×
Ad

ಹೋಮಿಯೋಪತಿ ಬೆಂಬಲಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ ಅನುಷ್ಕಾ ಶರ್ಮಾ

Update: 2026-06-05 16:02 IST

ಅನುಷ್ಕಾ ಶರ್ಮಾ | Photo Credit : PTI 

ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೋಮಿಯೋಪತಿ ವೈದ್ಯರ ವೀಡಿಯೊ ಹಂಚಿಕೊಂಡು ಬೆಂಬಲ ವ್ಯಕ್ತಪಡಿಸಿದ ಬಳಿಕ ಅಂತರ್ಜಾಲದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದಾರೆ.

ಅನುಷ್ಕಾ ಶರ್ಮಾ ಅವರು ಡಾ. ರಾಜನ್ ಶಂಕರನ್ ಮತ್ತು ನಮಿತಾ ಥಾಪರ್ ಅವರ ನಡುವಿನ ಸಂಭಾಷಣೆಯ ಕ್ಲಿಪ್ ಹಂಚಿಕೊಂಡು, “ಹೋಮಿಯೋಪತಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಡಾ. ರಾಜನ್ ಶಂಕರನ್ ಈ ಪ್ರಯಾಣದ ಪ್ರಮುಖ ಭಾಗವಾಗಿದ್ದಾರೆ. ಆರೋಗ್ಯ ಮತ್ತು ಚಿಂತನಶೀಲ ಜೀವನದ ಕುರಿತು ಅವರ ಒಳನೋಟಗಳನ್ನು ನಾನು ತುಂಬಾ ಗೌರವಿಸುತ್ತೇನೆ” ಎಂದು ಬರೆದಿದ್ದಾರೆ.

ಈ ಪೋಸ್ಟ್ ಅನ್ನು ‘ಎಕ್ಸ್‌’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೆಲ ಬಳಕೆದಾರರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಅವರ ನಿಲುವನ್ನು ಟೀಕಿಸಿದ ಒಬ್ಬ ಬಳಕೆದಾರ, “ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಭಾರತೀಯರಿಗೆ ಹೋಮಿಯೋಪತಿಯನ್ನು ಶಿಫಾರಸು ಮಾಡುತ್ತಿದ್ದಾರೆ. ವಂಚಕ ಬಾಬಾಗಳು ಸಾಕಾಗಿಲ್ಲ, ಅದಕ್ಕೆ ಅವರೀಗ ಅವೈಜ್ಞಾನಿಕ ವಂಚನೆ ಔಷಧವನ್ನು ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಸಾಕಷ್ಟು ಹಣ ಕೊಡಿ ಮತ್ತು ಒಂದು ದಿನ ಅವರು, ‘ನಿಮ್ಮ ಎಲ್ಲಾ ರೋಗಗಳನ್ನು ಗುಣಪಡಿಸಲು ಪ್ರೇಮಾನಂದ ಮಹಾರಾಜರನ್ನು ಭೇಟಿ ಮಾಡಿ’ ಎಂದು ಜನರಿಗೆ ಹೇಳಬಹುದು” ಎಂದು ಬರೆದಿದ್ದಾರೆ.

ಆದರೆ ಅನೇಕ ಬಳಕೆದಾರರು ನಟಿಯನ್ನು ಬೆಂಬಲಿಸಿದ್ದಾರೆ. ಟೀಕೆಗೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರ, “ಹೋಮಿಯೋಪತಿ ಅವೈಜ್ಞಾನಿಕ ವಂಚನೆಯೇ? ನೀವು ಸರಿಯಾಗಿದ್ದೀರಾ? ಮಾನಸಿಕ ಆಸ್ಪತ್ರೆಗೆ ಹೋಗಬೇಕೇ? ಅಕ್ಷರಶಃ ಹೋಮಿಯೋಪತಿ ಕೆಲವೊಮ್ಮೆ ಅಲೋಪತಿ ಚಿಕಿತ್ಸೆ ನೀಡಲು ಸಾಧ್ಯವಾಗದ ಸಮಸ್ಯೆಗಳನ್ನೂ ಗುಣಪಡಿಸುತ್ತದೆ” ಎಂದು ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರ ಪೋಸ್ಟ್ ಅನ್ನು ಸಮರ್ಥಿಸಿಕೊಂಡು, “ಇದು ವೈಯಕ್ತಿಕ ಆಯ್ಕೆಯ ವಿಷಯ. ಪ್ರತಿಯೊಬ್ಬರೂ ವೈದ್ಯರನ್ನು ಅಥವಾ ಬಾಬಾರನ್ನು ಭೇಟಿ ಮಾಡಬೇಕು ಎಂದು ಅವರು ಹೇಳಿಲ್ಲ. ಸ್ವತಂತ್ರ ಇಚ್ಛೆ ಎನ್ನುವುದೂ ಒಂದಿದೆ” ಎಂದು ಹೇಳಿದ್ದಾರೆ.

ಈ ನಡುವೆ ಒಬ್ಬ ಬಳಕೆದಾರ ತಾನು ಇನ್ನು ಮುಂದೆ ಅನುಷ್ಕಾ ಶರ್ಮಾ ಅಭಿಮಾನಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ. “60 ದಶಲಕ್ಷಕ್ಕೂ ಹೆಚ್ಚು ಮಂದಿ ನಿಮ್ಮನ್ನು ಫಾಲೋ ಮಾಡುತ್ತಿದ್ದಾರೆ. ನೀವು ನಿಮ್ಮ ಪೋಸ್ಟ್‌ ನಲ್ಲಿ ಹೋಮಿಯೋಪತಿಯನ್ನು ಪ್ರಚಾರ ಮಾಡುತ್ತೀರಿ? ಬಹಳಷ್ಟು ಮಂದಿ ಇವುಗಳನ್ನು ನಂಬಿ ಸೂಕ್ತ ಔಷಧ ಸೇವಿಸದೆ ಪ್ರಾಣ ಕಳೆದುಕೊಂಡಿರುವುದನ್ನು ಕಂಡಿದ್ದೇನೆ. ನಂಬಿಕೆಯ ಹೆಸರಿನಲ್ಲಿ ನೀವು ಅದನ್ನು ಪ್ರಚಾರ ಮಾಡುತ್ತಿದ್ದೀರೇನು? ಆ ವಂಚಕ ಬಾಬಾ ನಿಮಗೆ ಹೇಳಿದ್ದು ಅದನ್ನೇ? ಓ ದೇವರೇ!” ಎಂದು ಅವರು ಬರೆದುಕೊಂಡಿದ್ದಾರೆ.

×
Ad

ಇದೇ ರೀತಿಯ ಕಳವಳ ವ್ಯಕ್ತಪಡಿಸಿದ ಮತ್ತೊಬ್ಬ ಬಳಕೆದಾರ, “ಅನುಷ್ಕಾ ಶರ್ಮಾಗೆ ಹಠಾತ್ ಆಗಿ ಏನಾಗಿದೆ? ಎಲ್ಲವನ್ನೂ ಬದಿಗೊತ್ತಿ ಹೋಮಿಯೋಪತಿ ಏಕೆ ಪ್ರಚಾರ ಮಾಡುತ್ತಿದ್ದಾರೆ? ವಂಚಕ ಬಾಬಾರನ್ನು ಪ್ರಚಾರ ಮಾಡುವುದು ಸಾಕಾಗಿಲ್ಲ ಎಂದು ಇದೀಗ ವಂಚಕ ಔಷಧಿಯನ್ನೂ ಪ್ರಚಾರ ಮಾಡುತ್ತಿದ್ದಾರೆ” ಎಂದು ಬರೆದಿದ್ದಾರೆ.

ಕೆಲವು ಬಳಕೆದಾರರು ತಾರೆಯರ ಪ್ರಭಾವದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. “ಅನುಷ್ಕಾ ಅವರ ಪೋಸ್ಟ್ ನೋಡಿದೆ. ರಕ್ತ ಕುದಿಯುತ್ತಿದೆ. ಲಕ್ಷಾಂತರ ಮಂದಿ ತಮ್ಮನ್ನು ಫಾಲೋ ಮಾಡುತ್ತಿರುವ ಹೊರತಾಗಿಯೂ ಅವರು ಹೋಮಿಯೋಪತಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು ಚಿಕಿತ್ಸೆಗೆ ಹೋಮಿಯೋಪತಿ ಅಥವಾ ಆಯುರ್ವೇದ ವೈದ್ಯರ ಬಳಿಗೆ ಏಕೆ ಹೋಗಬಾರದು?” ಎಂದು ಒಬ್ಬ ಬಳಕೆದಾರ ಬರೆದುಕೊಂಡಿದ್ದಾರೆ.

ಅನೇಕ ಮಂದಿ ಹೋಮಿಯೋಪತಿಯ ಪರವಾಗಿ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ನನ್ನ ಇಬ್ಬರೂ ಹೆತ್ತವರು ಅಲೋಪತಿ ವೈದ್ಯರು. ಆದರೆ ನನ್ನ ಚರ್ಮದ ಸಮಸ್ಯೆಗೆ ಹೋಮಿಯೋಪತಿ ವೈದ್ಯರ ಚಿಕಿತ್ಸೆ ಪಡೆದ ನಂತರ ಗುಣವಾಗಿದೆ. ಈಗಾಗಲೇ ವ್ಯತ್ಯಾಸ ಕಾಣಿಸುತ್ತಿದೆ” ಎಂದು ಒಬ್ಬರು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರ ತಾನು ಹೋಮಿಯೋಪತಿ ವೈದ್ಯನಾಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. “ನಾನು ಹೋಮಿಯೋಪತಿ ವೈದ್ಯನಾಗಿರುವುದರಿಂದ 3-4 ವರ್ಷಗಳ ಹಿಂದೆ ಟ್ವಿಟರ್‌ ನಲ್ಲಿ ಜನರು ನನ್ನನ್ನು ಟ್ರೋಲ್ ಮಾಡುತ್ತಿದ್ದರು. ನೀವು ಎಷ್ಟೇ ಟ್ರೋಲ್ ಮಾಡಿದರೂ ಕೊನೆಗೆ ನಿಮ್ಮಲ್ಲಿ ಕೆಲವರು ನನ್ನ ಬಳಿಗೇ ಚಿಕಿತ್ಸೆಗೆ ಬರುತ್ತೀರಿ ಎಂದು ನಾನು ಹೇಳಿದ್ದೆ. ಆ ಟ್ರೋಲಿಂಗ್‌ನಿಂದಾಗಿ ನಾನು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಆದರೆ ಬಹಳಷ್ಟು ಮಂದಿ ಅನುಷ್ಕಾ ಶರ್ಮಾರನ್ನು ಟೀಕಿಸಿದ್ದಾರೆ. ವಂಚಕ ಬಾಬಾಗಳು ಮತ್ತು ವಂಚಕ ವೈದ್ಯರನ್ನು ಅನುಷ್ಕಾ ಬೆಂಬಲಿಸುತ್ತಿದ್ದಾರೆ ಎಂದು ಕೆಲ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುಷ್ಕಾ ಶರ್ಮಾ ಇತ್ತೀಚೆಗೆ ತಮ್ಮ ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ವೃಂದಾವನದ ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿಯೂ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News