Vijayanagara | ಹಾವು ಕಡಿತ ಚಿಕಿತ್ಸೆಯಲ್ಲಿ ವಿಳಂಬ ಬೇಡ: ಡಿಸಿ ಕವಿತಾ ಎಸ್.ಮನ್ನಿಕೇರಿ
ವಿಜಯನಗರ (ಹೊಸಪೇಟೆ) : ಹಾವು ಕಡಿತದಂತಹ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಚಿಕಿತ್ಸೆ ವಿಳಂಬವಾಗಬಾರದು. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಆಂಟಿ ಸ್ನೇಕ್ ವೆನಮ್ (ASV) ಔಷಧಿ ದಾಸ್ತಾನು ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಾವು ಕಡಿತದಿಂದ ಸಂಭವಿಸುತ್ತಿರುವ ಮರಣ ಪ್ರಕರಣಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2026ರ ಜನವರಿಯಿಂದ ಈವರೆಗೆ 10 ಮಂದಿ ಹಾವು ಕಡಿತದಿಂದ ಮೃತಪಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರ ಅಗತ್ಯ ಪ್ರಮಾಣದ ಆಂಟಿ ಸ್ನೇಕ್ ವೆನಮ್ ದಾಸ್ತಾನು ಇರಿಸುವಂತೆ ಸೂಚನೆ ನೀಡಿದ್ದರೂ, ಕೆಲವೆಡೆ ಔಷಧಿ ಕೊರತೆ ಹಾಗೂ ಚಿಕಿತ್ಸೆ ವಿಳಂಬದ ದೂರುಗಳು ಕೇಳಿಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಔಷಧಿ ಇಲ್ಲ ಎಂಬ ನೆಪ ಹೇಳಿ ಚಿಕಿತ್ಸೆ ವಿಳಂಬಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಪ್ರತಿಯೊಂದು ಆರೋಗ್ಯ ಕೇಂದ್ರದಲ್ಲೂ ಸಾಕಷ್ಟು ದಾಸ್ತಾನು ಇರಬೇಕು ಹಾಗೂ ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಬೇಕು ಎಂದು ಅವರು ತಾಕೀತು ಮಾಡಿದರು.
ವೈದ್ಯರು, ಸಿಬ್ಬಂದಿಗೆ ವಿಶೇಷ ತರಬೇತಿ :
ಹಾವು ಕಡಿತ ಪ್ರಕರಣಗಳ ನಿರ್ವಹಣೆ ಕುರಿತು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಹಾವು ಕಡಿತದ ಲಕ್ಷಣ ಗುರುತಿಸುವುದು, ರೋಗಿಯ ಸ್ಥಿತಿ ಮೌಲ್ಯಮಾಪನ, ಅಗತ್ಯ ಪರೀಕ್ಷೆಗಳು, ಆಂಟಿ ವೆನಮ್ ನೀಡುವ ವಿಧಾನ, ಪ್ರತಿಕೂಲ ಪರಿಣಾಮಗಳ ನಿರ್ವಹಣೆ ಹಾಗೂ ಅಗತ್ಯವಿದ್ದರೆ ಮೇಲ್ದರ್ಜೆಯ ಆಸ್ಪತ್ರೆಗೆ ತ್ವರಿತವಾಗಿ ರವಾನಿಸುವ ಕುರಿತು ತರಬೇತಿ ನೀಡುವಂತೆ ನಿರ್ದೇಶಿಸಿದರು.
ನಾಟಿ ಔಷಧಿಗೆ ಮೊರೆ ಹೋಗಬೇಡಿ :
ಹಾವು ಕಡಿದ ತಕ್ಷಣ ನಾಟಿ ಔಷಧಿ, ಗಿಡಮೂಲಿಕೆ, ಹಾವು ಕಲ್ಲು, ಗಾಯವನ್ನು ಕತ್ತರಿಸುವುದು, ವಿಷ ಹೀರುವ ಪ್ರಯತ್ನ ಅಥವಾ ಬಿಗಿಯಾಗಿ ಹಗ್ಗ ಕಟ್ಟುವಂತಹ ವೈಜ್ಞಾನಿಕ ಆಧಾರವಿಲ್ಲದ ಕ್ರಮಗಳಿಗೆ ಮೊರೆ ಹೋಗದೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಮನವಿ ಮಾಡಿದರು.
ಅನಧಿಕೃತ ಚಿಕಿತ್ಸಕರ ವಿರುದ್ಧ ಕ್ರಮ :
ವೈದ್ಯಕೀಯ ಅರ್ಹತೆ ಇಲ್ಲದೆ ಹಾವು ಕಡಿತಕ್ಕೆ ಚಿಕಿತ್ಸೆ ನೀಡುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಂತಹವರಿಗೆ ನೋಟಿಸ್ ಜಾರಿ ಮಾಡಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಸ್ತಾನು ಮೇಲ್ವಿಚಾರಣೆಗೆ ಸಿಇಒ ಸೂಚನೆ :
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಮಾತನಾಡಿ, ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆಂಟಿ ಸ್ನೇಕ್ ವೆನಮ್ ದಾಸ್ತಾನು, ಬಳಕೆ ಹಾಗೂ ಬಾಕಿ ಪ್ರಮಾಣವನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ದಾಸ್ತಾನು ಕಡಿಮೆಯಾಗುವ ಮುನ್ನವೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಪೂರೈಕೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕರ ಜೀವದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯ ವೇಳೆ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜಾಗೃತಿ ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖನಾಯ್ಕ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಭಾಸ್ಕರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಧಿಕಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.