Vijayanagara | ಉಚಿತ ಬೆನ್ನುಮೂಳೆ ತಪಾಸಣಾ ಶಿಬಿರ
ವಿಜಯನಗರ (ಹೊಸಪೇಟೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, 60 ಹಾಸಿಗೆಗಳ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಚಿತ ಬೆನ್ನುಮೂಳೆಯ ನ್ಯೂನತೆ (ಸ್ಕೋಲಿಯೋಸಿಸ್) ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಭಾಗವಹಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಮಾತನಾಡಿ, ಸಾಮಾನ್ಯವಾಗಿ ಬೆನ್ನುಮೂಳೆಯು ಹಿಂದಿನಿಂದ ನೋಡಿದಾಗ ನೇರವಾಗಿ ಕಾಣಿಸುತ್ತದೆ. ಆದರೆ ಸ್ಕೋಲಿಯೋಸಿಸ್ ಸಮಸ್ಯೆಯಿರುವ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಬೆನ್ನುಮೂಳೆಯು ಅಸಹಜ ‘S’ ಅಥವಾ ‘C’ ಆಕಾರದ ವಕ್ರತೆಯನ್ನು ಹೊಂದಿರುತ್ತದೆ. ಈ ಸಮಸ್ಯೆಯ ಲಕ್ಷಣಗಳು, ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆಗಳ ಬಗ್ಗೆ ಜಾಗೃತಿ ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ 9 ಮಕ್ಕಳು ಹೊಸದಾಗಿ ನೋಂದಾಯಿತರಾಗಿದ್ದು, 4 ಮಕ್ಕಳಿಗೆ ಮರು ತಪಾಸಣೆ (ಫಾಲೋ-ಅಪ್) ನಡೆಸಿ ಚಿಕಿತ್ಸೆ ಮುಂದುವರಿಸಲು ಸೂಚಿಸಲಾಗಿದೆ. ಒಟ್ಟು 7 ಮಕ್ಕಳನ್ನು ಉಚಿತ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದ್ದು, ಇಬ್ಬರಿಗೆ ಎಕ್ಸ್-ರೇ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ರಾಜ್ಯದಲ್ಲಿ ಅನೇಕ ಉಚಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸಾಮಾನ್ಯವಾಗಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ 4ರಿಂದ 5 ಲಕ್ಷ ರೂ. ವರೆಗೆ ವೆಚ್ಚವಾಗುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅರ್ಹರು ಈ ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಧಿಕಾ, ಅರಿವಳಿಕೆ ತಜ್ಞ ಡಾ. ನೂರ್ ಪಾಷಾ, ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಲೋಕ್, ಆರೋಗ್ಯ ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.