Vijayanagara | ಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾ ಮೂಲದ 37 ಕಾರ್ಮಿಕರ ರಕ್ಷಣೆ
ಕುಟುಂಬಕ್ಕೆ ವಾರಕ್ಕೆ ಕೇವಲ 500 ರೂ ಸಂಬಳ!
ಹೊಸಪೇಟೆ: ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿಯಲ್ಲಿ ಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾ ಮೂಲದ 37 ಕಾರ್ಮಿಕರನ್ನು ರಕ್ಷಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಸ್ಪಂದನ ಎಂಬ ಎನ್‌ಜಿಓ ಸಂಸ್ಥೆ ನೀಡಿದ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಹಾಯಕ ಆಯುಕ್ತರು ನಂದಿಬಂಡಿ ಗ್ರಾಮದ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿಯ ವೇಳೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದ 10 ಮಕ್ಕಳು, 11 ಮಹಿಳೆಯರು, 16 ಪುರುಷರು ಸೇರಿದಂತೆ ಒಟ್ಟು 37 ಮಂದಿ ಕಾರ್ಮಿಕರು ಇದ್ದು, ಎಲ್ಲರೂ ಒಡಿಶಾದ ಬಲಂಗೀರ್ ಮತ್ತು ನವರಂಗ್ಪುರ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರನ್ನು ಒಡಿಶಾದಿಂದ ಕರೆತರಲಾಗಿದ್ದು, ಆರು ತಿಂಗಳ ಹಿಂದೆ ಪ್ರತಿ ವ್ಯಕ್ತಿಗೆ 40,000 ರೂಪಾಯಿ ಮುಂಗಡ ಹಣ ನೀಡಿ ಇಲ್ಲಿಗೆ ಕರೆತರಲಾಗಿತ್ತು. ಆರಂಭದಲ್ಲಿ ಆರು ತಿಂಗಳ ಅವಧಿಗಷ್ಟೇ ಕೆಲಸ ಮಾಡಿಸುವುದಾಗಿ, ಕೆಲಸದ ಆಧಾರದ ಮೇಲೆ ಹಣ ನೀವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಹಣದ ಆಸೆಗೆ ವಾರವಿಡೀ ಮೈ ಮುರಿದು ಕೆಲಸ ಮಾಡಿದರೂ, ಇಡೀ ಕುಟುಂಬಕ್ಕೆ ವಾರಕ್ಕೆ ಕೇವಲ 500 ರೂಪಾಯಿ ಮಾತ್ರ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ನಾವು ಆರು ತಿಂಗಳ ಹಿಂದೆ ಬಂದಿದ್ದೇವೆ. ನಮ್ಮ ಅವಧಿ ಮುಗಿದಿದೆ ನಾವು ಹೋಗುತ್ತೇವೆ ಎಂದು ಹೇಳಿದಾಗ ನೀವು ತಲಾ 40,000 ರೂ. ಪಡೆದು ಬಂದಿದ್ದೀರಿ, ಹೋಗುವಂತಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು. ಹೊರ ಪ್ರಪಂಚದ ಸಂಪರ್ಕವಿಲ್ಲದಂತೆ ಕಾಯಲು ಸೆಕ್ಯೂರಿಟಿ ಗಾರ್ಡ್ ಕೂಡ ನೇಮಿಸಲಾಗಿತ್ತು ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಪ್ರತಿಕ್ರಿಯಿಸಿ, ಇದು ಅತ್ಯಂತ ಆಘಾತಕಾರಿ ಘಟನೆ. ಜೀತ ಪದ್ಧತಿಯಂತಹ ಅನಿಷ್ಟ ಪದ್ಧತಿಯನ್ನು ಬೆಂಬಲಿಸುವವರ ವಿರುದ್ಧ ಈಗಾಗಲೇ ಮರಿಯಮ್ಮನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಟ್ಟುಸಿರು ಬಿಟ್ಟ ಕಾರ್ಮಿಕರು :
ಒತ್ತೆಯಾಳುಗಳಾಗಿದ್ದ ಒಡಿಶಾ ಮೂಲದ 37 ಜೀವಗಳಿಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಜಿಲ್ಲಾಡಳಿತದ ಮಿಂಚಿನ ಕಾರ್ಯಾಚರಣೆಯಿಂದಾಗಿ ಜೀತ ಪದ್ಧತಿಯ ಸಂಕೋಲೆಯಲ್ಲಿ ನಲುಗುತ್ತಿದ್ದ 37 ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸಹಾಯಕ ಆಯುಕ್ತ ವಿವೇಕಾನಂದ ಅವರ ನೇತೃತ್ವದ ತಂಡವು ನಂದಿಬಂಡಿ ಗ್ರಾಮದ ಮೇಲೆ ದಾಳಿ ನಡೆಸಿ, ಜೀತ ಪದ್ಧತಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿದೆ.
ಜಿಲ್ಲಾಡಳಿತ ಕೇವಲ ರಕ್ಷಣೆಗೆ ಸೀಮಿತವಾಗದೇ, ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಸ್ವಗ್ರಾಮಕ್ಕೆ ಕಳುಹಿಸುವಲ್ಲಿ ವಿಶೇಷ ಕಾಳಜಿ ವಹಿಸಿತು. ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಡಿವೈಎಸ್ಪಿ ಪಿ.ಮುರಳೀಧರ ಖುದ್ದಾಗಿ ಹಾಜರಿದ್ದು, ರೈಲಿನ ಮೂಲಕ ಅವರ ಸ್ವಗ್ರಾಮಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಅದಷ್ಟೇ ಅಲ್ಲದೇ ಕಾರ್ಮಿಕರೊಂದಿಗೆ ಇಬ್ಬರು ಪೋಲೀಸ್ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ರಕ್ಷಣೆಗಾಗಿ ಕಳುಹಿಸಿಕೊಡಲಾಗಿದೆ.