ಅಗ್ಗದ ಯೂರಿಯಾ ಕಳ್ಳಸಾಗಣೆಗೆ ಕಾರಣವಾಗುತ್ತಿದೆಯೇ? ಯೂರಿಯಾ ದಿಕ್ಕು ಬದಲಾವಣೆ ಕುರಿತು CAG ಆಡಿಟ್!
ಸಾಂದರ್ಭಿಕ ಚಿತ್ರ | Photo Credit : PTI
ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಸಬ್ಸಿಡಿ ಮೂಲಕ ಭಾರತೀಯ ರೈತರಿಗೆ ಪೂರೈಕೆಯಾಗುವ ಯೂರಿಯಾ ಅಕ್ರಮ ಬಳಕೆ ಮತ್ತು ಕಳ್ಳಸಾಗಣೆಗೆ ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ಕುರಿತು ವಿಸ್ತೃತ CAG ಆಡಿಟ್ ಗೆ ಸರ್ಕಾರ ಸೂಚಿಸಿದ್ದು, 169 ಜಿಲ್ಲೆಗಳು ಪರಿಶೀಲನೆಗೆ ಒಳಪಟ್ಟಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಚೀಲ ಯೂರಿಯಾದ ಬೆಲೆ 3,000 ರೂ. ಇದ್ದರೂ, ಭಾರತೀಯ ರೈತರಿಗೆ ಅದು 300 ರೂ.ಗೆ ಸಿಗುತ್ತದೆ. ಈ ಸಬ್ಸಿಡಿ ರೈತರಿಗೆ ಜೀವನಾಡಿಯಾಗಿದೆ. ಆದರೆ ಮತ್ತೊಂದೆಡೆ, ಸಬ್ಸಿಡಿ ಯೂರಿಯಾವನ್ನು ಕೃಷಿಯೇತರ ಬಳಕೆಗೆ ವರ್ಗಾಯಿಸುವುದು ಮತ್ತು ಕಳ್ಳಸಾಗಣೆ ಮಾಡುವುದಕ್ಕೂ ಇದು ಕಾರಣವಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.
ಇದೀಗ 169 ಜಿಲ್ಲೆಗಳಲ್ಲಿ ಸಬ್ಸಿಡಿ ಯೂರಿಯಾವನ್ನು ಉದ್ದೇಶಿತ ಬಳಕೆಗೆ ಬದಲಾಗಿ ಬೇರೆ ಉದ್ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ CAG (Comptroller and Auditor General of India) ರಸಗೊಬ್ಬರ ಸಬ್ಸಿಡಿಯ ಅಖಿಲ ಭಾರತ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ ಆರಂಭಿಸಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಭಾರತದಲ್ಲಿ ಒಂದು ಚೀಲ ಯೂರಿಯಾ 300 ರೂ.ಗೆ ದೊರೆತರೆ, 5,000 ರೂ. ಬೆಲೆಯ ಡೈಅಮೋನಿಯಂ ಫಾಸ್ಫೇಟ್ (DAP) 1,300 ರೂ.ಗೆ ಲಭ್ಯವಿದೆ. ಭಾರತ ವಾರ್ಷಿಕವಾಗಿ ಸುಮಾರು 400 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಬಳಸುತ್ತದೆ. ಇದರಲ್ಲಿ 100 ಲಕ್ಷ ಟನ್ ಗಳಿಗೂ ಅಧಿಕ ಯೂರಿಯಾವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ದೇಶೀಯ ಉತ್ಪಾದನೆಗೂ ಆಮದು ಮಾಡಿಕೊಂಡ ನೈಸರ್ಗಿಕ ಅನಿಲದ ಅಗತ್ಯವಿದೆ. ಹೀಗಾಗಿ ಯೂರಿಯಾ ಉತ್ಪಾದನೆಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಸರ್ಕಾರ ರಸಗೊಬ್ಬರ ಸಬ್ಸಿಡಿಗಾಗಿ ವರ್ಷಕ್ಕೆ 2 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಇದರಲ್ಲಿ ಯೂರಿಯಾ ಅತಿದೊಡ್ಡ ಪಾಲು ಹೊಂದಿದೆ.
ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ ಭಾರತವು ಯೂರಿಯಾ ಸಬ್ಸಿಡಿಗಾಗಿ ಸುಮಾರು 1.42 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು 1.18 ಲಕ್ಷ ಕೋಟಿ ರೂ. ಹೆಚ್ಚಾಗಿದೆ. 2026-27ನೇ ಸಾಲಿನಲ್ಲಿ ಯೂರಿಯಾ ಸಬ್ಸಿಡಿಗಾಗಿ ಸರ್ಕಾರ ಬಜೆಟ್ ನಲ್ಲಿ 1.17 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ.
ಈ ಸಬ್ಸಿಡಿ ಇದೀಗ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಗಮನ ಸೆಳೆದಿದೆ. 169 ಜಿಲ್ಲೆಗಳಲ್ಲಿ ಸಬ್ಸಿಡಿ ಯೂರಿಯಾವನ್ನು ಬೇರೆಡೆಗೆ ವರ್ಗಾಯಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ CAG ರಸಗೊಬ್ಬರ ಸಬ್ಸಿಡಿಯ ಅಖಿಲ ಭಾರತ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ ಆರಂಭಿಸಿದೆ ಎಂದು ‘business-standard.com’ ವರದಿ ಮಾಡಿದೆ.
ವರದಿಯ ಪ್ರಕಾರ, 2026ರ ಮೇ-ಜೂನ್ ನಿಂದ ಕ್ಷೇತ್ರಮಟ್ಟದ ಪರಿಶೀಲನಾ ಕಾರ್ಯ ಆರಂಭವಾಗಿದ್ದು, ಎರಡು ವರ್ಷಗಳ ಕಾಲ ಲೆಕ್ಕಪರಿಶೋಧನೆ ನಡೆಯಲಿದೆ. 15 ರಾಜ್ಯಗಳ 169 ಜಿಲ್ಲೆಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಲಾಗುತ್ತಿದೆ.
ಈ 169 ಜಿಲ್ಲೆಗಳ ಪೈಕಿ 149 ಜಿಲ್ಲೆಗಳಲ್ಲಿ ಪ್ರತಿ ಹೆಕ್ಟೇರ್ ಗೆ ಯೂರಿಯಾ ಬಳಕೆ 180 ಕೆ.ಜಿ. ಇರುವ ರಾಷ್ಟ್ರೀಯ ಸರಾಸರಿಗಿಂತ ಹಾಗೂ ಆಯಾ ರಾಜ್ಯಗಳ ಸರಾಸರಿ ಬಳಕೆಗಿಂತ ಹೆಚ್ಚಾಗಿದೆ. ಇವುಗಳಲ್ಲಿ ನಾಲ್ಕು ಜಿಲ್ಲೆಗಳನ್ನು ತಜ್ಞರು ಸೂಚಿಸಿದ್ದರೆ, 16 ಜಿಲ್ಲೆಗಳನ್ನು ಕೇಂದ್ರ ರಸಗೊಬ್ಬರ ಇಲಾಖೆಯು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
CAG ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದ್ದು, ಆ ರಾಜ್ಯದ 37 ಜಿಲ್ಲೆಗಳು ಪರಿಶೀಲನೆಗೆ ಒಳಪಟ್ಟಿವೆ. ನಂತರ ಬಿಹಾರ ಮತ್ತು ತಮಿಳುನಾಡಿನ ತಲಾ 16 ಜಿಲ್ಲೆಗಳು ಹಾಗೂ ಪಂಜಾಬ್ ಮತ್ತು ಗುಜರಾತ್ನ ತಲಾ 14 ಜಿಲ್ಲೆಗಳು ಪಟ್ಟಿಯಲ್ಲಿವೆ. ಉಳಿದಂತೆ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಜಿಲ್ಲೆಗಳೂ ಪರಿಶೀಲನೆಗೆ ಒಳಪಡಲಿವೆ.
2011ರ ನಂತರ ಯೂರಿಯಾ ಸಬ್ಸಿಡಿ ವ್ಯವಸ್ಥೆಯ ಮೊದಲ ಸಮಗ್ರ ಅವಲೋಕನ ಇದಾಗಿರಲಿದೆ. ಪತ್ರಿಕಾ ವರದಿಗಳಲ್ಲಿ ಉಲ್ಲೇಖಿಸಲಾದ ಅಧಿಕಾರಿಗಳ ಪ್ರಕಾರ, ಯೂರಿಯಾದ ಬೇಡಿಕೆಯನ್ನು ಹೇಗೆ ಅಂದಾಜಿಸಲಾಗುತ್ತದೆ, ಪೂರೈಕೆಯನ್ನು ಹೇಗೆ ಯೋಜಿಸಲಾಗುತ್ತದೆ ಮತ್ತು ಸಾಗಣೆ ಹೇಗೆ ನಡೆಯುತ್ತದೆ ಎಂಬುದನ್ನು ಆಡಿಟ್ ಪರಿಶೀಲಿಸಲಿದೆ. ಸಬ್ಸಿಡಿ ವ್ಯವಸ್ಥೆಯ ಕಾರ್ಯನಿರ್ವಹಣೆ ಹಾಗೂ ದುರುಪಯೋಗ ತಡೆಗಟ್ಟಲು ರೂಪಿಸಿರುವ ಕ್ರಮಗಳನ್ನೂ ಪರಿಶೀಲಿಸಲಾಗುತ್ತದೆ.
GST ಜಾಲ, ಕೃಷಿ ಸಚಿವಾಲಯ ಮತ್ತು ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳು ಈ ಪ್ರಕ್ರಿಯೆಯಲ್ಲಿ ದತ್ತಾಂಶ ಹಂಚಿಕೊಳ್ಳುವ ನಿರೀಕ್ಷೆಯಿದೆ. ಇದರಿಂದ ಉತ್ಪಾದನೆ ಅಥವಾ ಆಮದಿನಿಂದ ಹಿಡಿದು ರೈತರ ಹೊಲಕ್ಕೆ ತಲುಪುವವರೆಗಿನ ಯೂರಿಯಾ ಪೂರೈಕೆ ಸರಪಳಿಯನ್ನು ಲೆಕ್ಕಪರಿಶೋಧಕರು ಪತ್ತೆಹಚ್ಚಲು ಸಾಧ್ಯವಾಗಲಿದೆ ಎನ್ನಲಾಗಿದೆ.
ಕೃಷಿ ಬಳಕೆಯ ಯೂರಿಯಾವನ್ನು ಕ್ವಿಂಟಾಲ್ ಗೆ ಸುಮಾರು 600 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಕೈಗಾರಿಕಾ ದರ್ಜೆಯ ಯೂರಿಯಾಕ್ಕೆ ಕ್ವಿಂಟಾಲ್ ಗೆ 2,400 ರೂ.ನಿಂದ 7,000 ರೂ.ವರೆಗೆ ಬೆಲೆ ದೊರೆಯುತ್ತದೆ. ಈ ಬೆಲೆ ವ್ಯತ್ಯಾಸವೇ ಯೂರಿಯಾವನ್ನು ಬೇರೆಡೆಗೆ ವರ್ಗಾಯಿಸಲು ಪ್ರೇರಣೆಯಾಗುತ್ತಿದೆ ಎಂದು ವರದಿಯಾಗಿದೆ.
ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು (PSU), ಅಧಿಕಾರಶಾಹಿ, ರಕ್ಷಣೆ ಮತ್ತು ಸಾರ್ವಜನಿಕ ನೀತಿಗೆ ಸಂಬಂಧಿಸಿದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ಯಮ ಸುದ್ದಿ ಕೇಂದ್ರವಾದ PSU ವಾಚ್ ಪ್ರಕಾರ, ಗಡಿ ಪ್ರದೇಶಗಳ ಮೇಲೂ ವಿಶೇಷ ಗಮನ ನೀಡಲಾಗುತ್ತಿದೆ. ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಬಿಹಾರದ ಜಿಲ್ಲೆಗಳ ಮೂಲಕ ಸಾಗಿಸುವ ಸಬ್ಸಿಡಿ ಯೂರಿಯಾವನ್ನು ನೆರೆಯ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆಯೇ ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಣಕಾಸು ಸಚಿವಾಲಯವೂ ವ್ಯತ್ಯಯಗಳನ್ನು ಗುರುತಿಸಿದೆ ಎಂದು ಇತ್ತೀಚೆಗೆ ವರದಿಯಾಗಿದೆ.
ಸಾರಿಗೆ ಸಂದರ್ಭದಲ್ಲಿ ಭಾಗಶಃ ಯೂರಿಯಾವನ್ನು ಇಳಿಸುವುದು ಮತ್ತು ಸೂಕ್ತ ದಾಖಲೆಗಳಿಲ್ಲದೆ ಸಾಗಣೆ ಮಾಡುವುದು, ವಿಶೇಷವಾಗಿ ಗಡಿ ಹಾಗೂ ಗುಡ್ಡಗಾಡು ಜಿಲ್ಲೆಗಳಲ್ಲಿ ವರದಿಯಾಗುತ್ತಿದೆ. ಸಂಸದೀಯ ಸಮಿತಿಯೂ ಈ ನಿಟ್ಟಿನಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿತ್ತು.
ಸಬ್ಸಿಡಿ ರಸಗೊಬ್ಬರವನ್ನು ಕೃಷಿಯೇತರ ಬಳಕೆಗೆ ವರ್ಗಾಯಿಸುವ ಅಪಾಯವನ್ನು ಸರ್ಕಾರವೇ ಒಪ್ಪಿಕೊಂಡಿದೆ. 2023ರ ಆಗಸ್ಟ್ 4ರಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ, ಅಕ್ರಮ ರಸಗೊಬ್ಬರ ಸಾಗಣೆ, ಅಕ್ರಮ ದಾಸ್ತಾನು ಮತ್ತು ಅಕ್ರಮ ಸಂಗ್ರಹಣೆಯ ಶಂಕಿತ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಲು ವಿಶೇಷ ರಸಗೊಬ್ಬರ ವಿಶೇಷ ತಪಾಸಣಾ ದಳವನ್ನು ರಚಿಸಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿತ್ತು.
ಇದೀಗ CAG ಆಡಿಟ್ನಲ್ಲಿ ಮಾರಾಟದ ದತ್ತಾಂಶ ಮಾತ್ರವಲ್ಲದೆ, ಸಾರಿಗೆ ವ್ಯವಸ್ಥೆ, ಸರಕು ಸಾಗಣೆ ದಾಖಲೆಗಳು ಮತ್ತು ಪೂರೈಕೆ ಸರಪಳಿಯ ಪ್ರತಿಯೊಂದು ಹಂತದಲ್ಲಿನ ಮೇಲ್ವಿಚಾರಣೆಯ ದಕ್ಷತೆಯನ್ನೂ ಪರಿಶೀಲಿಸಲಾಗುತ್ತದೆ.