Vijayanagar | ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಆಗ್ರಹಿಸಿ ಮನವಿ
ಕೊಟ್ಟೂರು (ವಿಜಯನಗರ): ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಿ, ಅವರನ್ನು ಕಾರ್ಮಿಕರೆಂದು ಪರಿಗಣಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಸಿಯೂಟ ತಯಾರಕರ ಫೆಡರೇಷನ್ ಮುಖ್ಯಸ್ಥೆ ಟಿ.ಎಂ. ರೂಪಾ ಆಗ್ರಹಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಶುಕ್ರವಾರ ತಹಶೀಲ್ದಾರ್ ಜಿ.ಕೆ. ಅಮರೀಶ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಬಿಸಿಯೂಟ ತಯಾರಕರ ಸೇವೆಯನ್ನು ಖಾಯಂಗೊಳಿಸಬೇಕು. ನಿವೃತ್ತಿಯಾಗುವ ತಯಾರಕರಿಗೆ ನೀಡಲಾಗುತ್ತಿರುವ 40 ಸಾವಿರ ರೂ. ಇಡುಗಂಟು ಮೊತ್ತವನ್ನು 2 ಲಕ್ಷ ರೂ. ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು. ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರಸ್ತುತ 30 ಪೈಸೆಯಿಂದ 1ರೂ. ಗೆ ಹೆಚ್ಚಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಕಾರ್ಯಕರ್ತರನ್ನು ಏಕಾಏಕಿ ಸೇವೆಯಿಂದ ಬಿಡುಗಡೆಗೊಳಿಸದೆ, ಸಮೀಪದ ಶಾಲೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಸಿಪಿಐ ತಾಲೂಕು ಘಟಕದ ಕಾರ್ಯದರ್ಶಿ ಕೆ. ರೇಣುಕಮ್ಮ ಮಾತನಾಡಿ, ಬಿಸಿಯೂಟ ತಯಾರಕರ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಕೆ ವೇಳೆ ಎಚ್. ಶಕೀಲಬಾನು, ರತ್ನಮ್ಮ, ಪದ್ಮ, ಶೃತಿ, ರಾಜಮ್ಮ, ಮಂಗಳ, ಸುನೀತಾ, ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.