ದೇಶದ ಏಕತೆ, ಸಂವಿಧಾನದ ಆಶಯಗಳ ರಕ್ಷಣೆಯೇ ಪ್ರತಿಯೊಬ್ಬರ ಕರ್ತವ್ಯ: ಸಚಿವ ಕೆ.ಎಸ್.ಬಸವಂತಪ್ಪ

Update: 2026-08-15 18:27 IST

ವಿಜಯನಗರ (ಹೊಸಪೇಟೆ) : ದೇಶದ ಏಕತೆ, ಸಮಗ್ರತೆ ಹಾಗೂ ಸಂವಿಧಾನದ ಆಶಯಗಳನ್ನು ಕಾಪಾಡಿಕೊಂಡು ಮುನ್ನಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಕರೆ ನೀಡಿದರು.

ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಯುವ ಕರ್ನಾಟಕ–ನವಭಾರತ’ ನಿರ್ಮಾಣದ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.

ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ಡಾ. ಬಿ.ಆರ್. ಅಂಬೇಡ್ಕರ್, ಸರೋಜಿನಿ ನಾಯ್ಡು ಸೇರಿದಂತೆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಆದರ್ಶಗಳನ್ನು ಸ್ಮರಿಸಿದರು. ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಮಹಿಳಾ ಹೋರಾಟಗಾರರ ಕೊಡುಗೆಯನ್ನೂ ನೆನಪಿಸಿದರು.

ಸವಾಲುಗಳಿಗೆ ಸಾಮೂಹಿಕ ಪರಿಹಾರ ಅಗತ್ಯ :

ಸ್ವಾತಂತ್ರ್ಯಾನಂತರ ಭಾರತ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಆದರೆ ಬಡತನ, ನಿರುದ್ಯೋಗ, ಲಿಂಗ ಮತ್ತು ಆರ್ಥಿಕ ಅಸಮಾನತೆ, ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ, ನೀರಿನ ಕೊರತೆ ಹಾಗೂ ಅರಣ್ಯ ನಾಶದಂತಹ ಸವಾಲುಗಳು ಇನ್ನೂ ಇವೆ. ಇವುಗಳನ್ನು ಎದುರಿಸಲು ಸರ್ಕಾರದೊಂದಿಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯ ಜನರಿಗೆ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಮೂಲಕ ಸಾವಿರಾರು ಕುಟುಂಬಗಳು ಮತ್ತು ಯುವಜನರು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಅನ್ನಭಾಗ್ಯ ಯೋಜನೆಯಡಿ 3.30 ಲಕ್ಷಕ್ಕೂ ಹೆಚ್ಚು ಕುಟುಂಬಗಳ 11.60 ಲಕ್ಷ ಫಲಾನುಭವಿಗಳಿಗೆ ಪಡಿತರ ತಲುಪಿಸಲಾಗಿದ್ದು, ಡಿಬಿಟಿ ಮೂಲಕ 285.92 ಕೋಟಿ ರೂ. ಗೂ ಹೆಚ್ಚು ಹಣ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 1,727 ಕೋಟಿ ರೂ., ಗೃಹಜ್ಯೋತಿ ಯೋಜನೆಯಡಿ 468.26 ಕೋಟಿ ರೂ. ಹಾಗೂ ಶಕ್ತಿ ಯೋಜನೆಯಡಿ ಮಹಿಳೆಯರು ಮತ್ತು ಮಕ್ಕಳ ಉಚಿತ ಪ್ರಯಾಣಕ್ಕಾಗಿ 430.16 ಕೋಟಿ ರೂ. ಸರ್ಕಾರದಿಂದ ಭರಿಸಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಜನತೆಗೆ 32.93 ಕೋಟಿ ರೂ. ಧನಸಹಾಯ ತಲುಪಿಸಲಾಗಿದೆ ಎಂದರು.

ರೈತರಿಗೆ ವಿವಿಧ ಯೋಜನೆಗಳ ನೆರವು :

ಜಿಲ್ಲೆಯಲ್ಲಿ ಶೇ.36ರಷ್ಟು ಮಳೆ ಕೊರತೆಯಿದ್ದರೂ 2.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪಿಎಂ-ಕಿಸಾನ್ ಯೋಜನೆಯಡಿ 1.29 ಲಕ್ಷ ರೈತರಿಗೆ 736.12 ಕೋಟಿ ರೂ. ಹಾಗೂ ಬೆಳೆ ವಿಮೆಯಡಿ 53,680 ರೈತರ ಖಾತೆಗಳಿಗೆ 66.40 ಕೋಟಿ ರೂ. ಪರಿಹಾರ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಗಣಿ ಪರಿಸರ ಪುನರುತ್ಥಾನ ನಿಗಮದಿಂದ ಜಿಲ್ಲೆಯ ಅಭಿವೃದ್ಧಿಗೆ 4,107 ಕೋಟಿ ರೂ. ಕಾಯ್ದಿರಿಸಲಾಗಿದ್ದು, 2,171 ಕೋಟಿ ರೂ. ಮೊತ್ತದ 132 ಪ್ರಸ್ತಾವನೆಗಳಿಗೆ ಮಂಜೂರಾತಿ ದೊರೆತಿದೆ. ಡಿಎಂಎಫ್ ನಿಧಿಯ 104 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದ್ದು, 21.40 ಕೋಟಿ ರೂ. ವೆಚ್ಚದ ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.

ಯುವಜನರು, ರೈತರಿಗೆ ಹೊಸ ಯೋಜನೆಗಳು :

ಮುಂದಿನ ದಿನಗಳಲ್ಲಿ ಒಂದು ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.50ರಷ್ಟು ಸಬ್ಸಿಡಿ ನೀಡುವ ‘ರೈತ ಮಿತ್ರ’ ಯೋಜನೆ, ಭಾರತ್ ಜೋಡೋ ಯುವ ಸಂಘಗಳಿಗೆ ತಲಾ ₹10 ಲಕ್ಷ ನೆರವು, ಯುವಜನರನ್ನು ನಶೆಯಿಂದ ಮುಕ್ತಗೊಳಿಸುವ ಅಭಿಯಾನ, ಉದ್ಯೋಗ ಸೃಷ್ಟಿ ಹಾಗೂ ಮರಗಳನ್ನು ಬೆಳೆಸಿ ಆದಾಯ ಗಳಿಸುವ ‘ಮರಗಳ ಸಿರಿ’ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ :

ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಡಾ. ಮಂಜುನಾಥ್, ಸೋಮಶೇಖರ್, ಶೃತಿ, ವಿರೂಪಾಕ್ಷಪ್ಪ, ಬಿ.ಎಂ. ಲೋಕೇಶ್ ಬಾಬು, ಎಂ. ಜಿಲಾನ್ ಸಾಹೇಬ್, ವೈ. ಬಸವರಾಜ್ ಹಾಗೂ ಗಂಗಾಧರ ಅವರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅದ್ಬುಲ್ ಅವರನ್ನೂ ಸನ್ಮಾನಿಸಲಾಯಿತು.

ದೇಶಭಕ್ತಿ ಸಾರಿದ ಸಾಂಸ್ಕೃತಿಕ ಕಾರ್ಯಕ್ರಮ :

ನರ್ಮದಾ ಆಂಗ್ಲ ಮಾಧ್ಯಮ ವಸತಿ ಶಾಲೆ, ಶ್ರೀ ಕರಿ ಆಂಗ್ಲ ಮಾಧ್ಯಮ ಶಾಲೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆ ಹಾಗೂ ಜ್ಯಾಕ್ಸ್ ಅಂಡ್ ಜಿಲ್ಸ್ ಫ್ರೀ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಪರೇಡ್ ಕಮಾಂಡರ್ ಗೋವಿಂದ ಅವರ ನೇತೃತ್ವದಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ಪೊಲೀಸ್ ಪಡೆ, ಮಹಿಳಾ ಪೊಲೀಸ್ ಪಡೆ, ಹೋಮ್‌ಗಾರ್ಡ್, ಎನ್‌ಸಿಸಿ, ಸೇವಾದಳ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡಗಳು ಭಾಗವಹಿಸಿ ಗಮನ ಸೆಳೆದವು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News