ಹಗರಿಬೊಮ್ಮನಹಳ್ಳಿ ಕಸ್ಟಡಿ ಸಾವು ಪ್ರಕರಣ: ಎಸ್ಪಿಗೆ ನೋಟಿಸ್
ಸಾಂದರ್ಭಿಕ ಚಿತ್ರ (PTI)
ಕಂಪ್ಲಿ: ಇತ್ತೀಚೆಗೆ ಪೊಲೀಸರು ಠಾಣೆಗೆ ಕರೆಸಿ, ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಖಲೀಲುಲ್ಲಾ (38) ಎಂಬವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ಸ್ವಯಂಪ್ರೇರಿತ (ಸುವೋಮೊಟೋ) ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಸಮಗ್ರ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವಂತೆ ವಿಜಯನಗರ ಎಸ್ಪಿಗೆ ನೋಟಿಸ್ ನೀಡಿದೆ.
ಕುಟುಂಬ ಕಲಹದ ದೂರಿನ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮೆಹಬೂಬ ನಗರ ನಿವಾಸಿ ಖಲೀಲುಲ್ಲಾ ಎಂಬವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಖಲೀಲುಲ್ಲಾ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದನ್ನು ಲಾಕಪ್‌ಡೆತ್ ಎಂದು ಆರೋಪಿಸಿದ್ದ ಕುಟುಂಬಸ್ಥರು ತನಿಖೆಗೆ ಒತ್ತಾಯಿಸಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ಸ್ವಯಂಪ್ರೇರಿತ ಸುಮೊಟೋ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಸಮಗ್ರ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವಂತೆ ವಿಜಯನಗರ ಎಸ್ಪಿ ಅವರಿಗೆ ನೋಟೀಸ್ ನೀಡಿದೆ. ವರದಿ ಬಂದ ನಂತರ ನಿಯಮಾನುಸಾರ ಸೂಕ್ತ ವಿಚಾರಣೆ ಕೈಗೊಳ್ಳಲಾಗುವುದೆಂದು ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ತಿಳಿಸಿದ್ದಾರೆ.