ಕಚ್ಚಾ ತೈಲ ದರ ಶೇ 3ರಷ್ಟು ಏರಿಕೆ; ಮತ್ತೆ 100 ಡಾಲರ್ ಗಡಿ ತಲುಪಲಿದೆಯೇ?
ಸಾಂದರ್ಭಿಕ ಚಿತ್ರ | Photo Credit : freepik
ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಹೊಸ ಸಂಘರ್ಷವು ಜಾಗತಿಕ ಇಂಧನ ಪೂರೈಕೆಯ ಮೇಲೆ ಮತ್ತೊಮ್ಮೆ ಆತಂಕದ ನೆರಳು ಮೂಡಿಸಿದೆ. ಇತ್ತ, ಇರಾನ್ ಮತ್ತು ಅಮೆರಿಕ ನಡುವೆ ಶೀಘ್ರದಲ್ಲೇ ಏರ್ಪಡಬಹುದು ಎನ್ನಲಾಗಿದ್ದ ಶಾಂತಿ ಒಪ್ಪಂದದ ನಿರೀಕ್ಷೆಗಳೂ ಹುಸಿಯಾಗಿವೆ. ಇದರ ಬೆನ್ನಲ್ಲೇ, ಸೋಮವಾರ ಕಚ್ಚಾ ತೈಲದ ಬೆಲೆ ಶೇ 3ಕ್ಕಿಂತಲೂ ಹೆಚ್ಚು ಜಿಗಿತ ಕಂಡಿದೆ.
ಬೆಳಗಿನ ವಹಿವಾಟಿನ (ಬೆಳಿಗ್ಗೆ 8:10ರ ವೇಳೆಗೆ) ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ 3.45ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ ಗೆ 96.30 ಡಾಲರ್ ತಲುಪಿದೆ. ಇತ್ತ ಅಮೆರಿಕದ ಡಬ್ಲ್ಯುಟಿಐ ಕಚ್ಚಾ ತೈಲದ ದರವೂ ಶೇ 3.41ರಷ್ಟು ಹೆಚ್ಚಳವಾಗಿ ಪ್ರತಿ ಬ್ಯಾರೆಲ್ಗೆ 93.63 ಡಾಲರ್ ಮುಟ್ಟಿದೆ. ರಾಜತಾಂತ್ರಿಕ ಪ್ರಯತ್ನಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಣಿಯಬಹುದು ಎಂಬ ನಿರೀಕ್ಷೆಯಿಂದಾಗಿ ಕಳೆದ ಶುಕ್ರವಾರ ತೈಲ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು. ಆದರೆ, ಇಂದಿನ ಭಾರೀ ಏರಿಕೆಯು ಈ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ಕದನ ವಿರಾಮ ಜಾರಿಯಲ್ಲಿದ್ದಾಗಲೂ ಇಸ್ರೇಲ್ ಮತ್ತೊಮ್ಮೆ ಲೆಬನಾನ್ ಮೇಲೆ ಹೊಸದಾಗಿ ದಾಳಿ ನಡೆಸಿರುವುದು ಮತ್ತು ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಈ ಹೊಸ ಸಂಘರ್ಷದಿಂದಾಗಿ, ಜಾಗತಿಕ ತೈಲ ಸಾಗಣೆಯ ಅತ್ಯಂತ ಪ್ರಮುಖ ಮಾರ್ಗವಾದ ‘ಹಾರ್ಮುಝ್ ಜಲಸಂಧಿ’ ಇನ್ನು ದೀರ್ಘಕಾಲದವರೆಗೆ ನಿರ್ಬಂಧಿತವಾಗಿ ಉಳಿಯಬಹುದು ಎಂಬ ಭೀತಿ ವ್ಯಾಪಿಸಿದೆ.
ತೈಲ ಬೆಲೆ ದಿಢೀರ್ ಏರಿಕೆಯಾಗುತ್ತಿರುವುದು ಏಕೆ?
ಲೆಬನಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮವು ಅಂತಿಮವಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಶಾಂತಿ ಒಪ್ಪಂದಕ್ಕೆ ದಾರಿ ಮಾಡಿಕೊಡಬಹುದು ಎಂದು ತೈಲ ಮಾರುಕಟ್ಟೆಗಳು ನಿರೀಕ್ಷಿಸಿದ್ದವು. ಆದರೆ, ಆ ನಿರೀಕ್ಷೆಗಳೀಗ ತಲೆಕೆಳಗಾಗಿವೆ.
ವರದಿಗಳ ಪ್ರಕಾರ, ಜೂನ್ 3ರಂದು ಕದನ ವಿರಾಮ ಘೋಷಣೆಯಾಗಿದ್ದರೂ, ಇಸ್ರೇಲ್ ವಾರಾಂತ್ಯದಲ್ಲಿ ಬೈರುತ್ ಮೇಲೆ ಮತ್ತೆ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ನತ್ತ ಕ್ಷಿಪಣಿಗಳನ್ನು ಉಡಾಯಿಸಿದೆ. ಇದರಿಂದ ಈ ಯುದ್ಧ ಇಡೀ ಪ್ರಾದೇಶಿಕ ವಲಯಕ್ಕೆ ವ್ಯಾಪಿಸುವ ಆತಂಕ ಮತ್ತಷ್ಟು ಹೆಚ್ಚಿದೆ.
ಈ ಬೆಳವಣಿಗೆಯು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡುವಂತೆ ಮಾಡುವ ಜಾಗತಿಕ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆ ತಂದಿದೆ. ಏಕೆಂದರೆ, ಅಮೆರಿಕದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬೇಕಾದರೂ ಲೆಬನಾನ್ನಲ್ಲಿ ಕದನ ವಿರಾಮ ಜಾರಿಯಾಗಬೇಕು ಎಂಬುದನ್ನೇ ಇರಾನ್ ತನ್ನ ಪ್ರಮುಖ ಷರತ್ತನ್ನಾಗಿ ಮಾಡಿಕೊಂಡಿದೆ.
ಪರಿಣಾಮವಾಗಿ, ತೈಲ ವ್ಯಾಪಾರಿಗಳು ಮತ್ತು ಹೂಡಿಕೆದಾರರ ಗಮನ ಈಗ ಮತ್ತೆ ಜಾಗತಿಕ ಇಂಧನ ಮಾರುಕಟ್ಟೆ ಎದುರಿಸುತ್ತಿರುವ ಅತಿ ದೊಡ್ಡ ಆಪತ್ತಿನ ಕಡೆಗೆ ನೆಟ್ಟಿದೆ. ಅದೇನೆಂದರೆ, ಹಾರ್ಮುಝ್ ಜಲಸಂಧಿಯ ಮೂಲಕ ನಡೆಯುವ ತೈಲ ಸಾಗಣೆಯಲ್ಲಿ ಉಂಟಾಗಿರುವ ವ್ಯತ್ಯಯ ಹೀಗೆಯೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಹಾರ್ಮುಝ್ ಜಲಸಂಧಿಯ ಪ್ರಾಮುಖ್ಯತೆ
ಹಾರ್ಮುಝ್ ಜಲಸಂಧಿಯು ಜಾಗತಿಕ ಇಂಧನ ಪೂರೈಕೆ ಸರಪಳಿಯ ಅತ್ಯಂತ ನಿರ್ಣಾಯಕ ಹಾಗೂ ಸೂಕ್ಷ್ಮ ಕೊಂಡಿಯಾಗಿದೆ.
ಇಡೀ ವಿಶ್ವದ ಒಟ್ಟು ಕಚ್ಚಾ ತೈಲ ಬಳಕೆಯ ಸರಿಸುಮಾರು ಐದನೇ ಒಂದು ಭಾಗ (ಶೇ 20) ಮತ್ತು LNG ರಫ್ತಿನ ಬಹುದೊಡ್ಡ ಪಾಲು ಪರ್ಷಿಯನ್ ಕೊಲ್ಲಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಜೋಡಿಸುವ ಇದೇ ಕಿರಿದಾದ ಜಲಮಾರ್ಗದ ಮೂಲಕವೇ ಸಾಗಬೇಕಾಗುತ್ತದೆ.
ಈ ವರ್ಷದ ಆರಂಭದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಾಗಿನಿಂದ, ಇರಾನ್ ಈ ಮಾರ್ಗದ ಮೂಲಕ ನಡೆಯುವ ಹಡಗು ಸಾಗಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ ಅಥವಾ ತೀವ್ರವಾಗಿ ನಿಯಂತ್ರಿಸುತ್ತಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಅನಿಶ್ಚಿತತೆಯ ನೆರಳು ಮೂಡಿಸಿದೆ.
ಈ ಜಲಸಂಧಿಯಲ್ಲಿ ಉಂಟಾಗುವ ಯಾವುದೇ ದೀರ್ಘಕಾಲದ ವ್ಯತ್ಯಯವು ಮಾರುಕಟ್ಟೆಯಲ್ಲಿ ತೈಲದ ಕೊರತೆಯನ್ನು ಸೃಷ್ಟಿಸುತ್ತದೆ. ಇದು ಸಹಜವಾಗಿಯೇ ಜಾಗತಿಕವಾಗಿ ಇಂಧನ ಬೆಲೆಗಳನ್ನು ಗಗನಕ್ಕೇರಿಸಲಿದ್ದು, ತೈಲ ಆಮದಿನ ಮೇಲೆ ಅತಿಯಾಗಿ ಅವಲಂಬಿತವಾಗಿರುವ ದೇಶಗಳ ಆರ್ಥಿಕತೆಯ ಮೇಲೆ ಭಾರಿ ಹೊರೆಯಾಗಲಿದೆ.
ಭಾರತವು ತನ್ನ ಒಟ್ಟು ಕಚ್ಚಾ ತೈಲ ಅಗತ್ಯತೆಯ ಶೇ 85ಕ್ಕಿಂತಲೂ ಹೆಚ್ಚಿನ ಪಾಲನ್ನು ಆಮದು ಮಾಡಿಕೊಳ್ಳುವುದರಿಂದ, ಹಾರ್ಮುಝ್ ಜಲಸಂಧಿಯ ಪ್ರತಿಯೊಂದು ಬೆಳವಣಿಗೆಯನ್ನೂ ದೇಶವು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಏಕೆಂದರೆ ಇಲ್ಲಿನ ಏರುಪೇರುಗಳು ನೇರವಾಗಿ ದೇಶದ ಇಂಧನ ದರ, ಹಣದುಬ್ಬರ ಮತ್ತು ಆಮದು ವೆಚ್ಚದ ಮೇಲೆ ಭಾರೀ ಪರಿಣಾಮ ಬೀರಲಿವೆ.
OPEC+ ಉತ್ಪಾದನೆ ಹೆಚ್ಚಳದಿಂದ ತಾತ್ಕಾಲಿಕ ಸಮಾಧಾನ
ಸಾಮಾನ್ಯ ಸಂದರ್ಭಗಳಲ್ಲಾಗಿದ್ದರೆ, ಒಪೆಕ್ ಪ್ಲಸ್ (OPEC+) ಒಕ್ಕೂಟವು ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡ ತಕ್ಷಣವೇ ಮಾರುಕಟ್ಟೆಯಲ್ಲಿ ತೈಲ ದರ ತಣ್ಣಗಾಗುತ್ತಿತ್ತು. ಆದರೆ, ಒಕ್ಕೂಟದ ಈ ಇತ್ತೀಚಿನ ತೀರ್ಮಾನದಿಂದ ಮಾರುಕಟ್ಟೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ಸಾಧ್ಯವಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ನಾಲ್ಕು ತಿಂಗಳುಗಳಲ್ಲಿ ನಾಲ್ಕನೇ ಬಾರಿಗೆ ತೈಲ ಉತ್ಪಾದನೆಯನ್ನು ಹೆಚ್ಚಿಸಲು ಒಪೆಕ್ ಪ್ಲಸ್ ಒಕ್ಕೂಟವು ರವಿವಾರ ಒಪ್ಪಿಗೆ ಸೂಚಿಸಿದೆ. ಆದರೆ, ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧದ ವಾತಾವರಣದಿಂದಾಗಿ ಒಕ್ಕೂಟದ ಹಲವು ಸದಸ್ಯ ದೇಶಗಳಿಗೇ ತೈಲ ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ.
ಮತ್ತೊಂದೆಡೆ, ರಷ್ಯಾ ಕೂಡ ತನ್ನ ಇಂಧನ ಮೂಲಸೌಕರ್ಯಗಳ ಮೇಲಿನ ನಿರಂತರ ದಾಳಿಗಳಿಂದಾಗಿ ತೈಲ ಉತ್ಪಾದನೆಯಲ್ಲಿ ಭಾರೀ ಸವಾಲುಗಳನ್ನು ಎದುರಿಸುತ್ತಿದೆ.
‘ರೈಸ್ಟಾಡ್ ಎನರ್ಜಿ’ ಸಂಸ್ಥೆಯ ಜಿಯೋಪಾಲಿಟಿಕಲ್ ಅನಾಲಿಸಿಸ್ ವಿಭಾಗದ ಮುಖ್ಯಸ್ಥ ಜಾರ್ಜ್ ಲಿಯೋನ್ ರಾಯಿಟರ್ಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, ಒಪೆಕ್ ಪ್ಲಸ್ ಒಕ್ಕೂಟದ ಇತ್ತೀಚಿನ ನಿರ್ಧಾರದಿಂದ ತೈಲ ಮಾರುಕಟ್ಟೆಯ ಮೇಲಾಗುವ ಭೌತಿಕ ಪರಿಣಾಮ ತೀರಾ ನಗಣ್ಯ ಎಂದು ಹೇಳಿದ್ದಾರೆ. ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿಯನ್ನು ನೋಡಿದರೆ, ಉತ್ಪಾದನೆ ಹೆಚ್ಚಿಸುವ ಇಂತಹ ನಿರ್ಧಾರಗಳಿಂದ ಮಾರುಕಟ್ಟೆಯ ಮೇಲಾಗುವ ನಿಜವಾದ ಭೌತಿಕ ಪರಿಣಾಮ ಶೂನ್ಯಕ್ಕೆ ಹತ್ತಿರದಲ್ಲಿದೆ ಎಂದಿದ್ದಾರೆ ಅವರು.
ಇದರರ್ಥ, ತೈಲ ಮಾರುಕಟ್ಟೆಯ ದಿಕ್ಕು ಈಗ ಉತ್ಪಾದನೆ ಹೆಚ್ಚಳದ ಘೋಷಣೆಗಳಿಗಿಂತ ಹೆಚ್ಚಾಗಿ ಮಧ್ಯಪ್ರಾಚ್ಯದ ಭೌಗೋಳಿಕ-ರಾಜಕೀಯ ಬೆಳವಣಿಗೆಗಳಿಂದಲೇ ನಿರ್ಧಾರವಾಗುತ್ತಿದೆ.
ಹಾಗಾದರೆ ಮುಂದಿನ ದಿನಗಳಲ್ಲಿ ತೈಲ ಬೆಲೆ ಹೇಗಿರಲಿದೆ?
ಕಚ್ಚಾ ತೈಲ ಬೆಲೆಯ ಮುಂದಿನ ನಡೆ ಪ್ರಮುಖವಾಗಿ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಇರಾನ್ ಮತ್ತು ಹಿಜ್ಬುಲ್ಲಾ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತದೆಯೇ ಅಥವಾ ಮತ್ತೆ ರಾಜತಾಂತ್ರಿಕ ಮಾತುಕತೆಗಳು ಮುಂಚೂಣಿಗೆ ಬರುತ್ತವೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ.
ಒಂದು ವೇಳೆ ಈ ದೇಶಗಳ ನಡುವಿನ ಸಂಘರ್ಷ ತೀವ್ರಗೊಂಡು, ಹಾರ್ಮುಝ್ ಜಲಸಂಧಿಯ ಮೇಲಿನ ದಿಗ್ಬಂಧನ ಹೀಗೆಯೇ ಮುಂದುವರಿದರೆ, ಬ್ರೆಂಟ್ ಕಚ್ಚಾ ತೈಲದ ಬೆಲೆ ಮತ್ತೆ 100 ಡಾಲರ್ ಗಡಿಯನ್ನು ದಾಟಿ ಇನ್ನೂ ಮುಂದುವರಿಯಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ದೀರ್ಘಕಾಲದ ಪೂರೈಕೆ ಕೊರತೆಯ ಭೀತಿಯು ತೈಲ ವ್ಯಾಪಾರಿಗಳನ್ನು ಆತಂಕಕ್ಕೆ ತಳ್ಳಲಿದ್ದು, ಮಾರುಕಟ್ಟೆಯ ಅಪಾಯ ಪ್ರೀಮಿಯಂ (Risk Premium) ಅನ್ನು ಮತ್ತಷ್ಟು ಹೆಚ್ಚಿಸಲಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕ ಮತ್ತು ಇರಾನ್ ಮಾತುಕತೆಯಲ್ಲಿ ಏನಾದರೂ ಮಹತ್ತರ ಪ್ರಗತಿ ಕಂಡುಬಂದರೆ ಅಥವಾ ಇಸ್ರೇಲ್–ಲೆಬನಾನ್ ನಡುವೆ ದೀರ್ಘಕಾಲೀನ ಕದನ ವಿರಾಮ ಏರ್ಪಟ್ಟರೆ ಮಾತ್ರ ಪೂರೈಕೆಯ ಆತಂಕ ದೂರವಾಗಿ ತೈಲ ಬೆಲೆಗಳು ಇಳಿಕೆಯಾಗಲಿವೆ.
ಆದರೆ, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ತೈಲ ಮಾರುಕಟ್ಟೆಯು ಇನ್ನು ಸುದೀರ್ಘ ಅವಧಿಯವರೆಗೆ ಇಂತಹುದೇ ಅನಿಶ್ಚಿತತೆಯನ್ನು ಎದುರಿಸಬೇಕಾಗಿ ಬರಬಹುದು ಎಂಬ ಮುನ್ಸೂಚನೆ ಸಿಗುತ್ತಿದೆ.
ಭಾರತದ ಮೇಲಾಗುವ ಪರಿಣಾಮಗಳೇನು?
ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳು ಸಾಂಪ್ರದಾಯಿಕವಾಗಿಯೇ ಭಾರತದ ಪಾಲಿಗೆ ಕೆಟ್ಟ ಸುದ್ದಿಯಾಗಿದೆ.
ತೈಲ ದರ ಗಗನಕ್ಕೇರಿದಷ್ಟೂ ದೇಶದ ಆಮದು ವೆಚ್ಚ ಹೆಚ್ಚುತ್ತದೆ. ಇದು ಭಾರತೀಯ ರೂಪಾಯಿಯ ಮೌಲ್ಯದ ಮೇಲೆ ಭಾರಿ ಒತ್ತಡ ಹೇರುವುದಲ್ಲದೆ, ದಿನಗಳು ಕಳೆದಂತೆ ದೇಶದಲ್ಲಿ ಹಣದುಬ್ಬರ ತೀವ್ರಗೊಳ್ಳಲು ಕಾರಣವಾಗುತ್ತದೆ.
ಅಷ್ಟೇ ಅಲ್ಲದೆ, ಇದು ದೇಶದ ಪ್ರಮುಖ ವಲಯಗಳಾದ ವಾಯುಯಾನ, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಪೇಂಟ್ಸ್, ಕೆಮಿಕಲ್ಸ್ ಹಾಗೂ ಉತ್ಪಾದನಾ ರಂಗದ ವೆಚ್ಚಗಳನ್ನು ದಿಢೀರ್ ಹೆಚ್ಚಿಸಲಿದೆ.
ಒಂದು ವೇಳೆ ತೈಲ ಬೆಲೆ ದೀರ್ಘಕಾಲದವರೆಗೆ 100 ಡಾಲರ್ ಆಸುಪಾಸಿನಲ್ಲೇ ಮುಂದುವರಿದರೆ, ದೇಶದ ಹಣದುಬ್ಬರವನ್ನು ನಿಯಂತ್ರಿಸುವುದು ಆರ್ಥಿಕ ನೀತಿ ನಿರೂಪಕರಿಗೆ ಅತ್ಯಂತ ಕಠಿಣ ಸವಾಲಾಗಲಿದೆ. ಅಲ್ಲದೆ, ಇಂಧನ ವೆಚ್ಚ ಹೀಗೆಯೇ ದುಬಾರಿಯಾಗಿ ಉಳಿದರೆ, ಅದು ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯ ಮೇಲೂ ಗಂಭೀರ ಪರಿಣಾಮ ಬೀರಲಿದೆ.
ಸದ್ಯದ ಪರಿಸ್ಥಿತಿಯಲ್ಲಿ, ಜಾಗತಿಕ ತೈಲ ಬೆಲೆಯ ಮುಂದಿನ ಹಾದಿಯನ್ನು ನಿರ್ಧರಿಸುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಕೇಂದ್ರಬಿಂದುವಾಗಿರುವ ‘ಹಾರ್ಮುಝ್ ಜಲಸಂಧಿ’ಯ ಕಡೆಗೇ ವಿಶ್ವದಾದ್ಯಂತದ ತೈಲ ವ್ಯಾಪಾರಿಗಳು, ಸರ್ಕಾರಗಳು ಮತ್ತು ಗ್ರಾಹಕರು ಕಣ್ಣಿಟ್ಟಿದ್ದಾರೆ.