×
Ad

CBSE 12ನೇ ತರಗತಿ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವುದೇಕೆ ?

Update: 2026-05-26 20:40 IST

ಸಾಂದರ್ಭಿಕ ಚಿತ್ರ | PC : freepik

ಈ ವರ್ಷದ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗಾಗಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸದಾಗಿ ಪರಿಚಯಿಸಿರುವ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ಎಂಬ ಡಿಜಿಟಲ್ ಮೌಲ್ಯಮಾಪನ ವಿಧಾನವು ತೀವ್ರ ಟೀಕೆಗೆ ಗುರಿಯಾಗಿದೆ. ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು, ತಮಗೆ ಸಿಕ್ಕಿರುವ ಪ್ರತಿಗಳು ಅಸ್ಪಷ್ಟವಾಗಿವೆ, ಕೆಲವು ಪುಟಗಳು ಕಾಣೆಯಾಗಿವೆ ಮತ್ತು ಇನ್ನು ಕೆಲವು ಸಂದರ್ಭಗಳಲ್ಲಿ ಬೇರೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಗಳೇ ಸಿಕ್ಕಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದರ ನಡುವೆಯೇ, ಕಳೆದ ವಾರ CBSEಯ ಹಣ ಪಾವತಿ ವ್ಯವಸ್ಥೆಯೂ ಕೈಕೊಟ್ಟಿದ್ದು, ಕೆಲವು ವಿದ್ಯಾರ್ಥಿಗಳಿಂದ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ಕಡಿತಗೊಂಡಿದ್ದರೆ, ಇನ್ನು ಕೆಲವರಿಂದ ಕಡಿಮೆ ಮೊತ್ತ ಕಡಿತಗೊಂಡಿದೆ.

ಈ ಕುರಿತು ‘The Indian Express’ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, “ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಮರು-ಮೌಲ್ಯಮಾಪನ ಪೋರ್ಟಲ್ ಆರಂಭವಾಗುವವರೆಗೆ ಕಾಯಬೇಕು. ಅದರ ಮೂಲಕವೇ ಅರ್ಜಿ ಸಲ್ಲಿಸಬೇಕು” ಎಂದು ತಿಳಿಸಿದ್ದಾರೆ. ಆದರೆ, ಈ ಪೋರ್ಟಲ್ ಯಾವಾಗ ಲಭ್ಯವಾಗಲಿದೆ ಎಂಬ ನಿಖರ ದಿನಾಂಕವನ್ನು ಮಂಡಳಿ ಇದುವರೆಗೆ ಪ್ರಕಟಿಸಿಲ್ಲ.

►ಏನಿದು ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆ?

ಭಾರತದಾದ್ಯಂತ ಇರುವ 11 ಮತ್ತು 12ನೇ ತರಗತಿಯ ಶಿಕ್ಷಕರನ್ನು ಒಳಗೊಂಡ ತಂಡವು, ಈ ಬಾರಿ ಮೊದಲ ಬಾರಿಗೆ 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಸುಮಾರು 98 ಲಕ್ಷಕ್ಕೂ ಅಧಿಕ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಮೌಲ್ಯಮಾಪನ ಮಾಡಿದೆ.

►ಡಿಜಿಟಲ್ ಮೌಲ್ಯಮಾಪನ ಹೇಗೆ ನಡೆಯುತ್ತದೆ?

ಎಲ್ಲಾ ಉತ್ತರ ಪತ್ರಿಕೆಗಳಿಗೆ ರಹಸ್ಯ ಕೋಡ್ ನೀಡಲಾಗಿರುತ್ತದೆ. ಪರೀಕ್ಷಾ ಕೇಂದ್ರಗಳಿಂದ ಇವುಗಳನ್ನು ಪ್ರಾದೇಶಿಕ ಕಚೇರಿಗಳಿಗೆ ಸ್ಥಳಾಂತರಿಸಿದ ನಂತರ, ಪ್ರತಿಯೊಂದು ಪ್ರತಿಯನ್ನು ಸ್ಕ್ಯಾನ್ ಮಾಡಿ ಪೋರ್ಟಲ್ ಗೆ ಅಪ್ಲೋಡ್ ಮಾಡಲಾಗುತ್ತದೆ. ತದನಂತರ ಮೌಲ್ಯಮಾಪಕರು ಪೋರ್ಟಲ್ಗೆ ಲಾಗಿನ್ ಆಗಿ, CBSE ಶಾಲೆಗಳ ಶಿಕ್ಷಕರ ಸಮಿತಿಯು ಸಿದ್ಧಪಡಿಸಿದ ‘ಮೌಲ್ಯಮಾಪನ ಯೋಜನೆ’ಗೆ ಅನುಗುಣವಾಗಿ ಪತ್ರಿಕೆಗಳನ್ನು ಪರಿಶೀಲಿಸುತ್ತಾರೆ.

ಈ ಹೊಸ ವ್ಯವಸ್ಥೆಯಲ್ಲಿ, ಪರೀಕ್ಷಕರು ಪ್ರತಿಯೊಂದು ಹಂತ ಹಾಗೂ ಉತ್ತರಕ್ಕೂ ಕಡ್ಡಾಯವಾಗಿ ಅಂಕಗಳನ್ನು ದಾಖಲಿಸಬೇಕಾಗುತ್ತದೆ. ಯಾವುದೇ ಒಂದು ಉತ್ತರವನ್ನಾದರೂ ಮೌಲ್ಯಮಾಪನ ಮಾಡದೆ ಬಿಟ್ಟರೆ, ಆ ಉತ್ತರ ಪತ್ರಿಕೆಯನ್ನು ಸಬ್ಮಿಟ್ ಮಾಡಲು ವ್ಯವಸ್ಥೆಯು ಅನುಮತಿಸುವುದಿಲ್ಲ. ಅಂತಿಮವಾಗಿ, ಈ ಸಾಫ್ಟ್ವೇರ್ ಸ್ವಯಂಚಾಲಿತವಾಗಿ ಒಟ್ಟು ಅಂಕಗಳನ್ನು ಲೆಕ್ಕ ಹಾಕುತ್ತದೆ.

ಮೌಲ್ಯಮಾಪನ ಮಾಡಲಾದ ಒಟ್ಟು 98 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಪೈಕಿ ಸುಮಾರು 13,000 ಪ್ರತಿಗಳು ಓದಲು ಅಸಾಧ್ಯವಾಗುವಷ್ಟು ಅಸ್ಪಷ್ಟವಾಗಿದ್ದವು. ಈ ಕಾರಣದಿಂದಾಗಿ, ಅವುಗಳನ್ನು ಸಾಂಪ್ರದಾಯಿಕ ಮಾದರಿಯಲ್ಲಿಯೇ ಮೌಲ್ಯಮಾಪನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

►ಹಾಗಾದರೆ, ಎಡವಟ್ಟಾಗಿದ್ದು ಎಲ್ಲಿ?

ಮೇ 13 ರಂದು ಪ್ರಕಟವಾದ ಫಲಿತಾಂಶದಲ್ಲಿ ತೇರ್ಗಡೆ ಪ್ರಮಾಣವು ಕಳೆದ ವರ್ಷ ಶೇ. 88.39ರಿಂದ ಈ ವರ್ಷ ಶೇ. 85.29ಕ್ಕೆ ಕುಸಿದಿದೆ. ಇದಕ್ಕೂ ಮುನ್ನ 2019ರಲ್ಲಿ ಅತ್ಯಂತ ಕಡಿಮೆ ಅಂದರೆ ಶೇ. 83.40ರಷ್ಟು ಫಲಿತಾಂಶ ದಾಖಲಾಗಿತ್ತು. ಅದರ ನಂತರ ಅತ್ಯಂತ ಕಳಪೆ ಫಲಿತಾಂಶ ಬಂದಿರುವುದು ಇದೇ ಮೊದಲು. ಅಷ್ಟೇ ಅಲ್ಲದೆ, ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 16ರಷ್ಟು ಕುಸಿದಿದೆ.

ಫಲಿತಾಂಶ ಹೊರಬೀಳುತ್ತಿದ್ದಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತರಲಾದ ಏಕೈಕ ಹೊಸ ಬದಲಾವಣೆಯಾದ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ವ್ಯವಸ್ಥೆಯಿಂದಲೇ ಕಡಿಮೆ ಅಂಕಗಳು ಬಂದಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಈ ಆಕ್ರೋಶವನ್ನು ತಣಿಸಲು ಮಂಡಳಿಯು ಕಳೆದ ವಾರ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಇದು ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಪಡೆಯುವ ಶುಲ್ಕವನ್ನು 700 ರೂ.ವಿನಿಂದ 100 ರೂ.ಗೆ ಇಳಿಸಿತು. ಹಾಗೆಯೇ, ಅಂಕಗಳ ಪುನರ್ಪರಿಶೀಲನೆ ಅಥವಾ ಬಿಟ್ಟುಹೋದ ಉತ್ತರಗಳ ಪರಿಶೀಲನೆಗಾಗಿ ವಿಧಿಸಲಾಗುತ್ತಿದ್ದ ಶುಲ್ಕವನ್ನು 500 ರೂ.ವಿನಿಂದ 100ರೂ.ಗೆ ಕಡಿತಗೊಳಿಸಿತು. ಮರು-ಮೌಲ್ಯಮಾಪನಕ್ಕಾಗಿ (ನಿರ್ದಿಷ್ಟ ಉತ್ತರಗಳನ್ನು ಮಾತ್ರ ಮರುಪರಿಶೀಲಿಸುವುದು) ಪ್ರತಿ ಪ್ರಶ್ನೆಗೆ ಇದ್ದ 100 ರೂ.ಶುಲ್ಕವನ್ನು 25 ರೂ.ಗೆ ಇಳಿಸಲಾಯಿತು.

ಇದರೊಂದಿಗೆ, ಮರು-ಮೌಲ್ಯಮಾಪನದ ನಂತರ ಅಂಕಗಳು ಹೆಚ್ಚಾದರೆ ಪಾವತಿಸಿದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ. ಹಣವನ್ನು ವಾಪಸ್ ಮಾಡುವುದರಲ್ಲಿದ್ದ ತಾಂತ್ರಿಕ ತೊಂದರೆಗಳಿಂದಾಗಿ 2019ರಿಂದ ನಿಲ್ಲಿಸಲಾಗಿದ್ದ ಈ ಮರುಪಾವತಿ ವ್ಯವಸ್ಥೆಯನ್ನು ಮಂಡಳಿ ಇದೀಗ ಮತ್ತೆ ಜಾರಿಗೆ ತಂದಿದೆ.

ಉತ್ತರ ಪತ್ರಿಕೆಗಳ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸುವ ಪೋರ್ಟಲ್ ಮೇ 19ರಂದು ಲಭ್ಯವಾಯಿತಾದರೂ, ತಾಂತ್ರಿಕ ದೋಷಗಳಿಂದಾಗಿ ಅದು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಈ ಕಾರಣದಿಂದಾಗಿ ಮೇ 22ರವರೆಗೆ ಇದ್ದ ಕೊನೆಯ ದಿನಾಂಕವನ್ನು ಮೇ 25ರವರೆಗೆ ಹಲವು ಬಾರಿ ವಿಸ್ತರಿಸಬೇಕಾಯಿತು. ಪೋರ್ಟಲ್ಗೆ “ಅನಿರೀಕ್ಷಿತ ಪ್ರಮಾಣದ ಟ್ರಾಫಿಕ್” ಬಂದಿರುವುದು ಮತ್ತು ಅನಧಿಕೃತವಾಗಿ ವ್ಯವಸ್ಥೆಯನ್ನು ಹ್ಯಾಕ್ ಮಾಡುವ ಪ್ರಯತ್ನಗಳು ನಡೆದಿರುವುದರಿಂದ ಈ ವ್ಯತ್ಯಯ ಉಂಟಾಗಿದೆ ಎಂದು ಮಂಡಳಿ ಸಮರ್ಥಿಸಿಕೊಂಡಿದೆ. ಇದೇ ತಾಂತ್ರಿಕ ದೋಷದಿಂದಾಗಿ ಕೆಲವು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಕಡಿತವಾಗಿದ್ದು, ಹೆಚ್ಚುವರಿಯಾಗಿ ಕಡಿತಗೊಂಡ ಹಣವನ್ನು ಶೀಘ್ರದಲ್ಲೇ ಮರುಪಾವತಿಸುವುದಾಗಿ ಭರವಸೆ ನೀಡಿದೆ.

ಈ ವರ್ಷ ಉತ್ತರ ಪತ್ರಿಕೆಗಳ ಪ್ರತಿಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಮೇ 23ರಂದು ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಒಟ್ಟು 8.56 ಲಕ್ಷ ಉತ್ತರ ಪತ್ರಿಕೆಗಳಿಗಾಗಿ 2.94 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷ ಕೇವಲ 2.82 ಲಕ್ಷ ಉತ್ತರ ಪತ್ರಿಕೆಗಳಿಗಾಗಿ 1.31 ಲಕ್ಷ ಅರ್ಜಿಗಳು ಬಂದಿದ್ದವು. ಅಂದರೆ ಈ ಬಾರಿ ಅರ್ಜಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಸಲ್ಲಿಕೆಯಾಗಿರುವ 8.56 ಲಕ್ಷ ಅರ್ಜಿಗಳ ಪೈಕಿ ಈಗಾಗಲೇ 2.5 ಲಕ್ಷ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿಕೊಡಲಾಗಿದೆ.

ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಪ್ರತಿಯನ್ನು ಪಡೆದ ನಂತರವಷ್ಟೇ ಅಂಕಗಳ ಪರಿಶೀಲನೆ ಮತ್ತು ಮರು-ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಮರು-ಮೌಲ್ಯಮಾಪನದ ಪೋರ್ಟಲ್ ಆರಂಭವಾದ ನಂತರ, ಕೊನೆಯ ಅರ್ಜಿದಾರನಿಗೆ ಉತ್ತರ ಪತ್ರಿಕೆಯ ಪ್ರತಿ ಸಿಕ್ಕ ದಿನದಿಂದ ಕನಿಷ್ಠ ಎರಡು ದಿನಗಳ ಕಾಲ ಪೋರ್ಟಲ್ ಚಾಲ್ತಿಯಲ್ಲಿರುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

►OSM ವ್ಯವಸ್ಥೆಯ ಕುರಿತು ಮಂಡಳಿಯ ನಿಲುವೇನು?

CBSE ಮಂಡಳಿ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯ ಎರಡೂ ಈ ಹೊಸ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿಕೊಂಡಿವೆ. ಈ ಡಿಜಿಟಲ್ ಪದ್ಧತಿಯಿಂದಾಗಿ ಅಂಕಗಳನ್ನು ಒಟ್ಟುಗೂಡಿಸುವಲ್ಲಿ ನಡೆಯುತ್ತಿದ್ದ ತಪ್ಪುಗಳು ಸಂಪೂರ್ಣವಾಗಿ ನಿವಾರಣೆಯಾಗಿವೆ. ಜೊತೆಗೆ, ಮೌಲ್ಯಮಾಪನ ಪ್ರಕ್ರಿಯೆಯು ಹೆಚ್ಚು ಪ್ರಮಾಣಬದ್ಧ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿದೆ ಎಂದು ಹೇಳಿವೆ.

ಕಳೆದ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ CBSE ಅಧ್ಯಕ್ಷ ರಾಹುಲ್ ಸಿಂಗ್, “OSM ಮೌಲ್ಯಮಾಪನವು ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಹಿಂದೆಲ್ಲಾ ಉತ್ತರ ಪತ್ರಿಕೆಗಳನ್ನು ಆಯಾ ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಯಲ್ಲೇ ಮೌಲ್ಯಮಾಪನ ಮಾಡಲಾಗುತ್ತಿತ್ತು. ಆದರೆ ಈಗ, ಪತ್ರಿಕೆಗಳನ್ನು ಬೇರೆ ಯಾವುದೇ ಪ್ರದೇಶದ ಶಿಕ್ಷಕರಿಗೂ ಮೌಲ್ಯಮಾಪನಕ್ಕಾಗಿ ಕಳುಹಿಸಬಹುದು. ಇದು ದೇಶದ ಎಲ್ಲಾ ಭಾಗಗಳಲ್ಲೂ ಮೌಲ್ಯಮಾಪನ ಪ್ರಕ್ರಿಯೆಯು ಏಕರೂಪವಾಗಿ ಮತ್ತು ನ್ಯಾಯಯುತವಾಗಿ ನಡೆಯಲು ಸಹಕಾರಿಯಾಗಿದೆ” ಎಂದು ತಿಳಿಸಿದ್ದಾರೆ.

ಮಂಡಳಿಯು ಈ ಹಿಂದೆ 2014ರಲ್ಲೇ ಇಂತಹದ್ದೊಂದು ಆನ್-ಸ್ಕ್ರೀನ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸಿತ್ತು. ಆದರೆ, ಆಗ ಉತ್ತರ ಪತ್ರಿಕೆಗಳ ಬೈಂಡಿಂಗ್ ಕತ್ತರಿಸದೆ ಅವುಗಳನ್ನು ಸ್ಕ್ಯಾನ್ ಮಾಡುವ ಆಧುನಿಕ ತಂತ್ರಜ್ಞಾನ ಲಭ್ಯವಿಲ್ಲದ ಕಾರಣ ಆ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಿದೆ. ಈ ಹಿಂದೆ 2014ರಲ್ಲಿ ಕೆಲವು ಪ್ರಾದೇಶಿಕ ಕಚೇರಿಗಳಲ್ಲಿ 10ನೇ ತರಗತಿಗೆ ಹಾಗೂ 2015ರಲ್ಲಿ ದಿಲ್ಲಿ ವಲಯದ 12ನೇ ತರಗತಿ ಪರೀಕ್ಷೆಗಳಿಗೆ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಲಾಗಿತ್ತು.

ಪ್ರಸ್ತುತ ಜಾರಿಯಲ್ಲಿರುವ OSM ವ್ಯವಸ್ಥೆಗೆ CBSE ಆಡಳಿತ ಮಂಡಳಿ ಕಳೆದ ವರ್ಷವೇ ಅನುಮೋದನೆ ನೀಡಿತ್ತು. ಕಳೆದ ವರ್ಷದ ಜೂನ್ನಲ್ಲಿ ನಡೆದ ಸಭೆಯಲ್ಲಿ, ಡಿಜಿಟಲ್ ಮೌಲ್ಯಮಾಪನದಿಂದ ತಪ್ಪುಗಳು ಕಡಿಮೆಯಾಗಲಿವೆ, ಪ್ರಾದೇಶಿಕ ಮಟ್ಟದಲ್ಲಿ ಮೌಲ್ಯಮಾಪನದಲ್ಲಿ ಕಂಡುಬರುತ್ತಿದ್ದ ತಾರತಮ್ಯ ನಿವಾರಣೆಯಾಗಲಿದೆ ಮತ್ತು ಪರೀಕ್ಷಾ ವ್ಯವಸ್ಥೆಯು ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗಿತ್ತು.

ಆದರೆ, ಅಂದಿನ ಸಭೆಯ ನಡಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಂಡಳಿಯ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿ ಕೆಲವು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವಷ್ಟೇ, ಎಲ್ಲಾ ವಿಷಯಗಳಿಗೂ ಆನ್-ಸ್ಕ್ರೀನ್ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಬೇಕು ಎಂದು ಮಂಡಳಿಯ ಸದಸ್ಯರು ಸಲಹೆ ನೀಡಿದ್ದರು. ಈ ಸಲಹೆಯನ್ನು ಆಡಳಿತ ಮಂಡಳಿಯು ದಾಖಲಿಸಿಕೊಂಡಿತ್ತು.

ಆದರೆ, ಲಭ್ಯವಿರುವ ಮಾಹಿತಿಯ ಪ್ರಕಾರ, ಮಂಡಳಿಯ ಯಾವುದೇ ಪ್ರಾದೇಶಿಕ ಕಚೇರಿಗಳಲ್ಲಿ ಇಂತಹ ಸಮಗ್ರ ಪ್ರಾಯೋಗಿಕ ಯೋಜನೆಗಳನ್ನು ಹಮ್ಮಿಕೊಂಡಿರಲಿಲ್ಲ. ಕೇವಲ ಜನವರಿ ತಿಂಗಳಲ್ಲಿ ಐದು ಶಾಲೆಗಳಲ್ಲಿ ಮಾತ್ರ ಈ OSM ವ್ಯವಸ್ಥೆಯ ಪರೀಕ್ಷೆ ನಡೆಸಲಾಗಿತ್ತು. ಅಲ್ಲಿ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ರಾಜ್ಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಈ ಹೊಸ ಸಾಫ್ಟ್ವೇರ್ ಬಳಕೆಯ ತರಬೇತಿ ನೀಡಲಾಗಿತ್ತು. ಆ ಮೂರು ದಿನಗಳ ತರಬೇತಿ ಪ್ರಕ್ರಿಯೆಯಲ್ಲಿ ಬಂದ ಶಿಫಾರಸುಗಳ ಆಧಾರದ ಮೇಲೆ ಸಾಫ್ಟ್ವೇರ್ ಅನ್ನು ಅಪ್ಡೇಟ್ ಮಾಡಲಾಗಿತ್ತು. ತದನಂತರ ಶಿಕ್ಷಕರಿಗೆ ತರಬೇತಿ ನೀಡಿ, ಸಾಮೂಹಿಕವಾಗಿ ಒಂದು ಮಾದರಿ ಮೌಲ್ಯಮಾಪನವನ್ನು ಮಾತ್ರ ನಡೆಸಲಾಗಿತ್ತು.

►ವ್ಯವಸ್ಥೆಯನ್ನು ಸರಿಪಡಿಸಲು ಕೈಗೊಂಡಿರುವ ಕ್ರಮಗಳೇನು?

ಫಲಿತಾಂಶದ ನಂತರದ ಸೇವೆಗಳನ್ನು ಒದಗಿಸುವ ಈ ಪೋರ್ಟಲ್ನಲ್ಲಿ ಎದುರಾಗಿರುವ ತಾಂತ್ರಿಕ ದೋಷಗಳನ್ನು ನಿವಾರಿಸಲು ಇದೀಗ ಐಐಟಿ ಕಾನ್ಪುರ ಮತ್ತು ಐಐಟಿ ಮದ್ರಾಸ್ ಸಂಸ್ಥೆಗಳ ನೆರವು ಪಡೆಯಲಾಗಿದೆ. ಇದರೊಂದಿಗೆ, ಪೇಮೆಂಟ್ ಗೇಟ್ವೇ ಸಮಸ್ಯೆಯನ್ನು ಬಗೆಹರಿಸಲು ಮತ್ತು ಹೆಚ್ಚುವರಿಯಾಗಿ ಕಡಿತಗೊಂಡಿರುವ ಹಣವು ಸ್ವಯಂಚಾಲಿತವಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಗೆ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಈ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಸ್ತುತ ಎದ್ದಿರುವ ಎಲ್ಲಾ ಗೊಂದಲ ಹಾಗೂ ದೋಷಗಳನ್ನು ಅಂಕಗಳ ಪರಿಶೀಲನೆ ಮತ್ತು ಮರು-ಮೌಲ್ಯಮಾಪನ ಪ್ರಕ್ರಿಯೆಗಳ ಮೂಲಕವೇ ಬಗೆಹರಿಸಲಾಗುವುದು ಎಂದು ಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳು ದಾಖಲಿಸುವ ಪ್ರತಿಯೊಂದು ದೂರು ಮತ್ತು ಆಕ್ಷೇಪಣೆಯನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ರಶ್ಮಿ ಕಾಸರಗೋಡು

contributor

Similar News