ನೇಪಾಳದ ಮಧೇಶ್ ನಲ್ಲಿ ಉದ್ವಿಗ್ನತೆ: ಕೋಮು ಹಿಂಸಾಚಾರದ ಹಿಂದಿನ ಕಾರಣವೇನು?

Update: 2026-08-04 19:50 IST

Photo Credit : PTI 

ಧಾರ್ಮಿಕ ಮೆರವಣಿಗೆಯೊಂದರ ವೇಳೆ ಆರಂಭವಾದ ಸಂಘರ್ಷವು ಭಾರತದ ಗಡಿಗೆ ಹೊಂದಿಕೊಂಡಿರುವ ದೇಶದ ದಕ್ಷಿಣದ ಮೈದಾನ ಪ್ರದೇಶವಾದ ಮಧೇಶ್ನಾದ್ಯಂತ ಹರಡಿದೆ. ಈ ಘಟನೆಯಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ. ಪರಿಣಾಮವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸೇನೆಯನ್ನು ನಿಯೋಜಿಸಲಾಗಿದೆ. ಪ್ರಸ್ತುತ ನೇಪಾಳವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರವಾದ ಹಿಂದೂ-ಮುಸ್ಲಿಂ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಎಂದು The Wire ವರದಿ ಮಾಡಿದೆ.

ಜುಲೈ 26 ರಂದು ಸುನ್ಸಾರಿ ಜಿಲ್ಲೆಯ ದೇವಾಂಗಂಜ್ ಗ್ರಾಮೀಣ ಪುರಸಭೆಯಲ್ಲಿ ಆರಂಭವಾದ ಹಿಂಸಾಚಾರವು ಮಧೇಶ್ ನ ಹಲವು ಜಿಲ್ಲೆಗಳಿಗೆ ಹರಡಿದೆ. ನೇಪಾಳ-ಭಾರತ ಗಡಿಯ ಎರಡೂ ಬದಿಯ ಸಮುದಾಯಗಳು ನಿಕಟ ಭಾಷಿಕ, ಸಾಂಸ್ಕೃತಿಕ ಮತ್ತು ಕೌಟುಂಬಿಕ ಬಾಂಧವ್ಯವನ್ನು ಹಂಚಿಕೊಳ್ಳುವ ಪ್ರದೇಶ ಇದಾಗಿದೆ.

ಸ್ಥಳೀಯ ಮಟ್ಟದ ಕೋಮು ಉದ್ವಿಗ್ನತೆಗಳು ಹೊಸದೇನಲ್ಲವಾದರೂ, ಇತ್ತೀಚಿನ ಅಶಾಂತಿಯ ಪ್ರಮಾಣ ಮತ್ತು ಅದು ವೇಗವಾಗಿ ಹರಡಿದ ರೀತಿ ದೊಡ್ಡ ಮಟ್ಟದ ಸ್ಥಿತ್ಯಂತರವನ್ನು ತೋರಿಸುತ್ತದೆ ಎಂದು ಸಂಶೋಧಕರು ಹಾಗೂ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಮೊದಲ ಸಂಘರ್ಷದ ನಂತರವೂ ಹೊಸ ಹಿಂಸಾಚಾರವನ್ನು ತಡೆಯಲು ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಧಾರ್ಮಿಕ ಮುಖಂಡರು ಶಾಂತಿ ಮೆರವಣಿಗೆ ಹಾಗೂ ಸರ್ವಧರ್ಮ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಮತ್ತೊಂದೆಡೆ, ಹಲವು ನಗರಗಳಲ್ಲಿ ಆಡಳಿತವು ಕರ್ಫ್ಯೂ ಮತ್ತು ನಿಷೇಧಾಜ್ಞೆಗಳನ್ನು ಮುಂದುವರಿಸಿದೆ. ನೇಪಾಳ ಸೇನೆ ಸೇರಿದಂತೆ ಭದ್ರತಾ ಪಡೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಪೊಲೀಸರು ಹತ್ತಾರು ಜನರನ್ನು ಬಂಧಿಸಿದ್ದಾರೆ.

►ಸ್ಥಳೀಯ ವಿವಾದ ಇಡೀ ರಾಜ್ಯಕ್ಕೆ ಹರಡಿದ್ದು ಹೇಗೆ?

ಭಾರತದ ಗಡಿಯಿಂದ 20 ಕಿಲೋಮೀಟರ್ ಗಿಂತಲೂ ಕಡಿಮೆ ದೂರದಲ್ಲಿರುವ ದೇವಾಂಗಂಜ್ನಲ್ಲಿ ಜುಲೈ 26ರ ಸಂಜೆ ಹಿಂಸಾಚಾರ ಆರಂಭವಾಯಿತು. ಶ್ರಾವಣ ಮಾಸದ ವಾರ್ಷಿಕ 'ಬೋಲ್ ಬಮ್' ಯಾತ್ರೆಯ ಭಾಗವಾಗಿ ಸಾವಿರಾರು ಹಿಂದೂ ಭಕ್ತರು ಕೋಶಿ ಬ್ಯಾರೇಜ್ ನಿಂದ ಪವಿತ್ರ ಜಲವನ್ನು ಸಂಗ್ರಹಿಸಿ ಹಿಂತಿರುಗುತ್ತಿದ್ದರು.

ಕೇಸರಿ ಧ್ವಜಗಳನ್ನು ಹಿಡಿದು, DJ ಸಂಗೀತದೊಂದಿಗೆ ಮೆರವಣಿಗೆಯು ಕಪ್ತಾನ್ಗಂಜ್ ಚೌಕ್ ಕಡೆಗೆ ಸಾಗುತ್ತಿದ್ದಾಗ, ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯರು DJಯ ಸದ್ದು ಮತ್ತು ಕೆಲವು ವರದಿಗಳ ಪ್ರಕಾರ ಧಾರ್ಮಿಕ ಧ್ವಜಗಳನ್ನು ಕಟ್ಟಿದ ಜಾಗಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳೀಯ ವರದಿಗಳ ಪ್ರಕಾರ, ಅದೇ ದಿನ ಮುಂಜಾನೆ ಮುಸ್ಲಿಂ ಧ್ವಜವೊಂದನ್ನು ತೆರವುಗೊಳಿಸಿ ಅದರ ಜಾಗದಲ್ಲಿ ಕೇಸರಿ ಧ್ವಜವನ್ನು ನೆಡಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಈಗಾಗಲೇ ಹೆಚ್ಚಾಗಿತ್ತು.

ಆರಂಭದಲ್ಲಿ ನಡೆದ ಮಾತಿನ ಚಕಮಕಿ ಶೀಘ್ರದಲ್ಲೇ ಎರಡೂ ಗುಂಪುಗಳ ನಡುವೆ ಕಲ್ಲು ತೂರಾಟಕ್ಕೆ ತಿರುಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತೆ ಮಾಡಿತು. ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಗುಂಪನ್ನು ಚದುರಿಸಲು ಯತ್ನಿಸಿದ ಪೊಲೀಸರು ನಂತರ ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು ಎರಡು ಡಝನ್ ಜನರು ಗಾಯಗೊಂಡರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಆಡಳಿತವು ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಿತು ಮತ್ತು ಸಶಸ್ತ್ರ ಪೊಲೀಸ್ ಪಡೆಯ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಿತು.

ಕರ್ಫ್ಯೂ ಜಾರಿಯಾದ ನಂತರವೂ ಹಿಂಸಾಚಾರ ನಿಲ್ಲಲಿಲ್ಲ. ರಾತ್ರೋರಾತ್ರಿ ದೇವಾಂಗಂಜ್ ನ ಕೆಲವು ಭಾಗಗಳಲ್ಲಿ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದ ವರದಿಗಳು ಬಂದವು. ಮತ್ತೊಂದೆಡೆ, ಸಂಘರ್ಷದ ವೀಡಿಯೋಗಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದವು. ಮರುದಿನಕ್ಕೆ ಮಧೇಶ್ ನ ಇತರ ನಗರಗಳಲ್ಲೂ ಪ್ರತಿಭಟನೆ ಮತ್ತು ಪ್ರತಿಪ್ರತಿಭಟನೆಗಳು ಕಾಣಿಸಿಕೊಂಡವು. ಈ ಮೂಲಕ ಸ್ಥಳೀಯ ಮಟ್ಟದ ಘರ್ಷಣೆಯಾಗಿ ಆರಂಭವಾಗಿದ್ದು ಭಾರೀ ಕೋಮು ಉದ್ವಿಗ್ನತೆಯಾಗಿ ಮಾರ್ಪಟ್ಟಿತು.

ಜುಲೈ 30 ರಂದು ಸಿರಾಹಾದಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ 15 ವರ್ಷದ ಬಾಲಕನೊಬ್ಬ ಬಲಿಯಾಗುವುದರೊಂದಿಗೆ ಈ ಅಶಾಂತಿ ಮತ್ತೊಂದು ತೀವ್ರ ಸ್ವರೂಪ ಪಡೆಯಿತು. ಬಾಲಕನ ಸಾವಿನೊಂದಿಗೆ ಪೊಲೀಸ್ ಕ್ರಮದಿಂದಾಗಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿತು. ಇದು ಹೊಸ ಪ್ರತಿಭಟನೆಗಳಿಗೆ ಕಾರಣವಾಯಿತು. ಪ್ರತಿಭಟನಾಕಾರರು ಸುತ್ತಮುತ್ತಲಿನ ಪ್ರದೇಶಗಳ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ಧ್ವಂಸಗೊಳಿಸಿದರು.

ದಕ್ಷಿಣದ ಮೈದಾನ ಪ್ರದೇಶದಾದ್ಯಂತ ಉದ್ವಿಗ್ನತೆ ಪಶ್ಚಿಮಕ್ಕೆ ಹರಡಿದಂತೆ, ನಾಲ್ಕು ದಿನಗಳ ಅವಧಿಯಲ್ಲಿ ಭಾರತದೊಂದಿಗಿನ ನೇಪಾಳದ ಪ್ರಮುಖ ವ್ಯಾಪಾರ ದ್ವಾರವಾದ ಬಿರ್ಗಂಜ್ ಸೇರಿದಂತೆ ಸಾಲು ಸಾಲು ನಗರಗಳಲ್ಲಿ ಆಡಳಿತವು ಕರ್ಫ್ಯೂ ಹಾಗೂ ನಿಷೇಧಾಜ್ಞೆಗಳನ್ನು ಜಾರಿಗೊಳಿಸಿತು. ಸಿರಾಹಾ, ಮಹೋತ್ತರಿ, ಮೊರಾಂಗ್ ಮತ್ತು ಇತರ ಜಿಲ್ಲೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಹೊಸ ಸಂಘರ್ಷಗಳನ್ನು ತಡೆಯುವ ಉದ್ದೇಶದಿಂದ ನಡೆಸಲಾಗುವ ಗಸ್ತು ತಿರುಗುವಿಕೆಯಲ್ಲಿ ನೇಪಾಳ ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆಯೊಂದಿಗೆ ನೇಪಾಳ ಸೇನೆಯೂ ಭಾಗಿಯಾಯಿತು. ಕೆಲವು ನಗರಗಳಲ್ಲಿ ಡ್ರೋನ್ ಕಣ್ಣಾವಲು ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

ಭದ್ರತಾ ಪಡೆಗಳನ್ನು ನಿಯೋಜಿಸಿದ್ದರೂ, ಪ್ರತಿಭಟನಾಕಾರರು ಆಸ್ತಿಪಾಸ್ತಿಗೆ ಹಾನಿ ಮಾಡುವುದನ್ನು ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಮುಂದುವರಿಸಿದ್ದರು.

ಸಾವನ್ನಪ್ಪಿದವರ ಕುಟುಂಬಸ್ಥರು ಆರಂಭದಲ್ಲಿ ಮೃತದೇಹಗಳನ್ನು ಸ್ವೀಕರಿಸಲು ನಿರಾಕರಿಸಿದ್ದು, ಇದಕ್ಕೆ ಕಾರಣರಾದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆಡಳಿತದೊಂದಿಗೆ ನಡೆಸಿದ ಮಾತುಕತೆಯ ನಂತರ ಒಪ್ಪಂದವೊಂದು ಏರ್ಪಟ್ಟಿತು. ಅದರಂತೆ, ಮೃತರನ್ನು 'ಹುತಾತ್ಮರು' ಎಂದು ಘೋಷಿಸಲು, ಪ್ರತಿಯೊಂದು ಮೃತರ ಕುಟುಂಬಕ್ಕೆ 10 ಲಕ್ಷ ನೇಪಾಳಿ ರೂಪಾಯಿ ಪರಿಹಾರ ನೀಡಲು ಮತ್ತು ಕುಟುಂಬದ ಒಬ್ಬ ಅರ್ಹ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಲು ಸರ್ಕಾರ ಭರವಸೆ ನೀಡಿತು.

ಶುಕ್ರವಾರದ ವೇಳೆಗೆ ಭಾರಿ ಪ್ರಮಾಣದ ಸಂಘರ್ಷಗಳು ಶಮನಗೊಂಡಿದ್ದರೂ, ಹಲವು ಜಿಲ್ಲೆಗಳಲ್ಲಿ ಭದ್ರತಾ ನಿರ್ಬಂಧಗಳು ಮುಂದುವರಿದಿದ್ದವು. ಸ್ಥಳೀಯ ಸಮುದಾಯಗಳು ಮತ್ತು ಧಾರ್ಮಿಕ ಮುಖಂಡರು ಆಯೋಜಿಸಿದ ಶಾಂತಿ ಮೆರವಣಿಗೆಗಳು ಹಾಗೂ ನಿರಂತರ ಪ್ರತಿಭಟನೆಗಳು ಒಟ್ಟೊಟ್ಟಿಗೇ ನಡೆದವು. ಇದು ಒಂದೆಡೆ ಯಥಾಸ್ಥಿತಿ ಮರುಸ್ಥಾಪಿಸುವ ಆಶಯವನ್ನು ತೋರಿಸಿದರೆ, ಮತ್ತೊಂದೆಡೆ ವಾರದ ಅವಧಿಯಲ್ಲಿ ಬೆಳೆದ ಅಪನಂಬಿಕೆಯ ಆಳವನ್ನು ಬಿಂಬಿಸಿತು.

►ತನಿಖೆಗೆ ಒಳಪಟ್ಟ ಸರ್ಕಾರದ ಕ್ರಮಗಳು

ಹಿಂಸಾಚಾರವು ಸುನ್ಸಾರಿಯಿಂದ ಆಚೆಗೆ ಹರಡುವುದನ್ನು ತಡೆಯುವಲ್ಲಿ ಸರ್ಕಾರದ ಆರಂಭಿಕ ಸ್ಪಂದನೆ ತೀರ ವಿಳಂಬವಾಗಿತ್ತು ಎಂದು ಆರೋಪಿಸಿ ವಿರೋಧ ಪಕ್ಷಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ರಾಜಕೀಯ ವಿಶ್ಲೇಷಕರು ಸರ್ಕಾರದ ಬಿಕ್ಕಟ್ಟು ನಿರ್ವಹಣೆಯನ್ನು ಟೀಕಿಸಿದ್ದಾರೆ.

ಮೊದಲ ಸಂಘರ್ಷ ನಡೆದ ನಾಲ್ಕು ದಿನಗಳ ನಂತರ ಗೃಹ ಸಚಿವ ಸುದಾನ್ ಗುರುಂಗ್ ಸುನ್ಸಾರಿಗೆ ಭೇಟಿ ನೀಡಿದರೆ, ಪ್ರಧಾನಿ ಬಾಲೇಂದ್ರ ಶಾ ಅವರ ಮೊದಲ ಪ್ರಮುಖ ಸಾರ್ವಜನಿಕ ಮಧ್ಯಪ್ರವೇಶ ಬಂದಿದ್ದು ಹಿಂಸಾಚಾರವು ಹಲವು ಜಿಲ್ಲೆಗಳಿಗೆ ಹರಡಿದ ನಂತರವೇ. ಸಮುದಾಯದ ನಾಯಕರನ್ನು ಆರಂಭದಲ್ಲೇ ಸಂಪರ್ಕಿಸದೇ ಇದ್ದದ್ದು ಉದ್ವಿಗ್ನತೆ ಹೆಚ್ಚಾಗಲು ಕಾರಣವಾಯಿತೇ ಎಂದು ರಾಜಕೀಯ ವಿಶ್ಲೇಷಕರು ಪ್ರಶ್ನಿಸಿದ್ದಾರೆ.

ಅಶಾಂತಿ ಹೆಚ್ಚಾಗುತ್ತಿದ್ದಂತೆ ಸರ್ಕಾರ ಬಿಕ್ಕಟ್ಟು ನಿರ್ವಹಣೆಗೆ ಮುಂದಾಯಿತು. ನೇಪಾಳ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆಗೆ ನೆರವಾಗಲು ನೇಪಾಳ ಸೇನೆಯನ್ನು ನಿಯೋಜಿಸಲಾಯಿತು. ಜುಲೈ 30 ರಂದು ಪ್ರಧಾನಿ ಶಾ, ಕ್ಷೀಣಿಸುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆ ಕರೆದರು. ಮುಂದುವರಿದ ಹಿಂಸಾಚಾರವನ್ನು ತಡೆಯುವ ಉದ್ದೇಶದಿಂದ ಸ್ಥಳೀಯ ಆಡಳಿತಗಳು ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ನಿಷೇಧಾಜ್ಞೆಗಳನ್ನು ಜಾರಿಗೊಳಿಸಿದವು.

ಸಂತ್ರಸ್ತರ ಕುಟುಂಬಗಳೊಂದಿಗೆ ಒಪ್ಪಂದ ಏರ್ಪಟ್ಟ ನಂತರ ದೂರದರ್ಶನ ಸಂದೇಶ ನೀಡಿದ ಪ್ರಧಾನಿ ಶಾ, ಜೀವ ರಕ್ಷಣೆ, ಕೋಮು ಸೌಹಾರ್ದ ಮತ್ತು ಶಾಂತಿ ಮರುಸ್ಥಾಪನೆ ಸರ್ಕಾರದ ಮೊದಲ ಜವಾಬ್ದಾರಿಯಾಗಿದೆ ಎಂದರು. ಜೊತೆಗೆ, ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಿದ ಅವರು, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಆದರೆ, ಕೇವಲ ಪ್ರಸ್ತುತ ಉದ್ವಿಗ್ನತೆಯನ್ನು ತಡೆಯುವುದು ಮಾತ್ರವಲ್ಲದೆ, ದೇಶದಲ್ಲಿ ಹೆಚ್ಚುತ್ತಿರುವ ಕೋಮು ವೈಷಮ್ಯದ ಹಿಂದಿನ ಮೂಲ ಕಾರಣಗಳನ್ನು ಸರ್ಕಾರ ಪರಿಹರಿಸಬೇಕು ಎಂಬ ಆಗ್ರಹ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಅವರ ಈ ಹೇಳಿಕೆ ಬಂದಿದೆ.

ಪ್ರಧಾನಿಯವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಸಮಯದಲ್ಲಿ, ಅವರ ಸ್ವಂತ ಪಕ್ಷದ ಅಧ್ಯಕ್ಷ ರಬಿ ಲಮಿಚಾನೆ ಮುಂಚೂಣಿಗೆ ಬಂದರು. ಜುಲೈ 29 ರಂದು ಲಮಿಚಾನೆ ಸರ್ವಪಕ್ಷ ಸಭೆ ಕರೆದರು. ಈ ಸಭೆಗೆ ಪ್ರಧಾನಿ ಶಾ ಆಗಲಿ, ಗೃಹ ಸಚಿವ ಗುರುಂಗ್ ಆಗಲಿ ಹಾಜರಾಗಿರಲಿಲ್ಲ. ನಂತರ ಲಮಿಚಾನೆ, ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರನ್ನು ಭೇಟಿಯಾಗಿ ಪೀಡಿತ ಜಿಲ್ಲೆಗಳಲ್ಲಿದ್ದ ತಮ್ಮ ಪಕ್ಷದ ಸಂಸದರಿಗೆ ಸ್ವಕ್ಷೇತ್ರಕ್ಕೆ ಹಿಂತಿರುಗುವಂತೆ ಸೂಚಿಸಿದರು.

ಶುಕ್ರವಾರ ಸಿಂಗ ದರ್ಬಾರ್ ನಲ್ಲಿರುವ ಪಕ್ಷದ ಸಂಸದೀಯ ಕಚೇರಿಯಲ್ಲಿ ಅವರು ಧಾರ್ಮಿಕ ಮುಖಂಡರನ್ನು ಭೇಟಿಯಾದರು. ಮೌಲಾನಾ ನರುಲ್ ಹುಸೇನ್, ಮೌಲಾನಾ ಮೊಹಮ್ಮದ್ ಖಾಲಿದ್ ಹಾಗೂ ವಿಶ್ವ ಹಿಂದೂ ಮಹಾಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ತಿವಾರಿ ಮತ್ತು ಸಚಿವಾಲಯದ ರಾಜುರಾಜ್ ಫುಯಾಲ್ ಅವರಿದ್ದ ಈ ಸಭೆಯಲ್ಲಿ, ಪ್ರತಿಭಟನೆಗಳನ್ನು ತಡೆಯಲು ತಮ್ಮ ಪ್ರಭಾವವನ್ನು ಬಳಸುವಂತೆ ಲಮಿಚಾನೆ ಮನವಿ ಮಾಡಿದರು.

ಶುಕ್ರವಾರ ಮಧೇಶ್ ನ ನಾಯಕರೊಂದಿಗೆ ಮಾತನಾಡಿದ ಪ್ರಧಾನಿ ಶಾ, ತಮ್ಮ ಮತ್ತು ಲಮಿಚಾನೆ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಹಾಗೂ ಪರಸ್ಪರ ಒಪ್ಪಿಗೆಯಿಂದಲೇ ಪಕ್ಷದ ಅಧ್ಯಕ್ಷರು ಸರ್ವಪಕ್ಷ ಸಭೆ ಕರೆದಿದ್ದರು ಎಂದು ಸ್ಪಷ್ಟಪಡಿಸಿದರು. ಸಿಂಗ ದರ್ಬಾರ್ ನಲ್ಲಿ ನಡೆದ ಸಭೆಯಲ್ಲಿ, 'ನಾಲ್ಕೈದು ದಿನಗಳ ಕಾಲ ತಾವು ಏಕೆ ಮೌನವಾಗಿದ್ದೀರಿ?' ಮತ್ತು 'ಸಿಬ್ಬಂದಿ ಸೊಂಟದ ಮೇಲ್ಭಾಗಕ್ಕೆ ಗುಂಡು ಹಾರಿಸಿದ್ದು ಏಕೆ?' ಎಂಬ ಪ್ರಶ್ನೆಗಳನ್ನು ಪ್ರಧಾನಿ ಶಾ ಎದುರಿಸಬೇಕಾಯಿತು.

►ಕೋಮು ಉದ್ವಿಗ್ನತೆ ಹೆಚ್ಚುವ ಬಗ್ಗೆ ಮೊದಲೇ ಎಚ್ಚರಿಸಿದ್ದ ಭದ್ರತಾ ಸಂಸ್ಥೆಗಳು

ಕಳೆದ ವಾರ ನಡೆದ ಹಿಂಸಾಚಾರಕ್ಕೂ ಬಹು ಮುನ್ನವೇ ನೇಪಾಳದ ಭದ್ರತಾ ಸಂಸ್ಥೆಗಳು ದೇಶದ ರಾಜಕೀಯ ನಾಯಕತ್ವಕ್ಕೆ ಎಚ್ಚರಿಕೆ ನೀಡಿದ್ದವು. ಮಧೇಶ್ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಗಳು ಹೆಚ್ಚು ಸಂಘಟಿತ ಮತ್ತು ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಣ್ಣ ಸ್ಥಳೀಯ ವಿವಾದಗಳೂ ಶೀಘ್ರದಲ್ಲೇ ದೊಡ್ಡ ಮಟ್ಟದ ಅಶಾಂತಿಗೆ ತಿರುಗಬಹುದು ಎಂದು ಅವು ಕಳವಳ ವ್ಯಕ್ತಪಡಿಸಿದ್ದವು.

ಗಡಿ ಭದ್ರತೆ ಮತ್ತು ಗಲಭೆ ನಿಯಂತ್ರಣದ ಹೊಣೆ ಹೊತ್ತಿರುವ ನೇಪಾಳದ ಅರೆಸೇನಾ ಪಡೆವಾದ ‘ಸಶಸ್ತ್ರ ಪೊಲೀಸ್ ಪಡೆ’, ದಕ್ಷಿಣದ ಮೈದಾನ ಪ್ರದೇಶಗಳು ಕೋಮು ಹಿಂಸಾಚಾರಕ್ಕೆ ತುತ್ತಾಗುವ ಅಪಾಯ ಹೆಚ್ಚುತ್ತಿರುವ ಕುರಿತು ಮೂರು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿತ್ತು.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮಧೇಶ್ ನ ಕೆಲವು ಭಾಗಗಳಲ್ಲಿ ಧಾರ್ಮಿಕ ಉದ್ವಿಗ್ನತೆಯನ್ನು ಕೆರಳಿಸಲು ಸಂಘಟಿತ ಯತ್ನಗಳು ನಡೆಯುತ್ತಿವೆ ಎಂದು ಈ ವರದಿ ಮುನ್ನೆಚ್ಚರಿಕೆ ನೀಡಿತ್ತು. ಜೊತೆಗೆ ಗುಪ್ತಚರ ಮಾಹಿತಿ ಸಂಗ್ರಹಣೆಯನ್ನು ಬಲಪಡಿಸುವುದು, ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯತೆಯನ್ನು ಹೆಚ್ಚಿಸುವುದು ಹಾಗೂ ಹಿಂಸಾಚಾರಕ್ಕೆ ತಿರುಗುವ ಮುನ್ನವೇ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ವ್ಯವಸ್ಥೆಯನ್ನು ರೂಪಿಸುವಂತೆ ಶಿಫಾರಸು ಮಾಡಿತ್ತು.

ಅದೇ ರೀತಿ, ನೇಪಾಳ ಸೇನೆಯು ಸಹ ತನ್ನ ಆಂತರಿಕ ಮೌಲ್ಯಮಾಪನಗಳಲ್ಲಿ ಕೋಮು ಹಿಂಸಾಚಾರದ ಸಾಧ್ಯತೆಯನ್ನು ಪದೇ ಪದೇ ಎತ್ತಿ ತೋರಿಸಿತ್ತು. ಒಮ್ಮೆ ಸ್ಥಳೀಯ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದ ಧಾರ್ಮಿಕ ಉದ್ವಿಗ್ನತೆಗಳನ್ನು, ವ್ಯಾಪಕ ಅಸ್ಥಿರತೆಯನ್ನು ಸೃಷ್ಟಿಸಲು ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಕಳವಳವನ್ನು ಇದು ಬಿಂಬಿಸಿತ್ತು.

►ಕೋಮು ಉದ್ವಿಗ್ನತೆಗಳು ಹೆಚ್ಚುತ್ತಿರುವುದಕ್ಕೆ ಕಾರಣವೇನು?

ದಕ್ಷಿಣ ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ, ನೇಪಾಳದ ಇತಿಹಾಸದಲ್ಲಿ ಹಿಂದೂ-ಮುಸ್ಲಿಂ ನಡುವಿನ ಸಂಘಟಿತ ಕೋಮು ಹಿಂಸಾಚಾರದ ಘಟನೆಗಳು ತೀರ ವಿರಳ. ಧಾರ್ಮಿಕ ಮೆರವಣಿಗೆಗಳು, ಪ್ರಾರ್ಥನಾ ಮಂದಿರಗಳು ಹಾಗೂ ಸ್ಥಳೀಯ ಅಸಮಾಧಾನಗಳ ಕುರಿತು ಆಗಾಗ ಘರ್ಷಣೆಗಳು ನಡೆಯುತ್ತಿದ್ದರೂ, ಅವು ಸ್ಥಳೀಯ ಮಟ್ಟದಲ್ಲೇ ಶಮನಗೊಳ್ಳುತ್ತಿದ್ದವು. ಇತ್ತೀಚಿನ ವಾರದಲ್ಲಿ ಕಂಡುಬಂದ ಭಾರೀ ಪ್ರಮಾಣದ ಹಿಂಸಾಚಾರ ಅಥವಾ ಪ್ರಾದೇಶಿಕ ವ್ಯಾಪ್ತಿಯನ್ನು ಅವು ಪಡೆಯುತ್ತಿರಲಿಲ್ಲ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಸ್ವರೂಪ ಬದಲಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಕಾಠ್ಮಂಡುವಿನ 'ಸೆಂಟರ್ ಫಾರ್ ಸೋಶಿಯಲ್ ಚೇಂಜ್' ನಡೆಸಿದ ಅಧ್ಯಯನವು ಕೋಮು ಸಂಘರ್ಷಗಳ ತೀವ್ರ ಏರಿಕೆಯನ್ನು ದಾಖಲಿಸಿದೆ. 2022ರಲ್ಲಿ ಕೇವಲ 1 ಘಟನೆ ದಾಖಲಾಗಿದ್ದರೆ, 2024ರಲ್ಲಿ 8, 2025ರಲ್ಲಿ 3 ಹಾಗೂ 2026ರ ಮೊದಲ ಐದು ತಿಂಗಳಲ್ಲೇ 13 ಸಂಘರ್ಷಗಳು ನಡೆದಿವೆ. ಈ ಅಂಕಿ-ಅಂಶಗಳು ಪ್ರತಿ ವರ್ಷವೂ ಏರಿಕೆಯನ್ನೇ ತೋರಿಸದಿದ್ದರೂ, ಕೋಮು ಸಂಘರ್ಷಗಳ ಆವರ್ತನ ಮತ್ತು ತೀವ್ರತೆಯಲ್ಲಿ ಭಾರೀ ಹೆಚ್ಚಳವಾಗಿರುವುದನ್ನು ಸ್ಪಷ್ಟಪಡಿಸುತ್ತವೆ.

ಈ ಬದಲಾವಣೆಯನ್ನು ಅಧ್ಯಯನ ಮಾಡಿರುವ ಸಂಘರ್ಷ ಮತ್ತು ಆಡಳಿತ ತಜ್ಞ ಪ್ರಕಾಶ್ ಭಟ್ಟರಾಯ್, ಇತ್ತೀಚಿನ ಹಿಂಸಾಚಾರವು ನೇಪಾಳದ ಗತಕಾಲಕ್ಕಿಂತ ಸಂಪೂರ್ಣ ಭಿನ್ನವಾಗಿದೆ ಎಂದಿದ್ದಾರೆ. ಐತಿಹಾಸಿಕವಾಗಿ, ನೆರೆಯ ದಕ್ಷಿಣ ಏಷ್ಯಾದ ದೇಶಗಳಿಗೆ ಹೋಲಿಸಿದರೆ ನೇಪಾಳದಲ್ಲಿ ಸಂಘಟಿತ ಧಾರ್ಮಿಕ ಹಿಂಸಾಚಾರ ತೀರ ಕಡಿಮೆಯಿತ್ತು. ವಿಭಿನ್ನ ಧರ್ಮಗಳ ನಡುವಿನ ಸೌಹಾರ್ದತೆಯನ್ನು ದೇಶದ ಹೆಮ್ಮೆ ಎಂದು ನೋಡಲಾಗುತ್ತಿತ್ತು ಎಂದಿರುವ ಅವರು, ಈ ಹಿನ್ನೆಲೆಯಲ್ಲಿ, ನಾಲ್ಕು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 37 ಘರ್ಷಣೆಗಳು ದಾಖಲಾಗಿರುವುದು ಹಾಗೂ 2026ರಲ್ಲಿ ದಿಢೀರ್ ಏರಿಕೆ ಕಂಡುಬಂದಿರುವುದು ದೊಡ್ಡ ಮಟ್ಟದ ಸ್ಥಿತ್ಯಂತರವನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಸಂಶೋಧಕರು ಈ ಬದಲಾವಣೆಗೆ ಯಾವುದೇ ಒಂದೇ ಕಾರಣವನ್ನು ಹೊಣೆ ಮಾಡದೆ, ಹಲವು ಅಂಶಗಳು ಇದಕ್ಕೆ ಕಾರಣ ಎನ್ನುತ್ತಾರೆ. ಮಧೇಶ್ ನ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಧ್ರುವೀಕರಣ, ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹಾಗೂ ಪ್ರಚೋದನಕಾರಿ ವಿಷಯಗಳ ವೇಗದ ಹರಡುವಿಕೆ ಮತ್ತು ಸ್ಥಳೀಯ ವಿವಾದಗಳಿಗೆ ಕೋಮು ಬಣ್ಣ ಬಳಿಯುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ.

ಹಿಂದಿಗಿಂತ ಭಿನ್ನವಾಗಿ, ಈಗ ಒಂದು ಜಿಲ್ಲೆಯಲ್ಲಿ ನಡೆಯುವ ಘಟನೆಗಳು ಸಾಮಾಜಿಕ ಜಾಲತಾಣಗಳ ಮೂಲಕ ತಕ್ಷಣವೇ ಹರಡುತ್ತಿವೆ. ಪರಿಣಾಮವಾಗಿ, ವದಂತಿಗಳು ಮತ್ತು ಪ್ರಚೋದನಕಾರಿ ವೀಡಿಯೋಗಳು ಕೆಲವೇ ಗಂಟೆಗಳಲ್ಲಿ ನೆರೆಯ ನಗರಗಳನ್ನು ತಲುಪಿ, ಪೈಪೋಟಿಯ ಮಾದರಿಯಲ್ಲಿ ಹಿಂಸಾಚಾರ ಹೆಚ್ಚಲು ಕಾರಣವಾಗುತ್ತಿವೆ.

ಈ ಅಶಾಂತಿಯ ಭೌಗೋಳಿಕತೆಯೂ ಕಳವಳವನ್ನು ಹೆಚ್ಚಿಸಿದೆ. ಮಧೇಶ್ ಪ್ರದೇಶವು ಭಾರತದೊಂದಿಗೆ ಮುಕ್ತ ಗಡಿಯನ್ನು ಹೊಂದಿದ್ದು, ಜನರು, ಆಲೋಚನೆಗಳು ಮತ್ತು ಮಾಧ್ಯಮಗಳ ಸುಲಭ ಸಂಚಾರಕ್ಕೆ ಅವಕಾಶವಿದೆ. ಗಡಿಯ ಎರಡೂ ಬದಿಯ ಸಮುದಾಯಗಳು ಭಾಷೆ, ಧಾರ್ಮಿಕ ಸಂಪ್ರದಾಯಗಳು ಮತ್ತು ನಿಕಟ ಕೌಟುಂಬಿಕ ಬಾಂಧವ್ಯವನ್ನು ಹಂಚಿಕೊಂಡಿವೆ.

ಇತ್ತೀಚಿನ ಹಿಂಸಾಚಾರವನ್ನು ಕೇವಲ ಯಾವುದೇ ಒಂದು ಬಾಹ್ಯ ಪ್ರಭಾವಕ್ಕೆ ಸೀಮಿತಗೊಳಿಸುವುದನ್ನು ವಿಶ್ಲೇಷಕರು ನಿರಾಕರಿಸುತ್ತಾರಾದರೂ, ಗಡಿಯಾಚೆಯಿಂದ ಹರಿದುಬರುವ ರಾಜಕೀಯ ಮತ್ತು ಧಾರ್ಮಿಕ ಅಲೆಗಳಿಗೆ ಈ ಪ್ರದೇಶವು ಬೇಗನೆ ಸಿಲುಕಿಕೊಳ್ಳುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಬದಲಾಗಿ, ಸ್ಥಳೀಯ ಅಸಮಾಧಾನಗಳು, ದುರ್ಬಲ ಆಡಳಿತಾತ್ಮಕ ಸ್ಪಂದನೆ ಹಾಗೂ ವ್ಯಾಪಕ ಸಿದ್ಧಾಂತಗಳ ಪ್ರಭಾವಗಳು ಒಟ್ಟಾಗಿ ಈ ವಾತಾವರಣವನ್ನು ಮತ್ತಷ್ಟು ಉದ್ವಿಗ್ನಗೊಳಿಸಿವೆ ಎಂಬುದು ಅವರ ವಾದವಾಗಿದೆ.

►ಗಡಿಯಾಚಿನ ಪ್ರಭಾವಗಳ ಕುರಿತಾದ ಚರ್ಚೆ

ಕೋಮು ಉದ್ವಿಗ್ನತೆಯ ಈ ಏರಿಕೆಯು ಕಳೆದ ಎರಡು ದಶಕಗಳಲ್ಲಿ ನೇಪಾಳದ ಧಾರ್ಮಿಕ ಮತ್ತು ರಾಜಕೀಯ ರಂಗದಲ್ಲಾದ ವ್ಯಾಪಕ ಬದಲಾವಣೆಗಳ ಕಾಲದಲ್ಲೇ ಸಂಭವಿಸಿದೆ. 2008ರಲ್ಲಿ ರಾಜಪ್ರಭುತ್ವ ರದ್ದಾದ ನಂತರ, ನೇಪಾಳವು ಅಧಿಕೃತ 'ಹಿಂದೂ ರಾಷ್ಟ್ರ' ಎಂಬ ಹೆಗ್ಗಳಿಕೆಯನ್ನು ಕಳೆದುಕೊಂಡು ಜಾತ್ಯತೀತ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಈ ಬದಲಾವಣೆಯನ್ನು ರಾಜಪ್ರಭುತ್ವ ಪ್ರತಿಪಾದಕರು ಮತ್ತು ಮತ್ತೆ ಹಿಂದೂ ರಾಷ್ಟ್ರ ಸ್ಥಾಪನೆಗೆ ಆಗ್ರಹಿಸುವ ಸಂಘಟನೆಗಳು ಇಂದಿಗೂ ವಿರೋಧಿಸುತ್ತಿವೆ.

ಈ ಹಿನ್ನೆಲೆಯಲ್ಲಿ, ನೇಪಾಳದ ದಕ್ಷಿಣದ ಮೈದಾನ ಪ್ರದೇಶಗಳಲ್ಲಿ ವಿಶಾಲ ಸಂಘ ಪರಿವಾರದ ಸಂಘಟನೆಗಳ ಸಕ್ರಿಯತೆ ಹೆಚ್ಚುತ್ತಿರುವುದನ್ನು ಸಂಶೋಧಕರು ಮತ್ತು ನೇಪಾಳಿ ಮಾಧ್ಯಮಗಳು ಎತ್ತಿ ತೋರಿಸಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂತಾರಾಷ್ಟ್ರೀಯ ವಿಭಾಗವಾದ 'ಹಿಂದೂ ಸ್ವಯಂಸೇವಕ ಸಂಘ' 1990ರಿಂದಲೇ ನೇಪಾಳದಲ್ಲಿ ಕಾರ್ಯಾಚರಿಸುತ್ತಿದ್ದು, ಮಧೇಶ್ ನ ಕೆಲವು ಭಾಗಗಳಲ್ಲಿ ಅದರ ಚಟುವಟಿಕೆಗಳು ಹೆಚ್ಚು ಗೋಚರಿಸುತ್ತಿವೆ ಎಂದು 'ಕಲಾಂ ವೀಕ್ಲಿ' ವರದಿ ತಿಳಿಸಿದೆ. ಇತ್ತೀಚಿನ ಸಂಘರ್ಷಗಳ ವೇಳೆ "ಪಾಕಿಸ್ತಾನಕ್ಕೆ ಹಿಂತಿರುಗಿ" ಎಂಬ ಘೋಷಣೆಗಳು ಕೂಗಲ್ಪಟ್ಟಿದ್ದು ಮತ್ತು ಮುಸ್ಲಿಂ ಸಮುದಾಯದವರನ್ನು ಬಲವಂತವಾಗಿ "ಜೈ ಶ್ರೀರಾಮ್" ಎಂದು ಜಪಿಸುವಂತೆ ಮಾಡಲಾದ ಘಟನೆಗಳನ್ನು ಈ ವರದಿ ಉಲ್ಲೇಖಿಸಿದೆ. ಹಿಂದೆ ನೇಪಾಳದಲ್ಲಿ ಅಪರೂಪವಾಗಿದ್ದ ಇಂತಹ ಪ್ರಚೋದನಕಾರಿ ಶೈಲಿಯು ಈಗ ಕಾಣಿಸಿಕೊಳ್ಳುತ್ತಿದೆ ಎಂದು ಅದು ಬಣ್ಣಿಸಿದೆ.

'ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್' ಸಂಸ್ಥೆಯ 2024ರ ವರದಿಯೂ ಸಹ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಸಂಘಟನೆಗಳು ನೇಪಾಳದ ತರಾಯ್ ಜಿಲ್ಲೆಗಳಲ್ಲಿ ತಮ್ಮ ಉಪಸ್ಥಿತಿಯನ್ನು ವಿಸ್ತರಿಸಿವೆ ಎಂದು ಹೇಳಿದೆ.

ಗುರುವಾರ ಪ್ರಕಟವಾದ 'ಹಿಮಾಲ್ ಖಬರ್' ಪತ್ರಿಕೆಯ ಸಂಪಾದಕೀಯದಲ್ಲಿ, ಮಧೇಶ್-ತರಾಯ್ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಎಚ್ಎಸ್ಎಸ್ ನೇಪಾಳದ ಮೂಲಕ ಆರೆಸ್ಸೆಸ್ನ ನೇರ ಮತ್ತು ಪರೋಕ್ಷ ಪಾತ್ರವಿರುವುದು ತನ್ನ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದೆ.

ಈ ಸಂಘಟನೆಗಳೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ಪ್ರಚೋದನಕಾರಿ ಸಂದೇಶಗಳನ್ನು ಹರಡಿದ್ದಾರೆ ಹಾಗೂ ಧರ್ಮ ರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಹಿಂಸಾಚಾರಕ್ಕೆ ಜನರನ್ನು ಸಂಘಟಿಸಿದ್ದಾರೆ ಎಂದು ಪತ್ರಿಕೆ ಆರೋಪಿಸಿದೆ. ಅಲ್ಲದೆ, ಆಡಳಿತಕ್ಕೆ ಈ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೂ, ಈ ಸಂಸ್ಥೆಗಳ ಸಂಪರ್ಕ ಹೊಂದಿರುವ ವ್ಯಕ್ತಿಗಳ ಪ್ರಭಾವದ ಕಾರಣದಿಂದಾಗಿ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಅದು ದೂರಿದೆ.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News