×
Ad

ಸರ್ಕಾರದ ಯೋಜನೆಗಳ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಲಿ: ವಿಜಯನಗರ ಜಿಲ್ಲಾಧಿಕಾರಿ ಕವಿತಾ.ಎಸ್ ಮನ್ನಿಕೇರಿ

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಮೊಬೈಲ್ ಕ್ಯಾಂಟೀನ್

Update: 2026-06-12 00:21 IST

ವಿಜಯನಗರ: ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯುವುದರ ಜತೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ಜಿಲ್ಲಾಧಿಕಾರಿ ಕವಿತಾ.ಎಸ್ ಮನ್ನಿಕೇರಿ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರವಾಸೋದ್ಯಮ ಇಲಾಖೆಯ ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಅಧಿಕಾರಿಗಳು ಯಾವುದೇ ವಿಳಂಬ ಮಾಡದೇ ಅರ್ಹ ಫಲಾನುಭವಿಗಳಿಗೆ ಮೊಬೈಲ್ ಕ್ಯಾಂಟಿನ್ ವಾಹನಗಳ ಸೌಲಭ್ಯ ನೀಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.

ವಿಶ್ವವಿಖ್ಯಾತ ಹಂಪಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ದಿಗೆ ಪೂರಕವಾಗಿ ಯೋಜನೆ ಅನುಷ್ಠಾನವಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ‘ಮೊಬೈಲ್ ಕ್ಯಾಂಟೀನ್’ ಯಾವುದೇ ಲೋಪದೋಷಗಳಿಲ್ಲದೆ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ಹಂಪಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಅಥವಾ ಜಿಲ್ಲೆಗೆ ಬರುವ ದೇಶ-ವಿದೇಶಿ ಪ್ರವಾಸಿಗರ ಗಮನದಲ್ಲಿಟ್ಟುಕೊಂಡು, ವಿಶ್ವ ಪಾರಂಪರಿಕ ತಾಣ ಹಂಪಿ, ಕಮಲಾಪುರ, ಹೊಸಪೇಟೆ ನಗರದ ಪ್ರಮುಖ ವೃತ್ತಗಳು ಹಾಗೂ ಪ್ರವಾಸಿಗರು ಹೆಚ್ಚಾಗಿ ಸಂಚರಿಸುವ ಹೆದ್ದಾರಿಯ ಆಯಕಟ್ಟಿನ ಜಾಗಗಳಲ್ಲಿ ಈ ಸಂಚಾರಿ ಕ್ಯಾಂಟೀನ್ ನಡೆಸಲು ಅವಕಾಶ ಕಲ್ಪಿಸಿ ಕೊಡಬೇಕು. ಇಲಾಖೆಯಿಂದ ಸಿಗುವ ಗರಿಷ್ಠ ಸಹಾಯಧನ ಮೊತ್ತ ಹಾಗೂ ಬ್ಯಾಂಕ್‌ಗಳ ಮೂಲಕ ಒದಗಿಸಲಾಗುವ ಸಾಲ ಸೌಲಭ್ಯ ಸಕಾಲಕ್ಕೆ ಸಿಗುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸುವ ಮೂಲಕ ಕಾರ್ಯನಿರ್ವಹಿಸಬೇಕು ಎಂದರು.

ಪ್ರವಾಸಿ ತಾಣ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಮೊಬೈಲ್ ಕ್ಯಾಂಟೀನ್ ವಿತರಿಸುವುದಷ್ಟೇ ಮುಖ್ಯವಲ್ಲ, ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ ಎಂದು ಹೇಳಿದರು.

ಕ್ಯಾಂಟೀನ್‌ಗಳಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ: ಕಸ ವಿಲೇವಾರಿಗೆ ಜೈವಿಕವಾಗಿ ಕೊಳೆಯುವ ವಸ್ತುಗಳ ಬಳಸಬೇಕು ಮತ್ತು ತ್ಯಾಜ್ಯ ವಿಲೇವಾರಿಗೆ ಕಸದ ಡಬ್ಬಿ ಬಳಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಹಂಪಿಯ ರಕ್ಷಿತ ಮತ್ತು ಬಫರ್ ವಲಯದ ಐತಿಹಾಸಿಕ ಸ್ಮಾರಕಗಳ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ನಿಯಮ ಪಾಲಿನೆ ಮಾಡಬೇಕು ಎಂದು ಅವರು ಎಚ್ಚರಿಸಿದರು.

ಈ ಯೋಜನೆಯ ಮೂಲಕ ಪ್ರವಾಸಿಗರಿಗೆ ಶುಚಿ-ರುಚಿಯಾದ ಸ್ಥಳೀಯ ಮತ್ತು ಸಾಂಪ್ರದಾಯಿಕ ಆಹಾರ ಪದಾರ್ಥಗಳು ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು. ಇದು ಕೇವಲ ಒಂದು ಸಮುದಾಯದ ಆರ್ಥಿಕ ಪ್ರಗತಿಯಷ್ಟೇ ಅಲ್ಲದೆ, ಜಿಲ್ಲೆಯ ಪ್ರವಾಸೋದ್ಯಮ ಮೂಲಸೌಕರ್ಯ ವೃದ್ಧಿಗೂ ಪೂರಕವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಈ ವೇಳೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪ್ರಭುಲಿಂಗ ತಳಕೇರಿ ಮಾತನಾಡಿ, 2024-25ನೇ ಸಾಲಿಗೆ ಈ ಯೋಜನೆಯಡಿ, ಪರಿಶಿಷ್ಟ ಜಾತಿಗೆ 6 ಮತ್ತು ಪರಿಶಿಷ್ಟ ಪಂಗಡಕ್ಕೆ 4 ಸೇರಿ ಒಟ್ಟು 10 ಜನ ಫಲಾನುಭವಿಗಳಿಗೆ ನೀಡುವ ಗುರಿ ಹೊಂದಲಾಗಿದೆ. ಈ ಪೈಕಿ 4 ಫಲಾನುಭವಿಗಳ ಅರ್ಜಿ ಅನುಮೋದನೆಗೊಂಡು ಸಹಾಯಧನ ಮಂಜೂರು ಮಾಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲೇ ವಾಹನ ವಿತರಣೆ ಮಾಡಲಾಗುವುದು. ಉಳಿದ 6 ಫಲಾನುಭವಿಗಳ ಆಯ್ಕೆಗಾಗಿ ಮುಂದಿನ ದಿನಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು.

2025-26ನೇ ಸಾಲಿಗಾಗಿ ಪರಿಶಿಷ್ಟ ಜಾತಿಗೆ 6 ಮತ್ತು ಪರಿಶಿಷ್ಟ ಪಂಗಡಗಕ್ಕೆ 4 ಸೇರಿ ಒಟ್ಟು 10 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಅದಕ್ಕಾಗಿ ಪರಿಶಿಷ್ಟ ಜಾತಿ ಸಮುದಾಯದಿಂದ 25 ಹಾಗೂ ಪರಿಶಿಷ್ಟ ಪಂಗಡ ಫಲಾನುಭವಿಗಳಿಂದ 4 ಸೇರಿ ಒಟ್ಟು 29 ಅಭ್ಯರ್ಥಿಗಳಿಂದ ಅರ್ಜಿ ಸ್ವೀಕೃತವಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಶೇ.33 ರಷ್ಟು ಮಹಿಳೆಯರಿಗೆ ಮೀಸಲಾತಿ ಹಾಗೂ ಫಲಾನುಭವಿಗಳ ವಯಸ್ಸು ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕ ಮತ್ತು ವಯೋಮಿತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News