ವೆನೆಝುವೆಲಾ ತೈಲ ಖರೀದಿಸಲು ಅಮೆರಿಕದ ಒತ್ತು: ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಭಾರತಕ್ಕೆ ಸಾಧ್ಯವೇ?
ಸುಕಲ್ಪ್ ಶರ್ಮಾ - indianexpress. com ವರದಿ
Photo Credit : PTI
ಭಾರತವು, ಅದರಲ್ಲೂ ವಿಶೇಷವಾಗಿ ಗುಜರಾತ್ ನ ಜಾಮ್ ನಗರದಲ್ಲಿ ವಿಶ್ವದ ಅತಿ ದೊಡ್ಡ ತೈಲ ಶುದ್ಧೀಕರಣ ಸಂಕೀರ್ಣವನ್ನು ನಡೆಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮೂಲಕ, ವೆನೆಝುವೆಲಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸಬೇಕೆಂದು ಅಮೆರಿಕ ಬಯಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಬುಧವಾರ RILನ ಜಾಮ್ ನಗರದ ಬೃಹತ್ ತೈಲ ಶುದ್ಧೀಕರಣ ಸಂಕೀರ್ಣಕ್ಕೆ ಭೇಟಿ ನೀಡಿದರು. ಪ್ರಸ್ತುತ ಅಮೆರಿಕದ ಉಸ್ತುವಾರಿಯಲ್ಲಿರುವ ವೆನೆಝುವೆಲಾದ ತೈಲ ಆಮದನ್ನು ಭಾರತ ಮತ್ತು RIL ವಿಸ್ತರಿಸುವುದು, RILನ ಉನ್ನತ ಅಧಿಕಾರಿಗಳೊಂದಿಗಿನ ಅವರ ಸಭೆಯ ಕಾರ್ಯಸೂಚಿಯ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು.
ಜಾಮ್ ನಗರ ಭೇಟಿಗೂ ಮುನ್ನ ಮಂಗಳವಾರ ಮಾತನಾಡಿದ್ದ ರುಬಿಯೊ, ಭಾರತವನ್ನು 'ತೈಲ ಶುದ್ಧೀಕರಣದ ಸೂಪರ್ ಪವರ್' ಎಂದು ಬಣ್ಣಿಸಿದ್ದರು. ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವುದನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಗೋಳಾರ್ಧದಿಂದ, ವಿಶೇಷವಾಗಿ ವೆನೆಝುವೆಲಾದಿಂದ ತೈಲ ಆಮದನ್ನು ಹೆಚ್ಚಿಸುವಂತೆ ಅವರು ಸಲಹೆ ನೀಡಿದ್ದರು. RILನ ಅವಳಿ ಶುದ್ಧೀಕರಣ ಘಟಕಗಳ ಸಂಕೀರ್ಣವು ವಿಶ್ವದ ಅತ್ಯಂತ ಸಂಕೀರ್ಣ ತೈಲ ಶುದ್ಧೀಕರಣ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ, ಅತ್ಯಂತ ದಪ್ಪನೆಯ ವೆನೆಝುವೆಲಾ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಕ್ಯಾರಕಾಸ್ ನ ದಪ್ಪನೆಯ ಕಚ್ಚಾ ತೈಲವನ್ನು ಸಂಸ್ಕರಿಸಬಲ್ಲ ಭಾರತದ ಬೆರಳೆಣಿಕೆಯಷ್ಟು ಇತರ ತೈಲ ಶುದ್ಧೀಕರಣ ಘಟಕಗಳೂ ಇವೆ.
'ಇಂಧನವನ್ನು ಪಡೆಯುವ ವಿಧಾನವನ್ನು ವೈವಿಧ್ಯಗೊಳಿಸಲು ಇಡೀ ಜಾಗತಿಕ ಸಮುದಾಯ ಆಸಕ್ತಿ ಹೊಂದಿದೆ. ಸಂಘರ್ಷಗಳಿಗೆ ಒಳಗಾಗುವ ವಿಶ್ವದ ಒಂದೇ ಒಂದು ಭಾಗದಿಂದ ಜಾಗತಿಕ ಇಂಧನದ ವಿಪರೀತ ಪ್ರಮಾಣದ ಪೂರೈಕೆಯಾಗುವುದನ್ನು ನಾವು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ರಿಲಯನ್ಸ್ ನಂತಹ ಕಂಪೆನಿ ಮತ್ತು ಭಾರತದಂತಹ ದೇಶಕ್ಕೆ ಇಲ್ಲಿ ಮಹತ್ವದ ಪಾತ್ರವಿದೆ. ಏಕೆಂದರೆ, ಭಾರತವು ತೈಲ ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ, ವೆನೆಝುವೆಲಾದ ತೈಲ ಮತ್ತು ಕಚ್ಚಾ ತೈಲದ ಉತ್ಪಾದನೆಯು ವೇಗವಾಗಿ ಹೆಚ್ಚಾಗಲಿದೆ. ಈ ಭಾರವಾದ ಕಚ್ಚಾ ತೈಲವನ್ನು ವಿಶ್ವದ ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಶುದ್ಧೀಕರಿಸಲು ಸಾಧ್ಯ. ಅಂತಹ ಸ್ಥಳಗಳಲ್ಲಿ ಅಮೆರಿಕದ ಗಲ್ಫ್ ಕರಾವಳಿಯೂ ಒಂದು. ಆದರೆ, ವೆನೆಝುವೆಲಾದ ಭಾರವಾದ ಕಚ್ಚಾ ತೈಲವನ್ನು ಸಂಸ್ಕರಿಸಬಲ್ಲ ವಿಶ್ವದ ಬೆರಳೆಣಿಕೆಯಷ್ಟು ಇತರ ಸ್ಥಳಗಳಲ್ಲಿ ಭಾರತ ಮತ್ತು ರಿಲಯನ್ಸ್ ಕೂಡ ಸೇರಿವೆ' ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ಜೊತೆಗಿನ ಸಂವಾದದಲ್ಲಿ ರುಬಿಯೊ ತಿಳಿಸಿದ್ದಾರೆ.
ಆದರೆ, ಅಮೆರಿಕದ ಈ ಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಭಾರತವು ವೆನೆಝುವೆಲಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಮತ್ತು ನಿರಂತರವಾಗಿ ಹೆಚ್ಚಿಸುವುದು ಅಷ್ಟು ಸುಲಭವಲ್ಲ. ಹಲವು ವರ್ಷಗಳಿಂದ ಜಾರಿಯಲ್ಲಿದ್ದ ನಿರ್ಬಂಧಗಳ ಬಳಿಕ, ಭಾರತ ಸೇರಿದಂತೆ ಇತರ ಖರೀದಿದಾರರ ಕಡೆಗೆ ವೆನೆಝುವೆಲಾದ ತೈಲವನ್ನು ತಿರುಗಿಸುವುದರಿಂದ ಅದಕ್ಕೆ ಮಾರುಕಟ್ಟೆ ಸೃಷ್ಟಿಸಲು ವಾಷಿಂಗ್ಟನ್ ಗೆ ನೆರವಾಗಬಹುದು. ಆದರೆ, ಭಾರತ ಮತ್ತು ಇಲ್ಲಿನ ತೈಲ ಶುದ್ಧೀಕರಣ ಘಟಕಗಳಿಗೆ ತೈಲ ಖರೀದಿಯು ಮುಖ್ಯವಾಗಿ ಬೆಲೆ, ಗುಣಮಟ್ಟ, ಸಾಗಣೆ ವೆಚ್ಚ, ಪಾವತಿ ವ್ಯವಸ್ಥೆ ಮತ್ತು ಪೂರೈಕೆಯ ವಿಶ್ವಾಸಾರ್ಹತೆಯನ್ನು ಅವಲಂಬಿಸಿರುವ ವ್ಯಾಪಾರ ನಿರ್ಧಾರವಾಗಿದೆ.
ಭಾರತವು ಎಷ್ಟು ಪ್ರಮಾಣದ ವೆನೆಝುವೆಲಾ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ಸಂಸ್ಕರಿಸಬಹುದು ಎಂಬುದಕ್ಕೆ ಕೆಲವು ಮಿತಿಗಳಿವೆ. ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರನಾಗಿರುವ ಭಾರತಕ್ಕೆ ತನ್ನ ಆಮದಿನ ಬಹುಪಾಲು ಪ್ರಮಾಣವನ್ನು ವೆನೆಝುವೆಲಾ ಕಚ್ಚಾ ತೈಲದಿಂದ ಸರಳವಾಗಿ ಬದಲಾಯಿಸಲು ಸಾಧ್ಯವಿಲ್ಲ. ಅಲ್ಲದೆ, ಅಮೆರಿಕವನ್ನು ಹೊರತುಪಡಿಸಿದರೆ ಕ್ಯಾರಕಾಸ್ನ ತೈಲಕ್ಕೆ ಭಾರತ ಈಗಾಗಲೇ ಪ್ರಮುಖ ಮಾರುಕಟ್ಟೆಯಾಗಿದೆ. ಹೀಗಾಗಿ, ಕೈಗಾರಿಕಾ ತಜ್ಞರು ಮತ್ತು ವಿಶ್ಲೇಷಕರ ಪ್ರಕಾರ, ಆಮದನ್ನು ಮತ್ತಷ್ಟು ಹೆಚ್ಚಿಸಲು ತಾಂತ್ರಿಕ ಮಿತಿಗಳಿವೆ.
ವೆನೆಝುವೆಲಾ ತೈಲ ಆಮದಿನ ತಾಂತ್ರಿಕ ಹಾಗೂ ವ್ಯಾಪಾರಿಕ ಮಿತಿಗಳು
ಭಾರತದ ತೈಲ ಆಮದು ಪಟ್ಟಿಯಲ್ಲಿ ವೆನೆಝುವೆಲಾ ಕಚ್ಚಾ ತೈಲದ ಪಾಲನ್ನು ಹೆಚ್ಚಿಸಲು ಅವಕಾಶವಿದೆ. ವಿಶೇಷವಾಗಿ, ದಿನಕ್ಕೆ ಸುಮಾರು 1.4 ಮಿಲಿಯನ್ ಬ್ಯಾರೆಲ್ (bpd) ಒಟ್ಟು ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ರಿಲಯನ್ಸ್ನ ಜಾಮ್ನಗರ ಸಂಕೀರ್ಣದಲ್ಲಿ ಇದಕ್ಕೆ ಅವಕಾಶವಿದೆ. ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ ಮತ್ತು ನಯಾರಾ ಎನರ್ಜಿಯಂತಹ ಇತರ ತೈಲ ಶುದ್ಧೀಕರಣ ಕಂಪೆನಿಗಳು ಇತ್ತೀಚೆಗೆ ನಡೆಸಿರುವ ಕೆಲವು ಖರೀದಿಗಳೂ ಈ ಮಾರುಕಟ್ಟೆಯನ್ನು ಸ್ವಲ್ಪಮಟ್ಟಿಗೆ ವಿಸ್ತರಿಸಬಹುದು. ಆದರೆ, ವೆನೆಝುವೆಲಾ ಕಚ್ಚಾ ತೈಲವು ಭಾರತದ ಬಹುಪಾಲು ಶುದ್ಧೀಕರಣ ಸಾಮರ್ಥ್ಯಕ್ಕೆ ಸೂಕ್ತವಾಗುವ ಸಾಧ್ಯತೆಯಿಲ್ಲ. ರಿಲಯನ್ಸ್ ಗೆ ತಾಂತ್ರಿಕ ಸಾಮರ್ಥ್ಯವಿದೆ ಎಂಬ ಕಾರಣಕ್ಕೆ ಅದು ಅನಿಯಮಿತ ಪ್ರಮಾಣದಲ್ಲಿ ತೈಲ ಖರೀದಿಸಬಹುದು ಎಂದರ್ಥವಲ್ಲ.
'ವೆನೆಝುವೆಲಾ ಕಚ್ಚಾ ತೈಲ ಆಮದನ್ನು ಹೆಚ್ಚಿಸುವಲ್ಲಿ ಶುದ್ಧೀಕರಣ ಸಾಮರ್ಥ್ಯ ಮತ್ತು ಬೆಲೆ ಸ್ಪರ್ಧಾತ್ಮಕತೆ ಎಂಬ ಎರಡು ಪ್ರಮುಖ ಸವಾಲುಗಳಿವೆ. ವೆನೆಝುವೆಲಾದ ಪ್ರಮುಖ ಮೆರೆ (Merey) ಶ್ರೇಣಿಯ ಕಚ್ಚಾ ತೈಲವು ಅತ್ಯಂತ ದಪ್ಪವಾಗಿದ್ದು, ಹೆಚ್ಚಿನ ಪ್ರಮಾಣದ ಗಂಧಕವನ್ನು ಹೊಂದಿದೆ. ಹೀಗಾಗಿ, ರಿಲಯನ್ಸ್ನ ಅತ್ಯಾಧುನಿಕ ಜಾಮ್ನಗರ ಶುದ್ಧೀಕರಣ ಸಂಕೀರ್ಣವು ಅದನ್ನು ಸಂಸ್ಕರಿಸಲು ವಿಶೇಷವಾಗಿ ಸೂಕ್ತವಾಗಿದೆ. ಆದರೆ, ಈ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಬಲ್ಲ ಭಾರತೀಯ ಘಟಕಗಳ ಸಂಖ್ಯೆ ಸೀಮಿತವಾಗಿದೆ' ಎಂದು ಅಬುಧಾಬಿ ಮೂಲದ ಇಂಧನ ವಿಶ್ಲೇಷಕಿ ನಟಾಲಿಯಾ ಕಟೋನಾ 'ದಿ ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದ್ದಾರೆ.
'ಆರ್ಥಿಕತೆಯೂ ಮತ್ತೊಂದು ಅಡ್ಡಿಯಾಗಿದೆ. ಬೆಂಚ್ಮಾರ್ಕ್ ಕಚ್ಚಾ ತೈಲವಾದ ಬ್ರೆಂಟ್ಗೆ ಹೋಲಿಸಿದರೆ ಮೆರೆ ತೈಲವು ಪ್ರತಿ ಬ್ಯಾರೆಲ್ ಗೆ ಸುಮಾರು 25 ಡಾಲರ್ಗಳ ಗಣನೀಯ ರಿಯಾಯಿತಿಯಲ್ಲಿ ಲಭ್ಯವಿದ್ದರೂ, ಭಾರತದ ಪಶ್ಚಿಮ ಕರಾವಳಿಗೆ ಸಾಗಿಸಲು ಪ್ರಸ್ತುತ ಪ್ರತಿ ಬ್ಯಾರೆಲ್ಗೆ ಸುಮಾರು 35 ಡಾಲರ್ ವೆಚ್ಚವಾಗುತ್ತದೆ. ಇದರಿಂದ ರಿಯಾಯಿತಿಯ ಲಾಭವೇ ಸಾಗಣೆ ವೆಚ್ಚದ ಹೊರೆಯಾಗಿ ಪರಿಣಮಿಸುತ್ತದೆ. ಇಷ್ಟು ದುಬಾರಿ ಸಾಗಣೆ ವೆಚ್ಚದ ಹಿನ್ನೆಲೆಯಲ್ಲಿ, ಅತಿ ದೊಡ್ಡ ಕಚ್ಚಾ ತೈಲ ಸಾಗಣೆ ನೌಕೆಗಳಾದ ವಿಎಲ್ಸಿಸಿಗಳಿಗಿಂತ ಸಣ್ಣ ನೌಕೆಗಳಲ್ಲಿ ವೆನೆಝುವೆಲಾ ಕಚ್ಚಾ ತೈಲವನ್ನು ಸಾಗಿಸುವುದು ಕಷ್ಟಕರ' ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು ಆರಂಭವಾದ ಬಳಿಕ ಭಾರತವು ವೆನೆಝುವೆಲಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಹಿಂದೆ ಆಮದು ಪ್ರಮಾಣ ಶೂನ್ಯಕ್ಕೆ ಸಮೀಪದಲ್ಲಿತ್ತು. ಬಳಿಕ ಆಗಸ್ಟ್ನಲ್ಲಿ ದಿನಕ್ಕೆ 3,50,000 ಬ್ಯಾರೆಲ್ಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಸೆಪ್ಟೆಂಬರ್ ವೇಳೆಗೆ ಅದು ದಿನಕ್ಕೆ ಸುಮಾರು 2,00,000 ಬ್ಯಾರೆಲ್ಗಳಿಗೆ ಇಳಿಕೆಯಾಯಿತು. ಈಗಾಗಲೇ ಅರ್ಥಪೂರ್ಣ ಮಟ್ಟದಲ್ಲಿ ತೈಲ ಮೂಲಗಳ ವೈವಿಧ್ಯೀಕರಣ ನಡೆಯುತ್ತಿದೆ ಎಂದು ಕಟೋನಾ ಹೇಳಿದ್ದಾರೆ. ವೆನೆಝುವೆಲಾದಿಂದ ಆಮದನ್ನು ಮತ್ತಷ್ಟು ಹೆಚ್ಚಿಸುವ ಅವಕಾಶವು ಮೂಲಸೌಕರ್ಯ ಮತ್ತು ಆರ್ಥಿಕ ಅಂಶಗಳಿಂದ ಸೀಮಿತವಾಗಿದೆ ಎಂದೂ ಅವರು ತಿಳಿಸಿದ್ದಾರೆ.
'ವೈವಿಧ್ಯೀಕರಣ ಈಗಾಗಲೇ ನಡೆಯುತ್ತಿರುವಾಗ, ರುಬಿಯೊ ಅವರ ಪ್ರಸ್ತಾಪವು ಒಂದು ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ವಾಷಿಂಗ್ಟನ್ ಯಾವ ಹೆಚ್ಚುವರಿ ಬದ್ಧತೆಗಳನ್ನು ಬಯಸುತ್ತದೆ ಮತ್ತು ಭಾರತೀಯ ತೈಲ ಶುದ್ಧೀಕರಣ ಘಟಕಗಳಿಗೆ ಇದರಿಂದ ಏನು ಲಾಭವಾಗುತ್ತದೆ?' ಎಂದು ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (GTRI) ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಪ್ರಶ್ನಿಸಿದೆ.
'ಭಾರತದ ವೆನೆಝುವೆಲಾ ಕಚ್ಚಾ ತೈಲ ಖರೀದಿಯಲ್ಲಿ ರಿಲಯನ್ಸ್ನ ಪ್ರಾಬಲ್ಯವೇ ವಾಷಿಂಗ್ಟನ್ ಈ ಕಂಪೆನಿಯ ಮೇಲೆ ಗಮನಹರಿಸಲು ಕಾರಣ. 2026ರ ಏಪ್ರಿಲ್ನಿಂದ ಆಗಸ್ಟ್ವರೆಗಿನ ಅವಧಿಯಲ್ಲಿ ಭಾರತವು 3,585.6 ಮಿಲಿಯನ್ ಡಾಲರ್ ಮೌಲ್ಯದ ವೆನೆಝುವೆಲಾ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ರಿಲಯನ್ಸ್ನ ಪಾಲು ಶೇ 74.3ರಷ್ಟಿದೆ. ಇಂಡಿಯನ್ ಆಯಿಲ್ನ ಪಾರಾದೀಪ್ ಘಟಕದ ಮೂಲಕ 421.3 ಮಿಲಿಯನ್ ಡಾಲರ್ (ಶೇ 11.7), HPCL ಮತ್ತು ಇತರರು ನಿರ್ವಹಿಸುವ ಮುಂದ್ರಾ ಸಂಗ್ರಹಣಾ ಟರ್ಮಿನಲ್ಗಳ ಮೂಲಕ 405.8 ಮಿಲಿಯನ್ ಡಾಲರ್ (ಶೇ 11.3) ಹಾಗೂ ನಯಾರಾ ಎನರ್ಜಿಯ ವಡಿನಾರ್ ಘಟಕದ ಮೂಲಕ 95 ಮಿಲಿಯನ್ ಡಾಲರ್ (ಶೇ 2.7) ಮೌಲ್ಯದ ತೈಲ ಆಮದು ಮಾಡಿಕೊಳ್ಳಲಾಗಿದೆ' ಎಂದು ವರದಿ ತಿಳಿಸಿದೆ.
ಇದೇ ವೇಳೆ, ಪಶ್ಚಿಮ ಏಷ್ಯಾದಿಂದ ತೈಲ ಪೂರೈಕೆಯೂ ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ಇದರಲ್ಲಿ ಇರಾಕ್ನ ಭಾರವಾದ ಕಚ್ಚಾ ತೈಲದ ಶ್ರೇಣಿಗಳೂ ಸೇರಿವೆ. ಇವು ಭಾರತಕ್ಕೆ ಕಡಿಮೆ ಮತ್ತು ಅಗ್ಗದ ಸಾಗಣೆ ಮಾರ್ಗಗಳ ಅನುಕೂಲ ಒದಗಿಸುತ್ತವೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ವೆನೆಝುವೆಲಾ ತೈಲಕ್ಕೆ ಸ್ಪರ್ಧೆ ಮತ್ತಷ್ಟು ಕಷ್ಟಕರವಾಗಬಹುದು ಎಂದು ಕಟೋನಾ ಅಭಿಪ್ರಾಯಪಟ್ಟಿದ್ದಾರೆ. ಕಾಗದದ ಮೇಲೆ ರಿಯಾಯಿತಿ ದರದ ತೈಲ ಆಕರ್ಷಕವಾಗಿ ಕಾಣಿಸಬಹುದು. ಆದರೆ, ಹತ್ತಿರದ ಪ್ರದೇಶಗಳಿಂದ ಲಭ್ಯವಾಗುವ ಅದೇ ಗುಣಮಟ್ಟದ ತೈಲಕ್ಕೆ ಹೋಲಿಸಿದರೆ ಸಾಗಣೆ, ವಿಮೆ, ಹಣಕಾಸು ಅಥವಾ ಸಂಸ್ಕರಣಾ ವೆಚ್ಚ ಹೆಚ್ಚಿದ್ದರೆ ಆರ್ಥಿಕ ಲಾಭ ಕಡಿಮೆಯಾಗುತ್ತದೆ.
ರಷ್ಯಾ ತೈಲ ಪೂರೈಕೆಗೆ ವೆನೆಝುವೆಲಾ ಕಚ್ಚಾ ತೈಲ ಪರ್ಯಾಯವಲ್ಲ
ವೆನೆಝುವೆಲಾ ತೈಲ ಖರೀದಿಸುವಂತೆ ರುಬಿಯೊ ನೀಡಿರುವ ಪ್ರಸ್ತಾಪವು ಅಮೆರಿಕದ ಭೌಗೋಳಿಕ ರಾಜಕೀಯ ಹಿತಾಸಕ್ತಿ ಮತ್ತು ಪರ್ಯಾಯ ತೈಲ ಪೂರೈಕೆ ಮೂಲಗಳನ್ನು ಹುಡುಕುತ್ತಿರುವ ಭಾರತದ ಪ್ರಯತ್ನಗಳ ನಡುವಿನ ಹೊಂದಾಣಿಕೆಯನ್ನು ಪ್ರತಿಬಿಂಬಿಸುತ್ತದೆ. ವೆನೆಝುವೆಲಾ ಕಚ್ಚಾ ತೈಲಕ್ಕೆ ದೊಡ್ಡ ಮಾರುಕಟ್ಟೆ ಸೃಷ್ಟಿಸಲು ಅಮೆರಿಕ ಬಯಸಿದೆ. ಹೆಚ್ಚುತ್ತಿರುವ ಉತ್ಪಾದನೆಯನ್ನು ನಿರ್ವಹಿಸಲು ಭಾರತದ ಬೃಹತ್ ತೈಲ ಶುದ್ಧೀಕರಣ ಸಾಮರ್ಥ್ಯ ನೆರವಾಗಬಹುದು ಎಂಬುದು ಅದರ ನಿರೀಕ್ಷೆ. ಮತ್ತೊಂದೆಡೆ, ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಒತ್ತಡ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಗಲ್ಫ್ ರಾಷ್ಟ್ರಗಳ ತೈಲ ಪೂರೈಕೆಯಲ್ಲಿ ಉಂಟಾಗುತ್ತಿರುವ ಅನಿಶ್ಚಿತತೆಯ ನಡುವೆ ಭಾರತವು ಹೆಚ್ಚಿನ ಆಯ್ಕೆಗಳನ್ನು ಬಯಸುತ್ತದೆ.
ಭಾರತಕ್ಕೆ ರಷ್ಯಾದ ತೈಲ ಪೂರೈಕೆ
ವೆನೆಝುವೆಲಾ ತೈಲದಿಂದ ಭಾರತಕ್ಕೆ ರಷ್ಯಾದ ಬೃಹತ್ ಪ್ರಮಾಣದ ತೈಲ ಪೂರೈಕೆಯನ್ನು ಬದಲಿಸಲು ಸಾಧ್ಯವಿಲ್ಲ. ಅದರ ಪಾತ್ರ ಪೂರಕವಾಗಿಯೇ ಉಳಿಯುವ ಸಾಧ್ಯತೆಯಿದೆ ಎಂದು ತಜ್ಞರು ಮತ್ತು ವಿಶ್ಲೇಷಕರು ಎಚ್ಚರಿಸಿದ್ದಾರೆ. ರಷ್ಯಾದ ಪ್ರಮುಖ ಕಚ್ಚಾ ತೈಲವಾದ ಯುರಲ್ಸ್ (Urals), ವೆನೆಝುವೆಲಾದ ಮೆರೆ ತೈಲಕ್ಕಿಂತ ಭಿನ್ನವಾಗಿದ್ದು, ಭಾರತದ ವಿಶಾಲ ತೈಲ ಶುದ್ಧೀಕರಣ ಮೂಲಸೌಕರ್ಯಕ್ಕೆ ಹೆಚ್ಚು ಸೂಕ್ತವಾಗಿದೆ. ವಾಣಿಜ್ಯ ನಿಯಮಗಳೂ ಗಣನೀಯವಾಗಿ ಭಿನ್ನವಾಗಿವೆ.
ಇದಲ್ಲದೆ, ಕಚ್ಚಾ ತೈಲದ ಮೂಲಗಳನ್ನು ವೈವಿಧ್ಯಗೊಳಿಸುವ ಭಾರತದ ಪ್ರಯತ್ನ ವ್ಯಾಪಕವಾಗಿದೆ. ರಷ್ಯಾ ಸೇರಿದಂತೆ ಅಗ್ರ ಐದಾರು ಪೂರೈಕೆದಾರ ರಾಷ್ಟ್ರಗಳು ಭಾರತದ ತೈಲ ಆಮದಿನಲ್ಲಿ ದೊಡ್ಡ ಪಾಲು ಹೊಂದಿದ್ದರೂ, ದೇಶದ ತೈಲ ಆಮದು ಪಟ್ಟಿಯಲ್ಲಿ 40ಕ್ಕೂ ಹೆಚ್ಚು ಪೂರೈಕೆದಾರ ರಾಷ್ಟ್ರಗಳಿವೆ.
ವೆನೆಝುವೆಲಾ ತೈಲ ಆಮದನ್ನು ಹೆಚ್ಚಿಸಬೇಕೆಂಬ ಅಮೆರಿಕದ ಬಯಕೆಯನ್ನು, ರಷ್ಯಾದ ಕಚ್ಚಾ ತೈಲದಿಂದ ಭಾರತ ದೂರ ಸರಿಯಬೇಕೆಂಬ ಮತ್ತೊಂದು ಬಯಕೆಯೊಂದಿಗೆ ವಾಷಿಂಗ್ಟನ್ ಜೋಡಿಸಲು ಭಾರತ ಅವಕಾಶ ನೀಡಬಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ವೆನೆಝುವೆಲಾ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದಕ್ಕೂ ರಷ್ಯಾದ ತೈಲ ಪೂರೈಕೆಯಿಂದ ದೂರ ಸರಿಯುವುದಕ್ಕೂ ನಡುವೆ ಭಾರತವು ಸ್ಪಷ್ಟ ವ್ಯತ್ಯಾಸ ಗುರುತಿಸಬೇಕು ಎಂದು GTRI ಹೇಳಿದೆ.
'ರಷ್ಯಾದ ತೈಲ ಖರೀದಿಯನ್ನು ಕಡಿಮೆ ಮಾಡುವ ಯಾವುದೇ ಬದ್ಧತೆಯಿಲ್ಲದೆ, ಕಚ್ಚಾ ತೈಲ ಪೂರೈಕೆಯನ್ನು ವೈವಿಧ್ಯಗೊಳಿಸುವ ಅವಕಾಶವಾಗಿ ಭಾರತವು ಅಮೆರಿಕದ ಪ್ರಸ್ತಾಪವನ್ನು ವ್ಯವಹಾರಿಕವಾಗಿ ಪರಿಗಣಿಸಬೇಕು ಎಂಬುದು ನನ್ನ ಅಭಿಪ್ರಾಯ. ಜಾಗತಿಕ ಪೂರೈಕೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಷ್ಯಾದ ತೈಲದ ಕುರಿತ ಅಮೆರಿಕದ ನಿಲುವು ಕೂಡ ಕ್ರಮೇಣ ಬದಲಾಗುತ್ತಿದೆ. ಭಾರತ ಸೇರಿದಂತೆ ರಷ್ಯಾದ ಪ್ರಮುಖ ಇಂಧನ ಖರೀದಿದಾರರ ಮೇಲೆ ಶೇ. 100ರವರೆಗಿನ ಸಂಭಾವ್ಯ ಸುಂಕ ವಿಧಿಸುವ ಪ್ರಸ್ತಾಪವನ್ನು ವಾಷಿಂಗ್ಟನ್ ಇತ್ತೀಚೆಗೆ ಸಡಿಲಗೊಳಿಸಿದೆ. ಜತೆಗೆ, ವೆನೆಝುವೆಲಾ ತೈಲದ ಹೆಚ್ಚಿನ ಖರೀದಿಯನ್ನು ಪ್ರೋತ್ಸಾಹಿಸುತ್ತಿದೆ. ರಷ್ಯಾದ ರಫ್ತುಗಳನ್ನು ನಿರ್ಬಂಧಿಸುವುದಕ್ಕಿಂತ ತೈಲ ಪೂರೈಕೆಯ ಹರಿವನ್ನು ಮುಂದುವರಿಸುವುದು ಮತ್ತು ಮತ್ತೊಂದು ಬೆಲೆ ಏರಿಕೆಯ ಆಘಾತವನ್ನು ತಡೆಯುವುದು ಹೆಚ್ಚು ತುರ್ತು ಆದ್ಯತೆಗಳಾಗಿವೆ ಎಂಬುದನ್ನು ಇದು ಸೂಚಿಸುತ್ತದೆ' ಎಂದು ಕಟೋನಾ ಹೇಳಿದ್ದಾರೆ.
ಆದರೂ, ವಾಷಿಂಗ್ಟನ್ ಮತ್ತು ಭಾರತ ತಮ್ಮ ವ್ಯಾಪಕ ಆರ್ಥಿಕ ಸಂಬಂಧವನ್ನು ಮುಂದುವರಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ರಷ್ಯಾದ ತೈಲದ ವಿಚಾರ ಅತ್ಯಂತ ಸೂಕ್ಷ್ಮವಾಗಿದೆ. ಅಮೆರಿಕವು ಭಾರತವನ್ನು ಕಾರ್ಯತಂತ್ರದ ಮಿತ್ರರಾಷ್ಟ್ರವೆಂದು ಪರಿಗಣಿಸಿದ್ದು, ಉಭಯ ದೇಶಗಳು ವ್ಯಾಪಾರ ಒಪ್ಪಂದಕ್ಕೆ ಹತ್ತಿರವಾಗಿವೆ. ಭಾರತದ ಮೇಲೆ ದಂಡನಾತ್ಮಕ ಸುಂಕಗಳು ಬೀರಬಹುದಾದ ಪರಿಣಾಮವನ್ನು ಪರಿಗಣಿಸಿಯೇ ರಷ್ಯಾದ ವಿರುದ್ಧದ ಹೊಸ ನಿರ್ಬಂಧಗಳ ಕಾನೂನನ್ನು ಜಾರಿಗೊಳಿಸುವ ನಿರ್ಧಾರವನ್ನು ಕೈಬಿಡಲಾಗಿದೆ ಎಂದು ರುಬಿಯೊ ತಿಳಿಸಿದ್ದಾರೆ.
ಉಕ್ರೇನ್ ಯುದ್ಧ ಆರಂಭವಾದ ಬಳಿಕ ಭಾರತದ ರಷ್ಯಾ ತೈಲ ಆಮದು ಗಣನೀಯವಾಗಿ ಹೆಚ್ಚಾಯಿತು. 2022ರ ಫೆಬ್ರುವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಬಳಿಕ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಕಚ್ಚಾ ತೈಲದಿಂದ ದೂರ ಉಳಿದವು. ಈ ಹಿನ್ನೆಲೆಯಲ್ಲಿ, ರಷ್ಯಾ ತೈಲ ಖರೀದಿಸಲು ಮುಂದಾದ ರಾಷ್ಟ್ರಗಳಿಗೆ ಮಾಸ್ಕೋ ರಿಯಾಯಿತಿ ನೀಡಲು ಆರಂಭಿಸಿತು. ಭಾರತೀಯ ತೈಲ ಶುದ್ಧೀಕರಣ ಘಟಕಗಳು ಈ ಅವಕಾಶವನ್ನು ತಕ್ಷಣವೇ ಬಳಸಿಕೊಂಡವು. ಇದರ ಪರಿಣಾಮವಾಗಿ, ಹಿಂದೆ ಭಾರತದ ತೈಲ ಪೂರೈಕೆಯಲ್ಲಿ ಅಲ್ಪ ಪಾಲು ಹೊಂದಿದ್ದ ರಷ್ಯಾ, ದೇಶದ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿತು.
ಸರಕು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ನೀಡಿರುವ ಟ್ಯಾಂಕರ್ ದತ್ತಾಂಶದ ಪ್ರಕಾರ, ಸೆಪ್ಟೆಂಬರ್ನಲ್ಲಿ ಭಾರತವು ದಿನಕ್ಕೆ 1.9 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಆ ತಿಂಗಳ ಭಾರತದ ಒಟ್ಟು ತೈಲ ಆಮದಿನ ಶೇ 35ಕ್ಕಿಂತ ಹೆಚ್ಚಾಗಿದೆ. ಹಿಂದಿನ ತಿಂಗಳುಗಳಲ್ಲಿ ರಷ್ಯಾದಿಂದ ಆಮದಾದ ಪ್ರಮಾಣ ಇನ್ನೂ ಹೆಚ್ಚಿತ್ತು. ಜುಲೈನಲ್ಲಿ ಅದು ದಿನಕ್ಕೆ 2.8 ಮಿಲಿಯನ್ ಬ್ಯಾರೆಲ್ಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಆ ಸಂದರ್ಭದಲ್ಲಿ ಭಾರತದ ಒಟ್ಟು ತೈಲ ಆಮದಿನ ಅರ್ಧದಷ್ಟು ಪಾಲು ರಷ್ಯಾದ ಕಚ್ಚಾ ತೈಲದ್ದಾಗಿತ್ತು.
'ಅಮೆರಿಕವೇ ಸ್ವತಃ ರಷ್ಯಾದ ಡೀಸೆಲ್ ಖರೀದಿಸುತ್ತಿರುವಾಗ, ಭಾರತವು ರಷ್ಯಾದ ತೈಲದಿಂದ ದೂರ ಸರಿಯುವಂತೆ ವಾಷಿಂಗ್ಟನ್ ಒತ್ತಡ ಹೇರುತ್ತಿರುವುದನ್ನು ಸೂಕ್ತವಾಗಿ ಪರಿಶೀಲಿಸಬೇಕಿದೆ. ಭಾರತವು ರಷ್ಯಾದ ಪೂರೈಕೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕೆಂದು ನಿರೀಕ್ಷಿಸುತ್ತಿರುವಾಗ, ಅಮೆರಿಕದ ಸ್ವಂತ ಇಂಧನ ಅಗತ್ಯಗಳು ರಷ್ಯಾದ ಖರೀದಿಯನ್ನು ಹೇಗೆ ಸಮರ್ಥಿಸುತ್ತವೆ ಎಂಬುದನ್ನು ವಾಷಿಂಗ್ಟನ್ ವಿವರಿಸಬೇಕು. ಭಾರತದ ತೈಲ ಶುದ್ಧೀಕರಣ ಸಾಮರ್ಥ್ಯ ಈಗಾಗಲೇ ಸಾಬೀತಾಗಿದೆ. ಅಮೆರಿಕದ ಒತ್ತಡದಿಂದಾಗಿ ಅದರ ತೈಲ ಆಮದು ಮೂಲಗಳು ಬದಲಾಗುತ್ತಿರಬಹುದು. ರುಬಿಯೊ ಅವರ ಪ್ರಸ್ತಾಪದಡಿ ಹೆಚ್ಚುವರಿ ಬದ್ಧತೆಗಳನ್ನು ಸ್ವೀಕರಿಸುವ ಮೊದಲು ಭಾರತವು ಪೂರೈಕೆಯ ವಿಶ್ವಾಸಾರ್ಹತೆ, ಹೂಡಿಕೆ ಬಾಧ್ಯತೆಗಳು, ಬೆಲೆ ನಿಗದಿ, ವಾಣಿಜ್ಯ ಲಾಭಗಳು ಮತ್ತು ಅಮೆರಿಕದ ಬೇಡಿಕೆಯ ಅವಧಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು' ಎಂದು GTRI ತಿಳಿಸಿದೆ.
ಸೌಜನ್ಯ: indianexpress.com