ವಿಜಯನಗರ| ಕಬ್ಬು ಬೆಲೆ ನಿಗದಿ ಕುರಿತ ಸಿಎಂ ಜೊತೆಗಿನ ಮಾತುಕತೆಗೆ ಹಿರಿಯ ರೈತ ಮುಖಂಡರಿಗೆ ನಿರ್ಬಂಧ: ಆರೋಪ
ವಿಜಯನಗರ: ಕಬ್ಬು ಬೆಲೆ ನಿಗದಿ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಮಾತುಕತೆಗೆ ಕೊನೆ ಕ್ಷಣದಲ್ಲಿ ಹಿರಿಯ ರೈತ ಮುಖಂಡರಿಗೆ ನಿರ್ಬಂಧ ವಿಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ವಿಜಯನಗರ ಜಿಲ್ಲೆಯ ಹಿರಿಯ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬು ಬೆಳೆಗಾರರ ಬೆಲೆ ನಿಗದಿ ವಿಚಾರವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತಲಾ 5 ರೈತರನ್ನು ಮಾತುಕತೆಗೆ ಆಹ್ವಾನಿಸಲು ನಿರ್ಧರಿಸಲಾಗಿತ್ತು. ಅದರಂತೆ ಹಿರಿಯ ರೈತ ಮುಖಂಡರಿಗೆ ಆಹ್ವಾನ ಪತ್ರಿಕೆಗಳನ್ನೂ ಕಳುಹಿಸಲಾಗಿತ್ತು ಎನ್ನಲಾಗಿದೆ. ಆದರೆ, ಮರುದಿನ ತಡರಾತ್ರಿ ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿ, ಆಹ್ವಾನಿತರಾದ 5 ರೈತರ ಪೈಕಿ ಕೇವಲ ಇಬ್ಬರಿಗೆ ಮಾತ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಅವಕಾಶವಿದ್ದು, ಉಳಿದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿರುವುದು ರೈತ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಜಯನಗರ ಜಿಲ್ಲೆಯ ಹಿರಿಯ ರೈತ ಹೋರಾಟಗಾರ ಖಾಜಾ ಹುಸೇನ್ ನಿಯಾಜಿ, “ನಾವು ಇಡೀ ರಾಜ್ಯಕ್ಕೆ ಅನ್ನ ನೀಡುವ ರೈತರು. ನಮ್ಮನ್ನು ಮಾತುಕತೆಗೆ ಆಹ್ವಾನಿಸಿ, ಕೊನೆ ಕ್ಷಣದಲ್ಲಿ ಇಬ್ಬರಿಗೆ ಮಾತ್ರ ಮಾತನಾಡಲು ಅವಕಾಶ ನೀಡಿ, ಉಳಿದವರಿಗೆ ಊಟದ ವ್ಯವಸ್ಥೆ ಇದೆ ಎಂದು ಹೇಳುವುದು ಎಷ್ಟು ಸರಿ? ರೈತರ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ಕರೆದ ಸಭೆಯಲ್ಲಿ ಈ ರೀತಿಯ ನಿರ್ಬಂಧ ಹೇರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರೈತರ ಬೆನ್ನೆಲುಬು ನಮ್ಮ ಸರ್ಕಾರ ಎಂದು ಹೇಳುವ ಸರ್ಕಾರವೇ ರೈತರೊಂದಿಗೆ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ. ರೈತರನ್ನು ಮಾತುಕತೆಗೆ ಆಹ್ವಾನಿಸಿದ ಬಳಿಕ ಈ ರೀತಿಯ ನಿರ್ಧಾರ ಕೈಗೊಳ್ಳುವುದು ನಮ್ಮ ಒಗ್ಗಟ್ಟನ್ನು ಮುರಿಯುವ ಪ್ರಯತ್ನದಂತಿದೆ. ಹಿರಿಯ ರೈತ ಮುಖಂಡರಿಗೆ ಗೌರವ ನೀಡಿ, ಎಲ್ಲರ ಅಭಿಪ್ರಾಯಗಳನ್ನು ಆಲಿಸಬೇಕು” ಎಂದು ನಿಯಾಜಿ ಅವರು ಆಗ್ರಹಿಸಿದ್ದಾರೆ.
ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ರೈತರ ಬೇಡಿಕೆಗಳನ್ನು ಆಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾದ ಸಂದರ್ಭದಲ್ಲಿ, ಮಾತುಕತೆಯಲ್ಲಿ ಭಾಗವಹಿಸುವ ರೈತರ ಸಂಖ್ಯೆಗೆ ಸಂಬಂಧಿಸಿದಂತೆ ಕೊನೆ ಕ್ಷಣದಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂಬ ಆರೋಪ ರೈತ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರವು ರೈತರ ಭಾವನೆಗಳನ್ನು ಗೌರವಿಸಿ, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂಬುದು ರೈತ ಹೋರಾಟಗಾರರ ಒತ್ತಾಯವಾಗಿದೆ.