×
Ad

Vijayanagara | ಗುಡೇಕೋಟೆಯಲ್ಲಿ 6 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ

Update: 2026-07-08 20:43 IST

ಕೂಡ್ಲಿಗಿ/ವಿಜಯನಗರ: ವಿಧಾನಸಭಾ ಕ್ಷೇತ್ರದ ಐತಿಹಾಸಿಕ ಗುಡೇಕೋಟೆ ಗ್ರಾಮದಲ್ಲಿ ಬಹುನಿರೀಕ್ಷಿತ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಅಧಿಕೃತ ಚಾಲನೆ ನೀಡಲಾಯಿತು.

ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರ ಸಹಕಾರದೊಂದಿಗೆ 6 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ದೊರೆತಿದ್ದು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ರಸ್ತೆ ಅಗಲೀಕರಣ ಹಾಗೂ ಸುಧಾರಣೆಯನ್ನು ಒಳಗೊಂಡಿರುವ ಈ ಯೋಜನೆ ಹಲವು ವರ್ಷಗಳಿಂದ ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರ ವ್ಯವಸ್ಥೆ ಸುಧಾರಣೆಯಾಗುವುದರ ಜೊತೆಗೆ ವ್ಯಾಪಾರ, ಶಿಕ್ಷಣ, ಆರೋಗ್ಯ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ಐತಿಹಾಸಿಕ ಕೋಟೆ, ಪ್ರಾಚೀನ ಗುಹಾ ವರ್ಣಚಿತ್ರಗಳು, ಚೋಳರ ಕಾಲದ ದೇವಾಲಯಗಳು ಹಾಗೂ ಸ್ಲಾತ್ ಬೇರ್ ಅಭಯಾರಣ್ಯಕ್ಕೆ ಹೆಸರುವಾಸಿಯಾದ ಗುಡೇಕೋಟೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಈ ರಸ್ತೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಘು ಸ್ವಾಮಿ ವೆಂಕಟೇಶ್, ಕೆಇಬಿ ಗೋವಿಂದ, ಪೇಂಟ್ ತಿಪ್ಪೇಶ್, ಬಷೀರ್ ಸಾಬ್, ಉಮೇಶ್, ಖಾಜಿ ನೂರು, ಜಯರಾಮ್, ಸಹಾಯಕ ಅಭಿಯಂತರ ನಾಗನಗೌಡ ಸೇರಿದಂತೆ ಸ್ಥಳೀಯ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮಗಾರಿಯನ್ನು ಗುಣಮಟ್ಟದೊಂದಿಗೆ, ಪಾರದರ್ಶಕವಾಗಿ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News