ಸಾಂದರ್ಭಿಕ ಚಿತ್ರ (AI)

 

2025ರಲ್ಲಿ ಭಾರತದ ರಸ್ತೆಗಳಲ್ಲಿ ಸಂಭವಿಸಿದ ಅಪಘಾತಗಳಿಗೆ 1.83 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಸುಮಾರು 6,000 ಅಧಿಕವಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲೂ ಆತಂಕ ಮೂಡಿಸಿದೆ. ಇದೀಗ ರಸ್ತೆ ಸುರಕ್ಷತೆಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ನೂತನ 'ವಾಹನದಿಂದ ವಾಹನಕ್ಕೆ' (Vehicle-to-Vehicle - V2V) ಸಂವಹನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಈ ತಂತ್ರಜ್ಞಾನದ ಮೂಲಕ ಕಾರುಗಳು ವೈರ್ ಲೆಸ್ ವ್ಯವಸ್ಥೆಯಡಿ ಪರಸ್ಪರ ಸಂವಹನ ನಡೆಸಿ, ಮುಂದೆ ಎದುರಾಗಬಹುದಾದ ಅಪಘಾತಗಳ ಅಪಾಯದ ಬಗ್ಗೆ ಚಾಲಕರಿಗೆ ಮುನ್ನೆಚ್ಚರಿಕೆ ನೀಡಲಿವೆ.

V2V ವ್ಯವಸ್ಥೆಗೆ ಸಂಬಂಧಿಸಿದಂತೆ ಸಚಿವಾಲಯವು ಜುಲೈ 22ರಂದು 'ಕೇಂದ್ರ ಮೋಟಾರು ವಾಹನಗಳ (ತಿದ್ದುಪಡಿ) ನಿಯಮಗಳು, 2026'ರ ಕರಡನ್ನು ಪ್ರಕಟಿಸಿತ್ತು. 30 ದಿನಗಳ ಒಳಗೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಪ್ರಸ್ತುತ ಅವುಗಳನ್ನು ಪರಿಶೀಲಿಸಲಾಗುತ್ತಿದೆ.

ಪ್ರಸ್ತಾವಿತ ಹೊಸ ನಿಯಮಗಳೇನು, V2V ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಮತ್ತು ಇತರ ಸುರಕ್ಷತಾ ಸಾಧನಗಳಿಗಿಂತ ಇದು ಹೇಗೆ ಭಿನ್ನವಾಗಿದೆ ಎಂಬುದರ ವಿವರ ಇಲ್ಲಿದೆ.

►ಪ್ರಸ್ತಾವಿತ ನಿಯಮಗಳು ಏನು ಹೇಳುತ್ತವೆ?

ನಿಯಮಗಳಲ್ಲಿ ಪ್ರಸ್ತಾಪಿಸಲಾದ ಈ ಬದಲಾವಣೆಗಳು ಭಾರತದ ವಾಹನ ತಯಾರಿಕೆ ಮತ್ತು ರಸ್ತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲಾಗಲಿವೆ. ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯಂತಹ (ADAS) ವಾಹನದ ಒಳಗಿನ ಸುರಕ್ಷತಾ ತಂತ್ರಜ್ಞಾನದಿಂದ ಮುಂದುವರಿದು, ಎರಡು ವಾಹನಗಳನ್ನು ಒಂದಕ್ಕೊಂದು ಸಂಪರ್ಕಿಸುವತ್ತ ಈ ನಿಯಮಗಳು ಹೆಜ್ಜೆ ಇಡುತ್ತಿವೆ.

ಪ್ರಸ್ತಾವಿತ ಕರಡು ನಿಯಮಗಳ ಪ್ರಕಾರ, V2V ತಂತ್ರಜ್ಞಾನ ಹೊಂದಿರುವ ವಾಹನಗಳು ರಸ್ತೆಗೆ ಇಳಿಯುವ ಮುನ್ನ ಕನಿಷ್ಠ ತಾಂತ್ರಿಕ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸುವುದು ಕಡ್ಡಾಯ. ಅಷ್ಟೇ ಅಲ್ಲದೆ, ವಾಹನ ತಯಾರಕ ಸಂಸ್ಥೆಗಳು ಈ V2V ವ್ಯವಸ್ಥೆಯನ್ನು ಅಳವಡಿಸಲು ಕಾಲಮಿತಿಯನ್ನೂ ನಿಗದಿಪಡಿಸಲಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯಂತೆ, 2027ರ ಅಕ್ಟೋಬರ್ 1ರಂದು ಅಥವಾ ಆ ನಂತರ ತಯಾರಾಗುವ L (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು), M (ಕಾರು, ಬಸ್) ಮತ್ತು N (ಸರಕು ವಾಹನಗಳು) ವಿಭಾಗದ ವಾಹನಗಳಲ್ಲಿ V2V ವ್ಯವಸ್ಥೆ ಅಳವಡಿಸಿದರೆ, ಅವು AIS-230 ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇನ್ನು, 2028ರ ಅಕ್ಟೋಬರ್ 1ರಂದು ಅಥವಾ ಆ ನಂತರ ತಯಾರಾಗುವ L, M ಮತ್ತು N ವಿಭಾಗದ ಎಲ್ಲಾ ವಾಹನಗಳಲ್ಲಿ AIS-230 ಮಾನದಂಡಕ್ಕೆ ಅನುಗುಣವಾಗಿ V2V ಸಂವಹನ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

AIS-230 (Automotive Industry Standard-230) ಎಂಬುದು V2V ವ್ಯವಸ್ಥೆಯ ತಾಂತ್ರಿಕ ಬೆನ್ನೆಲುಬಾಗಿದೆ. ಇದು ರೇಡಿಯೊ ಕಾರ್ಯಕ್ಷಮತೆ, ಫ್ರೀಕ್ವೆನ್ಸಿ ಸ್ಥಿರತೆ, ರಿಸೀವರ್ ಸೂಕ್ಷ್ಮತೆ, ಸೈಬರ್ ಸುರಕ್ಷತೆ, ತರಂಗಗಳ ಅಡಚಣೆ ತಡೆಯುವಿಕೆ ಹಾಗೂ ಉಪಗ್ರಹ ಆಧಾರಿತ ರಸ್ತೆ ಸುರಕ್ಷತೆ (GNSS) ಮುಂತಾದ ತಾಂತ್ರಿಕ ಅಗತ್ಯತೆಗಳನ್ನು ನಿರ್ದಿಷ್ಟಪಡಿಸುತ್ತದೆ.

ಅಲ್ಲದೆ, ಎಮರ್ಜೆನ್ಸಿ ಬ್ರೇಕ್ ಅಲರ್ಟ್, ವಾಹನಗಳು ಎದುರುಬದುರು ಡಿಕ್ಕಿಯಾಗುವ ಮುನ್ಸೂಚನೆ, ತಪ್ಪು ಮಾರ್ಗದಲ್ಲಿ ಚಲಿಸುವ ವಾಹನಗಳ ಎಚ್ಚರಿಕೆ ಹಾಗೂ ತುರ್ತು ವಾಹನಗಳ (ಆಂಬುಲೆನ್ಸ್ ಇತ್ಯಾದಿ) ಆಗಮನದ ಮಾಹಿತಿ ನೀಡುವ ಸುರಕ್ಷತಾ ಸೌಲಭ್ಯಗಳನ್ನು ಹಂತ ಹಂತವಾಗಿ ಪರಿಚಯಿಸಲು ಈ ಮಾನದಂಡದಲ್ಲಿ ಅವಕಾಶ ನೀಡಲಾಗಿದೆ.

►ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?

V2V ವ್ಯವಸ್ಥೆಗಾಗಿ ವಾಹನಗಳಲ್ಲಿ 'ಆನ್-ಬೋರ್ಡ್ ಯೂನಿಟ್' (OBU) ಎಂಬ ಸಾಧನವನ್ನು ಅಳವಡಿಸಲಾಗುತ್ತದೆ. ಇದು ಇತರ ವಾಹನಗಳೊಂದಿಗೆ ವೈರ್ಲೆಸ್ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತದೆ. ಇದಕ್ಕಾಗಿ 5.875 GHz ನಿಂದ 5.925 GHz ಫ್ರೀಕ್ವೆನ್ಸಿ ಬ್ಯಾಂಡ್ನ ಸಿ-ವಿ2ಎಕ್ಸ್ (C-V2X) ತಂತ್ರಜ್ಞಾನವನ್ನು ಬಳಸಲಾಗುತ್ತದೆ. 2026ರ ಜೂನ್ 10ರಂದು ದೂರಸಂಪರ್ಕ ಇಲಾಖೆಯು ಈ ಫ್ರೀಕ್ವೆನ್ಸಿ ಬ್ಯಾಂಡ್ ಬಳಕೆಗೆ ಪರವಾನಗಿ ವಿನಾಯಿತಿ ನೀಡಿದೆ. ಹೀಗಾಗಿ ವಾಹನ ತಯಾರಕರು ನೂತನ ವಾಹನಗಳಲ್ಲಿ ಈ ತರಂಗಾಂತರವನ್ನು ಬಳಸಿ V2V ವ್ಯವಸ್ಥೆ ಅಳವಡಿಸಬಹುದು.

V2V ಸಾಧನ ಹೊಂದಿರುವ ವಾಹನಗಳು ದಿಢೀರ್ ಬ್ರೇಕ್ ಹಾಕುವುದು, ಅಪಾಯಕಾರಿ ರಸ್ತೆ ತಿರುವುಗಳು, ಸುರಕ್ಷಿತವಲ್ಲದ ಲೇನ್ ಬದಲಾವಣೆ, ರಸ್ತೆ ಬದಿಯಲ್ಲಿ ನಿಲ್ಲಿಸಿದ ವಾಹನಗಳು, ದಟ್ಟ ಮಂಜು ಹಾಗೂ ಇತರ ಡಿಕ್ಕಿ ಅಪಾಯಗಳ ಬಗ್ಗೆ ಚಾಲಕನಿಗೆ ಮುನ್ನೆಚ್ಚರಿಕೆ ನೀಡುತ್ತವೆ. ಉದಾಹರಣೆಗೆ, ಮುಂದಿರುವ ಕಾರು ದಿಢೀರನೆ ಬ್ರೇಕ್ ಹಾಕಿದರೆ, ಅದು ಕಣ್ಣಿಗೆ ಕಾಣಿಸುವ ಮುನ್ನವೇ ಹಿಂದಿರುವ ವಾಹನಗಳಿಗೆ ವೇಗ ಕಡಿಮೆ ಮಾಡಲು ಸಂದೇಶ ರವಾನೆಯಾಗುತ್ತದೆ. ಸಾಮಾನ್ಯವಾಗಿ V2V ವ್ಯವಸ್ಥೆಯು 300 ಮೀಟರ್ ವ್ಯಾಪ್ತಿಯಲ್ಲಿರುವ ವಾಹನಗಳನ್ನು ಗುರುತಿಸಿ ಸಂವಹನ ನಡೆಸಬಲ್ಲದು.

ಆರಂಭದಲ್ಲಿ ಈ OBU ಸಾಧನವನ್ನು ಹೊಸ ವಾಹನಗಳಲ್ಲಿ ಅಳವಡಿಸಲಾಗುತ್ತದೆ. ಇದರ ವೆಚ್ಚ ಸುಮಾರು 5,000 ರೂ.ನಿಂದ 7,000 ರೂ. ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

►ಇತರ ಸುರಕ್ಷತಾ ಸಾಧನಗಳಿಗಿಂತ ಇದು ಹೇಗೆ ಭಿನ್ನ?

ಕ್ಯಾಮೆರಾ ಆಧಾರಿತ ಎಡಿಎಎಸ್ (ADAS) ನಂತಹ ವಾಹನಗಳಲ್ಲಿನ ಸಾಂಪ್ರದಾಯಿಕ ಸುರಕ್ಷತಾ ಸೌಲಭ್ಯಗಳು ಚಾಲಕನ ದೃಷ್ಟಿ ವ್ಯಾಪ್ತಿಯನ್ನು, ಅಂದರೆ ಕಣ್ಣಿಗೆ ಕಾಣಿಸುವಷ್ಟು ದೂರದ ರಸ್ತೆಯನ್ನು, ಮಾತ್ರ ಆಧರಿಸಿರುತ್ತವೆ. ಆದರೆ V2V ವ್ಯವಸ್ಥೆಯು ಚಾಲಕನ ಕಣ್ಣಿಗೆ ಕಾಣಿಸದ ಅಪಾಯಕಾರಿ ತಿರುವುಗಳು (blind corners) ಅಥವಾ ದೊಡ್ಡ ಟ್ರಕ್ ಗಳ ಹಿಂಭಾಗದಲ್ಲಿರುವ ವಾಹನಗಳನ್ನು ಗುರುತಿಸಿ, ಇತರ ವಾಹನಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಚಾಲಕನಿಗೆ ಮುನ್ನೆಚ್ಚರಿಕೆ ನೀಡುತ್ತದೆ. ಹೀಗಾಗಿ ಇದು ಎಡಿಎಎಸ್ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಲಿದ್ದು, ಮುಂಭಾಗದ ಡಿಕ್ಕಿಯ ಅಪಾಯಗಳನ್ನು ಮೊದಲೇ ಅಂದಾಜಿಸಲು ನೆರವಾಗಲಿದೆ. ಈ ವ್ಯವಸ್ಥೆಯು ವಾಹನದ ವೇಗ, ಪ್ರಸ್ತುತ ಸ್ಥಳ, ಚಲಿಸುವ ದಿಕ್ಕು ಹಾಗೂ ವೇಗವರ್ಧನೆಯ ನೈಜ ಮಾಹಿತಿಯನ್ನು ನಿರಂತರವಾಗಿ ವಿನಿಮಯ ಮಾಡಿಕೊಳ್ಳುತ್ತದೆ.

ಈ ತಂತ್ರಜ್ಞಾನವು ವಿಮಾನಯಾನ ಕ್ಷೇತ್ರದಲ್ಲಿ ಬಳಸುವ ವ್ಯವಸ್ಥೆಯನ್ನು ಹೋಲುತ್ತದೆ. ವಿಮಾನಗಳು ತಮ್ಮ ಪ್ರಸ್ತುತ ಸ್ಥಳ, ವೇಗ ಮತ್ತು ಎತ್ತರದ ಮಾಹಿತಿಯನ್ನು ಪ್ರಸಾರ ಮಾಡುತ್ತವೆ ಹಾಗೂ ಹತ್ತಿರದ ಇತರ ವಿಮಾನಗಳು ಮತ್ತು ನೆಲದ ನಿಯಂತ್ರಣ ಕೇಂದ್ರಗಳು ಆ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಜಾಗತಿಕವಾಗಿ ವಿಮಾನಯಾನ ಕ್ಷೇತ್ರದಲ್ಲಿ ಈ ತಂತ್ರಜ್ಞಾನ ಸಾಮಾನ್ಯವಾಗಿದ್ದರೂ, ರಸ್ತೆ ಸಾರಿಗೆ ಕ್ಷೇತ್ರದಲ್ಲಿ V2V ತಂತ್ರಜ್ಞಾನ ಇನ್ನೂ ಬೆಳೆಯುತ್ತಿರುವ ಹಂತದಲ್ಲಿದೆ. ಪ್ರಸ್ತುತ ಅಮೆರಿಕದಂತಹ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ಇದು ಬಳಕೆಯಲ್ಲಿದೆ.

►ಖಾಸಗಿತನದ ಆತಂಕಕ್ಕೆ ಕಾರಣವೇನು?

V2V ವ್ಯವಸ್ಥೆಯು ರಸ್ತೆ ಅಪಘಾತಗಳನ್ನು ತಡೆಯಲು ಅತ್ಯಾಧುನಿಕ ಪರಿಹಾರವನ್ನು ಒದಗಿಸುತ್ತದೆಯಾದರೂ, ಖಾಸಗಿತನಕ್ಕೆ ಸಂಬಂಧಿಸಿದಂತೆ ಕೆಲವು ಕಳವಳಗಳು ವ್ಯಕ್ತವಾಗಿವೆ. ಈ ತಂತ್ರಜ್ಞಾನವು ವಾಹನಗಳ ಚಲನವಲನ, ಇರುವ ಸ್ಥಳ ಸೇರಿದಂತೆ ಅಪಾರ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸುವುದರಿಂದ, ಇಡೀ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಮೂಲಸೌಕರ್ಯವು ಸೈಬರ್ ದಾಳಿಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಇದನ್ನು ತಡೆಯಲು ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿಗಳ ಅಗತ್ಯವಿದೆ.

ಇದರ ಜೊತೆಗೆ, ಈ ವ್ಯವಸ್ಥೆಗೆ ಹಂಚಿಕೆ ಮಾಡಲಾಗಿರುವ ತರಂಗಾಂತರವು (frequency band) ದೇಶದ ಎಲ್ಲಾ ವಾಹನಗಳಿಗೆ ಬೆಂಬಲ ನೀಡುತ್ತದೆಯೇ ಎಂಬ ಪ್ರಶ್ನೆಯೂ ಇದೆ. ಅಲ್ಲದೆ, ತಾಂತ್ರಿಕ ಸಂವಹನದಲ್ಲಿ ಆಗುವ ಸಣ್ಣ ಲೋಪಗಳು ಸಹ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಯಿರುತ್ತದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor