ಬಾಹ್ಯಾಕಾಶದಲ್ಲಿ ಗೋವಾ ಗಾಯಕಿಯ ನಾದಲಹರಿ; ಒಂದು ಬೆಳಕಿನ ದಿನದ ಮೈಲಿಗಲ್ಲಿನತ್ತ ನಾಸಾದ ನೌಕೆ!
Photo Credit : NASA
ಸೂರ್ಯನಿಂದ ಬೆಳಕು ನಮ್ಮನ್ನು ತಲುಪಲು ಎಂಟು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ‘ವಾಯೇಜರ್ 1’ ಬಾಹ್ಯಾಕಾಶ ನೌಕೆಯನ್ನು ತಲುಪಲು ಅದಕ್ಕೆ ಒಂದು ಪೂರ್ಣ ದಿನವೇ ಬೇಕಾಗುತ್ತದೆ. ಈ ನೌಕೆಯಲ್ಲಿ ಗೋವಾದ ಗಾಯಕಿ ಕೇಸರಬಾಯಿ ಕೇರ್ಕರ್ ಅವರು ಹಾಡಿದ ಭೈರವಿ ರಾಗದ ಜೊತೆಗೆ ಹತ್ತು ಭಾರತೀಯ ಭಾಷೆಗಳಲ್ಲಿನ ಶುಭಾಶಯ ಸಂದೇಶಗಳೂ ಇವೆ.
ಭೂಮಿಯಿಂದ ಒಂದು ಬೆಳಕಿನ ದಿನದ ದೂರವನ್ನು ಕ್ರಮಿಸುವ ಮಾನವನಿರ್ಮಿತ ಮೊದಲ ವಸ್ತು ಎಂಬ ಹೆಗ್ಗಳಿಕೆಗೆ ‘ವಾಯೇಜರ್ 1’ ಪಾತ್ರವಾಗಲಿದೆ. ಸುಮಾರು 50 ವರ್ಷಗಳ ಹಿಂದೆ ಉಡಾವಣೆಗೊಂಡ ಬಾಹ್ಯಾಕಾಶ ನೌಕೆಯು ಮಾನವ ನಿರ್ಮಿತ ಯಾವುದೇ ವಸ್ತು ಈವರೆಗೆ ತಲುಪಿರದಷ್ಟು ದೂರವನ್ನು ತಲುಪುವ ಸನಿಹದಲ್ಲಿದೆ. ಹೀಗಾಗಿ, ತನ್ನ ಮೂಲ ನಿರೀಕ್ಷೆಗಳಿಗೆ ಮೀರಿ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಬಾಹ್ಯಾಕಾಶ ಕಾರ್ಯಾಚರಣೆಯ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ಸೂರ್ಯನಿಂದ ಬೆಳಕು ನಮ್ಮನ್ನು ತಲುಪಲು ಎಂಟು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ‘ವಾಯೇಜರ್ 1’ ಅನ್ನು ತಲುಪಲು ಅದಕ್ಕೆ ಒಂದು ಪೂರ್ಣ ದಿನವೇ ಬೇಕಾಗುತ್ತದೆ.
ನಾಸಾ ಲೆಕ್ಕಾಚಾರದ ಪ್ರಕಾರ 2026ರ ನವೆಂಬರ್ 18ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3:46ಕ್ಕೆ ಈ ಪುಟ್ಟ ಬಾಹ್ಯಾಕಾಶ ನೌಕೆಯು ಭೂಮಿಯಿಂದ ಒಂದು ಬೆಳಕಿನ ದಿನ (ಬೆಳಕು ಒಂದು ದಿನದಲ್ಲಿ ಕ್ರಮಿಸುವ ದೂರ) ಅಂದರೆ ಸುಮಾರು 25.9 ಶತಕೋಟಿ ಕಿಲೋಮೀಟರ್ ಅಂತರದಲ್ಲಿರುವ ಮೊದಲ ಮಾನವ ನಿರ್ಮಿತ ವಸ್ತುವಾಗಲಿದೆ. ಭೂಮಿಯಿಂದ ಕಳುಹಿಸಲಾದ ರೇಡಿಯೋ ಸಂದೇಶವೊಂದು ಅದನ್ನು ತಲುಪಲು ಈಗ 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿಂದ ಪ್ರತಿಕ್ರಿಯೆ ಬರಲು ಮತ್ತೆ 24 ಗಂಟೆಗಳು ಬೇಕಾಗುತ್ತವೆ.
ಆದರೆ ವಿಶೇಷವೆಂದರೆ ಈ ನೌಕೆಯಲ್ಲಿ ಗೋವಾದ ಗಾಯಕಿ ಕೇಸರಬಾಯಿ ಕೇರ್ಕರ್ ಅವರು ಹಾಡಿದ ಭೈರವಿ ರಾಗದ ಜೊತೆಗೆ ಕನ್ನಡ ಸೇರಿದಂತೆ ಹತ್ತು ಭಾರತೀಯ ಭಾಷೆಗಳಲ್ಲಿನ ಶುಭಾಶಯ ಸಂದೇಶಗಳೂ ಇವೆ!
ಈ ಬಾಹ್ಯಾಕಾಶ ನೌಕೆಯಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ಆದರೆ ಒಬ್ಬ ಭಾರತೀಯ ಮಹಿಳೆಯ ಹಾಡು ಇದೆ! ಅನೇಕರ ಶುಭಾಶಯ ಸಂದೇಶಗಳಿವೆ. ಮಹಿಳೆಯ ಧ್ವನಿಯ ಪಕ್ಕದಲ್ಲಿ ಗೋಲ್ಡನ್ ರೆಕಾರ್ಡ್ ಎಂಬ 12 ಇಂಚಿನ ಚಿನ್ನದ ಲೇಪಿತ ತಾಮ್ರದ ತಟ್ಟೆಯನ್ನು ಅಳವಡಿಸಲಾಗಿದೆ. ಭವಿಷ್ಯದಲ್ಲಿ ಇದನ್ನು ಕಂಡುಕೊಳ್ಳುವ ಯಾವುದೇ ಜೀವಿ ಅಥವಾ ಅಸ್ತಿತ್ವಕ್ಕೆ ಮಾನವಕುಲವು ಬರೆದ ಪತ್ರವಿದು.
ಇದರಲ್ಲಿ 115 ಚಿತ್ರಗಳು, ಗಾಳಿ, ಗುಡುಗು ಮತ್ತು ಪಕ್ಷಿಗಳ ಕಲರವದ ಶಬ್ದಗಳಿವೆ. 55 ಭಾಷೆಗಳಲ್ಲಿ ಶುಭಾಶಯಗಳು ಮತ್ತು 27 ಸಂಗೀತ ತುಣುಕುಗಳಿವೆ. ಇದರಲ್ಲಿ ಬಾಕ್ (Bach) ಅವರ ಸಂಗೀತವಿದೆ. ಬೀಥೋವನ್ (Beethoven) ಮತ್ತು ಚಕ್ ಬೆರ್ರಿ (Chuck Berry) ಅವರ ರಚನೆಗಳೂ ಇವೆ. ಅವರ ನಡುವೆ ಮೂರು ನಿಮಿಷ 30 ಸೆಕೆಂಡ್ಗಳ ಕಾಲ ಭಾರತದ ಸಂಗೀತವಿದೆ.
ಬಾಹ್ಯಾಕಾಶದಲ್ಲಿ ಯಾರ ಧ್ವನಿ ಸಾಗುತ್ತಿದೆ?
ಇದು ಕೇಸರಬಾಯಿ ಕೇರ್ಕರ್ ಅವರು ಹಾಡಿದ ಭೈರವಿ ರಾಗದಲ್ಲಿರುವ ‘ಜಾತ್ ಕಹಾಂ ಹೋ’ ಎಂಬ ಗಾಯನವಾಗಿದೆ. ಇದರ ಶೀರ್ಷಿಕೆಯು ಒಬ್ಬ ಪ್ರಯಾಣಿಕನನ್ನು ಕೇಳುವ ಪ್ರಶ್ನೆಯಂತಿದೆ: “ನೀವು ಎಲ್ಲಿಗೆ ಹೋಗುತ್ತಿದ್ದೀರಿ?” ಯಾವುದೇ ಹಾಡು ತನ್ನ ಪಯಣವನ್ನು ಇದಕ್ಕಿಂತ ಉತ್ತಮವಾಗಿ ಆರಿಸಿಕೊಳ್ಳಲು ಸಾಧ್ಯವಿರಲಿಲ್ಲ.
ಕೇಸರಬಾಯಿ ಅವರು 1892ರಲ್ಲಿ ಜುಲೈ 13ರಂದು ಗೋವಾದ ಕೇರಿ ಎಂಬ ಹಳ್ಳಿಯಲ್ಲಿ ಜನಿಸಿದರು. ಆ ಸಮಯದಲ್ಲಿ ಗೋವಾ ಪೋರ್ಚುಗೀಸರ ವಸಾಹತುವಾಗಿತ್ತು. ಜೈಪುರ-ಅತ್ರೌಲಿ ಘರಾನೆಯ ಸ್ಥಾಪಕರಾದ ಉಸ್ತಾದ್ ಅಲ್ಲಾದಿಯಾ ಖಾನ್ ಅವರ ಬಳಿ ತರಬೇತಿ ಪಡೆದ ಕೇಸರಬಾಯಿ ತಮ್ಮ ಶತಮಾನದ ಅತ್ಯಂತ ಪ್ರಭಾವಶಾಲಿ ಖಯಾಲ್ ಗಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಈ ಸಂಗೀತವನ್ನು ಆಯ್ಕೆ ಮಾಡಲು ನೆರವಾದ ಅಮೆರಿಕದ ಎತ್ನೊಮ್ಯುಸಿಕಾಲಜಿಸ್ಟ್ (ethnomusicologist) ರಾಬರ್ಟ್ ಇ ಬ್ರೌನ್ ಅವರು ಕೇಸರಬಾಯಿ ಹಾಡಿದ ಈ ಭೈರವಿಯನ್ನು ಭಾರತೀಯ ಶಾಸ್ತ್ರೀಯ ಸಂಗೀತದ ಅತ್ಯುತ್ತಮ ಧ್ವನಿಮುದ್ರಿತ ನಿದರ್ಶನ ಎಂದು ಬಣ್ಣಿಸಿದ್ದಾರೆ.
ಮೈಕ್ರೋಫೋನ್ಗಳನ್ನು ದೂರವಿಟ್ಟ ಗಾಯಕಿ ನಕ್ಷತ್ರ ಲೋಕಕ್ಕೆ ತಲುಪಿದ್ದು ಹೇಗೆ?
ವಿಪರ್ಯಾಸವೆಂದರೆ ಕೇಸರಬಾಯಿ ಕೇರ್ಕರ್ ಅವರ ಹಾಡು ಬಾಹ್ಯಾಕಾಶದ ‘ವಾಯೇಜರ್’ ನೌಕೆಯಲ್ಲಿ ಸೇರ್ಪಡೆಯಾಗಿ ವಿಶ್ವವನ್ನೇ ಸುತ್ತುತ್ತಿದೆ. ಆದರೆ ವಾಸ್ತವದಲ್ಲಿ ಅವರಿಗೆ ಧ್ವನಿಮುದ್ರಣದ ಬಗ್ಗೆಯೇ ಅಸಮಾಧಾನವಿತ್ತು! ಅವರಿಗೆ ನೇರ ಪ್ರಸಾರ ಅಥವಾ ರೇಡಿಯೋ ಪ್ರಸಾರ ಇಷ್ಟವಿರಲಿಲ್ಲ. ತಮ್ಮ ದೀರ್ಘಾವಧಿಯ ಧ್ವನಿಮುದ್ರಿಕೆ ಹೊರತರಲು ನಿರಾಕರಿಸಿದ್ದರು.
ಮಾತ್ರವಲ್ಲದೆ ಭಾರತದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಗ್ರಾಮಫೋನ್ ರೆಕಾರ್ಡ್ ಕಂಪೆನಿ 'ಹಿಸ್ ಮಾಸ್ಟರ್ಸ್ ವಾಯ್ಸ್' (HMV) ತಂತ್ರಜ್ಞಾನ ಬದಲಾದಂತೆ ಕೇಸರಬಾಯಿ ಅವರು ಈ ಹಿಂದೆ ಹಾಡಿದ್ದ ಹಳೆಯ ಹಾಡುಗಳನ್ನು ಮತ್ತೆ ಹೊಸದಾಗಿ ರೆಕಾರ್ಡ್ ಮಾಡಿಕೊಡುವಂತೆ ಅವರನ್ನು ಒತ್ತಾಯಿಸಿತು. ಆದರೆ ಒಮ್ಮೆ ಹಾಡಿದ ಹಾಡನ್ನು ಮತ್ತೆ ಯಂತ್ರಕ್ಕಾಗಿ ಹಾಡಲು ಒತ್ತಾಯಿಸಿದರಿಂದ ಬೇಸರಪಟ್ಟ ಅವರು ತಾವು ಬದುಕಿರುವವರೆಗೂ HMV ಸ್ಟುಡಿಯೋದ ಮೆಟ್ಟಿಲು ಹತ್ತುವುದಿಲ್ಲ ಎಂದು ಶಪಥ ಮಾಡಿದರು ಮತ್ತು ಅದನ್ನು ಪಾಲಿಸಿದರು.
ಜಗತ್ತಿನಿಂದ ತಮ್ಮ ಧ್ವನಿಯನ್ನು ಮರೆಮಾಚಿ ಕಾಪಾಡಿಕೊಂಡಿದ್ದ ಮಹಿಳೆ, ಇತಿಹಾಸದಲ್ಲೇ ಬೇರೆ ಯಾರ ಧ್ವನಿಯೂ ತಲುಪಿರದಷ್ಟು ದೂರಕ್ಕೆ ಅದನ್ನು ಕಳುಹಿಸಿದರು. 1977 ಸೆಪ್ಟೆಂಬರ್ 16ರಂದು ತಮ್ಮ 85ನೇ ವಯಸ್ಸಿನಲ್ಲಿ ಅವರು ನಿಧನರಾದರು. ಅದಕ್ಕೂ ಕೇವಲ 11 ದಿನಗಳ ಹಿಂದಷ್ಟೇ ‘ವಾಯೇಜರ್ 1’ ಭೂಮಿಯಿಂದ ಹೊರಟಿತ್ತು!
ಈಗ ಕೇಸರಬಾಯಿ ಧ್ವನಿ ಎಲ್ಲಿ ಹೋಗುತ್ತಿದೆ?
ವಾಯೇಜರ್ 1 ಧ್ವನಿ ಮುದ್ರಿಕೆಯನ್ನು ನುಡಿಸುತ್ತಿಲ್ಲ. ಕೇವಲ ಅದನ್ನು ಹೊತ್ತು ಸಾಗುತ್ತಿದೆ. ಮೌನವಾಗಿ ಭದ್ರವಾಗಿ ಮುಚ್ಚಿದ ಆ ತಟ್ಟೆಯ ಮೇಲ್ಮೈ ಮೇಲೆ ಒಂದು ಸಾಲಿನ ಬರಹವಿದೆ: ಸಂಗೀತ ಸೃಷ್ಟಿಸಿದವರಿಗೆ-ಎಲ್ಲಾ ಲೋಕಗಳ, ಎಲ್ಲಾ ಕಾಲದ ಸಂಗೀತ ಸೃಷ್ಟಿಕರ್ತರಿಗೆ!, ಸುಮಾರು 40,000 ವರ್ಷಗಳ ನಂತರ ಈ ಬಾಹ್ಯಾಕಾಶ ನೌಕೆಯು ಗ್ಲೈಸ್ 445 ಎಂಬ ನಕ್ಷತ್ರದ 1.7 ಜ್ಯೋತಿರ್ವರ್ಷಗಳಷ್ಟು ಹತ್ತಿರದಲ್ಲಿ ಹಾದು ಹೋಗಲಿದೆ ಎಂದು ನಾಸಾ ತಿಳಿಸಿದೆ. ಆ ಸುವರ್ಣ ತಟ್ಟೆಯ ಮೇಲಿನ ರೆಕಾರ್ಡ್ ಅನ್ನು ಯಾರಾದರೂ ನುಡಿಸುತ್ತಾರೆಯೇ ಎನ್ನುವುದು ಗೊತ್ತಿಲ್ಲ. ಆದರೆ, ಪ್ರಯಾಣ ಮಾತ್ರ ಸಾಗುತ್ತಿದೆ.