×
Ad

FIFA World Cup 2026 | ಗೋಲಿಲ್ಲದ ರಾತ್ರಿ; ಪೋರ್ಚುಗಲ್‌ನ ಅತ್ಯದ್ಭುತ ತಂಡದಿಂದ ನಿರಾಶಾದಾಯಕ ಪ್ರದರ್ಶನ

Update: 2026-06-28 18:17 IST

ಕ್ರಿಸ್ಟಿಯಾನೊ ರೊನಾಲ್ಡೊ | Photo Credit: PTI

'ಗ್ರೂಪ್ K' ಯ ನಿರ್ಣಾಯಕ ಹಂತದ ಪಂದ್ಯವು 0-0 ಅಂತರದಲ್ಲಿ ಕೊನೆಗೊಂಡಿತು. ದೀರ್ಘಾವಧಿಯವರೆಗೆ ಉತ್ತಮ ಫುಟ್‌ಬಾಲ್ ಆಡಿದ ಕೊಲಂಬಿಯಾ ಅರ್ಹವಾಗಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು.

ಕೆಲ ದಿನಗಳ ಹಿಂದೆಯಷ್ಟೇ ಆರು ವಿಭಿನ್ನ ವಿಶ್ವಕಪ್‌ ಗಳಲ್ಲಿ ಗೋಲು ಗಳಿಸಿದ ಮೊದಲ ಫುಟ್‌ಬಾಲ್ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದ ಕ್ರಿಸ್ಟಿಯಾನೊ ರೊನಾಲ್ಡೊ, ಟಿವಿ ಕ್ಯಾಮೆರಾಗಳ ಮುಂದೆ ತಮ್ಮ ಹಿರಿಮೆಯನ್ನು ಪ್ರದರ್ಶಿಸಿದ್ದರು. ಈಗಲೂ ಅವರು ಶ್ರೇಷ್ಠ ಆಟಗಾರನೆಂಬ ಭಾವನೆಯನ್ನು ಜನರಲ್ಲಿ ಮೂಡಿಸಿದ್ದರು. ಆದರೆ ಶನಿವಾರ ರಾತ್ರಿ ಮಿಯಾಮಿಯಲ್ಲಿ ರೊನಾಲ್ಡೊ ಮತ್ತೆ ಗೋಲು ಗಳಿಸದೆ ಪಂದ್ಯ ಮುಗಿಸಿದರು.

'ಗ್ರೂಪ್ K'ಯ ನಿರ್ಣಾಯಕ ಹಂತದ ಪಂದ್ಯವು 0-0 ಅಂತರದಲ್ಲಿ ಕೊನೆಗೊಂಡಿತು. ದೀರ್ಘಾವಧಿಯವರೆಗೆ ಉತ್ತಮ ಫುಟ್‌ಬಾಲ್ ಆಡಿದ ಕೊಲಂಬಿಯಾ ಅರ್ಹವಾಗಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು. ಪೋರ್ಚುಗಲ್ ತನ್ನ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಗಳಿಸಿ 32ನೇ ಹಂತದಲ್ಲಿ ಕ್ರೊವೇಷಿಯಾವನ್ನು ಎದುರಿಸಲಿದೆ. ಅದೇ ಸಂದರ್ಭದಲ್ಲಿ ಕೊಲಂಬಿಯಾ ಘಾನಾ ವಿರುದ್ಧ ಆಡುವ ಅವಕಾಶ ಗಳಿಸಿತು. ಮತ್ತೊಂದೆಡೆ, ಡಿಆರ್ ಕಾಂಗೋ ತಂಡವು ಉಜ್ಬೇಕಿಸ್ತಾನ್ ವಿರುದ್ಧ ಆರಂಭದಲ್ಲಿ ಒಂದು ಗೋಲಿನಿಂದ ಹಿಂದಿದ್ದರೂ, ಕೊನೆಗೆ 3-1ರಿಂದ ಗೆದ್ದು ಅತ್ಯುತ್ತಮ ಮೂರನೇ ಸ್ಥಾನದ ತಂಡವಾಗಿ 32ನೇ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಅವಕಾಶ ಗಳಿಸಿತು. 1974ರ ನಂತರ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಕಾಂಗೋ ಮುಂದಿನ ಹಂತಕ್ಕೆ ಪ್ರವೇಶಿಸಿದೆ.

ಗುಂಪಿನಲ್ಲಿ ಬಲಿಷ್ಠ ಎದುರಾಳಿಯನ್ನು ಎದುರಿಸಿದ್ದು ಇದೇ ಮೊದಲ ಬಾರಿ. ಆದರೆ ಕೊಲಂಬಿಯಾ ವಿರುದ್ಧ ಪೋರ್ಚುಗಲ್ ಸಾಧಾರಣ ಆಟ ಪ್ರದರ್ಶಿಸಿತು. ಪೋರ್ಚುಗಲ್ ತಂಡದ ಪ್ರದರ್ಶನ ಕಳವಳಕಾರಿ ಸಂಗತಿಯನ್ನು ಸೂಚಿಸುತ್ತಿದೆ. ಕೊಲಂಬಿಯಾ ವಿರುದ್ಧ ಡ್ರಾ ಸಾಧಿಸಲು ಪೋರ್ಚುಗಲ್‌ನ ಗೋಲ್‌ಕೀಪರ್ ಡಿಯಾಗೊ ಕೋಸ್ಟಾ ಅವರ ಅದ್ಭುತ ಪ್ರದರ್ಶನವೇ ಪ್ರಮುಖ ಕಾರಣವಾಯಿತು. ಅತ್ತ ಕೊಲಂಬಿಯಾ ತಂಡಕ್ಕೆ ಗೋಲ್‌ಪೋಸ್ಟ್ ಎಲ್ಲಿದೆ ಎನ್ನುವುದೇ ಮರೆತಂತಿತ್ತು. ಕೊಲಂಬಿಯಾ ತಂಡ 24 ಬಾರಿ ಗೋಲಿನತ್ತ ಪ್ರಯತ್ನಿಸಿದರೆ, ಪೋರ್ಚುಗಲ್ ಕೇವಲ ನಾಲ್ಕು ಪ್ರಯತ್ನಗಳನ್ನು ಮಾಡಿತು. ಒಟ್ಟು ಪಂದ್ಯದಲ್ಲಿ ಕೋಸ್ಟಾ ಆರು ಸೇವ್‌ಗಳನ್ನು ಮಾಡಿದರು.

ಪೋರ್ಚುಗಲ್ ತಂಡ ತಾಂತ್ರಿಕ ಗುಣಮಟ್ಟದಿಂದ ತುಂಬಿ ತುಳುಕುತ್ತಿದೆ. ಬ್ರೂನೋ ಫೆರ್ನಾಂಡಿಸ್ ಯುರೋಪ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ವಿಟಿನ್ಹಾ ಪ್ಯಾರಿಸ್ ಸೇಂಟ್-ಜರ್ಮೇನ್ ತಂಡದ ಆಟವನ್ನು ನಿಯಂತ್ರಿಸುತ್ತಾರೆ. ರೂಬೆನ್ ನೆವ್ಸ್ ತಂಡಕ್ಕೆ ಹಿಡಿತ ಮತ್ತು ಅನುಭವ ತರುತ್ತಾರೆ. ಜಾವೋ ನೆವ್ಸ್ ಜಾಗತಿಕ ಫುಟ್‌ಬಾಲ್‌ನ ಉದಯೋನ್ಮುಖ ಮಿಡ್‌ಫೀಲ್ಡರ್. ಜಾವೋ ಫೆಲಿಕ್ಸ್ ಮತ್ತು ಪೆಡ್ರೊ ನೆಟೊ ದಾಳಿಯಲ್ಲಿ ಬಲಶಾಲಿಗಳಾಗಿದ್ದಾರೆ. ಹೀಗಾಗಿ ಪೋರ್ಚುಗಲ್ ಪಂದ್ಯಾವಳಿಯಲ್ಲೇ ಅತ್ಯಂತ ಆಕ್ರಮಣಕಾರಿ ತಂಡವಾಗಬೇಕಿತ್ತು.

ಬದಲಾಗಿ, ಆಟಗಾರರು ಜೊತೆಯಾಗಿ ಆಡಬೇಕಾದ ತಂಡಕ್ಕಿಂತ ಒಬ್ಬರಿಗೊಬ್ಬರು ಅಪರಿಚಿತರಂತೆ ಕಂಡುಬಂದರು. ಅವರ ಪಾಸ್‌ಗಳಲ್ಲಿ ಲಯವಿರಲಿಲ್ಲ. ಸ್ಪಷ್ಟ ಆಕ್ರಮಣಕಾರಿ ಮಾದರಿಗಳಿರಲಿಲ್ಲ. ಮಿಡ್‌ಫೀಲ್ಡ್ ಮತ್ತು ದಾಳಿಯ ನಡುವೆ ಸ್ಥಿರವಾದ ಚಲನೆಯ ಕೊರತೆ ಇತ್ತು. ಪ್ರತಿ ಬಾರಿ ಚೆಂಡು ಸಿಕ್ಕಾಗ ಆಟಗಾರರು ನಿಂತು ಅದನ್ನು ಮುಂದೆ ಎಲ್ಲಿಗೆ ಸಾಗಿಸಬೇಕು ಎಂದು ಯೋಚಿಸುತ್ತಿರುವಂತೆ ಕಾಣುತ್ತಿತ್ತು.

ಉಜ್ಬೇಕಿಸ್ತಾನ್ ವಿರುದ್ಧ ಆಟಗಾರರು ರೊನಾಲ್ಡೊ ಅವರ ಶಕ್ತಿಗೆ ಅನುಗುಣವಾಗಿ ಆಡಿದ್ದರು. ವಿಶಾಲ ಪ್ರದೇಶಗಳಲ್ಲಿ ನಿರಂತರವಾಗಿ ದಾಳಿ ನಡೆಸಿದರು, ವೇಗವಾಗಿ ಕ್ರಾಸ್‌ಗಳನ್ನು ನೀಡಿದರು ಮತ್ತು ಪೆನಾಲ್ಟಿ ಬಾಕ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಲು ಅವಕಾಶ ಮಾಡಿಕೊಟ್ಟರು. ಆದರೆ ಕೊಲಂಬಿಯಾ ವಿರುದ್ಧ ಇಂತಹ ಆಟ ಕಂಡುಬರಲಿಲ್ಲ. ರೊನಾಲ್ಡೊ ಕೆಲವು ಪ್ರಯತ್ನಗಳನ್ನು ಮಾಡಿದರೂ, ಕಳಪೆ ಸ್ಥಾನಗಳಿಂದ ಗೋಲಿನತ್ತ ಹೊಡೆದರು.

ಆಟಗಾರರು ಪೂರ್ವಾಭ್ಯಾಸ ಮಾಡಿದ ಯೋಜನೆಯನ್ನು ಕಾರ್ಯಗತಗೊಳಿಸುವ ಬದಲು, ಚೆಂಡು ಸಿಕ್ಕ ನಂತರ ಏನು ಮಾಡಬೇಕು ಎಂದು ಯೋಚಿಸುತ್ತಿರುವಂತೆ ನಿಜವಾಗಿಯೂ ಭಾಸವಾಯಿತು. ಪ್ರತಿಭಾವಂತ ಆಟಗಾರರಿಂದ ಕೂಡಿರುವ ಪೋರ್ಚುಗಲ್ ತಂಡ ತನ್ನ ಬೆಂಬಲಿಗರನ್ನು ನಿರಾಶೆಗೊಳಿಸುತ್ತಿದೆ.

ಕ್ರೊವೇಷಿಯಾ ವಿರುದ್ಧ ಪೋರ್ಚುಗಲ್ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಆದರೆ ಕ್ರೊವೇಷಿಯಾದ ಲೂಕಾ ಮೊಡ್ರಿಕ್ ಮತ್ತು ಮ್ಯಾಟೆಯೊ ಕೊವಾಚಿಚ್ ಅವರನ್ನೊಳಗೊಂಡ ಮಿಡ್‌ಫೀಲ್ಡ್, ಕೊಲಂಬಿಯಾಕ್ಕಿಂತ ಕಠಿಣ ಸವಾಲುಗಳನ್ನು ಒಡ್ಡಬಹುದು. ಪೋರ್ಚುಗಲ್ ಮತ್ತೆ ಪಂದ್ಯದ ನಿಯಂತ್ರಣ ಕಳೆದುಕೊಂಡರೆ, ರೊನಾಲ್ಡೊ ಮತ್ತೊಮ್ಮೆ ನಾಕೌಟ್ ಹಂತದಲ್ಲಿ ನಿರಾಸೆ ಅನುಭವಿಸಬೇಕಾಗಬಹುದು.

ಮಾಹಿತಿ ಕೃಪೆ: India Today

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News