Vijayapura | ಜಮೀನು ವಿವಾದ: ತಂದೆ, ಮಗನ ಕೊಲೆ
ವಿಜಯಪುರ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ತಂದೆ-ಮಗ ಹತ್ಯೆಯಾಗಿ, ಮೂವರು ಗಾಯಗೊಂಡಿರುವ ಘಟನೆ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹನುಮಂತ ಸಾಲೋಟಗಿ ಹಾಗೂ ಅವರ ಮಗ ಮಂಜುನಾಥ ಸಾಲೋಟಗಿ ಕೊಲೆಯಾದವರು. ತಡಲಗಿ ಗ್ರಾಮದಲ್ಲಿ ಹನುಮವ್ವ ಮೇಟಿ ಎಂಬವರ ಹೆಸರಿನಲ್ಲಿರುವ ಸುಮಾರು ಎಂಟು ಎಕರೆ ಜಮೀನಿಗೆ ಸಂಬಂಧಿಸಿದಂತೆ ಅವರ ಸಂಬಂಧಿಕರಾದ ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ ಹಾಗೂ ಇತರರೊಂದಿಗೆ ತಕರಾರು ಇತ್ತು. ಹನುಮವ್ವ ಮೇಟಿ ಕಳೆದ ಮೂರು ವರ್ಷಗಳಿಂದ ಈ ಜಮೀನನ್ನು ಕೃಷಿ ಮಾಡಲು ಹನುಮಂತ ಸಾಲೋಟಗಿ ಹಾಗೂ ಅವರ ಪುತ್ರ ಮಂಜುನಾಥ ಸಾಲೋಟಗಿ ಅವರಿಗೆ ನೀಡಿದ್ದರು. ಈ ಜಮೀನಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಈರುಳ್ಳಿ, ಗೋವಿನಜೋಳ ಹಾಗೂ ಕಳೆದ ವರ್ಷ ಕಬ್ಬು ಬೆಳೆಯಲಾಗಿತ್ತು.
ಶುಕ್ರವಾರ ಬೆಳಗ್ಗೆ ಹನುಮಂತ ಸಾಲೋಟಗಿ ಮತ್ತು ಮಂಜುನಾಥ ಸಾಲೋಟಗಿ ಕಬ್ಬು ಕಟಾವು ಮಾಡಲು ಕಾರ್ಮಿಕರೊಂದಿಗೆ ಜಮೀನಿಗೆ ತೆರಳಿದ್ದರು. ಈ ವೇಳೆ ‘ಕಬ್ಬು ಗ್ಯಾಂಗ್ಗಳು ಬಂದಿದ್ದು, ನಾವು ಕಬ್ಬು ಕಟಾವು ಮಾಡ್ತೀವಿ’ ಎಂದಾಗ, ಎದುರಾಳಿ ಕುಟುಂಬದವರು ‘ನೀವು ಹೇಗೆ ಕಬ್ಬು ಕಡಿತೀರಿ’ ಎಂದು ಪ್ರಶ್ನಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಹನುಮಂತ ಮತ್ತು ಮಂಜುನಾಥ್ ಮೇಲೆ ಹಲ್ಲೆ ನಡೆಸಲಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆೆ.
ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 12 ಜನರ ಹೆಸರನ್ನು ನಮೂದಿಸಿ ಎಫ್ಐಆರ್ ದಾಖಲಿಸಲಾಗಿದೆ. ಈಗಾಗಲೇ ಗಿರಿಯಪ್ಪ, ರಾಮಪ್ಪ, ಹನುಮಂತ, ಕೆಂಚಪ್ಪ ಸೇರಿದಂತೆ ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದ ಕೆಲವು ದೃಶ್ಯಾವಳಿಗಳೂ ನಮಗೆ ಲಭ್ಯವಿವೆ. ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಆದಷ್ಟು ಬೇಗ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.