ವಿಜಯಪುರ ಜಿಲ್ಲೆಯ ಇಬ್ಬರು ಸಾಧಕರಿಗೆ ʼರಾಜ್ಯೋತ್ಸವ ಪ್ರಶಸ್ತಿʼ
ವಿಜಯಪುರ : 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಜಿಲ್ಲೆಯ ಜಾನಪದ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಇಬ್ಬರು ಸಾಧಕರು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಜಾನಪದ ಕ್ಷೇತ್ರದಿಂದ ಸುರೇಶ ರಾಮಚಂದ್ರ ಜೋಶಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಶಾಂತಪ್ಪ ಪಂ. ದಶವಂತ ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ.
ಗ್ರಾಮೀಣ ಸೊಗಡಿನ ಜಾನಪದ ಕಲೆ ಮತ್ತು ಪರಂಪರೆಯನ್ನು ಐದು ದಶಕಗಳಿಂದ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಸುರೇಶ ಜೋಶಿ (79) ಅವರು ಜಾನಪದ ಡೊಳ್ಳಿನ ಹಾಡಿನ ಮೂಲಕ ಜನಮನದಲ್ಲಿ ನೆಲೆಸಿದ್ದಾರೆ.
1947ರ ಜುಲೈ 22ರಂದು ಜನಿಸಿದ ಇವರು, ತಮ್ಮ 26ನೇ ವಯಸ್ಸಿನಿಂದಲೇ ಜಾನಪದ ಕಲಾಸೇವೆಯಲ್ಲಿ ತೊಡಗಿಸಿಕೊಂಡರು. ವಿಜಯಪುರ, ಬಾಗಲಕೋಟೆ, ಬೆಳಗಾವಿ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದ ಸಾಂಗಲಿ, ಸೋಲಾಪುರ ಜಿಲ್ಲೆಗಳಲ್ಲೂ ಕಲಾ ಪ್ರದರ್ಶನ ನೀಡಿ ಕೀರ್ತಿ ತಂದಿದ್ದಾರೆ. ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳಿಗೆ ಪಾತ್ರರಾಗಿರುವ ಇವರ ಕಲಾ ಬದ್ಧತೆ ಇಂದಿನ ಯುವ ಕಲಾವಿಧರಿಗೆ ಮಾದರಿಯಾಗಿದೆ.
ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಶಾಂತಪ್ಪ ಪಂಚಪ್ಪ ದಶವಂತ (79) ಅವರು ತಮ್ಮ ಬಾಲ್ಯದ ಕಷ್ಟಗಳನ್ನೇ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿದೀಪವನ್ನಾಗಿಸಿಕೊಂಡವರು. ಪ್ರತಿದಿನ ಶಾಲೆಗೆ ಮೈಲಿಗಟ್ಟಲೆ ನಡೆದುಹೋಗಿ ವಿದ್ಯಾಭ್ಯಾಸ ಪಡೆದಿದ್ದ ಅವರು, ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ 1989ರಲ್ಲಿ 'ಶ್ರೀ ಭಾಗ್ಯವಂತಿ ವಿದ್ಯಾವರ್ಧಕ ಸಂಘ' ಸ್ಥಾಪಿಸಿದರು.
ಶೂನ್ಯದಿಂದ ಆರಂಭವಾದ ಇವರ ಸಂಸ್ಥೆ ಇಂದು ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಉಚಿತ ಪ್ರಸಾದ ನಿಲಯಗಳಾಗಿ ಬೆಳೆದು ನಿಂತಿವೆ.