×
Ad

Venezuelaದಲ್ಲಿ ವಿನಾಶಕಾರಿ ಭೂಕಂಪಗಳು ಪದೇ ಪದೇ ಉಂಟಾಗಲು ಕಾರಣವೇನು?

Update: 2026-06-27 07:10 IST

ವೆನೆಝುವೆಲಾದಲ್ಲಿ ಬುಧವಾರ ರಾತ್ರಿ ಕೇವಲ 39 ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಭಾರೀ ನಾಶ-ನಷ್ಟವನ್ನುಂಟು ಮಾಡಿದ್ದು, ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕಟ್ಟಡಗಳು ಮತ್ತು ಮೇಲ್ಛಾವಣಿಗಳು ಕುಸಿದುಬಿದ್ದಿವೆ. ಜನರು ಸುರಕ್ಷಿತ ಆಶ್ರಯಕ್ಕಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. ಸಿಲುಕಿರುವ ಜನರನ್ನು ರಕ್ಷಿಸಲು ತುರ್ತು ರಕ್ಷಣಾ ತಂಡಗಳು ಹಗಲಿರುಳು ಶ್ರಮಿಸುತ್ತಿದ್ದರೂ, ಜಾಗತಿಕ ನಿಗಾ ಸಂಸ್ಥೆಗಳು ಅಲ್ಲಿನ ಭೀಕರ ಪರಿಸ್ಥಿತಿಯನ್ನು ಬಿಂಬಿಸಿವೆ.

"ಹೆಚ್ಚಿನ ಸಂಖ್ಯೆಯ ಸಾವು-ನೋವುಗಳು ಮತ್ತು ವ್ಯಾಪಕ ಹಾನಿ ಸಂಭವಿಸುವ ಸಾಧ್ಯತೆಯಿದೆ" ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೆ (USGS) ಎಚ್ಚರಿಸಿದೆ. ಈ ಪ್ರದೇಶದಲ್ಲಿ ಕಳೆದ ಒಂದು ಶತಮಾನದಲ್ಲೇ ಕಂಡಿರದ ಅತ್ಯಂತ ಪ್ರಬಲ ಭೂಕಂಪಗಳಿವು ಆಗಿದ್ದು, "ಅತಿ ಹೆಚ್ಚು ಸಂಖ್ಯೆಯ ಸಾವುಗಳು ಸಂಭವಿಸಿವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ.

ಯುಎಸ್‌ಜಿಎಸ್‌ನ ಇತ್ತೀಚಿನ ಅಂದಾಜಿನ ಪ್ರಕಾರ, ಸಾವಿನ ಸಂಖ್ಯೆ 1,000 ರಿಂದ 10,000 ರಷ್ಟಾಗುವ ಸಾಧ್ಯತೆ ಶೇಕಡಾ 39 ರಷ್ಟಿದ್ದರೆ, ಅದು 1,00,000ರ ಗಡಿಯನ್ನು ಮುಟ್ಟುವ ಸಾಧ್ಯತೆಯೂ ಶೇಕಡಾ 37 ರಷ್ಟಿದೆ ಎಂದು ಎಚ್ಚರಿಸಲಾಗಿದೆ.

ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆಯಲು ವೆನೆಝುವೆಲಾ ನಡೆಸಿದ ಯುದ್ಧದ 1821ರ ನಿರ್ಣಾಯಕ ಹೋರಾಟದ ನೆನಪಿಗಾಗಿ ಬುಧವಾರ ಸಾರ್ವಜನಿಕ ರಜೆ ಇದ್ದಿದ್ದರಿಂದ, ಭೂಕಂಪ ಸಂಭವಿಸಿದಾಗ ವೆನೆಝುವೆಲಾದ ಬಹುತೇಕ ನಾಗರಿಕರು ತಮ್ಮ ಮನೆಗಳಲ್ಲೇ ಇದ್ದರು.

ಯುಎಸ್‌ಜಿಎಸ್‌ನ ಮಾಹಿತಿಯ ಪ್ರಕಾರ, ಈ ಅವಳಿ ಭೂಕಂಪಗಳು ಕಾರಕಾಸ್‌ನ ಪಶ್ಚಿಮಕ್ಕಿರುವ ಯಾರಾಕುಯ್ ರಾಜ್ಯದಲ್ಲಿ ಸಂಭವಿಸಿವೆ. ಮೊದಲನೆಯದಾಗಿ, 7.2 ತೀವ್ರತೆಯ ಭೂಕಂಪವು ನೆಲದಡಿಯಿಂದ 22 ಕಿಲೋಮೀಟರ್ (14 ಮೈಲಿ) ಆಳದಲ್ಲಿ ಸಂಭವಿಸಿತು. ಇದಾಗಿ ಕೇವಲ ಒಂದು ನಿಮಿಷದೊಳಗೆ, ಅದಕ್ಕಿಂತಲೂ ಪ್ರಬಲವಾದ 7.5 ತೀವ್ರತೆಯ ಮತ್ತೊಂದು ಭೂಕಂಪವು ಸುಮಾರು 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಸಂಭವಿಸಿತು.

ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ವೆನೆಝುವೆಲಾ, ಜಪಾನ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದ್ದು, ಈ ಘಟನೆಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂದು ಪ್ರಪಂಚದಾದ್ಯಂತದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವೆನೆಝುವೆಲಾದಲ್ಲಿ ಟೆಕ್ಟಾನಿಕ್ ಪ್ಲೇಟ್‌ಗಳ ಸಂಘರ್ಷ

ವೆನೆಜುವೆಲಾಕ್ಕೆ ಇಷ್ಟೊಂದು ಭಾರಿ ಹೊಡೆತ ಬೀಳಲು ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು, ಅದರ ಭೌಗೋಳಿಕತೆಯನ್ನು ಗಮನಿಸಬೇಕು. ವೆನೆಝುವೆಲಾ ದಕ್ಷಿಣ ಅಮೆರಿಕಾದ ಉತ್ತರ ಕರಾವಳಿಯಲ್ಲಿದೆ. ಅದರ ಬಹುತೇಕ ಪ್ರಮುಖ ಭೂಭಾಗವು ದಕ್ಷಿಣ ಅಮೆರಿಕಾ ಪ್ಲೇಟ್‌ನಲ್ಲಿ ಸುರಕ್ಷಿತವಾಗಿದ್ದರೂ, ಅದರ ಉತ್ತರ ಕರಾವಳಿ ಮತ್ತು ಕೆರಿಬಿಯನ್ ದ್ವೀಪಗಳು ಕೆರಿಬಿಯನ್ ಮತ್ತು ದಕ್ಷಿಣ ಅಮೆರಿಕಾ ಪ್ಲೇಟ್‌ಗಳು ಸಂಧಿಸುವ ಹಾಗೂ ಪರಸ್ಪರ ಘರ್ಷಣೆಗೆ ಒಳಗಾಗುವ ಅತ್ಯಂತ ಸಕ್ರಿಯ ಭೌಗೋಳಿಕ ಗಡಿಯ ಮೇಲೆಯೇ ಇವೆ.

ಈ ಜಟಿಲವಾದ ಟೆಕ್ಟಾನಿಕ್ ರಚನೆಯು ಭೂಮಿಯ ಮೇಲ್ಪದರದ ಮೇಲೆ ನಿರಂತರ ಒತ್ತಡವನ್ನು ಉಂಟುಮಾಡುತ್ತದೆ. ವಾಸ್ತವವಾಗಿ, ವೆನೆಝುವೆಲಾದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 80ರಷ್ಟು ಜನರು ಈ ಸಕ್ರಿಯ ಭೂಕಂಪನ ವಲಯಗಳಲ್ಲೇ ವಾಸಿಸುತ್ತಿದ್ದಾರೆ. ಇದು ಬೃಹತ್ ಸಂಖ್ಯೆಯ ಜನರನ್ನು ನೇರ ಅಪಾಯಕ್ಕೆ ದೂಡಿದೆ.

ನೆಲದಡಿಯ ಈ ಅಗಾಧ ಒತ್ತಡವು ಸಾಮಾನ್ಯವಾಗಿ ಬೊಕೊನೊ ಫಾಲ್ಟ್‌ನಂತಹ ಪ್ರಮುಖ ಸೀಳುರೇಖೆಗಳ ಮೂಲಕ ಬಿಡುಗಡೆಯಾಗುತ್ತದೆ. ಈ ಬೊಕೊನೊ ಫಾಲ್ಟ್ ಶಕ್ತಿಶಾಲಿ ಭೂಕಂಪಗಳನ್ನು ಉಂಟುಮಾಡುವುದಕ್ಕೆ ಹೆಸರುವಾಸಿಯಾಗಿದೆ. ಪ್ಲೇಟ್‌ಗಳ ಚಲನೆಯ ಬಗ್ಗೆ ಹೇಳುವುದಾದರೆ, ಕೆರಿಬಿಯನ್ ಪ್ಲೇಟ್ ದಕ್ಷಿಣ ಅಮೆರಿಕಾ ಪ್ಲೇಟ್‌ಗೆ ಹೋಲಿಸಿದರೆ ಪ್ರತಿ ವರ್ಷ ಸುಮಾರು 20 ಮಿಲಿಮೀಟರ್‌ಗಳಷ್ಟು ಪೂರ್ವಕ್ಕೆ ಚಲಿಸುತ್ತದೆ. ಹತ್ತಿರದ ಟ್ರಿನಿಡಾಡ್ ದ್ವೀಪದಲ್ಲಿನ ಸೀಳುರೇಖೆಯೊಂದರ ಜಾರುವಿಕೆಯು ಈ ತೀವ್ರ ಚಲನೆಯ ಸುಮಾರು ಶೇಕಡಾ 70ರಷ್ಟನ್ನು ನಿಯಂತ್ರಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ವೆನೆಝುವೆಲಾದಲ್ಲಿನ ಭೂಕಂಪಗಳು ಇಷ್ಟೊಂದು ವಿನಾಶಕಾರಿಯಾಗಲು ಮತ್ತೊಂದು ಕಾರಣವೆಂದರೆ ಅವುಗಳ ಆಳ. ಇಲ್ಲಿ ಸಂಭವಿಸುವ ಹೆಚ್ಚಿನ ಭೂಕಂಪಗಳು "ಕಡಿಮೆ ಆಳದ" ಭೂಕಂಪಗಳಾಗಿವೆ. ಅಂದರೆ, ಇವು ಭೂಮಿಯ ಮೇಲ್ಮೈಯಿಂದ ಕೇವಲ 15ರಿಂದ 20 ಕಿಲೋಮೀಟರ್‌ಗಿಂತಲೂ ಕಡಿಮೆ ಆಳದಲ್ಲಿ ಸಂಭವಿಸುತ್ತವೆ. ಒಂದೇ ತೀವ್ರತೆಯ ಎರಡು ಭೂಕಂಪಗಳಲ್ಲಿ, ಆಳದಲ್ಲಿ ಸಂಭವಿಸುವ ಭೂಕಂಪಕ್ಕಿಂತ ಭೂಮಿಯ ಮೇಲ್ಪದರಕ್ಕೆ ಹತ್ತಿರವಾಗಿ ಸಂಭವಿಸುವ ಭೂಕಂಪವು ಮೇಲ್ಮೈಯಲ್ಲಿ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಏಕೆಂದರೆ ಭೂಕಂಪವು ನಮ್ಮ ಹತ್ತಿರದಲ್ಲೇ ಸಂಭವಿಸುವುದರಿಂದ, ಅದರ ಭೂಕಂಪನ ತರಂಗಗಳು ನಗರಗಳು ಮತ್ತು ಪಟ್ಟಣಗಳನ್ನು ತಲುಪುವ ಮೊದಲು ಅವುಗಳ ತೀವ್ರತೆ ಕಡಿಮೆಯಾಗಲು ಅಗತ್ಯವಿರುವಷ್ಟು ಸಮಯ ಅಥವಾ ದೂರ ಸಿಗುವುದಿಲ್ಲ.

ಭೂಕಂಪ ಸಂಭವಿಸಲು ಕಾರಣವೇನು?

ನಾವು ಭೂಕಂಪಗಳ ಬಗ್ಗೆ ಕೇಳಿದಾಗಲೆಲ್ಲ "ಪ್ಲೇಟ್‌ಗಳು" (ಟೆಕ್ಟಾನಿಕ್ ಪ್ಲೇಟ್‌ಗಳು) ಎಂಬ ಪದವನ್ನು ಕೇಳಿರುತ್ತೇವೆ. ನಮ್ಮ ಭೂಮಿಯ ಗಟ್ಟಿಯಾದ ಹೊರಪದರವು ವಾಸ್ತವವಾಗಿ ಬೃಹತ್ ಗಾತ್ರದ ಬಂಡೆಗಳ ಸ್ಲ್ಯಾಬ್‌ಗಳಾಗಿ ಒಡೆದಿದೆ. ಇವುಗಳನ್ನು ಟೆಕ್ಟಾನಿಕ್ ಪ್ಲೇಟ್‌ಗಳು ಎಂದು ಕರೆಯಲಾಗುತ್ತದೆ. (ಇಂತಹ ಒಟ್ಟು 15 ಪ್ರಮುಖ ಮತ್ತು ಸಣ್ಣ ಪ್ಲೇಟ್‌ಗಳಿವೆ.) ಈ ಬೃಹತ್ ಪ್ಲೇಟ್‌ಗಳು ಅವುಗಳ ಕೆಳಗಿರುವ 'ಮ್ಯಾಂಟಲ್' ಎಂದು ಕರೆಯಲಾಗುವ ಅರೆದ್ರವ ರೂಪದ, ಅತ್ಯಂತ ಬಿಸಿಯಾದ ಬಂಡೆಗಳ ಪದರದ ಮೇಲೆ ತೇಲುತ್ತಿರುತ್ತವೆ.

ಈ ಪ್ಲೇಟ್‌ಗಳು ಒಂದೇ ಕಡೆ ಸ್ಥಿರವಾಗಿ ಇರುವುದಿಲ್ಲ. ಅವು ನಿರಂತರವಾಗಿ ಚಲಿಸುತ್ತಿರುತ್ತವೆ, ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ ಮತ್ತು ಪರಸ್ಪರ ದೂರ ಸರಿಯುತ್ತವೆ. ಈ ನಿಧಾನಗತಿಯ ಆದರೆ ಅತ್ಯಂತ ಪ್ರಬಲವಾದ ಚಲನೆಯೇ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಭವ್ಯವಾದ ಪರ್ವತಗಳನ್ನು ಸೃಷ್ಟಿಸುತ್ತದೆ ಮತ್ತು ಭೂಕಂಪ ಹಾಗೂ ಜ್ವಾಲಾಮುಖಿ ಸ್ಫೋಟದಂತಹ ತೀವ್ರ ಭೌಗೋಳಿಕ ಘಟನೆಗಳಿಗೂ ಕಾರಣವಾಗುತ್ತದೆ.

ಪೆಸಿಫಿಕ್ ರಿಂಗ್: ವಿಶ್ವದ ಅತ್ಯಂತ ಸಕ್ರಿಯ ವಲಯ

ಜಾಗತಿಕ ಭೂಕಂಪಗಳ ಪ್ರವೃತ್ತಿಯನ್ನು ಗಮನಿಸಿದರೆ, ಒಂದು ಪ್ರದೇಶವು ಎದ್ದು ಕಾಣುತ್ತದೆ. ಅದುವೇ ಪೆಸಿಫಿಕ್ ಸುತ್ತಲಿನ ಭೂಕಂಪನ ವಲಯ. ಪೆಸಿಫಿಕ್ ಮಹಾಸಾಗರದ ಕರಾವಳಿಯುದ್ದಕ್ಕೂ ಕಂಡುಬರುವ ಈ ವಲಯವು ವಿಶ್ವದ ಅತಿ ದೊಡ್ಡ ಭೂಕಂಪಗಳ ಪೈಕಿ ಸುಮಾರು ಶೇಕಡಾ 81ರಷ್ಟಕ್ಕೆ ಕಾರಣವಾಗಿದೆ.

ಇದು ಇಷ್ಟೊಂದು ಸಕ್ರಿಯವಾಗಿರಲು ಕಾರಣವೇನು?

ಈ ವಲಯವು ಟೆಕ್ಟಾನಿಕ್ ಪ್ಲೇಟ್‌ಗಳ ಗಡಿಗಳೊಂದಿಗೆ ನಿಖರವಾಗಿ ಹೊಂದಿಕೆಯಾಗುತ್ತದೆ. ಇಲ್ಲಿ ಸಮುದ್ರದ ತಳಭಾಗದ ಪದರವು ಮತ್ತೊಂದು ಪ್ಲೇಟ್‌ನ ಕೆಳಗೆ ಸಕ್ರಿಯವಾಗಿ ಕುಸಿಯುತ್ತಿರುತ್ತದೆ (ಸಬ್‌ಡಕ್ಷನ್). ಈ ಬೃಹತ್ ಬಂಡೆಗಳು ಜಾರಿದಾಗ ಮತ್ತು ಒಡೆದಾಗ ತೀವ್ರವಾದ ಭೂಕಂಪಗಳು ಸಂಭವಿಸುತ್ತವೆ. ಇತಿಹಾಸದಲ್ಲೇ ಅತ್ಯಂತ ಭೀಕರವೆನಿಸಿದ 1960ರ ಚಿಲಿಯ 9.5 ತೀವ್ರತೆಯ ಭೂಕಂಪ ಮತ್ತು 1964ರ ಅಲಾಸ್ಕಾದ 9.2 ತೀವ್ರತೆಯ ಭೂಕಂಪಗಳು ಇದೇ ಸಬ್‌ಡಕ್ಷನ್ ವಲಯದಲ್ಲಿ ಸಂಭವಿಸಿದ್ದವು.

ವಿವಿಧ ದೇಶಗಳಲ್ಲಿ ಸಂಭವಿಸಿದ ಕೆಲವು ಅತ್ಯಂತ ವಿನಾಶಕಾರಿ ಭೂಕಂಪಗಳು

ಟರ್ಕಿ ಮತ್ತು ಸಿರಿಯಾ (ಫೆಬ್ರುವರಿ 2023): ದಕ್ಷಿಣ ಟರ್ಕಿಯಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪವು 55,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು ಮತ್ತು ಇಡೀ ನಗರಗಳನ್ನೇ ನೆಲಸಮಗೊಳಿಸಿತು.

ನೇಪಾಳ (ಎಪ್ರಿಲ್ 2015): ನಮ್ಮ ನೆರೆಹೊರೆಯ ದೇಶವಾದ ನೇಪಾಳದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿತು. ಇದರಿಂದ ಸುಮಾರು 9,000 ಜನರು ಪ್ರಾಣ ಕಳೆದುಕೊಂಡರು. ಇದರ ಪ್ರಬಲ ಕಂಪನಗಳು ಉತ್ತರ ಭಾರತದಾದ್ಯಂತ ತೀವ್ರವಾಗಿ ಅನುಭವಿಸಲ್ಪಟ್ಟಿದ್ದವು.

ಜಪಾನ್ (ಮಾರ್ಚ್ 2011): ಈಶಾನ್ಯ ಜಪಾನ್‌ಗೆ ಅಪ್ಪಳಿಸಿದ ಟೊಹೊಕು ಪ್ರದೇಶದ 9.0-9.1 ತೀವ್ರತೆಯ ಭೀಕರ ಭೂಕಂಪವು ದೈತ್ಯ ಸುನಾಮಿಯನ್ನು ಸೃಷ್ಟಿಸಿತು. ಈ ದುರಂತದಲ್ಲಿ 18,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಇದು ಇತಿಹಾಸ ಪ್ರಸಿದ್ಧ ಫುಕುಶಿಮಾ ಪರಮಾಣು ದುರಂತಕ್ಕೆ ಕಾರಣವಾಯಿತು.

ಹೈತಿ (ಜನವರಿ 2010): ಹೈತಿಯ ರಾಜಧಾನಿಯ ಸಮೀಪ ಸಂಭವಿಸಿದ 7.0 ತೀವ್ರತೆಯ ವಿನಾಶಕಾರಿ ಭೂಕಂಪವು ಅಂದಾಜು 2,22,570 ಜನರನ್ನು ಬಲಿ ತೆಗೆದುಕೊಂಡಿತು ಮತ್ತು 3,00,000ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿತು. ಇದು 21ನೇ ಶತಮಾನದ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಇಂಡೋನೇಷ್ಯಾ (ಡಿಸೆಂಬರ್ 2004): ಸುಮಾತ್ರಾ ಕರಾವಳಿಯಲ್ಲಿ ಸಂಭವಿಸಿದ 9.1 ತೀವ್ರತೆಯ ಅಗಾಧ ಭೂಕಂಪವು ಹಿಂದೂ ಮಹಾಸಾಗರದಲ್ಲಿ ಭೀಕರ ಸುನಾಮಿಯನ್ನು ಉಂಟುಮಾಡಿತು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಒಟ್ಟು ಎರಡು ಲಕ್ಷಕ್ಕೂ ಹೆಚ್ಚು (2,27,900) ಜನರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News