Vijayapura | ಕರ್ತವ್ಯಲೋಪ: ಚಡಚಣ ಪಿಎಸ್‌ಐ ಸೋಮೇಶ ಗೆಜ್ಜೆ ಅಮಾನತು
ವಿಜಯಪುರ: ಜಿಲ್ಲೆಯ ಭೀಮಾತೀರದ ಚಡಚಣ ತಾಲ್ಲೂಕಿನ ಗೋವಿಂದಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ 6 ಜನರ ಬರ್ಬರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಸೋಮೇಶ ಗೆಜ್ಜೆ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಭೀಕರ ಸರಣಿ ಹತ್ಯೆ ನಡೆಯುವುದಕ್ಕೂ ಮುನ್ನವೇ ಗ್ರಾಮದ 'ನಿರಾಳೆ' ಹಾಗೂ 'ಪಾಟೀಲ್' ಕುಟುಂಬಗಳ ನಡುವೆ ಕಲಹ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಉಭಯ ಕುಟುಂಬಗಳು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದವು. ಆದರೆ, ಇತ್ತಂಡಗಳ ನಡುವಿನ ಈ ಗಂಭೀರ ಕಲಹವನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪಿಎಸ್‌ಐ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಪಿಎಸ್‌ಐ ಸೋಮೇಶ ಗೆಜ್ಜೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.