ನಿತ್ಯವೂ ಶೌಚಾಲಯದಲ್ಲಿ 15 ನಿಮಿಷ ಮೀರಿ ಕುಳಿತರೆ ಪೈಲ್ಸ್ ಬರುವ ಸಾಧ್ಯತೆ; ಎಚ್ಚರಿಸಿದ ವೈದ್ಯರು
ಸಾಂದರ್ಭಿಕ ಚಿತ್ರ | Photo Credit : magnific
ಮಲಬದ್ಧತೆ ಇದ್ದರೆ ಶೌಚಾಲಯದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಆರೋಗ್ಯದ ಅಪಾಯ ಇನ್ನಷ್ಟು ಹೆಚ್ಚಾಗಬಹುದು.
ಶೌಚಾಲಯದಲ್ಲಿ ಕುಳಿತು ಪೇಪರ್ ಓದುವುದು ಅಥವಾ ಫೋನ್ ಸ್ಕ್ರೋಲ್ ಮಾಡುವ ಅಭ್ಯಾಸ ನಿಮಗಿದೆಯೆ? ಬಹಳಷ್ಟು ಮಂದಿಗೆ ಇದು ಸಮಯ ಕಳೆಯುವ ಪರಿಣಾಮಕಾರಿ ಮಾರ್ಗವಾಗಿರಬಹುದು. ಆದರೆ ಈ ಅಭ್ಯಾಸವು ನಿಮ್ಮ ಕರುಳು ಮತ್ತು ಗುದನಾಳದ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಬಹುದು ಎಂಬುದು ನಿಮಗೆ ತಿಳಿದಿದೆಯೆ? ನಿರ್ದಿಷ್ಟವಾಗಿ ಹೇಳುವುದಾದರೆ, ಶೌಚಾಲಯದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಆರೋಗ್ಯದ ಅಪಾಯ ಇನ್ನಷ್ಟು ಹೆಚ್ಚಾಗಬಹುದು.
ಪ್ರತಿದಿನ ಶೌಚಾಲಯದಲ್ಲಿ 15 ನಿಮಿಷಗಳಿಗಿಂತ ಹೆಚ್ಚು ಸಮಯ ಕಳೆದರೆ ಸಮಸ್ಯೆಗಳು ಬೆಳೆಯಲು ಪ್ರಾರಂಭಿಸುತ್ತವೆ ಎಂದು ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯ ರೋಬೋಟಿಕ್ ಕೊಲೊರೆಕ್ಟಲ್ ಮತ್ತು ಜಿಐ ಶಸ್ತ್ರಚಿಕಿತ್ಸಕ ಸಲಹೆಗಾರ ಡಾ. ಮಂಜುನಾಥ್ ಹರಿದಾಸ್ ಎಚ್ಚರಿಸಿದ್ದಾರೆ.
ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆದರೆ ಹೆಮರಾಯ್ಡ್ಸ್ (ಪೈಲ್ಸ್) ಹಾಗೂ ಇತರ ಜೀರ್ಣ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ ಎಂದು ಅವರು ಹೇಳಿದ್ದಾರೆ. “ಪ್ರತಿದಿನ ಶೌಚಾಲಯದಲ್ಲಿ 10ರಿಂದ 15 ನಿಮಿಷಗಳಿಗಿಂತ ಹೆಚ್ಚು ಸಮಯ ಕಳೆಯುವುದರಿಂದ ಗುದನಾಳ ಮತ್ತು ಗುದದ್ವಾರದ ಸುತ್ತಲಿನ ರಕ್ತನಾಳಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಕಾಲಕ್ರಮೇಣ ಈ ಒತ್ತಡವು ರಕ್ತನಾಳಗಳು ಊದಿಕೊಳ್ಳಲು ಕಾರಣವಾಗುತ್ತದೆ. ಮಲವಿಸರ್ಜನೆ ಮಾಡುವಾಗ ತುರಿಕೆ, ನೋವು ಮತ್ತು ರಕ್ತಸ್ರಾವದೊಂದಿಗೆ ಕಾಣಿಸಿಕೊಳ್ಳುವ ಪೈಲ್ಸ್ ಸಮಸ್ಯೆಗೆ ಇದು ಕಾರಣವಾಗಬಹುದು” ಎಂದು ಅವರು ಹೇಳಿದ್ದಾರೆ.
“ಆಧುನಿಕ ಪಾಶ್ಚಿಮಾತ್ಯ ಶೈಲಿಯ ಕಮೋಡ್ ಗಳು ಸಮಸ್ಯೆಗೆ ಮತ್ತಷ್ಟು ಕಾರಣವಾಗಬಹುದು. ಏಕೆಂದರೆ ಅವುಗಳ ಕುಳಿತುಕೊಳ್ಳುವ ಭಂಗಿಯು ಸಾಮಾನ್ಯ ಭಾರತೀಯ ಶೈಲಿಯ ಶೌಚ ವಿಧಾನಕ್ಕೆ ಹೋಲಿಸಿದರೆ ಗುದನಾಳದ ಭಾಗದ ಮೇಲೆ ಹೆಚ್ಚು ಒತ್ತಡ ಉಂಟುಮಾಡುತ್ತದೆ. ಫೋನ್‌ಗಳಲ್ಲಿ ಸ್ಕ್ರೋಲಿಂಗ್ ಮಾಡುವುದು ಮತ್ತು ದೀರ್ಘಕಾಲ ಕುಳಿತುಕೊಳ್ಳುವಂತಹ ಅಭ್ಯಾಸಗಳೊಂದಿಗೆ ಸೇರಿ ಇವೆಲ್ಲವೂ ಜೀರ್ಣಕಾರಿ ಹಾಗೂ ಗುದನಾಳದ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು” ಎಂದು ಅವರು ಹೇಳಿದ್ದಾರೆ.
ಶೌಚಾಲಯದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಮಲಬದ್ಧತೆ ಹೆಚ್ಚಾಗುತ್ತದೆಯೆ?
ಮಲಬದ್ಧತೆ ಇದ್ದಾಗ ಜನರು ಕರುಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಉದ್ದೇಶದಿಂದ ಶೌಚಾಲಯದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುತ್ತಾರೆ. ಆದರೆ ಈ ಅಭ್ಯಾಸವು ವಾಸ್ತವದಲ್ಲಿ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸಬಹುದು. ವೈದ್ಯರ ಪ್ರಕಾರ, “ಅತಿಯಾದ ಒತ್ತಡವು ಪೆಲ್ವಿಕ್ ತಳಭಾಗದ ಮತ್ತು ಕರುಳಿನ ಕಾರ್ಯಕ್ಕೆ ಸಂಬಂಧಿಸಿದ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಗುದದ ಬಿರುಕುಗಳು ಹಾಗೂ ಗುದನಾಳದ ಹಿಗ್ಗುವಿಕೆಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.”
ಜೀರ್ಣ ಸಮಸ್ಯೆಗಳು ಮತ್ತು ಪೈಲ್ಸ್ ತಡೆಯುವುದು ಹೇಗೆ?
ಜೀರ್ಣ ಸಮಸ್ಯೆಗಳು ಮತ್ತು ಪೈಲ್ಸ್ ತಡೆಗಟ್ಟಲು ಶೌಚಾಲಯದಲ್ಲಿ ಫೋನ್ ಬಳಸುವುದನ್ನು ತಪ್ಪಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಏಕೆಂದರೆ ಇದರಿಂದ ಜನರು ಅಗತ್ಯಕ್ಕಿಂತ ಹೆಚ್ಚು ಸಮಯ ಶೌಚಾಲಯದಲ್ಲಿ ಕಳೆಯುವ ಸಾಧ್ಯತೆ ಇದೆ. ಜೊತೆಗೆ ಕರುಳಿನ ಚಲನೆ ಸರಾಗವಾಗಿರಲು ನಾರಿನಾಂಶಯುಕ್ತ ಆಹಾರ ಸೇವಿಸಬೇಕು ಮತ್ತು ನಿಯಮಿತವಾಗಿ ಸಾಕಷ್ಟು ನೀರು ಕುಡಿಯಬೇಕು. ದೈಹಿಕ ಚಟುವಟಿಕೆಯನ್ನು ಸಹ ದಿನಚರಿಯಲ್ಲಿ ಸೇರಿಸಿಕೊಳ್ಳುವುದು ಅಗತ್ಯ.
ವೈದ್ಯರನ್ನು ಭೇಟಿಯಾಗುವ ಅಗತ್ಯ ಯಾವಾಗ?
ನೀವು 10 ನಿಮಿಷಗಳಿಗಿಂತ ಹೆಚ್ಚು ಕಾಲ ಶೌಚಾಲಯದಲ್ಲಿ ಕಳೆಯುತ್ತಿದ್ದರೆ, ನೋವು ಅನುಭವಿಸುತ್ತಿದ್ದರೆ ಅಥವಾ ರಕ್ತಸ್ರಾವ ಕಂಡುಬಂದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಮಾಹಿತಿ ಕೃಪೆ: ಹಿಂದೂಸ್ತಾನ್ ಟೈಮ್ಸ್