ವಿದೇಶಿ ಷಡ್ಯಂತ್ರ, ಮುಸ್ಲಿಂ ಪ್ರತಿಭಟನೆ, ಅರಾಜಕತೆ..!
► CJP ಚಳವಳಿಯ ಮೂಲ ಉದ್ದೇಶ ಮರೆಮಾಚಲು ಸಾಲುಸಾಲು ಪ್ರಯತ್ನ; ಹೊಸ ಟೂಲ್ ಕಿಟ್ ಅನಿವಾರ್ಯತೆಯಲ್ಲಿ ಬಿಜೆಪಿ?
Photo Credit : PTI
ಹೊಸದಿಲ್ಲಿ: ಕೇಂದ್ರ ಸರಕಾರವನ್ನು ಮಣಿಯುವಂತೆ ಮಾಡಿದ CJP ನೇತೃತ್ವದ ಯುವಜನರ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಮಾಧ್ಯಮಗಳು ದೇಶದ ವಿರುದ್ಧದ ಷಡ್ಯಂತ್ರ ಎಂಬಂತೆ ತಿರುಚಲು ಪ್ರಯತ್ನಿಸಿದ್ದು, "ವಿದೇಶಿ ಷಡ್ಯಂತ್ರ" ಹಾಗೂ ಕೋಮುವಾದಿ ಕಥನವನ್ನು ಬಳಸಿ ಪ್ರತಿಭಟನೆಯ ನೈಜ ಉದ್ದೇಶವನ್ನೇ ಮರೆಮಾಚಲು ಯತ್ನಿಸಿರುವುದು Alt News ಸೇರಿದಂತೆ ಕೆಲವು ಮಾಧ್ಯಮಗಳು ಪ್ರಕಟಿಸಿರುವ ವರದಿಗಳಲ್ಲಿ ಬಯಲಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಆರಂಭವಾದ ದೇಶವ್ಯಾಪಿ ವಿದ್ಯಾರ್ಥಿ-ಯುವಜನರ ಚಳವಳಿ, ಆರಂಭದಲ್ಲಿ ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಪ್ರಶ್ನೆಪತ್ರಿಕೆ ಸೋರಿಕೆ, ನಿರುದ್ಯೋಗ, ಉತ್ತರದಾಯಿತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಯಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಳೆಯಿತು. ಜಂತರ್ ಮಂತರ್ ನಲ್ಲಿ ವಾರಗಳ ಕಾಲ ನಡೆದ ಪ್ರತಿಭಟನೆ, ಕೊನೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ಮಟ್ಟಿಗೆ ರಾಜಕೀಯ ಒತ್ತಡವನ್ನು ಸೃಷ್ಟಿಸಿತು.
ಆದರೆ ಚಳವಳಿಯು ಜನಮನ್ನಣೆ ಗಳಿಸಿದಂತೆ, ಅದರ ಮೂಲ ಬೇಡಿಕೆಗಳ ಬಗ್ಗೆ ಚರ್ಚಿಸುವ ಬದಲು ಅದನ್ನು ಬೇರೆ ಕಥನಗಳತ್ತ ತಿರುಗಿಸುವ ಪ್ರಯತ್ನಗಳು ಆರಂಭವಾದವು. ಒಂದು ಕಡೆ ಸರಕಾರಪರ ಮಾಧ್ಯಮಗಳು ಪ್ರತಿಭಟನೆಯ ಹಿಂದೆ "ಜಾಗತಿಕ ಟೂಲ್ ಕಿಟ್", "ವಿದೇಶಿ ಸಂಚು" ಮತ್ತು "ಡೀಪ್ ಸ್ಟೇಟ್"ಗಳಿವೆ ಎಂದು ಪ್ರತಿಪಾದಿಸಿದರೆ, ಮತ್ತೊಂದೆಡೆ ಬಿಜೆಪಿ ಸಂಬಂಧಿತ ಅಧಿಕೃತ ಸಾಮಾಜಿಕ ಜಾಲತಾಣಗಳು ಪ್ರತಿಭಟನೆಯನ್ನು "ಮುಸ್ಲಿಮರ ಚಳವಳಿ" ಎಂಬ ಚೌಕಟ್ಟಿನಲ್ಲಿ ಕಟ್ಟಿಕೊಡಲು ಯತ್ನಿಸಿದವು ಎಂಬ ಆರೋಪಗಳು ಕೇಳಿಬಂದಿವೆ.
►ಪ್ರತಿಭಟನೆಯ ಕೇಂದ್ರಬಿಂದು ಬದಲಿಸುವ ಪ್ರಯತ್ನ
ಸಾಮಾನ್ಯವಾಗಿ ಯಾವುದೇ ಜನಾಂದೋಲನವು ಆಡಳಿತದ ವಿರುದ್ಧ ಸಾರ್ವಜನಿಕ ಅಸಮಾಧಾನವನ್ನು ವ್ಯಕ್ತಪಡಿಸಿದಾಗ, ಅದರ ಮೂಲ ಪ್ರಶ್ನೆಗಳನ್ನು ಎದುರಿಸುವ ಬದಲು ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ರಾಜಕೀಯ ತಂತ್ರವನ್ನು ಹಲವಾರು ಸರಕಾರಗಳು ಅನುಸರಿಸುತ್ತವೆ. CJP ಚಳವಳಿಯ ಸಂದರ್ಭದಲ್ಲಿಯೂ ಇದೇ ಮಾದರಿ ಕಂಡುಬಂದಿತು.
Alt News ವಿಶ್ಲೇಷಣೆಯ ಪ್ರಕಾರ, ಒಂದು ವಾರದ ಅವಧಿಯಲ್ಲಿ ರಿಪಬ್ಲಿಕ್ ನೆಟ್ವರ್ಕ್ ನಿರಂತರವಾಗಿ ಪ್ರತಿಭಟನೆಯ ಹಿಂದೆ ಇರುವ "ಮಾಸ್ಟರ್ಮೈಂಡ್" ಯಾರು ಎಂಬುದನ್ನು ಪ್ರತಿ ದಿನ ಬದಲಾಯಿಸುತ್ತಾ ಹೋಯಿತು. ಮೊದಲಿಗೆ ಪಾಕಿಸ್ತಾನ, ನಂತರ ಚೀನಾ, ಬಾಂಗ್ಲಾದೇಶ, ನೇಪಾಳ, ಅಮೆರಿಕ, ಸಿಐಎ, ಮೆಟಾ, ಗ್ರೇಟಾ ಥನ್ಬರ್ಗ್, ಜೆರೆಮಿ ಕಾರ್ಬಿನ್, ಜಾನ್ ಕುಸಾಕ್ ಸೇರಿದಂತೆ ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಕ್ರಮೇಣ ಈ ಕಥನಕ್ಕೆ ಜೋಡಿಸಲಾಯಿತು.
ಈ ಆರೋಪಗಳಿಗೆ ದೃಢವಾದ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಮಂಡಿಸದಿದ್ದರೂ, "ಕೇಂದ್ರ ಸರಕಾರದ ಮಡಿಲ ಕೂಸು" ಎಂಬ ಆರೋಪಗಳಿರುವ ಅರ್ನಾಬ್ ಗೋಸ್ವಾಮಿ ಅವರ ನೇತೃತ್ವದ ಮಾಧ್ಯಮ ಸಂಸ್ಥೆಯ ಪ್ರೈಮ್ಟೈಮ್ ಚರ್ಚೆಗಳು ಬಹುತೇಕ ಈ ವಿದೇಶಿ ಸಂಪರ್ಕಗಳ ಸುತ್ತಲೇ ಕೇಂದ್ರೀಕೃತವಾಗಿದ್ದವು. ಆ ಮೂಲಕ, ವಿದ್ಯಾರ್ಥಿಗಳು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಅವರ ಬೇಡಿಕೆಗಳೇನು? ಎಂಬ ಮೂಲ ಪ್ರಶ್ನೆಗಳನ್ನು ಹಿನ್ನಲೆಗೆ ಸರಿಸಲು ಶತಾಯಗತಾಯ ಪ್ರಯತ್ನ ನಡೆದಿತ್ತು.
►"ಜಾಗತಿಕ ಟೂಲ್ ಕಿಟ್" ಎಂಬ ಹಳೇ ಕ್ಯಾಸೆಟ್
ಜುಲೈ 21ರಿಂದ 28ರವರೆಗೆ ನಡೆದ ಹಲವು ಚರ್ಚೆಗಳಲ್ಲಿ, ಜಂತರ್ ಮಂತರ್ ಪ್ರತಿಭಟನೆಯನ್ನು "ನೇಪಾಳ ಮಾದರಿಯ ಕಾಪಿ-ಪೇಸ್ಟ್", "ಚೀನಾದ ಪ್ಲೇಬುಕ್", "ಅಮೆರಿಕದ ಡೀಪ್ ಸ್ಟೇಟ್", "ಖಾಲಿಸ್ತಾನಿ ಬೆಂಬಲ", "ಪಾಕಿಸ್ತಾನಿ ಸಂಪರ್ಕ" ಹಾಗೂ ಕೊನೆಗೆ "ಗ್ರೇಟಾ ಥನ್ಬರ್ಗ್ ಜಾಗತಿಕ ಟೂಲ್ ಕಿಟ್" ಎಂಬ ಹಂತಗಳಿಗೆ ಕೊಂಡೊಯ್ಯಲಾಯಿತು.
ಒಂದು ಹಂತದಲ್ಲಿ ಬಾಂಗ್ಲಾದೇಶದ ಜಮಾತ್-ಎ-ಇಸ್ಲಾಮಿ ಸಂಘಟನೆ ಬೆಂಬಲ ನೀಡಿದೆ ಎನ್ನಲಾದ ಪತ್ರವನ್ನೂ ಪ್ರಸಾರ ಮಾಡಲಾಯಿತು. ನಂತರ Alt News ಸತ್ಯಪರಿಶೀಲನೆಯಲ್ಲಿ ಅದು AI ಮೂಲಕ ಸೃಷ್ಟಿಸಲಾದ ನಕಲಿ ಪತ್ರ ಎಂಬುದು ಬಹಿರಂಗವಾಯಿತು.
ಇನ್ನೊಂದು ಸಂದರ್ಭದಲ್ಲಿ ಅಮೆರಿಕ ರಾಯಭಾರ ಕಚೇರಿಯ ಸಾಮಾನ್ಯ ಭದ್ರತಾ ಸೂಚನೆಯನ್ನೇ ಪ್ರತಿಭಟನೆಯ ಕುರಿತು ಮೊದಲೇ ಅರಿವಿತ್ತು ಎಂಬುದಕ್ಕೆ ಸಾಕ್ಷಿಯಂತೆ ನಿರೂಪಿಸಲಾಯಿತು. ಈ ರೀತಿಯ ನಿರಂತರ ಆರೋಪಗಳು ಚಳವಳಿಯ ವಾಸ್ತವಿಕ ಕಾರಣಗಳಿಗಿಂತ "ವಿದೇಶಿ ಕೈವಾಡ" ಎಂಬ ಕಲ್ಪನೆಯನ್ನು ಸಾರ್ವಜನಿಕ ಚರ್ಚೆಯ ಕೇಂದ್ರವಾಗಿಸುವ ಕೆಲಸ ಮಾಡಿವೆ.
►"ಮುಸ್ಲಿಂ ಪ್ರತಿಭಟನೆ" ಎಂಬ ಹೊಸ ಕಥನ
ಮಡಿಲ ಮಾಧ್ಯಮಗಳು ವಿದೇಶಿ ಸಂಚು ಎಂಬ ಕಥನವನ್ನು ಕಟ್ಟುತ್ತಿರುವಾಗಲೇ, ಬಿಜೆಪಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಒಟ್ಟಾರೆ ಪ್ರತಿಭಟನೆಯಲ್ಲಿ ಮುಸ್ಲಿಮರೇ ಇದ್ದಾರೆ ಎಂಬಂತಹ ಅಭಿಪ್ರಾಯ ರೂಪಿಸಲು ನಿರಂತರ ಪ್ರಯತ್ನ ಮಾಡಿತು. ಸ್ವತಃ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೇ, ಪರೋಕ್ಷವಾಗಿ ಈ ಚಳವಳಿಯನ್ನು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿದ್ದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಾದ ಕೆಲವೇ ದಿನಗಳಲ್ಲಿ ಬಿಜೆಪಿ ದಿಲ್ಲಿ ಹಾಗೂ ಬಿಜೆಪಿ ಹರಿಯಾಣದ ಅಧಿಕೃತ ಇನ್ಸ್ಟಾಗ್ರಾಂ ಖಾತೆಗಳು ಜಂತರ್ ಮಂತರ್ ಪ್ರತಿಭಟನೆಯ ವೀಡಿಯೋಗಳನ್ನು ಹಂಚಿಕೊಂಡವು. ಆದರೆ ಸಾವಿರಾರು ಪ್ರತಿಭಟನಾಕಾರರಲ್ಲಿ ಕೇವಲ ಮುಸ್ಲಿಂ ಪ್ರತಿಭಟನಾಕಾರರ ದೃಶ್ಯಗಳನ್ನು ಮಾತ್ರ ಆಯ್ದು ರೀಲ್ಸ್ ರೂಪದಲ್ಲಿ ಪ್ರಕಟಿಸಲಾಯಿತು. "ಅರಾಜಕತೆ ಹರಡಿಸುತ್ತಿರುವ ಈ ಮುಖಗಳು ನೆನಪಿನಲ್ಲಿ ಉಳಿಯುತ್ತವೆ" ಎಂಬ ಹಿಂದಿ ಬರಹವನ್ನು ವೀಡಿಯೋದಲ್ಲಿ ಬಳಸಲಾಗಿತ್ತು.
ಪ್ರತಿಭಟನೆಯಲ್ಲಿ ವಿವಿಧ ಧರ್ಮ, ಜಾತಿ ಮತ್ತು ಪ್ರದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರೂ, ಆಯ್ದ ದೃಶ್ಯಗಳ ಮೂಲಕ ಚಳವಳಿಯನ್ನು ಮುಸ್ಲಿಂ ಪ್ರತಿಭಟನೆಯಂತೆ ಬಿಂಬಿಸುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿತು.
►"ಸರಕಾರಕ್ಕೆ ಒಗ್ಗಟ್ಟಿನ ಭಯ"
ಜಂತರ್ ಮಂತರ್ ನಲ್ಲಿ 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ AISA ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಈ ಬೆಳವಣಿಗೆ ಕುರಿತು ಮಾತನಾಡುತ್ತಾ, ಸರಕಾರಕ್ಕೆ ಭಯವಿರುವುದು ಪ್ರತಿಭಟನೆಯ ಒಗ್ಗಟ್ಟಿನ ಬಗ್ಗೆ ಎಂದರು.
ಅವರ ಪ್ರಕಾರ, ಜಂತರ್ ಮಂತರ್ ಚಳವಳಿಯಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳ ಜನರು ಭಾಗವಹಿಸಿದ್ದರು. ಪ್ರಾರ್ಥನೆ ಮಾಡಲು, ಬೆಂಬಲ ಸೂಚಿಸಲು ಮತ್ತು ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ವಿವಿಧ ಸಮುದಾಯದ ಜನರು ಅಲ್ಲಿಗೆ ಬಂದಿದ್ದರು.
"ಭಾರತೀಯರು ಒಗ್ಗಟ್ಟಾಗಿದ್ದರೆ ಮಾತ್ರ ಸರಕಾರಕ್ಕೆ ರಾಜಕೀಯ ಸವಾಲು ಎದುರಾಗುತ್ತದೆ. ಆದ್ದರಿಂದ ಧರ್ಮದ ಆಧಾರದ ಮೇಲೆ ವಿಭಜನೆ ಸೃಷ್ಟಿಸುವುದು ಅವರಿಗೆ ಅಗತ್ಯವಾಗುತ್ತದೆ," ಎಂದು ಅವರು ಹೇಳಿದ್ದಾರೆ.
ಜುಲೈ 24ರಂದು ಕೋಲ್ಕತ್ತಾದಲ್ಲಿ ನಡೆದ CJP ಬೆಂಬಲ ಮೆರವಣಿಗೆಯ ನಂತರ ನಡೆದ ಹಿಂಸಾಚಾರವನ್ನೂ ಇದೇ ಕಥನದ ಭಾಗವಾಗಿ ಬಳಸಲಾಯಿತು.
ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಯನ್ನು "ಇಸ್ಲಾಮಿಸ್ಟ್", "ಜಮಾತಿಗಳು", "ಶುಕ್ರವಾರದ ಜನ" ಎಂಬ ಪದಗಳ ಮೂಲಕ ವಿವರಿಸುವ ಪ್ರಯತ್ನಗಳು ನಡೆದವು. ವಿಧಾನಸಭೆಯಲ್ಲಿಯೂ ಹಾಗೂ ಮಾಧ್ಯಮಗಳೊಂದಿಗೆ ಮಾತನಾಡುವಾಗ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರತಿಭಟನಾಕಾರರನ್ನು "ವಿದೇಶಿ ಹಣದಿಂದ ನಡೆಸಲ್ಪಡುವ ಜಮಾತಿಗಳು", "ಇಸ್ಲಾಮಿಸ್ಟ್ ಗಳು" ಹಾಗೂ "ಶುಕ್ರವಾರದ ಜನ" ಎಂದು ಕರೆದಿದ್ದರು. ಸಮುದಾಯದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಮದರಸಾಗಳ ವಿರುದ್ಧ ಸರಕಾರ ಕೈಗೊಂಡ ಕ್ರಮಗಳು, ಮಸೀದಿಗಳ ಧ್ವನಿವರ್ಧಕ ಬಳಕೆಯ ಮೇಲಿನ ನಿಯಂತ್ರಣ ಹಾಗೂ ಪ್ರಾಣಿಬಲಿ ಕುರಿತ ಕ್ರಮಗಳಿಂದ ಮುಸ್ಲಿಮರು "ಕೋಪದಿಂದ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ" ಎಂಬ ಅರ್ಥದ ಹೇಳಿಕೆಯನ್ನು ಅವರು ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಚರ್ಚೆಯಾಗಬೇಕಿದ್ದದ್ದು ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳು, ಪ್ರಶ್ನೆಪತ್ರಿಕೆ ಸೋರಿಕೆ, ಯುವ ನಿರುದ್ಯೋಗ, ವಿದ್ಯಾರ್ಥಿಗಳ ಬೇಡಿಕೆಗಳು, ಸರಕಾರದ ಉತ್ತರದಾಯಿತ್ವ ಮತ್ತು ಪೊಲೀಸ್ ದೌರ್ಜನ್ಯ. ಆದರೆ ಅದರ ಬದಲು "ವಿದೇಶಿ ಹಣ", "ಟೂಲ್ ಕಿಟ್", "ಡೀಪ್ ಸ್ಟೇಟ್", "ಮುಸ್ಲಿಮರು" ಮತ್ತು "ಅರಾಜಕತೆ" ಎಂಬ ಆರೋಪಗಳೇ ಹೆಚ್ಚು ಚರ್ಚೆಗೆ ಬಂದವು.
►ಚಳವಳಿಯ ಯಶಸ್ಸನ್ನು ತಡೆಯಲು ಸೋತ 'ಬಿಜೆಪಿ ಟೂಲ್ ಕಿಟ್'
ಆದರೆ ಇವೆಲ್ಲದರ ನಡುವೆಯೂ ಚಳುವಳಿ ಯಶಸ್ವಿಯಾಯಿತು. ಅದಕ್ಕೆ ಮುಖ್ಯ ಕಾರಣ ಅದರ ಹೊಸ ರೀತಿಯ ಸಂವಹನ. Gen Z ತನ್ನದೇ ಭಾಷೆ, ಹಾಸ್ಯ, ಮೀಮ್ಸ್, ರೀಲ್ಸ್ ಮತ್ತು ಡಿಜಿಟಲ್ ಸಂಸ್ಕೃತಿಯನ್ನು ಪ್ರತಿಭಟನೆಯ ಅಸ್ತ್ರವನ್ನಾಗಿ ಬಳಸಿತು. ಆಡಳಿತ ಹಳೆಯ ರಾಜಕೀಯ ಭಾಷೆಯಲ್ಲಿ ಉತ್ತರ ಹುಡುಕುತ್ತಿದ್ದರೆ, ಹೊಸ ಪೀಳಿಗೆ ಹೊಸ ಭಾಷೆಯಲ್ಲಿ ಜನರನ್ನು ತಲುಪಿತು.
ಈ ಚಳುವಳಿ ಒಂದು ವಿಷಯವನ್ನು ಸ್ಪಷ್ಟವಾಗಿ ತೋರಿಸಿತು. ಇಂದಿನ ರಾಜಕೀಯ ಕೇವಲ ಭಾಷಣಗಳು ಮತ್ತು ವೇದಿಕೆಗಳಿಗೆ ಮಾತ್ರ ಸೀಮಿತಗೊಳ್ಳದೆ, ಅದು ಮೀಮ್ಸ್, ವೈರಲ್ ವೀಡಿಯೋಗಳು, ವ್ಯಂಗ್ಯ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕವೂ ಹೇಳಬೇಕಾದ ವಿಷಯವನ್ನು ಜನರಿಗೆ ತಲುಪಿಸಿತು. ಈ ಹೊಸ ರಾಜಕೀಯವನ್ನು ಹಳೆಯ ವಿಧಾನಗಳಿಂದ ತಡೆಯುವುದು ಸುಲಭವಲ್ಲ ಎಂಬುದನ್ನು ನಿರೂಪಿಸಿತು.
ಕೊನೆಗೂ ಚಳುವಳಿ ತನ್ನ ಉದ್ದೇಶವನ್ನು ಸಾಧಿಸಿತು. ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ದೇಶದಾದ್ಯಂತ ಚರ್ಚೆ ಹುಟ್ಟಿಸಿತು. ಸರಕಾರದ ಮೇಲೆ ಒತ್ತಡ ಹೆಚ್ಚಿಸಿತು. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯಂತಹ ಮಹತ್ವದ ರಾಜಕೀಯ ಬೆಳವಣಿಗೆಗೂ ಕಾರಣವಾಯಿತು. ಇದರಿಂದ ಇದು ಕೇವಲ ಸಾಮಾಜಿಕ ಜಾಲತಾಣದ ಟ್ರೆಂಡ್ ಅಲ್ಲ, ನೈಜ ರಾಜಕೀಯದ ಮೇಲೆ ಪರಿಣಾಮ ಬೀರಿದ ಜನಾಂದೋಲನ ಎಂಬುದು ಸ್ಪಷ್ಟವಾಯಿತು.
ಹೀಗಾಗಿ ಜಂತರ್ ಮಂತರ್ ಚಳವಳಿಯು ಭಾರತದಲ್ಲಿ ಪ್ರತಿಭಟನೆಗೆ ಹೊಸ ಭಾಷೆ ಮತ್ತು ಹೊಸ ಶೈಲಿಯನ್ನು ಪರಿಚಯಿಸಿತು. ಹೀಗಾಗಿ, ಮಾಧ್ಯಮಗಳನ್ನು ಬಳಸಿಕೊಂಡು ತನಗೆ ಬೇಕಾದ ಅಭಿಪ್ರಾಯವನ್ನು ತಾನು ರೂಪಿಸಿಕೊಳ್ಳಬಲ್ಲ "ಬಿಜೆಪಿಯ ಕಾರ್ಪೊರೇಟ್ ರಾಜಕಾರಣ" ಈಗ ತುರ್ತಾಗಿ ತನ್ನ ಟೂಲ್ ಕಿಟ್ ಅನ್ನು ತಯಾರಿಸಬೇಕಿದೆ.