Vijayanagara | ಕೆ.ಎಚ್.ಮುನಿಯಪ್ಪಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ: ಮಾದಿಗ ಮಹಾಸಭಾ ಸ್ವಾಗತ
ಹೊಸಪೇಟೆ/ವಿಜಯನಗರ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾದಿಗ ಸಮುದಾಯದ ಅಗ್ರಗಣ್ಯ ನಾಯಕರಾದ ಕೆ.ಎಚ್. ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿರುವುದನ್ನು ಕರ್ನಾಟಕ ಮಾದಿಗ ಮಹಾಸಭಾ (ರಿ) ವಿಜಯನಗರ ಜಿಲ್ಲಾ ಘಟಕ ಸ್ವಾಗತಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಮಹಾಸಭಾದ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ, ಮುನಿಯಪ್ಪ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದು, ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಹಾಗೂ ರಾಜ್ಯ ಸಚಿವರಾಗಿ ಅಪಾರ ಆಡಳಿತ ಅನುಭವ ಹೊಂದಿದ್ದಾರೆ. ಅವರ ಅನುಭವವನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅವಕಾಶವಂಚಿತ ಸಮುದಾಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಇದು ಸೂಕ್ತ ಅವಕಾಶವಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಶಿಕ್ಷಣ, ಉದ್ಯೋಗ ಹಾಗೂ ಪರಿಶಿಷ್ಟ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕೆ ಮುನಿಯಪ್ಪ ಅವರ ನಾಯಕತ್ವದಲ್ಲಿ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮುನಿಯಪ್ಪ ಅವರಿಗೆ ಮಹತ್ವದ ಖಾತೆ ನೀಡಿದ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ರಾಜ್ಯದ ಹಿರಿಯ ನಾಯಕರಿಗೆ ನಿಂಬಗಲ್ ರಾಮಕೃಷ್ಣ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದ್ದಾರೆ.