×
Ad

ಅಮೆರಿಕದೊಂದಿಗಿನ ಶಾಂತಿ ಒಪ್ಪಂದದಲ್ಲಿ ಇರಾನ್ ಗಾಝಾಗಿಂತ ಹೆಚ್ಚಾಗಿ ಲೆಬನಾನ್‌ ಗೆ ಪ್ರಾಮುಖ್ಯತೆ ನೀಡುತ್ತಿರುವುದೇಕೆ ?

Update: 2026-06-08 18:48 IST

Photo : gemini AI

ಜಾಗತಿಕ ರಾಜಕಾರಣದಲ್ಲಿ ತಂತ್ರ-ಪ್ರತಿತಂತ್ರಗಳ ಆಟ ಶುರುವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ನೇರ ಸಂಘರ್ಷ 100 ದಿನಗಳನ್ನು ಪೂರೈಸಿರುವ ಬೆನ್ನಲ್ಲೇ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಮೀಕರಣ ಹೊಸ ತಿರುವು ಪಡೆದುಕೊಂಡಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಇರಾನ್ ಅಮೆರಿಕದೊಂದಿಗಿನ ಶಾಂತಿ ಒಪ್ಪಂದದ ವಿಷಯದಲ್ಲಿ ಗಾಝಾಗಿಂತ ಹೆಚ್ಚಾಗಿ ಲೆಬನಾನ್ ದೇಶಕ್ಕೆ ಏಕೆ ಪ್ರಾಮುಖ್ಯತೆ ನೀಡುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ.

ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವಿನ ಸಮೀಕರಣ ಹೇಗಿದೆಯೆಂದರೆ, ಉಭಯ ದೇಶಗಳೂ ಮಾತುಕತೆಯ ಹಾದಿಯನ್ನು ಸಂಪೂರ್ಣವಾಗಿ ಬಿಟ್ಟುಕೊಡುತ್ತಿಲ್ಲ. ಅದೇ ಸಮಯದಲ್ಲಿ, ಆಯಕಟ್ಟಿನ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪರಸ್ಪರ ಸೀಮಿತ ದಾಳಿಗಳನ್ನು ನಡೆಸುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ 'ಹಾರ್ಮುಝ್ ಜಲಸಂಧಿ' ಸಂಪೂರ್ಣವಾಗಿ ಬಂದ್ ಆಗಿದೆ. ಈ ದಿಗ್ಬಂಧನವು ಜಾಗತಿಕ ಮಟ್ಟದಲ್ಲಿ ಇರಾನ್‌ ನ ಚೌಕಾಶಿ ಸಾಮರ್ಥ್ಯವನ್ನು ಹೆಚ್ಚಿಸಿರುವುದು ನಿಜವಾದರೂ, ಇರಾನ್ ತಕ್ಷಣವೇ ಇದನ್ನು ತನಗೆ ಪೂರಕವಾದ ಆರ್ಥಿಕ ಲಾಭವಾಗಿ ಪರಿವರ್ತಿಸಿಕೊಳ್ಳಬೇಕಾದ ತುರ್ತು ಪರಿಸ್ಥಿತಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಇರಾನ್ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟು. ಅಲ್ಲಿ ವಾರ್ಷಿಕ ಹಣದುಬ್ಬರ ಪ್ರಮಾಣ ಬರೋಬ್ಬರಿ ಶೇ 80ಕ್ಕೆ ತಲುಪಿದೆ.

► ಸ್ಪಷ್ಟ ತೀರ್ಮಾನದ ಅನಿವಾರ್ಯತೆಯಲ್ಲಿ ಇರಾನ್

ಅಮೆರಿಕವು ಇರಾನ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧಕ್ಕೆ ಇಳಿಯುವ ಸಾಹಸ ಮಾಡುತ್ತಿಲ್ಲ (ಏಕೆಂದರೆ ಅಮೆರಿಕದ ಬಳಿ ಯುದ್ಧಸಾಮಗ್ರಿಗಳ ಕೊರತೆಯಿದೆ). ಬದಲಿಗೆ, ಹಾರ್ಮುಝ್ ಜಲಸಂಧಿಯ ಮೇಲೆ ತಾನೇ ವಿಧಿಸಿರುವ ದಿಗ್ಬಂಧನವನ್ನು ಮುಂದುವರಿಸಿಕೊಂಡು ಹೋಗುವ ತಂತ್ರವನ್ನು ವಾಷಿಂಗ್ಟನ್ ಅನುಸರಿಸುತ್ತಿದೆ.

ವಿಶ್ಲೇಷಕರು ಅಭಿಪ್ರಾಯಪಡುವಂತೆ, ಇರಾನ್‌ ಗೆ ತನಗೆ ಪೂರಕವಾದ ನಿರ್ಣಾಯಕ ಫಲಿತಾಂಶ ಸಿಗುವುದು ಎಷ್ಟು ತಡವಾಗುತ್ತದೆಯೋ (ಅಂದರೆ ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್‌ ನ ಹಣ ಬಿಡುಗಡೆ ಆಗುವುದು, ನಿರ್ಬಂಧಗಳ ತೆರವು ಮತ್ತು ಅಮೆರಿಕದ ದಿಗ್ಬಂಧನ ಕೊನೆಗೊಳ್ಳುವುದು), ಅಷ್ಟು ಹೆಚ್ಚು ಕಾಲ ಅಮೆರಿಕದ ಮೇಲೆ ವಿವಿಧ ಆಯಾಮಗಳಿಂದ ಒತ್ತಡ ಹೇರುವ ಇರಾನ್‌ ನ ತಂತ್ರಗಾರಿಕೆಗೆ ಹಿನ್ನಡೆಯಾಗುತ್ತದೆ.

ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧಗಳು ಕೇವಲ ಪರೋಕ್ಷ ಒತ್ತಡದ ತಂತ್ರಗಳಷ್ಟೇ. ಇವು ಅಮೆರಿಕ ಅಥವಾ ಇಸ್ರೇಲ್ ತನ್ನ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಸದಂತೆ ತಡೆಯಲು ಸಹಕಾರಿಯಾಗಬಹುದೇ ವಿನಃ, ಅಮೆರಿಕದಿಂದ ತನಗೆ ಬೇಕಾದ ಪ್ರಮುಖ ರಿಯಾಯಿತಿಗಳನ್ನು ಒತ್ತಾಯಪೂರ್ವಕವಾಗಿ ಪಡೆದುಕೊಳ್ಳಲು ಇವು ಸಾಕಾಗುತ್ತಿಲ್ಲ.

"ಅಮೆರಿಕವು ಮುಟ್ಟುಗೋಲು ಹಾಕಿಕೊಂಡಿರುವ ಇರಾನ್‌ ನ 24 ಶತಕೋಟಿ ಡಾಲರ್ ಆಸ್ತಿಯನ್ನು ಬಿಡುಗಡೆ ಮಾಡದಿದ್ದರೆ ಮತ್ತು ದಿಗ್ಬಂಧನವನ್ನು ಹಿಂಪಡೆಯದಿದ್ದರೆ, ಇರಾನ್ ತನ್ನ ಪ್ರತಿಕಾರ ಕ್ರಮಗಳನ್ನು ಮೆಡಿಟರೇನಿಯನ್ ಸಮುದ್ರ, ಕೆಂಪು ಸಮುದ್ರ ಮತ್ತು ಬಾಬ್-ಎಲ್-ಮಂದೇಬ್ ಜಲಸಂಧಿಗೂ ವಿಸ್ತರಿಸಲಿದೆ" ಎಂದು ಇರಾನ್ ಸರ್ವೋಚ್ಛ ನಾಯಕನ ಆಪ್ತ ಸಲಹೆಗಾರ ಮೊಹ್ಸೇನ್ ರೆಜಾಯಿ ಜೂನ್ 5ರಂದು CNNಗೆ ಹೇಳಿಕೆ ನೀಡಿದ್ದರು. ಇರಾನ್‌ನ ಮಿತ್ರಪಡೆಗಳ ಪೈಕಿ, ಯೆಮನ್‌ ನ ಹೌತಿ ಬಂಡುಕೋರರು ಕೆಂಪು ಸಮುದ್ರ ಮತ್ತು ಬಾಬ್-ಎಲ್-ಮಂದೇಬ್ ಜಲಸಂಧಿಯಲ್ಲಿ ಅಮೆರಿಕಕ್ಕೆ ದಿಗಿಲು ಹುಟ್ಟಿಸುವ ಸಾಮರ್ಥ್ಯ ಹೊಂದಿರುವುದು ಈಗಾಗಲೇ ಸಾಬೀತಾಗಿದೆ. ಇತ್ತ, ಲೆಬನಾನ್‌ ನ ಹಿಜ್ಬುಲ್ಲಾ ಸಂಘಟನೆಯು ತನ್ನ ಬಳಿ ಇರುವ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳ ಮೂಲಕ ಮೆಡಿಟರೇನಿಯನ್ ಸಮುದ್ರದಲ್ಲಿ ಮಿಲಿಟರಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ದೊಡ್ಡ ಮಟ್ಟದ ಆಪತ್ತು ತಂದೊಡ್ಡುವ ಶಕ್ತಿಯನ್ನು ಹೊಂದಿದ್ದರೂ, ಅದನ್ನು ಇನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ.

ಆದರೆ, ಇರಾನ್ ಮೇಲಿನ ಅಮೆರಿಕದ ಸೀಮಿತ ದಾಳಿಗಳಿಗೆ ಪ್ರತಿಯಾಗಿ, ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಕಾನೂನುಬದ್ಧವಾಗಿ ಗುರಿಯಾಗಿಸಲು ಇರಾನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ರೆಸಲ್ಯೂಶನ್ 3314 (UNGA Resolution 3314) ಅನ್ನು ಬಳಸಿಕೊಳ್ಳುತ್ತಿದ್ದರೂ, ಇರಾನ್‌ ಗೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಹೊಸದಾಗಿ ನೇರ ಯುದ್ಧದ ಕಾರಣವನ್ನು ಸೃಷ್ಟಿಸಿಕೊಡುತ್ತಿರುವುದು ಮಾತ್ರ ಇಸ್ರೇಲ್ ಲೆಬನಾನ್‌ನಲ್ಲಿ ನಡೆಸುತ್ತಿರುವ ಯುದ್ಧವೇ ಆಗಿದೆ.

ಏಪ್ರಿಲ್ ತಿಂಗಳಿನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ (ಹಿಜ್ಬುಲ್ಲಾ) ನಡುವೆ ಕದನ ವಿರಾಮ ಏರ್ಪಟ್ಟಿದ್ದರೂ, ದಕ್ಷಿಣ ಲೆಬನಾನ್‌ ನಲ್ಲಿ ಇಸ್ರೇಲ್‌ ನ ಸೇನಾ ಕಾರ್ಯಾಚರಣೆ ಮಾತ್ರ ಯಾವುದೇ ಅಡೆತಡೆಯಿಲ್ಲದೆ ಮುಂದುವರಿದಿತ್ತು. ಕೊನೆಗೆ, ಇರಾನ್ ಮತ್ತೊಮ್ಮೆ ಈ ವಿಷಯವಾಗಿ ಮಾತುಕತೆಯನ್ನೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ ಮೇಲಷ್ಟೇ ಇಸ್ರೇಲ್ ಕೊಂಚ ಹಿಂಜರಿಯಿತು. ಜೂನ್ 3ರ ವೇಳೆಗೆ ನಡೆದ ತ್ರಿಪಕ್ಷೀಯ ಮಾತುಕತೆಯ ಫಲವಾಗಿ ಇಸ್ರೇಲ್, ಲೆಬನಾನ್ ಮತ್ತು ಅಮೆರಿಕ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಎಪ್ರಿಲ್‌ ನ ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಘೋಷಿಸಿದವು. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕವು "ಹಿಜ್ಬುಲ್ಲಾ ಜೊತೆ ಮಾತುಕತೆ ನಡೆಸುತ್ತಿದೆ" ಮತ್ತು ತಮಗೆ ಇರಾನ್‌ ನ ನೂತನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಅವರನ್ನು "ಭೇಟಿಯಾಗಲು ಇಷ್ಟವಿದೆ" ಎಂಬ ಅಚ್ಚರಿಯ ಹೇಳಿಕೆಯನ್ನೂ ನೀಡಿದ್ದರು.

×
Ad

ಕದನ ವಿರಾಮದ ವಿಷಯದಲ್ಲಿ ಗಾಝಾಗಿಂತ ಲೆಬನಾನ್‌ ಗೇ ಇರಾನ್ ಆದ್ಯತೆ

ಹಿಜ್ಬುಲ್ಲಾ ಸಂಘಟನೆಯು ಇರಾನ್‌ ಗೆ ಪ್ರಬಲ ಮಿಲಿಟರಿ ಶಕ್ತಿಯನ್ನು ಒದಗಿಸುತ್ತದೆ ಎಂಬ ಕಾರಣಕ್ಕಷ್ಟೇ ಇರಾನ್ ಪಾಲಿಗೆ ಲೆಬನಾನ್ ಮುಖ್ಯವಾಗಿಲ್ಲ. ಪ್ರಸ್ತುತ ಇಸ್ರೇಲ್-ಲೆಬನಾನ್ ನಡುವಿನ ಕದನ ವಿರಾಮವು ಅತ್ಯಂತ ಸೂಕ್ಷ್ಮ ಹಂತದಲ್ಲಿದೆ ಮತ್ತು ಇಸ್ರೇಲ್ ಇದನ್ನು ಯಾವುದೋ ಒಂದು ದಿನ ಉಲ್ಲಂಘಿಸಿಯೇ ತೀರುತ್ತದೆ ಎಂಬುದು ಇರಾನ್‌ ಗೆ ಚೆನ್ನಾಗಿ ಗೊತ್ತು.

ಇದೇ ಅಂಶ ಇರಾನ್‌ ಗೆ ಒಂದು ವಿಶಿಷ್ಟ ರಾಜತಾಂತ್ರಿಕ ತಂತ್ರಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದೇನೆಂದರೆ, ಅಮೆರಿಕವು ಒಪ್ಪಂದದ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ ಎಂದು ಇರಾನ್‌ ಗೆ ಅನಿಸಿದಾಗಲೆಲ್ಲಾ, ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನೇ ನೆಪವಾಗಿಟ್ಟುಕೊಂಡು ಹಾರ್ಮುಝ್ ಜಲಸಂಧಿಯ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ಅಥವಾ ಇಸ್ರೇಲ್ ಮೇಲೆ ಮತ್ತೆ ಕ್ಷಿಪಣಿ ದಾಳಿಗಳನ್ನು ಆರಂಭಿಸಲು ಇರಾನ್‌ ಗೆ ಇದರಿಂದ ದಾರಿಯಾಗುತ್ತದೆ.

ಜೂನ್ 4ರ ಹೊತ್ತಿಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, "ಲೆಬನಾನ್‌ ನಲ್ಲಿ ಯುದ್ಧ ಕೊನೆಗೊಂಡಾಗ ಮಾತ್ರ ಈ ಸಂಘರ್ಷ ನಿಲ್ಲುತ್ತದೆ" ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು. ಮೊಹ್ಸೇನ್ ರೆಜಾಯಿ ಅವರ ಹೇಳಿಕೆಗಳನ್ನು ಸೇರಿಸಿ ನೋಡುವುದಾದರೆ, ಹಿಜ್ಬುಲ್ಲಾವನ್ನು ರಕ್ಷಿಸುವುದು ಇರಾನ್‌ ನ ಸ್ಪಷ್ಟ ಉದ್ದೇಶವಾಗಿದ್ದರೂ, ಪ್ರಮುಖವಾಗಿ ಅಮೆರಿಕವನ್ನು ಮಣಿಸಿ ತನಗೆ ಬೇಕಾದ ರಿಯಾಯಿತಿಗಳನ್ನು ಪಡೆದುಕೊಳ್ಳಲು ಇರಾನ್ ಲೆಬನಾನ್ ಅನ್ನು ಒಂದು 'ಒತ್ತಡದ ಕೇಂದ್ರ'ವಾಗಿ ಬಳಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಫೆಲೆಸ್ತೀನ್ ವಿಷಯದಲ್ಲಿ ಇರಾನ್‌ ನ ಜಾಣ ನಡೆ

ಗಮನಿಸಬೇಕಾದ ಸಂಗತಿಯೆಂದರೆ, ಇರಾನ್ ಇದುವರೆಗೆ ಕದನ ವಿರಾಮದ ಮಾತುಕತೆಗಳನ್ನು ಇಸ್ರೇಲ್-ಫೆಲೆಸ್ತೀನ್ ಯುದ್ಧದೊಂದಿಗೆ ಅಧಿಕೃತವಾಗಿ ಜೋಡಿಸಿಲ್ಲ, ಅಥವಾ ಅದನ್ನೊಂದು ತಕ್ಷಣದ ಷರತ್ತನ್ನಾಗಿ ಮುಂಚೂಣಿಗೆ ತಂದಿಲ್ಲ. ಇರಾನ್‌ನ ಅರೆ-ಅಧಿಕೃತ ಮಾಧ್ಯಮವಾದ 'ತಸ್ನಿಮ್ ನ್ಯೂಸ್' ವರದಿಗಳ ಪ್ರಕಾರ, ಗಾಝಾದಲ್ಲೂ ಇಸ್ರೇಲ್ ದಾಳಿ ನಿಲ್ಲಿಸಬೇಕು ಎಂದು ಟೆಹ್ರಾನ್ ಬಯಸುತ್ತದೆಯಾದರೂ, ಎಪ್ರಿಲ್‌ ನಿಂದ ಇರಾನ್ ನಡೆಸುತ್ತಿರುವ ಮಾತುಕತೆಗಳಲ್ಲಿ ಲೆಬನಾನ್‌ ಗೇ ಮೊದಲ ಆದ್ಯತೆ ನೀಡಲಾಗಿದೆ.

ವಾಸ್ತವವಾಗಿ, ಇಸ್ರೇಲ್ ಲೆಬನಾನ್ ಮೇಲೆ ಯುದ್ಧ ಸಾರುವುದಕ್ಕಿಂತ ಮುಂಚಿನಿಂದಲೂ ಗಾಝಾ ಮೇಲೆ ದಾಳಿ ನಡೆಸುತ್ತಿದೆ. ಅಲ್ಲಿ ಸಾವು-ನೋವುಗಳ ಪ್ರಮಾಣವೂ ಭೀಕರವಾಗಿದೆ ಮತ್ತು ಇಸ್ರೇಲ್‌ ನ ಕ್ರೂರ ವರ್ತನೆಯ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆಗಳೂ ನಡೆಯುತ್ತಿವೆ. ಇತಿಹಾಸವನ್ನು ನೋಡಿದರೂ, ಇರಾನ್‌ ನ ಪ್ರಾದೇಶಿಕ ರಾಜಕಾರಣವು ಪ್ಯಾಲೆಸ್ತೀನ್ (ಜೆರುಸಲೆಮ್ ಅಥವಾ ಅಲ್ ಖುದ್ಸ್) ವಿಮೋಚನೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಆದರೂ ಇರಾನ್ ಈಗ ಲೆಬನಾನ್‌ ಗೆ ಪ್ರಾಮುಖ್ಯತೆ ನೀಡುತ್ತಿದೆ.

ಇದು ಏನನ್ನು ತೋರಿಸುತ್ತದೆ ಎಂದರೆ, ಫೆಲೆಸ್ತೀನ್ ಗಿಂತ ಲೆಬನಾನ್ ವಿಷಯದಲ್ಲೇ ಅಮೆರಿಕವು ಇಸ್ರೇಲ್ ಮೇಲೆ ಹೆಚ್ಚು ಒತ್ತಡ ಹೇರಬಲ್ಲದು ಎಂಬ ವಾಸ್ತವ ಇರಾನ್‌ ಗೆ ಚೆನ್ನಾಗಿ ಗೊತ್ತಿದೆ. ತನ್ನ ತಕ್ಷಣದ ರಾಜತಾಂತ್ರಿಕ ಮತ್ತು ಆರ್ಥಿಕ ಅಗತ್ಯಗಳಿಗಾಗಿ ಇರಾನ್ ಈ ಸಣ್ಣ ರಾಜಿ ಮಾಡಿಕೊಳ್ಳಲು ಸಿದ್ಧವಾಗಿದೆ. ಇಲ್ಲದಿದ್ದರೆ, ಒಂದು ವೇಳೆ ಇರಾನ್ ಮಿಲಿಟರಿ ಕ್ರಮದ ಎಚ್ಚರಿಕೆ ನೀಡಿದರೂ ಇಸ್ರೇಲ್ ಗಾಝಾದಿಂದ ಹಿಂದೆ ಸರಿಯುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ, ಇರಾನ್ ಈ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೆ, ಮಾತುಕತೆಯಲ್ಲಿನ ಚೌಕಾಶಿ ಸಾಮರ್ಥ್ಯವೂ ಗಣನೀಯವಾಗಿ ಕುಸಿಯುತ್ತದೆ.

ಒಪ್ಪಂದದ ಹಾದಿಯಲ್ಲಿ ಉಭಯ ದೇಶಗಳು

ಇಷ್ಟೆಲ್ಲಾ ಸಂಘರ್ಷಗಳ ನಡುವೆಯೂ ಅಮೆರಿಕ ಮತ್ತು ಇರಾನ್ ಒಂದು ನಿರ್ಣಾಯಕ ಒಪ್ಪಂದಕ್ಕೆ ಬರಲು ಉತ್ಸುಕವಾಗಿವೆ. ಆದರೆ, ಮಾರ್ಚ್ ತಿಂಗಳಲ್ಲಿ ಅಮೆರಿಕ ಹೇಗೆ ಮಿಲಿಟರಿ ದಾಳಿಗಳ ಮೂಲಕ ತನಗೆ ಪೂರಕವಾದ ಷರತ್ತುಗಳನ್ನು ವಿಧಿಸಲು ಯತ್ನಿಸಿತ್ತೋ, ಅದೇ ರೀತಿ ಈಗ ಇರಾನ್ ಕೂಡ ಶಕ್ತಿಯ ಪ್ರದರ್ಶನದ ಮೂಲಕ ಅಮೆರಿಕವನ್ನು ಮಣಿಸಲು ಮುಂದಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಕಾರ್ಯರೂಪದಲ್ಲಿ ನೋಡುವುದಾದರೆ, ಅಮೆರಿಕ ಮತ್ತು ಇರಾನ್ ನಡುವಿನ ಸಮೀಕರಣದಲ್ಲಿ ಈಗ ಒಳಗೊಳಗೇ ಒತ್ತಡ ತೀವ್ರಗೊಳ್ಳುತ್ತಿದೆ. ಇದು ಒಂದೋ ಸದ್ಯದ ಕದನ ವಿರಾಮವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಿದೆ, ಇಲ್ಲವೇ ದೊಡ್ಡದೊಂದು ಒಪ್ಪಂದಕ್ಕೆ ಮುನ್ನುಡಿಯಾಗಿ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಕನಿಷ್ಠ ಪಕ್ಷ ಒಂದು ತಾತ್ಕಾಲಿಕ ಮಧ್ಯಂತರ ವ್ಯವಸ್ಥೆಗೆ ದಾರಿ ಮಾಡಿಕೊಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News