×
Ad

ಬಹುಪತ್ನಿತ್ವ ಮತ್ತು ಲಿವ್-ಇನ್ ಸಂಬಂಧಗಳಿಂದ ಹಿಡಿದು ಆಸ್ತಿ ಹಕ್ಕಿನವರೆಗೆ: ಅಸ್ಸಾಂನ UCC ಮಸೂದೆಯಲ್ಲೇನಿದೆ ?

Update: 2026-05-26 20:43 IST

ಹಿಮಂತ ಬಿಸ್ವಾ ಶರ್ಮಾ - Photo Credit: ANI

ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಎರಡನೇ NDA ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವಾರಗಳು ಕಳೆಯುವ ಮುನ್ನವೇ, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಯನ್ನು ಮಂಡಿಸಿದೆ. ಉತ್ತರಾಖಂಡ ಮತ್ತು ಗುಜರಾತ್ ಮಾದರಿಯನ್ನು ಅನುಸರಿಸಿರುವ ಈ ಮಸೂದೆಯಲ್ಲಿ, ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿ ಮತ್ತು ನಿಯಮ ಉಲ್ಲಂಘಿಸುವವರಿಗೆ ಕಠಿಣ ದಂಡದ ನಿಬಂಧನೆಗಳನ್ನು ಸೇರಿಸಲಾಗಿದೆ.

ನೂತನವಾಗಿ ಚುನಾಯಿತಗೊಂಡ ಅಸ್ಸಾಂ ವಿಧಾನಸಭೆಯ ಮೊದಲ ಅಧಿವೇಶನದ ಮೂರನೇ ದಿನವಾದ ಸೋಮವಾರ, ಈ 154 ಪುಟಗಳ ಬೃಹತ್ ಮಸೂದೆಯನ್ನು ಮಂಡಿಸಲಾಯಿತು. ಆದರೆ, ಸರ್ಕಾರದ ಈ ನಡೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ರೈಜೋರ್ ದಳ ಮತ್ತು ತೃಣಮೂಲ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಸೂದೆಯನ್ನು ಮಂಡಿಸುವ ಮುನ್ನ ವ್ಯಾಪಕ ಸಮಾಲೋಚನೆ ನಡೆಸಬೇಕಿತ್ತು ಎಂದು ಒತ್ತಾಯಿಸಿವೆ. ಈ ವಾರದ ಕೊನೆಯಲ್ಲಿ ಮಸೂದೆಯ ಮೇಲಿನ ಚರ್ಚೆ ಮತ್ತು ಪರಿಶೀಲನೆ ನಡೆಯಲಿದೆ.

"ಮದುವೆ ಮತ್ತು ವಿಚ್ಛೇದನ, ಉತ್ತರಾಧಿಕಾರ, ಲಿವ್-ಇನ್ ಸಂಬಂಧಗಳು ಮತ್ತು ಇವುಗಳಿಗೆ ಸಂಬಂಧಿಸಿದ ಇತರ ನಾಗರಿಕ ವಿಷಯಗಳನ್ನು ನಿಯಂತ್ರಿಸುವುದು ಮತ್ತು ನಿಯಮಬದ್ಧಗೊಳಿಸುವುದು" ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ. ಈ ಪ್ರಸ್ತಾವಿತ ಕಾಯ್ದೆಯು ಇಡೀ ಅಸ್ಸಾಂ ರಾಜ್ಯಕ್ಕೆ ಅನ್ವಯವಾಗಲಿದ್ದು, "ರಾಜ್ಯದ ಹೊರಗೆ ವಾಸಿಸುತ್ತಿರುವ ಅಸ್ಸಾಂನ ಮೂಲ ನಿವಾಸಿಗಳಿಗೂ ಇದು ಅನ್ವಯಿಸುತ್ತದೆ" ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಆದರೆ, ಪರಿಶಿಷ್ಟ ಪಂಗಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದ್ದು, 2011ರ ಜನಗಣತಿಯ ಪ್ರಕಾರ ಅಸ್ಸಾಂನಲ್ಲಿ ಇವರ ಜನಸಂಖ್ಯೆ ಶೇ. 12.44ರಷ್ಟಿದೆ.

ಕಳೆದ ಕೆಲವು ವರ್ಷಗಳಲ್ಲಿ NDA ಸರ್ಕಾರವು ವಿವಾಹಕ್ಕೆ ಸಂಬಂಧಿಸಿದಂತೆ 'ಅಸ್ಸಾಂ ಬಹುಪತ್ನಿತ್ವ ನಿಷೇಧ ಕಾಯ್ದೆ 2025' ಮತ್ತು 'ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ಕಡ್ಡಾಯ ನೋಂದಣಿ ಕಾಯ್ದೆ 2024' ಸೇರಿದಂತೆ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ಮಂಡಿಸಲಾಗಿರುವ UCC ಮಸೂದೆಯು ಇವುಗಳ ಮುಂದುವರಿದ ಭಾಗವಾಗಿದ್ದು, ವಿವಾಹಕ್ಕೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ಇದರ ಪ್ರಕಾರ, ಮದುವೆಯಾಗಲು ಪುರುಷನಿಗೆ ಕನಿಷ್ಠ 21 ವರ್ಷ ಮತ್ತು ಮಹಿಳೆಗೆ 18 ವರ್ಷ ತುಂಬಿರಬೇಕು. ಹಾಗೆಯೇ, ಮದುವೆಯಾಗುವ ಸಮಯದಲ್ಲಿ ಇಬ್ಬರಿಗೂ ಯಾವುದೇ ಸಂಗಾತಿ ಇರಬಾರದು ಮತ್ತು ಹಿಂದಿನ ಮದುವೆಯು ಕಾನೂನುಬದ್ಧವಾಗಿ ವಿಚ್ಛೇದನ ಅಥವಾ ರದ್ದತಿಯಾಗಿರಬೇಕು.

ಅಲ್ಲದೆ, "ಮದುವೆಗೆ ಯಾವುದೇ ವ್ಯಕ್ತಿಯಿಂದ ಬಲವಂತ, ದೌರ್ಜನ್ಯ ಅಥವಾ ವಂಚನೆಯ ಮೂಲಕ ಒಪ್ಪಿಗೆ ಪಡೆದಿರಬಾರದು." ಮದುವೆಯಾಗುವವರು "ನಿಷೇಧಿತ ರಕ್ತಸಂಬಂಧಗಳ" ವ್ಯಾಪ್ತಿಯಲ್ಲಿ ಇರಬಾರದು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಮಸೂದೆಯಲ್ಲಿ ಒಡಹುಟ್ಟಿದವರ ಮಕ್ಕಳೂ ಸೇರಿದಂತೆ ಒಟ್ಟು 37 ಇಂತಹ 'ನಿಷೇಧಿತ ಸಂಬಂಧಗಳ' ಪಟ್ಟಿಯನ್ನು ನೀಡಲಾಗಿದೆ.

ಈ ಕರಡು ಕಾನೂನಿನ ಪ್ರಕಾರ, ಮದುವೆಯಾಗುವವರಲ್ಲಿ ಕನಿಷ್ಠ ಒಬ್ಬರು ರಾಜ್ಯದ ನಿವಾಸಿಯಾಗಿದ್ದರೂ ಸಹ, ಮದುವೆ ನಡೆದ 60 ದಿನಗಳ ಒಳಗಾಗಿ ನಿಗದಿತ ಸಬ್-ರೆಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಇದೇ ರೀತಿ, ವಿಚ್ಛೇದನದ ತೀರ್ಪು ಬಂದ 60 ದಿನಗಳ ಒಳಗಾಗಿ ಅದನ್ನು ನೋಂದಾಯಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.

ಈ ಕಾಯ್ದೆಯಡಿ ನಿರ್ವಹಿಸಲಾಗುವ ವಿವಾಹ ಮತ್ತು ವಿಚ್ಛೇದನದ ರಿಜಿಸ್ಟರ್ಗಳು ಹಾಗೂ ಮೇಲ್ಮನವಿಗಳ ದಾಖಲೆಗಳು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರುತ್ತವೆ. ಯಾರು ಬೇಕಾದರೂ ಸೂಕ್ತ ಸಮಯದಲ್ಲಿ ಇವುಗಳನ್ನು ಪರಿಶೀಲಿಸಬಹುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಕ್ರೌರ್ಯ, ಸಂಗಾತಿಯನ್ನು ಬಿಟ್ಟು ಹೋಗುವುದು ಮತ್ತು ಪರಸ್ಪರ ಒಪ್ಪಿಗೆಯಂತಹ ವಿಷಯಗಳ ಆಧಾರದ ಮೇಲೆ "ವಿಚ್ಛೇದನಕ್ಕೆ ಏಕರೂಪದ ನಿಯಮಗಳನ್ನು" ರೂಪಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

► ಆಸ್ತಿ ಹಕ್ಕು ಮತ್ತು ಲಿವ್-ಇನ್ ಸಂಬಂಧಗಳು

ಈ ಮಸೂದೆಯ ಅತ್ಯಂತ ಪ್ರಮುಖ ಮತ್ತು ವಿಸ್ತಾರವಾದ ಭಾಗವು ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದೆ. ಯಾವುದೇ ವ್ಯಕ್ತಿಯು ವಿಲ್ ಬರೆಯದೆ ಮೃತಪಟ್ಟರೆ ಆತನ ಆಸ್ತಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅಸ್ಸಾಂ ಸರ್ಕಾರವು ಕೆಲವು ಮಹತ್ವದ ನಿಬಂಧನೆಗಳನ್ನು ಗುರುತಿಸಿದೆ. ಅದರಂತೆ, "ಮೃತರ ಕ್ಲಾಸ್-1 ವಾರಸುದಾರರ ನಡುವೆ ಆಸ್ತಿ ಹಂಚಿಕೆಯಲ್ಲಿ ಲಿಂಗ ತಾರತಮ್ಯವಿಲ್ಲದ, ಏಕರೂಪದ ಆದ್ಯತೆಯನ್ನು ಇದು ಸೃಷ್ಟಿಸುತ್ತದೆ. ಇದರಲ್ಲಿ ಮೃತರ ಸಂಗಾತಿ, ಮಕ್ಕಳು ಮತ್ತು ಪೋಷಕರಿಗೆ ಸಮಾನವಾಗಿ ಆಸ್ತಿ ಹಕ್ಕು ಸಿಗಲಿದೆ" ಎಂದು ಸರ್ಕಾರ ತಿಳಿಸಿದೆ.

ಉತ್ತರಾಖಂಡ ಮತ್ತು ಗುಜರಾತ್ ಮಾದರಿಯಂತೆಯೇ, ಈ ಮಸೂದೆಯ ಮತ್ತೊಂದು ಅತ್ಯಂತ ಚರ್ಚಾಸ್ಪದ ಭಾಗವೆಂದರೆ ಲಿವ್-ಇನ್ ಸಂಬಂಧಗಳ ನಿಯಂತ್ರಣ. ಇದರ ಅಡಿಯಲ್ಲಿ ರಾಜ್ಯದಲ್ಲಿ ವಾಸಿಸುವ ಲಿವ್-ಇನ್ ಜೋಡಿಗಳು ತಮ್ಮ ಸಂಬಂಧವನ್ನು ನಿಗದಿತ ಸಬ್-ರೆಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೆ, ಅಸ್ಸಾಂನ ಯಾವುದೇ ಮೂಲ ನಿವಾಸಿಯು ರಾಜ್ಯದ ಭೌಗೋಳಿಕ ಗಡಿಯಿಂದ ಹೊರಗೆ ಲಿವ್-ಇನ್ ಸಂಬಂಧದಲ್ಲಿದ್ದರೂ ಸಹ, ಅವರು ತಮ್ಮ ಮೂಲ ನಿವಾಸದ ವ್ಯಾಪ್ತಿಗೆ ಬರುವ ಸಬ್-ರೆಜಿಸ್ಟ್ರಾರ್ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಆದರೆ, ಲಿವ್-ಇನ್ ಸಂಬಂಧದಲ್ಲಿರುವವರು "ನಿಷೇಧಿತ ರಕ್ತಸಂಬಂಧಗಳ" ವ್ಯಾಪ್ತಿಗೆ ಬರುತ್ತಿದ್ದರೆ, ಅವರಲ್ಲಿ ಯಾರಾದರೂ ಒಬ್ಬರಿಗೆ ಈಗಾಗಲೇ ಮದುವೆಯಾಗಿದ್ದರೆ ಅಥವಾ ಅವರು ಬೇರೊಂದು ಲಿವ್-ಇನ್ ಸಂಬಂಧದಲ್ಲಿದ್ದರೆ, ಅಪ್ರಾಪ್ತರಾಗಿದ್ದರೆ, ಅಥವಾ ಸಂಗಾತಿಯ ಗುರುತು ಸೇರಿದಂತೆ ಯಾವುದೇ ಪ್ರಮುಖ ವಿಷಯಕ್ಕೆ ಸಂಬಂಧಿಸಿದಂತೆ ಬಲವಂತ, ದೌರ್ಜನ್ಯ, ಅನುಚಿತ ಪ್ರಭಾವ ಅಥವಾ ವಂಚನೆಯ ಮೂಲಕ ಒಪ್ಪಿಗೆ ಪಡೆದಿದ್ದರೆ ಅಂತಹ ಲಿವ್-ಇನ್ ಸಂಬಂಧಗಳ ನೋಂದಣಿಗೆ ಕಾಯ್ದೆಯಲ್ಲಿ ಅವಕಾಶವಿರುವುದಿಲ್ಲ.

► ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು ದಂಡ

ಯಾವುದೇ ಜೋಡಿಯು ಸಬ್-ರೆಜಿಸ್ಟ್ರಾರ್‌ ಗೆ ಮಾಹಿತಿ ನೀಡದೆ ಒಂದು ತಿಂಗಳಿಗಿಂತ ಹೆಚ್ಚು ಕಾಲ ಲಿವ್-ಇನ್ ಸಂಬಂಧದಲ್ಲಿದ್ದರೆ, ಅವರಿಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ವರೆಗೆ ದಂಡ, ಇಲ್ಲವೇ ಇವೆರಡನ್ನೂ ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ನೋಂದಣಿಯಾಗದ ಲಿವ್-ಇನ್ ಸಂಬಂಧದ ಬಗ್ಗೆ ಸಬ್-ರೆಜಿಸ್ಟ್ರಾರ್‌ ಗೆ "ದೂರು ಅಥವಾ ಮಾಹಿತಿ" ಸಿಕ್ಕಿ, ಅವರು ಆ ಜೋಡಿಗೆ ನೋಟಿಸ್ ಕಳುಹಿಸಿದ ನಂತರವೂ ವಿವರ ಸಲ್ಲಿಸಲು ವಿಫಲರಾದರೆ ಶಿಕ್ಷೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಅಂತಹ ಸಂದರ್ಭದಲ್ಲಿ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ.ವರೆಗೆ ದಂಡ ವಿಧಿಸುವ ಕಠಿಣ ನಿಯಮವನ್ನು ಸೇರಿಸಲಾಗಿದೆ.

ಲಿವ್-ಇನ್ ಸಂಬಂಧವನ್ನು ಕೊನೆಗೊಳಿಸುವಾಗಲೂ ಸಹ ನಿಗದಿತ ನಮೂನೆಯಲ್ಲಿ "ಸಂಬಂಧದ ಮುಕ್ತಾಯದ ಹೇಳಿಕೆಯನ್ನು" ಸಬ್-ರೆಜಿಸ್ಟ್ರಾರ್‌ ಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಪುರುಷ ಸಂಗಾತಿಯು ಮಹಿಳೆಯನ್ನು ಅರ್ಧದಲ್ಲೇ ಕೈಬಿಟ್ಟರೆ, ಆಕೆ ಆತನಿಂದ ಜೀವನಾಂಶ ಕೋರಿ ದಾವೆ ಹೂಡಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂತಿಮವಾಗಿ, "ಲಿವ್-ಇನ್ ಸಂಬಂಧದಿಂದ ಜನಿಸುವ ಯಾವುದೇ ಮಗುವನ್ನು ಆ ದಂಪತಿಯ ಕಾನೂನುಬದ್ಧ ಮಗು ಎಂದೇ ಪರಿಗಣಿಸಲಾಗುವುದು" ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News