವಿತರಣೆ ಕಡ್ಡಾಯವಾಗಿ ನಡೆಯಬೇಕು. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆಯ ಕುರಿತು ಗ್ರಾಮ ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಕೃಷಿ ಇಲಾಖೆಗೆ ನಿರ್ದೇಶನ ನೀಡಿದರು.

ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ರೀತಿಯ ಅಕ್ರಮ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿಮಾ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಮಾತನಾಡಿ, ಜಿಲ್ಲೆಯ ಮುಂಗಾರು ಹಂಗಾಮಿಗೆ 1,33,543 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಪ್ರಸ್ತುತ 74,538 ಮೆಟ್ರಿಕ್ ಟನ್ ದಾಸ್ತಾನು ಇದೆ. ಇದುವರೆಗೆ 49,776 ಮೆಟ್ರಿಕ್ ಟನ್ ರೈತರಿಗೆ ವಿತರಿಸಲಾಗಿದ್ದು, 24,762 ಮೆಟ್ರಿಕ್ ಟನ್ ದಾಸ್ತಾನು ಉಳಿದಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜೋಳ, ತೊಗರಿ, ಸೂರ್ಯಕಾಂತಿ, ಮುಸುಕಿನ ಜೋಳ, ಹತ್ತಿ ಹಾಗೂ ಈರುಳ್ಳಿ ಬೆಳೆಗಳಿಗೆ ಜುಲೈ 31 ಮತ್ತು ಭತ್ತ, ರಾಗಿ, ನವಣೆ, ಹುರುಳಿ, ನೆಲಗಡಲೆ ಹಾಗೂ ಸಜ್ಜೆ ಬೆಳೆಗಳಿಗೆ ಆಗಸ್ಟ್ 14 ಕೊನೆಯ ದಿನವಾಗಿದ್ದು, ರೈತರು ಸಕಾಲದಲ್ಲಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಾಮದೇವಕೊಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News