ವಿಜಯನಗರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಶುದ್ಧೀಕರಣ: 1.03 ಲಕ್ಷ ದಾಖಲೆಗಳಿಗೆ ನೋಟಿಸ್
ವಿಜಯನಗರ (ಹೊಸಪೇಟೆ) : ವಿಶೇಷ ಮತದಾರರ ಪಟ್ಟಿಯ ಶುದ್ಧೀಕರಣ ಹಾಗೂ ಪರಿಷ್ಕರಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ದೋಷರಹಿತವಾಗಿ ಪೂರ್ಣಗೊಳಿಸಲು ಚುನಾವಣಾ ಶಾಖೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ಅರ್ಹ ಯಾವುದೇ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಹಾಗೂ ಪಟ್ಟಿಯಲ್ಲಿ ನಕಲಿ ಅಥವಾ ಅನರ್ಹ ಹೆಸರುಗಳು ಉಳಿಯಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳ ತಂಡ ಜಂಟಿಯಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.
ಬಿಎಸ್‌ಡಿಒ ಹಾಗೂ ಎಎಸ್‌ಡಿಒ ಪಟ್ಟಿಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದ್ದು, ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ. ಬೂತ್ ಮಟ್ಟದ ಏಜೆಂಟರು ಹಾಗೂ ಬಿಎಲ್‌ಒಗಳು ಜಂಟಿಯಾಗಿ ಪರಿಶೀಲಿಸಿ ನೀಡುವ ತಿದ್ದುಪಡಿಗಳನ್ನು ಕಂಪ್ಯೂಟರ್ ಬ್ಯಾಕ್‌ರೋಲ್‌ನಲ್ಲಿ ಸರಿಪಡಿಸಿ ಕರಡು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ ಎಂದರು.
ಮನೆ ಮನೆ ಭೇಟಿ ವೇಳೆ ವಿತರಿಸಲಾದ ಗಣತಿ ನಮೂನೆಗಳ ಪರಿಶೀಲನೆಯಲ್ಲಿ ಜಿಲ್ಲೆಯಲ್ಲಿ 38,392 ಮೃತ ಮತದಾರರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡ 69,339 ಮತದಾರರನ್ನು ಗುರುತಿಸಲಾಗಿದೆ. ಇದರ ಜತೆಗೆ 18,804 ದಾಖಲಾಗಿರುವವರು, 424 ಇತರೆ ಮತದಾರರು ಹಾಗೂ ಮ್ಯಾಪಿಂಗ್ ಆಗದ ಪ್ರಕರಣಗಳು ಸೇರಿದಂತೆ ಒಟ್ಟು 2,44,392 ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಈ ಪೈಕಿ ರೋಲ್‌ಬ್ಯಾಕ್ ಮಾಡಿ ಪುನಃ ಪರಿಶೀಲನೆ ನಡೆಸಿ 1,40,777 ಮತದಾರರ ದಾಖಲೆಗಳನ್ನು ಸಂಗ್ರಹಿಸಿ ಸರಿಪಡಿಸಲಾಗಿದೆ. ಉಳಿದ 1,03,615 ಮತದಾರರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ವಿಚಾರಣಾ ನೋಟಿಸ್ ನೀಡಲಾಗುವುದು ಎಂದರು.
ಮೃತರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರನ್ನು ಪ್ರತ್ಯೇಕಿಸಿದ ಬಳಿಕ ಉಳಿದ ಮತದಾರರ ಮಾಹಿತಿಯನ್ನು ಮನೆ-ಮನೆಗೆ ಭೇಟಿ ನೀಡಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ನಕಲಿ ದಾಖಲೆ ಸಲ್ಲಿಸಿದರೆ ಕ್ರಿಮಿನಲ್ ಪ್ರಕರಣ :
ಇತರ ರಾಜ್ಯಗಳಿಂದ ವಲಸೆ ಬಂದು ತಪ್ಪು ಮಾಹಿತಿ ನೀಡುವುದು ಅಥವಾ ಇತರರ ಸಂಬಂಧಿಕರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಯತ್ನಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
2002ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಯಾವುದೇ ಹೊಸ ದಾಖಲೆ ಅಗತ್ಯವಿಲ್ಲ. ತಂದೆ, ತಾಯಿ ಅಥವಾ ಕುಟುಂಬದ ಸದಸ್ಯರ ಹೆಸರು ಪಟ್ಟಿಯಲ್ಲಿದ್ದರೆ, ಹುಟ್ಟಿದ ದಿನಾಂಕ ಹಾಗೂ ಸಂಬಂಧವನ್ನು ದೃಢಪಡಿಸುವ ದಾಖಲೆಗಳನ್ನು ಸಲ್ಲಿಸಿ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಮ್ಯಾಪಿಂಗ್ ಕೊರತೆ ಅಥವಾ ತಿದ್ದುಪಡಿಗಳಿದ್ದಲ್ಲಿ ಸಂಬಂಧಪಟ್ಟ ಎಇಆರ್‌ಒ ಕಚೇರಿಯಿಂದ ನೋಟಿಸ್ ಬಂದ ತಕ್ಷಣ ಸ್ಪಂದಿಸಿ, ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ದೋಷರಹಿತ ಅಂತಿಮ ಮತದಾರರ ಪಟ್ಟಿ ತಯಾರಿಸಲು ಸಹಕರಿಸಬೇಕು. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಕಾಯ್ದುಕೊಳ್ಳಬೇಕು ಎಂದು ಡಿಸಿ ಕವಿತಾ ಎಸ್. ಮನ್ನಿಕೇರಿ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಉಪಸ್ಥಿತರಿದ್ದರು.