×
Ad

ʼಹ್ಯಾಂಟವೈರಸ್ʼ ಬೆಳಕಿಗೆ ತಂದ ಅಪರೂಪದ ಡಾರ್ವಿನ್ಸ್ ಕ್ಯಾರಕರ ಪಕ್ಷಿ!

Update: 2026-05-13 18:08 IST

Photo Credit : AI Generated

ವನ್ಯಜೀವಿಗಳ ಪರಿಸರದಲ್ಲಿ ಹ್ಯಾಂಟವೈರಸ್ ಅಪಾಯಗಳ ಬಗ್ಗೆ ಗಮನ ಸೆಳೆದಿರುವುದು ಮಾತ್ರವಲ್ಲದೆ, ಡಚ್ ವಿಜ್ಞಾನಿ ವೀಕ್ಷಿಸಲು ಹೋದ ಅಪರೂಪದ ಪಕ್ಷಿಯ ಕಡೆಗೂ ಗಮನ ಸೆಳೆದಿದೆ.

ಅಪರೂಪದ ಪಕ್ಷಿಗಳ ಮೇಲಿನ ಉತ್ಸಾಹದಿಂದ ಪ್ರೇರಿತರಾದ ಡಚ್ ಪಕ್ಷಿಶಾಸ್ತ್ರಜ್ಞ ಲಿಯೋ ಶಿಲ್ಪೆರಾರ್ಡ್ ಅರ್ಜೆಂಟಿನಾದ ಉಶೂವಾಯ ನಗರದ ಹೊರವಲಯದಲ್ಲಿರುವ ಒಂದು ತ್ಯಾಜ್ಯರಾಶಿಯ ಕಡೆಗೆ ಪ್ರಯಾಣ ಬೆಳಸಿದ್ದರು. ಡಾರ್ವಿನ್ಸ್ ಕ್ಯಾರಕರ ಎಂದೇ ಕರೆಯಲಾಗುವ ಬಿಳಿ ಕುತ್ತಿಗೆಯ ಕ್ಯಾರಕರ ನೋಡುವ ಉದ್ದೇಶ ಅವರದ್ದಾಗಿತ್ತು. ಇದೀಗ ಈ 70 ವರ್ಷದ ವಿಜ್ಞಾನಿಯನ್ನು ಕ್ರೂಸ್ ಹಡಗು ಎಂವಿ ಹೊಂಡಿಯಾಸ್ಗೆ ಸಂಬಂಧಿಸಿದ ಮಾರಕ ಹ್ಯಾಂಟವೈರಸ್ನ ಮೊದಲ ರೋಗಿ ಎಂದು ಗುರುತಿಸಲಾಗಿದೆ. ತ್ಯಾಜ್ಯಗುಂಡಿಯಲ್ಲಿದ್ದ ಇಲಿ ಹಿಕ್ಕೆಗಳಿಂದ ವೈರಸ್ ಕಣಗಳನ್ನು ಅವರು ಉಸಿರಾಡಿರಬಹುದು ಎಂದು ಆರೋಗ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಅವರು ಉಸಿರಾಡಿದ ತಳಿ ಮಾನವರ ನಡುವೆ ಹರಡುವ ಹ್ಯಾಂಟವೈರಸ್ ನ ಏಕೈಕ ಆಂಡಿಸ್ ತಳಿಯಾಗಿದೆ.

ಇದೀಗ ವನ್ಯಜೀವಿಗಳ ಪರಿಸರದಲ್ಲಿ ಹ್ಯಾಂಟವೈರಸ್ ಅಪಾಯಗಳ ಬಗ್ಗೆ ಗಮನ ಸೆಳೆದಿರುವುದು ಮಾತ್ರವಲ್ಲದೆ, ಡಚ್ ವಿಜ್ಞಾನಿ ವೀಕ್ಷಿಸಲು ಹೋದ ಅಪರೂಪದ ಪಕ್ಷಿಯ ಕಡೆಗೂ ಗಮನ ಸೆಳೆದಿದೆ. ಡಾರ್ವಿನ್ಸ್ ಕ್ಯಾರಕರವು ಮುಖ್ಯವಾಗಿ ಫಾಕ್ಲ್ಯಾಂಡ್ ದ್ವೀಪಗಳು ಮತ್ತು ದಕ್ಷಿಣ ಅಮೆರಿಕದ ದಕ್ಷಿಣದ ಭಾಗದಲ್ಲಿ ಕಂಡುಬರುವ ಬೇಟೆ ಪಕ್ಷಿಯಾಗಿದೆ. ಈ ಪಕ್ಷಿ ತನ್ನ ಬುದ್ಧಿಮತ್ತೆ, ಕುತೂಹಲ ಮತ್ತು ಬೇಟೆ ಹುಡುಕುವ ರೀತಿಗೆ ಪ್ರಸಿದ್ಧಿ ಪಡೆದಿದೆ. ಅವಕಾಶವಾದಿ ಆಹಾರ ಸೇವನೆ ಪದ್ಧತಿ ಮತ್ತು ಹೊಂದಿಕೊಳ್ಳುವಿಕೆಯ ಕುರಿತಾಗಿ ವಿಜ್ಞಾನಿಗಳಲ್ಲಿ ಮೊದಲಿನಿಂದಲೇ ಕುತೂಹಲವಿತ್ತು.

ಪಕ್ಷಿತಜ್ಞರ ಪ್ರಕಾರ, ಸಾಮಾನ್ಯ ರ್‍ಯಾಪ್ಟರ್ಗಳಲ್ಲಿ ಕಾಣದೆ ಇರುವ ಅಸಾಧಾರಣ ಮಟ್ಟದ ಕುತೂಹಲ ಮತ್ತು ಸಮಸ್ಯೆ-ಪರಿಹರಿಸುವ ನಡವಳಿಕೆಯನ್ನು ಡಾರ್ವಿನ್ಸ್ ಕ್ಯಾರಕರವು ಪ್ರದರ್ಶಿಸುತ್ತದೆ. “ಜಾಗರೂಕವಾಗಿ ಮತ್ತು ದೂರದಿಂದ ಗಮನಿಸಿ ಬೇಟೆಯಾಡುವ ಪಕ್ಷಿಗಳಿಗೆ ಭಿನ್ನವಾಗಿ, ಡಾರ್ವಿನ್ಸ್ ಕ್ಯಾರಕರವು ಮನುಷ್ಯರ ಬಹು ಸಮೀಪ ಬರುತ್ತದೆ. ಪರಿಚಯವಿಲ್ಲದ ವಸ್ತುಗಳನ್ನು ಪರಿಶೀಲಿಸುತ್ತದೆ ಮತ್ತು ಬದಲಾಗುತ್ತಿರುವ ಸನ್ನಿವೇಶಗಳಿಗೆ ತ್ವರಿತವಾಗಿ ಹೊಂದಿಕೊಳ್ಳುತ್ತದೆ.”

ವಿಜ್ಞಾನಿಗಳ ಪ್ರಕಾರ, ವರ್ತನೆಯ ವಿಜ್ಞಾನದ ದೃಷ್ಟಿಕೋನದಿಂದ ನೋಡಿದಂತೆ ಅಂತಹ ಗುಣಲಕ್ಷಣಗಳು ಹೆಚ್ಚಿನ ಅರಿವಿನ ಹೊಂದಿಕೆಯನ್ನು ಸೂಚಿಸುತ್ತದೆ. ಪರಭಕ್ಷಕ ಪಕ್ಷಿಗಳು ಸಂಪೂರ್ಣವಾಗಿ ಪ್ರವೃತ್ತಿಯಿಂದ ಸಾಗುತ್ತವೆ ಎನ್ನುವ ಸಾಂಪ್ರದಾಯಿಕ ಊಹೆಗಳಿಗೆ ಈ ಪಕ್ಷಿ ಸವಾಲೊಡ್ಡಿದೆ. ಮತ್ತು ಪ್ರತ್ಯೇಕ ಪರಿಸರ ವ್ಯವಸ್ಥೆಯಲ್ಲಿ ಬುದ್ಧಿವಂತಿಕೆ ಹೇಗೆ ವಿಕಸನಗೊಳ್ಳುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಪಕ್ಷಿತಜ್ಞರು ಹೇಳುವ ಪ್ರಕಾರ, “ಡಾರ್ವಿನ್ ಕ್ಯಾರಕರದಂತಹ ಅವಕಾಶವಾದಿಯಾಗಿ ಆಹಾರ ಸೇವಿಸುವ ಪ್ರಭೇದಗಳ ಪಕ್ಷಿಗಳ ನಡವಳಿಕೆ ಮತ್ತು ಬದುಕುಳಿಯುವುದನ್ನು ರೂಪಿಸುವಲ್ಲಿ ಆವಾಸಸ್ಥಾನಗಳು, ತ್ಯಾಜ್ಯ ತಾಣಗಳು ಮತ್ತು ಮಾನವ ಚಟುವಟಿಕೆಯ ಬದಲಾವಣೆ ಬಹಳ ಪಾತ್ರ ವಹಿಸುತ್ತವೆ. ಇದೀಗ ತ್ಯಾಜ್ಯ ಸ್ಥಳಗಳು ವಿಸ್ತಾರಗೊಂಡಿರುವುದು ಮತ್ತು ಬದಲಾದ ಪರಿಸರದಲ್ಲಿ ಅವು ಹೆಚ್ಚು ಬೇಗನೇ ಆಹಾರ ಹುಡುಕಬಲ್ಲವು. ಆದರೆ ಇದರಿಂದ ಪಕ್ಷಿಗಳ ಸಹಜ ಪ್ರವೃತ್ತಿ ಬದಲಾಗಿ ಆಹಾರಕ್ಕೆ ಮಾನವರ ಮೇಲೆ ಹೆಚ್ಚು ಅವಲಂಬಿತವಾಗುವ ಸಾಧ್ಯತೆಯಿದೆ.”

ಕಾಲಾನಂತರದಲ್ಲಿ ತ್ಯಾಜ್ಯದ ಮೇಲಿನ ಅವಲಂಬನೆಯಿಂದ ಪಕ್ಷಿಗಳು ವಿಷ ಸೇವನೆ, ಪ್ಲಾಸ್ಟಿಕ್ ಸೇವನೆ, ರೋಗ ಹರಡುವಿಕೆ ಮೊದಲಾಗಿ ಮಾನವರೊಂದಿಗೆ ಸಂಘರ್ಷಕ್ಕೆ ಕಾರಣವಾಗಬಹುದು. ಅವುಗಳ ಆವಾಸಸ್ಥಾನ ಅಡಚಣೆಯು ಸಂತಾನೋತ್ಪತ್ತಿ ಮಾದರಿ ಮತ್ತು ಪರಿಸರ ವ್ಯವಸ್ಥೆಯ ಸಮತೋಲನದ ಮೇಲೆ ಪರಿಣಾಮ ಬೀರಲಿದೆ. ಅಲ್ಪಾವಧಿಯ ಹೊಂದಾಣಿಕೆ ನಡುವೆ ದೀರ್ಘಕಾಲೀನ ಸಂರಕ್ಷಣೆಗೆ ಸಮಸ್ಯೆಯಾಗಬಹುದು.

ವನ್ಯಜೀವಿ ಪರಿಸರದಲ್ಲಿ ಕೆಲಸ ಮಾಡುವ ಯಾರೇ ಆದರೂ ಪ್ರಾಣಿಜನ್ಯ ರೋಗಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆಯ ಅಪಾಯವನ್ನೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಈ ಪ್ರಕರಣ ಸಾಬೀತು ಮಾಡಿದೆ. ತ್ಯಾಜ್ಯ ಗುಂಡಿಗಳಂತಹ ಸ್ಥಳದಲ್ಲಿ ರಕ್ಷಣಾತ್ಮಕ ಬಟ್ಟೆ, ಕೈಗವಸುಗಳು, ಮುಖಕವಚಗಳು ಮತ್ತು ಸೂಕ್ತ ಪಾದರಕ್ಷೆಗಳು ಅತ್ಯಗತ್ಯ. ವಿಶೇಷವಾಗಿ ಇಲಿಗಳ ಹಿಕ್ಕೆಗಳು, ಮೃತ ದೇಹಗಳು ಅಥವಾ ಕಲುಷಿತ ಮಣ್ಣು ಇರುವ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ನೇರ ಸಂಪರ್ಕ ತಪ್ಪಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News