ಚುನಾವಣಾ ಆಯೋಗ | Photo Credit : PTI 

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ನ್ಯಾಯಾಂಗ ಅಧಿಕಾರಿಗಳಿಂದ ಅನುಮೋದನೆ ಪಡೆದಿದ್ದ ಪಶ್ಚಿಮ ಬಂಗಾಳದ ಅರ್ಧದಷ್ಟು ಮತದಾರರ ಸೇರ್ಪಡೆಯನ್ನು ಪ್ರಶ್ನಿಸಿ ಚುನಾವಣಾ ಆಯೋಗವು ಮೇಲ್ಮನವಿ ಸಲ್ಲಿಸಿದೆ ಎಂದು 'ದಿ ವೈರ್' ವರದಿ ಮಾಡಿದೆ. ಅರ್ಹರೆಂದು ಗುರುತಿಸಲಾಗಿದ್ದ ಒಟ್ಟು 32,53,401 ಮತದಾರರಲ್ಲಿ 16,08,175 ಜನರ (ಶೇ. 49.4) ವಿರುದ್ಧ ಆಯೋಗವು ಮೇಲ್ಮನವಿ ಸಲ್ಲಿಸಿದೆ. ಪಶ್ಚಿಮ ಬಂಗಾಳದ ಸ್ವತಂತ್ರ ಸಂಶೋಧಕರು ಹಾಗೂ ವಿಶ್ಲೇಷಕರ ಒಕ್ಕೂಟವಾದ 'ಸಿವಿಕ್ ರಿಸರ್ಚ್ ಗ್ರೂಪ್' ಸಂಗ್ರಹಿಸಿ ಪರಿಶೀಲಿಸಿದ ಮೇಲ್ಮನವಿ ದಾಖಲೆಗಳಿಂದ ಈ ಅಂಕಿ-ಅಂಶಗಳು ತಿಳಿದುಬಂದಿವೆ.

ಸಲ್ಲಿಕೆಯಾಗಿರುವ ಸುಮಾರು 16 ಲಕ್ಷ ಮೇಲ್ಮನವಿಗಳ ಪೈಕಿ ಬಹುತೇಕ ಮೇಲ್ಮನವಿಗಳನ್ನು ಎಪ್ರಿಲ್ ತಿಂಗಳ ಕೇವಲ ಮೂರು ದಿನಗಳ ಅವಧಿಯಲ್ಲಿ ದಾಖಲಿಸಲಾಗಿದೆ.

'ದಿ ವೈರ್' ಈ ವಿಶ್ಲೇಷಣೆಯನ್ನು ಸ್ವತಂತ್ರವಾಗಿ ಪರಿಶೀಲಿಸಿದ್ದು, ಮೇಲ್ಮನವಿ ಸಂಖ್ಯೆಗಳಲ್ಲಿ ಸಮಯದ ನಮೂದು ಇರುವುದು ದೃಢಪಟ್ಟಿದೆ. ಪ್ರತಿಯೊಂದು ಮೇಲ್ಮನವಿ ಐಡಿಯೂ ವಿಶಿಷ್ಟವಾಗಿದೆ. ಶೇ. 99ರಷ್ಟು ಮೇಲ್ಮನವಿ ಐಡಿಗಳು 2026ರ ಏಪ್ರಿಲ್ 5, 6 ಮತ್ತು 8ರ ಮೂರು ದಿನಾಂಕಗಳಲ್ಲಿ ಒಂದನ್ನು ಹೊಂದಿವೆ. ವಿಧಾನಸಭಾ ಚುನಾವಣೆಗೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಕೆಲವೇ ದಿನಗಳ ಮೊದಲು ಮತ್ತು ನ್ಯಾಯಾಂಗ ಅಧಿಕಾರಿಗಳು SIR ಪ್ರಕ್ರಿಯೆಯ ಕಾರ್ಯವನ್ನು ಪೂರ್ಣಗೊಳಿಸುತ್ತಿದ್ದ ಸಮಯದಲ್ಲಿ ಈ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ ಅತ್ಯಂತ ದೊಡ್ಡ ಭಾಗವಾದ, ಅಂದರೆ ಚುನಾವಣಾ ಆಯೋಗ ಸಲ್ಲಿಸಿರುವ 12 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು ಏಪ್ರಿಲ್ 5ರ ಒಂದೇ ದಿನಾಂಕವನ್ನು ಹೊಂದಿವೆ.

ವಿಧಾನಸಭಾ ಚುನಾವಣೆಗೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಕೆಲವೇ ದಿನಗಳ ಮೊದಲು ಮತ್ತು ನ್ಯಾಯಾಂಗ ಅಧಿಕಾರಿಗಳು ತಮ್ಮ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುತ್ತಿದ್ದ ಸಮಯದಲ್ಲಿ ಈ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ 12 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು ಏಪ್ರಿಲ್ 5ರ ಒಂದೇ ದಿನಾಂಕದಂದು ಸಲ್ಲಿಕೆಯಾಗಿವೆ.

ಸಿವಿಕ್ ರಿಸರ್ಚ್ ಗ್ರೂಪ್ ನಡೆಸಿದ ಅಧ್ಯಯನವು ಬಂಗಾಳದಲ್ಲಿ ಪರಿಶೀಲನೆಗೆ ಒಳಪಟ್ಟಿದ್ದ 60,06,675 ಮತದಾರರ ಪೈಕಿ 59,84,512 (ಶೇ. 99.6) ಜನರ ಮಾಹಿತಿಯನ್ನು ಒಳಗೊಂಡಿದೆ. SIR ಅವಧಿಯಲ್ಲಿ ನ್ಯಾಯಾಧೀಶರು 'ಅನರ್ಹ' ಎಂದು ಗುರುತಿಸಿದ್ದ 27,16,393 ಮತದಾರರಲ್ಲಿ 27,06,096 ಜನರು ಮತ್ತು 'ಅರ್ಹ' ಎಂದು ಗುರುತಿಸಿದ್ದ 32,68,119 ಮತದಾರರಲ್ಲಿ 32,53,401 ಜನರು ಈ ಅಧ್ಯಯನದ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ಅರ್ಹರೆಂದು ಗುರುತಿಸಲಾದ ಈ ಮತದಾರರ ಪೈಕಿ 16,08,175 ಜನರ ಸೇರ್ಪಡೆಯನ್ನು ವಿರೋಧಿಸಿ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿರುವುದನ್ನು ಸಿವಿಕ್ ರಿಸರ್ಚ್ ಗ್ರೂಪ್ ಇದುವರೆಗೆ ಪತ್ತೆಹಚ್ಚಿದೆ. ಇದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ 16,10,311 ಮೇಲ್ಮನವಿಗಳ ಸಂಖ್ಯೆಗೆ ಸರಿಸುಮಾರು ಹತ್ತಿರದಲ್ಲಿದೆ.

ಮೇಲ್ಮನವಿ ಗುರುತಿನ ಸಂಖ್ಯೆಗಳ ವಿವರವಾದ ವಿಶ್ಲೇಷಣೆಯು ಅಕ್ಟೋಬರ್ 17ರವರೆಗಿನ ದಾಖಲೆಗಳನ್ನು ಆಧರಿಸಿದೆ. ಇದು ಅನುಮೋದನೆ ಪಡೆದ 30,00,541 ಮತದಾರರು ಮತ್ತು ಸಲ್ಲಿಕೆಯಾದ 14,75,885 ಮೇಲ್ಮನವಿಗಳನ್ನು ಒಳಗೊಂಡಿದೆ.

ಬೃಹತ್ ಪ್ರಮಾಣದ ಸಲ್ಲಿಕೆಗೆ ರೂಪಿಸಿದ ಸಂಖ್ಯೆಯ ವ್ಯವಸ್ಥೆ

ಸಿವಿಕ್ ರಿಸರ್ಚ್ ಗ್ರೂಪ್‌ನ ವರದಿಯ ಪ್ರಕಾರ, ಮೇಲ್ಮನವಿ ಐಡಿಗಳನ್ನು ಆರು ಮಾದರಿಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ಅಕ್ಷರಗಳನ್ನು ನೀಡಲಾಗಿದೆ. ನಾಗರಿಕ ಹಕ್ಕುಗಳ ಹೋರಾಟಗಾರರು ಈ ಸಂಖ್ಯೆಗಳ ಆಧಾರದಲ್ಲೇ ಮೇಲ್ಮನವಿ ಸಲ್ಲಿಸಿದ ದಿನಾಂಕಗಳನ್ನು ಪತ್ತೆಹಚ್ಚಿದ್ದು, 'ದಿ ವೈರ್' ಇದನ್ನು ಸ್ವತಂತ್ರವಾಗಿ ಪರಿಶೀಲಿಸಿ ದೃಢಪಡಿಸಿದೆ.

 

ಹೆಚ್ಚಿನ ಐಡಿಗಳು 17 ಅಕ್ಷರ/ಸಂಖ್ಯೆಗಳನ್ನು ಹೊಂದಿವೆ. ಉದಾಹರಣೆಗೆ APS2506C043100001. ಚುನಾವಣಾ ಆಯೋಗದ ಮೂಲಗಳ ಪ್ರಕಾರ, AP ಅಕ್ಷರಗಳ ನಂತರ ಬರುವ S25 ಪಶ್ಚಿಮ ಬಂಗಾಳ ರಾಜ್ಯದ ಸಂಕೇತವಾಗಿದೆ. ಮುಂದಿನ ಎರಡು ಸಂಖ್ಯೆಗಳಾದ 06 ಜಿಲ್ಲೆಯ ಸಂಕೇತವಾಗಿದೆ (06 ಮಾಲ್ಡಾದ 12 ಕ್ಷೇತ್ರಗಳನ್ನು ಮತ್ತು 07 ಮುರ್ಷಿದಾಬಾದ್‌ನ 22 ಕ್ಷೇತ್ರಗಳನ್ನು ಸೂಚಿಸುತ್ತದೆ). ನಂತರ 'C' ಅಕ್ಷರದ ಸರಣಿ ಬರುತ್ತದೆ ಹಾಗೂ ಅದರ ಮುಂದಿನ 043 ವಿಧಾನಸಭಾ ಕ್ಷೇತ್ರದ ಸಂಖ್ಯೆಯಾಗಿದೆ. ಕೊನೆಯ ಆರು ಸಂಖ್ಯೆಗಳು 1ರಿಂದ 9ರವರೆಗಿನ ಒಂದು ಸಂಖ್ಯೆ ಹಾಗೂ ಅದರ ಪಕ್ಕದಲ್ಲಿ ಐದು ಅಂಕಿಗಳ ಸಂಖ್ಯೆಯನ್ನು ಒಳಗೊಂಡಿದ್ದು, ಇದರ ಉದ್ದೇಶವೇನೆಂದು ಮೂಲಗಳಿಗೆ ವಿವರಿಸಲು ಸಾಧ್ಯವಾಗಿಲ್ಲ.

C, D, E ಮತ್ತು F ಸರಣಿಗಳಲ್ಲಿನ ಕ್ಷೇತ್ರದ ವಿವರವು ಬಹುತೇಕ ಎಲ್ಲ ಪ್ರಕರಣಗಳಲ್ಲೂ ಸರಿಯಾಗಿ ಹೊಂದಾಣಿಕೆಯಾಗುತ್ತದೆ. C-ಸರಣಿಯ 12,15,319 ದಾಖಲೆಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಸರಿಯಾದ ಕ್ಷೇತ್ರದ ಸಂಖ್ಯೆಯನ್ನು ಹೊಂದಿವೆ. ಮಾಲ್ಡಾದ 12 ಕ್ಷೇತ್ರಗಳಲ್ಲಿ ಸಲ್ಲಿಕೆಯಾದ ಎಲ್ಲಾ 2,95,634 ಮೇಲ್ಮನವಿಗಳಿಗೆ APS2506C ಎಂಬ ಒಂದೇ ಕೋಡ್ ಅನ್ನು ಬಳಸಲಾಗಿದೆ.

G ಮತ್ತು O ಸರಣಿಗಳು ಇದಕ್ಕಿಂತ ಭಿನ್ನವಾಗಿವೆ. ಅವು 20 ಅಕ್ಷರ/ಸಂಖ್ಯೆಗಳನ್ನು ಹೊಂದಿದ್ದು, ಜಿಲ್ಲೆಯ ಕೋಡ್ ಮತ್ತು ಸರಣಿ ಅಕ್ಷರದ ನಂತರ ದಿನಾಂಕ-ತಿಂಗಳು-ವರ್ಷದ ರೂಪದಲ್ಲಿ ಆರು ಅಂಕಿಗಳ ದಿನಾಂಕವನ್ನು ಹೊಂದಿರುತ್ತವೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ, G ಎಂದರೆ ಆನ್‌ಲೈನ್ ಮೂಲಕ ಮತ್ತು O ಎಂದರೆ ಆಫ್‌ಲೈನ್ ಮೂಲಕ ಸಲ್ಲಿಸಲಾದ ಮೇಲ್ಮನವಿಯಾಗಿದೆ. ಉದಾಹರಣೆಗೆ APS2501G010426201332 ಅನ್ನು 2026ರ ಏಪ್ರಿಲ್ 1ರಂದು ಆನ್‌ಲೈನ್‌ನಲ್ಲಿ ಮತ್ತು APS2501O080926386465 ಅನ್ನು 2026ರ ಸೆಪ್ಟೆಂಬರ್ 8ರಂದು ಆಫ್‌ಲೈನ್‌ನಲ್ಲಿ ಸಲ್ಲಿಸಲಾಗಿದೆ.

C, D, E ಮತ್ತು F ಅಕ್ಷರಗಳು ಭಿನ್ನವಾಗಿ ಕೆಲಸ ಮಾಡುತ್ತವೆ ಎಂದು ಮೂಲಗಳು ತಿಳಿಸಿವೆ. ಪ್ರತಿಯೊಂದು ಅಕ್ಷರವೂ ನಿರ್ದಿಷ್ಟ ದಿನಾಂಕ ಮತ್ತು ಸಮಯವನ್ನು ಸೂಚಿಸುತ್ತದೆ. ಅದರಂತೆ, C-ಸರಣಿಯ ಎಲ್ಲಾ 12,15,318 ಮೇಲ್ಮನವಿಗಳು 2026ರ ಏಪ್ರಿಲ್ 5ರ ಒಂದೇ ಸಮಯದ ನಮೂದನ್ನು ಹೊಂದಿವೆ. D-ಸರಣಿಯ 1,39,954 ಮೇಲ್ಮನವಿಗಳು ಏಪ್ರಿಲ್ 6ರ ಮತ್ತು E-ಸರಣಿಯ 30,102 ಮೇಲ್ಮನವಿಗಳು ಏಪ್ರಿಲ್ 8ರ ದಿನಾಂಕವನ್ನು ಹೊಂದಿವೆ. ಈ ಮೂರು ದಿನಾಂಕಗಳೇ ಒಟ್ಟು 13,95,794 ಮೇಲ್ಮನವಿಗಳಲ್ಲಿ 13,85,374 (ಶೇ. 99.3) ಮೇಲ್ಮನವಿಗಳನ್ನು ಒಳಗೊಂಡಿವೆ. G ಮತ್ತು O ಸರಣಿಯ ಕೇವಲ 9,528 ಮೇಲ್ಮನವಿಗಳು ಮಾತ್ರ ಪ್ರತ್ಯೇಕ ಸಲ್ಲಿಕೆ ದಿನಾಂಕಗಳನ್ನು ಹೊಂದಿವೆ.

 

ಈ ಸರಣಿಗಳ ವಿವರಣೆ ಗೊಂದಲಮಯವಾಗಿ ಕಾಣಿಸಬಹುದು ಮತ್ತು ಇದನ್ನು ಇಷ್ಟೊಂದು ವಿವರವಾಗಿ ಓದುವ ಅಗತ್ಯವೇನು ಎಂದೂ ಅನಿಸಬಹುದು. ಆದರೆ, ಈ ಮೇಲ್ಮನವಿಗಳನ್ನು ಸಲ್ಲಿಸಿದ ಸಮಯ ಅತ್ಯಂತ ಮುಖ್ಯವಾಗಿದೆ.

ಏಪ್ರಿಲ್ ಮೊದಲ ವಾರದ ವೇಳೆಗೆ ನ್ಯಾಯಾಂಗ ಅಧಿಕಾರಿಗಳು 60 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಪರಿಶೀಲನೆ ಪೂರ್ಣಗೊಳಿಸಿದ್ದರು. ವಿಧಾನಸಭಾ ಚುನಾವಣೆಗೆ ಮತದಾರರ ಪಟ್ಟಿಯನ್ನು ಎಪ್ರಿಲ್ 7ರ ಮಧ್ಯರಾತ್ರಿ ಅಂತಿಮಗೊಳಿಸಲಾಯಿತು ಮತ್ತು ಏಪ್ರಿಲ್ 23ರಂದು ಮೊದಲ ಹಂತದ ಮತದಾನ ನಡೆಯಿತು. ನ್ಯಾಯಾಂಗ ಅಧಿಕಾರಿಗಳು ಅನುಮೋದಿಸಿದ್ದ ಮತದಾರರ ವಿರುದ್ಧ ಚುನಾವಣಾ ಆಯೋಗವು ಮೇಲ್ಮನವಿ ಸಲ್ಲಿಸಿದ್ದು ಇದೇ ಅವಧಿಯಲ್ಲಿ. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿತು.

12 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು ಒಂದೇ ಸಮಯದ ನಮೂದನ್ನು ಹೊಂದಿರುವುದು, ಅವುಗಳನ್ನು ಒಂದೊಂದಾಗಿ ಸಿದ್ಧಪಡಿಸಿ ಸಲ್ಲಿಸಲಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಕಷ್ಟಸಾಧ್ಯವಾಗಿಸುತ್ತದೆ. ಇದು ಎಲ್ಲಾ ಮೇಲ್ಮನವಿಗಳನ್ನು ಒಂದೇ ಬಾರಿಗೆ ಸೃಷ್ಟಿಸಿ ಅಪ್‌ಲೋಡ್ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ. ಆದರೆ, ಇದಕ್ಕೆ ಯಾರು ಅನುಮತಿ ನೀಡಿದ್ದರು ಅಥವಾ ಸಲ್ಲಿಸುವ ಮೊದಲು ಪ್ರತಿಯೊಂದನ್ನೂ ಪರಿಶೀಲಿಸಲಾಗಿದೆಯೇ ಎಂಬುದು ಇದರಿಂದ ನೇರವಾಗಿ ತಿಳಿಯುವುದಿಲ್ಲ. ಈ ಸಮಯದ ನಮೂದುಗಳು ಆಯೋಗದ ಐಡಿ ವ್ಯವಸ್ಥೆಯ ಮೂಲಗಳನ್ನು ಆಧರಿಸಿರುವುದರಿಂದ, ಚುನಾವಣಾ ಆಯೋಗ ಮಾತ್ರವೇ ಈ ವಿಚಾರಗಳನ್ನು ದೃಢಪಡಿಸಲು ಸಾಧ್ಯ.

ಮೇಲ್ಮನವಿ ಸಲ್ಲಿಸಿದವರು ಯಾರು?

ಈ ಮೇಲ್ಮನವಿಗಳನ್ನು ಸ್ವತಃ ಚುನಾವಣಾ ಆಯೋಗವೇ ಸಲ್ಲಿಸಿರುವುದರಿಂದ, ಯಾವುದೇ ದಾಖಲೆಯಲ್ಲೂ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯ ಹೆಸರು ಉಲ್ಲೇಖವಾಗಿಲ್ಲ. ಮುರ್ಷಿದಾಬಾದ್ ಜಿಲ್ಲೆಯ 11ನೇ ಮೇಲ್ಮನವಿ ನ್ಯಾಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಇಂದ್ರಜಿತ್ ಚಟರ್ಜಿ ಅವರು, ತಮ್ಮ ಮುಂದೆ ಬಂದ ಹೆಚ್ಚಿನ ಮೇಲ್ಮನವಿಗಳನ್ನು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಲ್ಲಿಸಿದ್ದಾರೆ ಎಂದು ಈ ಹಿಂದೆ 'ದಿ ವೈರ್' ವರದಿ ಮಾಡಿತ್ತು. ಹೆಚ್ಚುವರಿ ಸಿಇಒ ಸಲ್ಲಿಸಿದ ಈ ಮೇಲ್ಮನವಿಗಳ ಕುರಿತು ನ್ಯಾಯಾಧಿಕರಣದ ಮುಂದೆ ಹೊರಡಿಸಲಾದ ಹಲವು ನೋಟಿಸ್‌ಗಳನ್ನು 'ದಿ ವೈರ್' ಪರಿಶೀಲಿಸಿದೆ.

ಮೇಲ್ಮನವಿ ಸಲ್ಲಿಕೆಯ ಮಾದರಿಯೂ ಇದೇ ಅಂಶವನ್ನು ತೋರಿಸಿದೆ. ವರದಿಯ ಮೊದಲ ಭಾಗದಲ್ಲಿ ತಿಳಿಸಿದಂತೆ, ರಾಜ್ಯದ 294 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಲ್ಲಿ ಅರ್ಹರೆಂದು ಗುರುತಿಸಲಾಗಿದ್ದ ಶೇ. 40ರಿಂದ ಶೇ. 60ರಷ್ಟು ಮತದಾರರ ಸೇರ್ಪಡೆಯನ್ನು ಪ್ರಶ್ನಿಸಿ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿದೆ.

ಚುನಾವಣಾ ಆಯೋಗ ನೀಡಿರುವ ಲೆಕ್ಕ

ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ಮತದಾರರ ಸೇರ್ಪಡೆಯನ್ನು ವಿರೋಧಿಸಿ 16,10,311 ಮೇಲ್ಮನವಿಗಳು ಹಾಗೂ ಪಟ್ಟಿಯಿಂದ ಹೊರಗುಳಿದು ಮತ್ತೆ ಸೇರ್ಪಡೆ ಬಯಸಿದ ಮತದಾರರಿಂದ 22,21,118 ಮೇಲ್ಮನವಿಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿತ್ತು.

 

ಈ ದತ್ತಾಂಶವು ಪ್ರಕರಣದ ತೀವ್ರತೆಯನ್ನು ಸ್ವತಂತ್ರವಾಗಿ ದೃಢಪಡಿಸುತ್ತದೆ. ನ್ಯಾಯಾಧೀಶರು ಅರ್ಹರೆಂದು ಪತ್ತೆಹಚ್ಚಿದವರ ಪೈಕಿ ಅರ್ಧದಷ್ಟು, ಅಂದರೆ ಶೇ. 49.4ರಷ್ಟು (ದಾಖಲೆಗಳಲ್ಲಿರುವಂತೆ) ಮತದಾರರ ವಿರುದ್ಧ ಆಯೋಗವೇ ಮೇಲ್ಮನವಿ ಸಲ್ಲಿಸಿದೆ.

ಟಿಪ್ಪಣಿ: ಮೇಲ್ಮನವಿ ದಾಖಲೆಗಳನ್ನು 'ಸಿವಿಕ್ ರಿಸರ್ಚ್ ಗ್ರೂಪ್' ಪ್ರತಿ ಮತದಾರರ ಹಂತದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿ, ಪರಿಶೀಲಿಸಿ 'ದಿ ವೈರ್'ಗೆ ಒದಗಿಸಿದೆ. ಇತ್ತೀಚಿನ ದಾಖಲೆಗಳು ಪರಿಶೀಲನೆಗೆ ಒಳಪಟ್ಟ 60,06,675 ಮತದಾರರಲ್ಲಿ 59,84,512 ಜನರ ಮಾಹಿತಿಯನ್ನು ಒಳಗೊಂಡಿವೆ. ಇದರಲ್ಲಿ 'ಅರ್ಹ' ಎಂದು ಕಂಡುಬಂದ 32,53,401 ಮತ್ತು 'ಅನರ್ಹ' ಎಂದು ಗುರುತಿಸಲಾದ 27,06,096 ಮತದಾರರಿದ್ದಾರೆ. ಮೇಲ್ಮನವಿ ಐಡಿ ಹಾಗೂ ಇತ್ಯರ್ಥವಾದ ಪ್ರಕರಣಗಳ ವಿಶ್ಲೇಷಣೆಯು ಅಕ್ಟೋಬರ್ 17, 2026ರವರೆಗಿನ ದಾಖಲೆಗಳನ್ನು (ಅರ್ಹರೆಂದು ಕಂಡುಬಂದ 30,00,541 ಮತದಾರರು) ಆಧರಿಸಿದೆ.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor