ಹೂವಿನಹಡಗಲಿ | ಚಂದ್ರಶೇಖರ ದೊಡ್ಡಮನಿ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಕೆಆರ್ಎಸ್ ಆಗ್ರಹ
ಹೂವಿನಹಡಗಲಿ: ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಾಗೂ ಕೆಆರ್ಎಸ್ ಪಕ್ಷದ ಕಾರ್ಯಕರ್ತ ಚಂದ್ರಶೇಖರ ದೊಡ್ಡಮನಿ ಅವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ನಡೆಸಲು ಹಡಗಲಿಗೆ ಬಂದಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಕೆಆರ್ಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ನಡೆದ ಸಭೆಯಲ್ಲಿ ಪಾಯ ಗಣೇಶ್, ರಘು ಜಾಣಗೆರೆ, ಶಕ್ತಿಕುಮಾರ್, ರಘುಪತಿ ಭಟ್ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಪಾಯ ಗಣೇಶ್ ಮಾತನಾಡಿ, ಹಡಗಲಿಯಲ್ಲಿ ನಡೆಯುತ್ತಿರುವ ಅನ್ಯಾಯ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಪಕ್ಷದ ಕಾರ್ಯಕರ್ತರು ಆಗಮಿಸಿದ್ದಾರೆ. ಕೆಆರ್ಎಸ್ ಪಕ್ಷದಲ್ಲಿ 72 ಸಾವಿರಕ್ಕೂ ಹೆಚ್ಚು ಸೈನಿಕರಿದ್ದು, ನಮ್ಮ ಊರಿನ ರಕ್ಷಣೆಯನ್ನು ನಾವೇ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿ ಕ್ಷೇತ್ರದಲ್ಲೂ ಕೆಆರ್ಎಸ್ ಪಕ್ಷದ ಒಬ್ಬ ಸೈನಿಕ ಶಾಸಕನಾಗಬೇಕು. ಸಂವಿಧಾನಬದ್ಧ ಆಡಳಿತ ನೀಡುವುದು ನಮ್ಮ ಪಕ್ಷದ ಆಶಯವಾಗಿದೆ ಎಂದರು.
ರಘು ಜಾಣಗೆರೆ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಆಗಮಿಸಿದ್ದಾರೆ. ಇಂದಿನ ರಾಜಕಾರಣ ವ್ಯಾಪಾರ ಮತ್ತು ವ್ಯವಹಾರವಾಗಿ ಮಾರ್ಪಟ್ಟಿದ್ದು, ಜನರ ತೆರಿಗೆ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವ ಕಾಮಗಾರಿಗಳಲ್ಲಿಯೂ ಅವ್ಯವಹಾರ ನಡೆದಿದೆ ಎಂದು ದೂರಿದರು.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ಕೆಆರ್ಎಸ್ ಪಕ್ಷದ ಕಾರ್ಯಕರ್ತ ಚಂದ್ರಶೇಖರ ದೊಡ್ಡಮನಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕುಡುಗೋಲುಮಟ್ಟಿ ಏತ ನೀರಾವರಿ ಯೋಜನೆಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿ, ರೈತರಿಗೆ ನೀರು ದೊರಕಿಸುವಂತೆ ಅವರು ಹೋರಾಟ ನಡೆಸಿದ್ದಾರೆ. ಇದೀಗ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಅವರು ದೂರು ನೀಡಲು ಹೋದಾಗಲೂ ಪೊಲೀಸರು ಸ್ವೀಕರಿಸಲಿಲ್ಲ ಎಂಬ ಆರೋಪವಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಚಂದ್ರಶೇಖರ ದೊಡ್ಡಮನಿ ಅವರ ಬೆಂಬಲಕ್ಕೆ ಹಡಗಲಿಯ ಜನತೆ ನಿಲ್ಲಬೇಕು. ಪೊಲೀಸರು ಸಂವಿಧಾನವನ್ನು ಓದಿ, ಅದರ ಆಶಯದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ, ಹಲ್ಲೆಗೊಳಗಾದವರನ್ನೇ ಬಂಧಿಸಿ ಜೈಲಿಗೆ ಕಳುಹಿಸಿರುವುದು ದುರದೃಷ್ಟಕರ. ಪ್ರಾಥಮಿಕ ತನಿಖೆ ನಡೆಸದೆ ಎಫ್ಐಆರ್ ದಾಖಲಿಸಿರುವ ಪೊಲೀಸರ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಂದ್ರಶೇಖರ ದೊಡ್ಡಮನಿ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿರುವುದರ ಹಿಂದಿನ ಉದ್ದೇಶದ ಬಗ್ಗೆಯೂ ಪ್ರಶ್ನಿಸಿದರು.
ಮಾಜಿ ಶಾಸಕ ಪರಮೇಶ್ವರ ನಾಯಕ್ ಅವರ ಆಡಳಿತದ ಅವಧಿಯಲ್ಲಿ ಶೇ. 5ರಿಂದ 7ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು ಎಂಬ ಆರೋಪವಿತ್ತು. ಆದರೆ, ಈಗಿನ ಶಾಸಕ ಕೃಷ್ಣ ನಾಯಕ್ ಅವರ ಅವಧಿಯಲ್ಲಿ ಶೇ. 20ರಿಂದ 30ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಆರೋಪಗಳ ಕುರಿತು ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು ಎಂದರು.
ಚಂದ್ರಶೇಖರ ದೊಡ್ಡಮನಿ ಅವರು ಜೈಲಿನಿಂದ ಹೊರಬಂದ ಬಳಿಕ ಸಂಘಟಿತ ಹೋರಾಟ ನಡೆಸಲಾಗುವುದು. ಶಾಸಕ ಕೃಷ್ಣ ನಾಯಕ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸುತ್ತೇವೆ. ಕೆಆರ್ಎಸ್ ಪಕ್ಷದಲ್ಲಿ ಜಾತಿ, ಕುಲ, ಮತದ ಭೇದವಿಲ್ಲ. ಸಂವಿಧಾನಬದ್ಧ ಆಡಳಿತ ಮತ್ತು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ನಮ್ಮ ಗುರಿಯಾಗಿದೆ. ಹೂವಿನಹಡಗಲಿ ಜನತೆ ಕೆಆರ್ಎಸ್ ಪಕ್ಷವನ್ನು ಬೆಂಬಲಿಸಬೇಕು. ನಿಮ್ಮ ನ್ಯಾಯಯುತ ಹೋರಾಟದಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಬೆಂಬಲಿಗರು ಪಾಲ್ಗೊಂಡಿದ್ದರು.