ಇರಾನ್ ಅಧ್ಯಕ್ಷರ ಜತೆ ಮೋದಿ ಭೇಟಿ; ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಮಹತ್ವ ಪಡೆದ ಮಾತುಕತೆ
ನರೇಂದ್ರ ಮೋದಿ , ಮಸೌದ್ ಪೆಜೆಶ್ಕಿಯಾನ್ | Photo Credit : PTI
ಬಿಷ್ಕೆಕ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ–ಇರಾನ್ ಸಂಘರ್ಷ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಸೋಮವಾರ ಕಿರ್ಗಿಸ್ತಾನ್ ರಾಜಧಾನಿ ಬಿಷ್ಕೆಕ್ ನಲ್ಲಿ ಭೇಟಿ ಮಾಡಿದರು.
ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ನಡೆದ ಈ ಸಭೆಯಲ್ಲಿ ಭಾರತ–ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಎರಡೂ ದೇಶಗಳಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯದ ಬಗ್ಗೆಯೂ ಅವರು ಮಾತನಾಡಿದರು ಎಂದು ಇರಾನ್ ನ ಸುದ್ದಿ ಸಂಸ್ಥೆ ‘ತಸ್ನಿಮ್’ ವರದಿ ಮಾಡಿದೆ.
ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಫೆಬ್ರುವರಿಯಲ್ಲಿ ಇರಾನ್ ವಿರುದ್ಧ ಯುದ್ಧ ಆರಂಭವಾದ ಬಳಿಕ ಮೋದಿ ಮತ್ತು ಪೆಜೆಶ್ಕಿಯಾನ್ ಮುಖಾಮುಖಿಯಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು.
►ಏಕೆ ಮಹತ್ವದ್ದು?
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿರುವ ಸಂದರ್ಭದಲ್ಲಿ ಈ ಭೇಟಿ ನಡೆದಿದೆ. ಈ ಪರಿಸ್ಥಿತಿ ಭಾರತಕ್ಕೂ ಮಹತ್ವದ್ದಾಗಿದೆ.
ಇರಾನ್ ಭಾರತದ ಪ್ರಮುಖ 10 ವಾಣಿಜ್ಯ ಸಂಬಂಧ ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಆದರೆ ಹಾರ್ಮುಝ್ ಜಲಸಂಧಿ ಮುಚ್ಚಿರುವುದು ಮತ್ತು ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದಾಗಿ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ.
ಮೋದಿ ಮತ್ತು ಪೆಜೆಶ್ಕಿಯಾನ್ ಅವರು ಜೂನ್ ನಲ್ಲಿ ದೂರವಾಣಿ ಮೂಲಕ ಮಾತನಾಡಿದ್ದರು. ಆಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಮುಂದಿನ ಕ್ರಮಗಳ ಕುರಿತು ಪೆಜೆಶ್ಕಿಯಾನ್ ಅವರು ಮೋದಿಗೆ ಮಾಹಿತಿ ನೀಡಿದ್ದರು.
ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಆಗ ತಲುಪಿದ್ದ ತಿಳುವಳಿಕೆಯನ್ನು ಮೋದಿ ಸ್ವಾಗತಿಸಿದ್ದರು. ಶಾಶ್ವತ ಶಾಂತಿ ಮತ್ತು ಸ್ಥಿರತೆ ಸಾಧಿಸಲು ನಿರಂತರ ಪ್ರಯತ್ನ ಅಗತ್ಯ ಎಂದು ಅವರು ಹೇಳಿದ್ದರು.
ಇದಕ್ಕೂ ಮೊದಲು ಮಾರ್ಚ್ 21ರಂದು ಇಬ್ಬರೂ ನಾಯಕರು ದೂರವಾಣಿ ಮೂಲಕ ಮಾತನಾಡಿದ್ದರು. ಆ ವೇಳೆ ಪಶ್ಚಿಮ ಏಷ್ಯಾದ ಭದ್ರತಾ ಪರಿಸ್ಥಿತಿ ಕುರಿತು ವಿವರವಾಗಿ ಚರ್ಚಿಸಿದ್ದರು.
►‘ಇರಾನ್ ಯುದ್ಧ ಬಯುಸುವುದಿಲ್ಲ’
ಮಾತುಕತೆಯ ಮೂಲಕ ಸಂಘರ್ಷವನ್ನು ಅಂತ್ಯಗೊಳಿಸುವ ಪ್ರಯತ್ನಗಳಿಗೆ ಪೆಜೆಶ್ಕಿಯಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇರಾನ್ ಯುದ್ಧ ಬಯಸುವುದಿಲ್ಲ. ಆದರೆ ತನ್ನ ದೇಶದ ಮೇಲೆ ದಾಳಿ ನಡೆದರೆ ಆಕ್ರಮಣಕಾರರಿಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸಲಾಗುವುದು ಎಂದು ಅವರು ಸೋಮವಾರ ಹೇಳಿದ್ದಾರೆ.
ಒಂದು ತಿಂಗಳ ಬಳಿಕ ನಡೆದ ಮೊದಲ ಪ್ರಮುಖ ಸೇನಾ ಕಾರ್ಯಾಚರಣೆಯಲ್ಲಿ ಅಮೆರಿಕವು ಇರಾನ್ ನ ಸಣ್ಣ ದ್ವೀಪವೊಂದರ ಮೇಲೆ ದಾಳಿ ನಡೆಸಿದ ನಂತರ ಪೆಜೆಶ್ಕಿಯಾನ್ ಈ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಅಸ್ಥಿರತೆ ಎಲ್ಲ ದೇಶಗಳಿಗೂ ಹಾನಿಕಾರಕ ಎಂದು ಅವರು ಹೇಳಿದ್ದಾರೆ. ಆರ್ಥಿಕ ಮತ್ತು ಭದ್ರತಾ ಗುರಿಗಳನ್ನು ಸಾಧಿಸಲು ದೇಶಗಳ ನಡುವೆ ಒಮ್ಮತ ಮತ್ತು ಸಹಕಾರ ಅಗತ್ಯ ಎಂದೂ ಅವರು ಹೇಳಿದ್ದಾರೆ.
SCO ಶೃಂಗಸಭೆಯ ಮಹತ್ವವನ್ನು ವಿವರಿಸಿದ ಪೆಜೆಶ್ಕಿಯಾನ್, ‘ಈ ಸಭೆ ಬಹಳ ಮುಖ್ಯ. ಈ ಪ್ರದೇಶದ ಹಲವು ನಾಯಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಜಗತ್ತಿನಲ್ಲಿ ಏಕಧ್ರುವೀಯ ವ್ಯವಸ್ಥೆ ನಿರ್ಮಿಸಲು ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಜಾಗತಿಕ ವೇದಿಕೆಯಲ್ಲಿ ವೈವಿಧ್ಯಮಯ ಮತ್ತು ಸ್ವತಂತ್ರ ಧ್ವನಿಗಳು ಇವೆ ಎಂಬುದನ್ನು ಈ ಸಭೆ ತೋರಿಸುತ್ತದೆ’ ಎಂದು ಹೇಳಿದ್ದಾರೆ.
►ಪಶಿನ್ಯಾನ್ ಜತೆಗೂ ಭೇಟಿ
SCO ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ಅರ್ಮೇನಿಯಾ ಪ್ರಧಾನಿ ನಿಕೋಲ್ ಪಶಿನ್ಯಾನ್ ಅವರನ್ನೂ ಭೇಟಿ ಮಾಡಿದರು.
ರಕ್ಷಣೆ, ಆರ್ಥಿಕತೆ, ಔಷಧ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಭಾರತ–ಅರ್ಮೇನಿಯಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು.
ಪಶ್ಚಿಮ ಏಷ್ಯಾದ ಪರಿಸ್ಥಿತಿ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಭಾರತ–ಅರ್ಮೇನಿಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಅರ್ಮೇನಿಯಾದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಬಯಸಿದೆ ಎಂದು ಮೋದಿ ಪುನರುಚ್ಚರಿಸಿದರು.
ಪುಟಿನ್ ಭೇಟಿ ಮಾಡಲಿರುವ ಮೋದಿ
SCO ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಕಿರ್ಗಿಸ್ತಾನ್ ಅಧ್ಯಕ್ಷ ಸದಿರ್ ಜಪರೋವ್ ಅವರ ಆಹ್ವಾನದ ಮೇರೆಗೆ ಮೋದಿ ಅವರು 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ.