×
Ad

ಅಪ್ಪಾ ಐ ಲವ್ ಯೂ ಪಾ... ಅಪ್ಪಾ ಎಂಬ ಹೊಣೆಗಾರಿಕೆ

ಇಂದಿನ ಅಪ್ಪಂದಿರಿಗೂ ಹಿಂದಿನ ಅಪ್ಪಂದಿರಿಗೂ ಅಜಗಜಾಂತರ ವ್ಯತ್ಯಾಸ!

Update: 2026-05-16 22:39 IST

ಸಾಂದರ್ಭಿಕ ಚಿತ್ರ | Photo Credit : magnific

ತಂದೆಯಂದಿರು ಮಕ್ಕಳ ಪಾಲನೆ-ಪೋಷಣೆಯಲ್ಲಿ ತಮ್ಮದೂ ಮಹತ್ವದ ಪಾತ್ರ ಇರಬೇಕು ಎಂದು ಬಯಸುತ್ತಿರುವುದೇಕೆ?

ಹಿಂದಿನ ಕಾಲಕ್ಕೆ ಹೋಲಿಸಿದರೆ ಇತ್ತೀಚೆಗೆ ತಂದೆಯಂದಿರು ತಮ್ಮ ಮಕ್ಕಳ ಜೀವನದಲ್ಲಿ ಹೆಚ್ಚು ಪಾತ್ರ ನಿರ್ವಹಿಸುತ್ತಿದ್ದಾರೆ. ಮಗು ಜನಿಸಿದಾಗ ಪತ್ನಿಯ ಜೊತೆಗೆ ತಮ್ಮ ಪಾತ್ರವೂ ಇರಬೇಕು ಎಂದು ಬಯಸುವ ತಂದೆಯಂದಿರು ಒಂದೆಡೆಯಾದರೆ, ಮತ್ತೊಂದೆಡೆ ತಮ್ಮ ಹೆತ್ತವರಂತಲ್ಲದೆ ತಾವು ಭಿನ್ನವಾಗಿ ಇರಬೇಕು ಎಂದು ಬಯಸುವ ತಂದೆಯಂದಿರು ಇನ್ನೊಂದೆಡೆ. ಒಟ್ಟಿನಲ್ಲಿ ಇಂದಿನ ಮಕ್ಕಳ ಜೀವನದಲ್ಲಿ ತಂದೆಯಂದಿರ ಪಾತ್ರ ಹೆಚ್ಚು ಇರುವುದು ಕಂಡುಬರುತ್ತಿದೆ. ಏಕೆ ಈ ಬದಲಾವಣೆ? ತಂದೆಯಂದಿರು ಮಕ್ಕಳ ಪಾಲನೆ-ಪೋಷಣೆಯಲ್ಲಿ ತಮ್ಮದೂ ಮಹತ್ವದ ಪಾತ್ರ ಇರಬೇಕು ಎಂದು ಬಯಸುತ್ತಿರುವುದೇಕೆ?

ಮಕ್ಕಳ ಕಡೆಗೆ ಹೆಚ್ಚಿದ ಪ್ರೀತಿ-ಕಾಳಜಿ

ಮಗಳಿಗಾಗಿ ತಮ್ಮ ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಬದಲಾವಣೆ ತಂದುಕೊಂಡಿರುವ ಪತ್ರಕರ್ತ ಶಶಿ ಸಂಪಳ್ಳಿ ಅವರು ಈ ಬಗ್ಗೆ ವಿವರಿಸುವ ಪ್ರಕಾರ, “ಮಕ್ಕಳನ್ನು ಬೆಳೆಸುವ ದೃಷ್ಟಿಯಿಂದ ನೋಡಿದರೆ 1970-80ರ ದಶಕದಲ್ಲಿ ಹುಟ್ಟಿದ ತಲೆಮಾರಿನವರಾದ ನಮಗೂ ಮತ್ತು ನಮ್ಮ ಪೋಷಕರಿಗೂ ಸಂಪೂರ್ಣ ತದ್ವಿರುದ್ಧ ಧೋರಣೆ ಇತ್ತು. ಅವರು ಮಕ್ಕಳನ್ನು ದಂಡಿಸಿ, ಭಯದಲ್ಲಿಟ್ಟು ‘ತಿದ್ದಿ’ ಬೆಳೆಸಬೇಕು ಎಂಬ ಸಾಂಪ್ರದಾಯಿಕ ದೃಷ್ಟಿಕೋನ ಹೊಂದಿದ್ದರು. ಹಾಗಾಗಿ ನಮ್ಮನ್ನೆಲ್ಲ ‘ಶಿಕ್ಷಿಸುವ’ ಮೂಲಕವೇ ‘ಸರಿದಾರಿ’ ತೋರಿಸುವ ಪ್ರಯತ್ನ ಅವರದ್ದಾಗಿತ್ತು. ಆದರೆ ನಮ್ಮ ತಲೆಮಾರಿಗೆ ಅದು ಸಂಪೂರ್ಣ ತಲೆಕೆಳಗಾಯಿತು. ಮಕ್ಕಳನ್ನು ಪ್ರೀತಿಯಿಂದ, ಕಾಳಜಿಯಿಂದ ಬೆಳೆಸಬೇಕು; ಅವರಿಗೆ ತಿಳಿಹೇಳುವ ಮೂಲಕ ಒಳ್ಳೆಯದನ್ನು ಕಲಿಸಬೇಕು ಎಂಬ ಧೋರಣೆ ನಮ್ಮದಾಯಿತು. ಇದು ಮಕ್ಕಳನ್ನು ಪೋಷಿಸುವ ಅಥವಾ ಬೆಳೆಸುವ ವಿಷಯದಲ್ಲಿ ನಮಗೂ ಮತ್ತು ನಮ್ಮ ಪೋಷಕರಿಗೂ ಇರುವ ಪ್ರಮುಖ ವ್ಯತ್ಯಾಸ.

“ನಾನು ನನ್ನ ಮಗಳ ವಿಷಯದಲ್ಲಿ ತುಂಬಾ ಕಾಳಜಿ ಮತ್ತು ಪ್ರೀತಿಯಿಂದ ನಡೆದುಕೊಂಡಿದ್ದೇನೆ. ಆಕೆ ಹಸುಗೂಸಿರುವಾಗಿನಿಂದಲೂ. ಮುಖ್ಯವಾಗಿ ಆಕೆಯನ್ನು ಬಹಳ ಸೂಕ್ಷ್ಮ ಸಂವೇದನೆಯ ಹುಡುಗಿಯಾಗಿ ಬೆಳೆಸಬೇಕು. ಅದೇ ಉತ್ತಮ ನಾಗರಿಕಳಾಗಲು ಬೇಕಾದ ಪ್ರಮುಖ ಅಂಶ. ಇನ್ನುಳಿದ ಸಂಗತಿಗಳು ನಂತರದ್ದು ಎಂಬ ಧೋರಣೆ ನನ್ನದಾಗಿತ್ತು. ಜೊತೆಗೆ ನಾವು ದಂಪತಿಗಳಿಬ್ಬರೂ ವೃತ್ತಿನಿರತರಾಗಿದ್ದರಿಂದ ಅನಿವಾರ್ಯವಾಗಿ ಆರಂಭದ ವರ್ಷಗಳಲ್ಲಿ ಆಕೆಯ ಬಗ್ಗೆ ನಾನೇ ಹೆಚ್ಚು ಕಾಳಜಿ ವಹಿಸಬೇಕಾಗಿತ್ತು. ಹಾಗಾಗಿ ಸಹಜವಾಗಿಯೇ ನಾನು ನನ್ನ ವೃತ್ತಿಗಿಂತ ಆಕೆಯ ಪೋಷಣೆಗೆ ಆದ್ಯತೆ ನೀಡಿದೆ.”

ಹೆತ್ತವರಲ್ಲಿ ಈ ಬದಲಾವಣೆ ಬರಲು ಕಾರಣವೇನು?

ಮಾರ್ಕೆಟಿಂಗ್ ಸಲಹೆಗಾರ ಇರ್ಷಾದ್ ಅವರ ಪ್ರಕಾರ, ತಮ್ಮ ಹಿರಿಯರು ಶಿಕ್ಷಿತರಾಗಿರಲಿಲ್ಲ ಮತ್ತು ಶಿಕ್ಷಣದ ಮಹತ್ವವೂ ಅವರಿಗೆ ತಿಳಿದಿರಲಿಲ್ಲ. ಹೀಗಾಗಿ ಅವರು ಮಕ್ಕಳನ್ನು ಬೆಳೆಸಿದ ರೀತಿ ಮತ್ತು ಇಂದಿನ ಯುವಜನತೆ ಮಕ್ಕಳನ್ನು ಬೆಳೆಸುತ್ತಿರುವ ರೀತಿಗೆ ಅಜಗಜಾಂತರ ವ್ಯತ್ಯಾಸವಿದೆ.

“ಹಿಂದಿನವರಿಗೆ ವಿದ್ಯಾಭ್ಯಾಸವಿಲ್ಲದ ಕಾರಣ ಮಕ್ಕಳ ಕುರಿತಂತೆ ಯಾವ ರೀತಿ ಕಾಳಜಿ ಕೊಡಬೇಕು ಎಂಬ ಅರಿವು ಇರಲಿಲ್ಲ. ನಾವು ವಿದ್ಯಾಭ್ಯಾಸ ಪಡೆದ ಕಾರಣ ಕುಟುಂಬಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದು ತಿಳಿದುಕೊಂಡಿದ್ದೇವೆ. ಕುಟುಂಬಕ್ಕೆ ಆದ್ಯತೆ ಕೊಡುವುದು ನನ್ನ ಅನಿವಾರ್ಯತೆಯಲ್ಲ, ನನ್ನ ಆಯ್ಕೆಯಾಗಿರುತ್ತದೆ. ನಮ್ಮ ಹೆತ್ತವರಿಗೆ ಶಿಕ್ಷಣವಿರಲಿಲ್ಲ ಮತ್ತು ಅದರ ಅಗತ್ಯವೂ ತಿಳಿದಿರಲಿಲ್ಲ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೆಲಸಕ್ಕೆ ಹಚ್ಚುತ್ತಿದ್ದರು.

“ಆದರೆ ನಾವು ಶಿಕ್ಷಣ ಪಡೆದ ನಂತರ ನಮ್ಮ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಆದ್ಯತೆ ಕೊಡುತ್ತೇವೆ. ಮಕ್ಕಳಿಗೆ ಎಷ್ಟು ಶಿಕ್ಷಣ ಕೊಡುತ್ತೀರೋ ಅದು ಅವರ ಆಸ್ತಿಯಾಗುತ್ತದೆ. ಹೀಗಾಗಿ ನಾನು ನನ್ನ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡುತ್ತೇನೆ. ನನ್ನ ಮಗ ಮತ್ತು ಮಗಳು ಇಬ್ಬರ ನಡುವೆಯೂ ಯಾವುದೇ ವ್ಯತ್ಯಾಸ ತೋರಿಸದೆ, ಇಬ್ಬರನ್ನೂ ಸಮಾನವಾಗಿ ಗಮನಿಸಿಕೊಳ್ಳಬೇಕು ಮತ್ತು ಇಬ್ಬರಿಗೂ ಸಮಾನ ಆದ್ಯತೆ ಹಾಗೂ ಶಿಕ್ಷಣ ನೀಡಬೇಕು ಎಂದು ಬಯಸುತ್ತೇನೆ. ನನ್ನ ಮಗಳಿಗೆ ಈಗ ಐದು ವರ್ಷ ಮಾತ್ರ. ಆದರೂ ಆಕೆಯ ಶಿಕ್ಷಣಕ್ಕೆ ನಾನು ಮೊದಲ ಆದ್ಯತೆ ನೀಡುತ್ತಿದ್ದೇನೆ” ಎನ್ನುತ್ತಾರೆ ಇರ್ಷಾದ್.

ಮಗಳ ಜೊತೆಗೆ ಭಾವನಾತ್ಮಕ ಬಂಧ

ಮಗಳಿಗಾಗಿ ತಮ್ಮ ವೃತ್ತಿಯನ್ನು ಅನೇಕ ಬಾರಿ ಬದಲಿಸಿಕೊಂಡವರು ಮತ್ತು ಜೀವನದಲ್ಲಿ ಮಗಳಿಗೇ ಪ್ರೀತಿ ಹಾಗೂ ಸಮರ್ಪಣಾಭಾವದಿಂದ ಬದುಕುತ್ತಿರುವ ಅನಿಲ್ ತೆಕ್ಕೆಕರ ಅವರ ಪ್ರಕಾರ, ತಂದೆಯಾಗುವುದು ಒಂದು ಅದ್ಭುತ ಅನುಭವ. ಅದು ಸಹನೆಯನ್ನು ಕಲಿಸುತ್ತದೆ ಮತ್ತು ಜೀವನದ ಹೊಸ ಮಾರ್ಗಗಳನ್ನು ಕಲಿಯಲು ನಮ್ಮನ್ನು ಮುಕ್ತರನ್ನಾಗಿಸುತ್ತದೆ.

“ನನ್ನ ಅನುಭವವೊಂದನ್ನು ಹಂಚಿಕೊಳ್ಳುತ್ತೇನೆ. ನನ್ನ ಮಗಳಿಗೆ ಮೊದಲ ಋತುಚಕ್ರ ಆರಂಭವಾದಾಗ ನನಗೆ ಆ ಬಗ್ಗೆ ಏನು ಮಾಡಬೇಕೆಂದೇ ತಿಳಿದಿರಲಿಲ್ಲ. ಆ ಕುರಿತು ಅನೇಕ ಲೇಖನಗಳನ್ನು ಓದಿದೆ ಮತ್ತು ವೀಡಿಯೋಗಳನ್ನು ನೋಡಿ ಅವಳಿಗೆ ಹೇಗೆ ನೆರವಾಗಬಹುದು ಎಂದು ಯೋಜಿಸಿದೆ. ಆಕೆಯ ಋತುಚಕ್ರದ ದಿನಗಳನ್ನು ದಾಖಲಿಸಿಕೊಳ್ಳಲು ಕ್ಯಾಲೆಂಡರ್ ಇಡಲು ಆರಂಭಿಸಿದೆ. ಆಕೆಗಾಗಿ ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಿದೆ. ‘ನನಗಿಂತಲೂ ಹೆಚ್ಚು ಕಾಳಜಿಯಿಂದ ನೀನು ನೋಡಿಕೊಂಡೆ’ ಎಂದು ನನ್ನ ಪತ್ನಿಯೇ ಹೇಳಿದ್ದಳು.

“ನಮ್ಮ ಹಿರಿಯರು ಇಂತಹ ವಿಚಾರಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ ಎನ್ನುವುದು ನನ್ನ ಭಾವನೆ. ಅದೆಲ್ಲ ಮಹಿಳೆಯರ ಕೆಲಸ ಎಂದು ಬಹುಶಃ ಭಾವಿಸುತ್ತಿದ್ದಿರಬಹುದು. ನಾನು ಹೆಚ್ಚು ಭಾವನಾತ್ಮಕ ವ್ಯಕ್ತಿಯಾದೆ ಮತ್ತು ಮಗಳ ಪ್ರತಿಯೊಂದು ಕೆಲಸಕ್ಕೂ ಬೆಂಬಲ ನೀಡಲಾರಂಭಿಸಿದೆ. ನನ್ನ ತಂದೆ ನನ್ನೊಂದಿಗೆ ನಡೆದುಕೊಂಡ ರೀತಿ ಮತ್ತು ನಾನು ನನ್ನ ಮಗಳೊಂದಿಗೆ ನಡೆದುಕೊಳ್ಳುವ ರೀತಿಗೂ ಬಹಳ ವ್ಯತ್ಯಾಸವಿದೆ.

“ನಾನು ಕೊಟ್ಟ ಎಲ್ಲಾ ಉಡುಗೊರೆಗಳನ್ನು ನನ್ನ ಮಗಳು ನೆನಪಿಟ್ಟುಕೊಳ್ಳದೇ ಇರಬಹುದು. ಆದರೆ ನಮ್ಮ ಜೊತೆಗಾರಿಕೆ, ಬೆಂಬಲ ಮತ್ತು ಪ್ರೀತಿಯನ್ನು ಖಂಡಿತವಾಗಿ ನೆನಪಿಟ್ಟುಕೊಳ್ಳುತ್ತಾಳೆ ಎಂಬ ಭರವಸೆ ನನಗಿದೆ” ಎನ್ನುತ್ತಾರೆ ಅನಿಲ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News