NEET-UG ಪರೀಕ್ಷೆ ರದ್ದು: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಹೇಗೆ? ಈ ಹಿಂದಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಏನಾಯಿತು?
ಸಾಂದರ್ಭಿಕ ಚಿತ್ರ PC: freepik
ಮೇ 3 ರಂದು ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (NEET-UG) ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ರದ್ದುಗೊಳಿಸಿದೆ. 22.05 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಕಾರಣದಿಂದ ನೀಟ್-ಯುಜಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಈ ಹಿಂದೆಯೂ ಕೇಳಿಬಂದಿದ್ದರೂ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತಿರುವುದು ಇದೇ ಮೊದಲು. ಪದವಿಪೂರ್ವ ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ನೀಟ್-ಯುಜಿ, ಒಂದೇ ದಿನ ಮತ್ತು ಒಂದೇ ಪಾಳಿಯಲ್ಲಿ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಎನ್‌ಟಿಎ ನಡೆಸುವ ಅತಿದೊಡ್ಡ ಪರೀಕ್ಷೆಯಾಗಿದೆ.
ಏನಿದು ಪ್ರಕರಣ?
ಮೇ 3 ರಂದು ನಡೆದ NEET-UG ಪರೀಕ್ಷೆಯ ಸುತ್ತಲಿನ ಅವ್ಯವಹಾರಗಳ ಬಗ್ಗೆ ಮೇ 7 ರಂದು ಎನ್‌ಟಿಎಗೆ ಮಾಹಿತಿ ಸಿಕ್ಕಿದೆ. ಎನ್‌ಟಿಎ ಮೂಲಗಳು ಹೇಳುವಂತೆ, ಪ್ರಶ್ನೆ ಪತ್ರಿಕೆಯ PDF ಫೈಲ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಅವರು ಮೇ 8 ರಂದು ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಪರೀಕ್ಷೆಯ ನಾಲ್ಕು ದಿನಗಳ ನಂತರ ಈ ವಿವರಗಳು ಹೊರಬಂದ ಕಾರಣ, ಪರೀಕ್ಷೆಗೆ ಮೊದಲು ಈ ಫೈಲ್ ವಾಸ್ತವವಾಗಿ ಚಲಾವಣೆಯಲ್ಲಿತ್ತೇ ಎಂಬುದನ್ನು ಪರಿಶೀಲಿಸುವ ಅವಶ್ಯಕತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಷಯವು ತನಿಖೆಯಲ್ಲಿದೆ. “ಬಹುಪಾಲು ಪ್ರಾಮಾಣಿಕ ಆಕಾಂಕ್ಷಿಗಳ ಪ್ರಯತ್ನ ಮತ್ತು ಸಮಗ್ರತೆಯನ್ನು ಪ್ರಶ್ನಿಸಲಾಗಿಲ್ಲ. ಅದನ್ನು ಅಪಮೌಲ್ಯಗೊಳಿಸಲಾಗುವುದಿಲ್ಲ” ಎಂದು ಎನ್‌ಟಿಎ ರವಿವಾರ ಹೇಳಿಕೆ ನೀಡಿದೆ.
ಈ ಮಧ್ಯೆ, ರಾಜಸ್ಥಾನ ವಿಶೇಷ ಕಾರ್ಯಾಚರಣೆ ಗುಂಪು 410 ಪ್ರಶ್ನೆಗಳನ್ನು ಹೊಂದಿರುವ ‘ಊಹೆ ಪ್ರಶ್ನೆ ಪತ್ರಿಕೆ’ (guess paper)ಯನ್ನು ಪತ್ತೆಹಚ್ಚಿದೆ ಎಂದು ಹೇಳಿದೆ. ಅದರಲ್ಲಿ 120 ಪ್ರಶ್ನೆಗಳು ಪರೀಕ್ಷೆಯಲ್ಲಿ ಕೇಳಲಾಗಿದ್ದವು. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ.
“ಕೇಂದ್ರ ಸಂಸ್ಥೆಗಳ ಸಮನ್ವಯದೊಂದಿಗೆ ಎನ್‌ಟಿಎ ಪರಿಶೀಲಿಸಿದ ಮಾಹಿತಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಹಂಚಿಕೊಂಡ ತನಿಖಾ ವರದಿಗಳ ಆಧಾರದ ಮೇಲೆ” ಪರೀಕ್ಷೆಯನ್ನು ರದ್ದುಗೊಳಿಸುತ್ತಿರುವುದಾಗಿ ಎನ್‌ಟಿಎ ಮಂಗಳವಾರ ಘೋಷಿಸಿತು. ಹೊಸ ನೋಂದಣಿ ಅಥವಾ ಪರೀಕ್ಷಾ ಶುಲ್ಕದ ಅಗತ್ಯವಿಲ್ಲದೆ ಮರುಪರೀಕ್ಷೆಯನ್ನು ನಡೆಸಲಾಗುವುದು. “ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ಮೇಲೆ ಇರುವ ನಂಬಿಕೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ” ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎನ್‌ಟಿಎ ಹೇಳಿದೆ.
ವಾಟ್ಸಾಪ್‌ನಲ್ಲಿ ವೈರಲ್ ಆದ ಪ್ರಶ್ನೆ ಪತ್ರಿಕೆ
ರಾಜಸ್ಥಾನದಲ್ಲಿ ನಡೆದ 2026ರ NEET-UG ಪರೀಕ್ಷೆಯಲ್ಲಿನ ಶಂಕಿತ ಪ್ರಶ್ನೆಪತ್ರಿಕೆ ಸೋರಿಕೆ ತನಿಖೆ, ವಾಟ್ಸಾಪ್ ಸಂದೇಶದಲ್ಲಿದ್ದ “Forwarded many times” ಗುರುತಿನಿಂದ ಆರಂಭಗೊಂಡಿತ್ತು.
‘ಊಹೆ ಪತ್ರಿಕೆ’ಯ ಜಾಡನ್ನು ಅನುಸರಿಸಿದ ತನಿಖಾಧಿಕಾರಿಗಳು ಈ ವಾಟ್ಸಾಪ್ ಸಂದೇಶವನ್ನು ಪತ್ತೆಹಚ್ಚಿದರು. ಆರಂಭದಲ್ಲಿ ಇದು ಪ್ರತ್ಯೇಕ ಸೋರಿಕೆ ಎಂದು ಅಧಿಕಾರಿಗಳು ಭಾವಿಸಿದ್ದರೂ, ಸಂದೇಶವು ಅದರ ವ್ಯಾಪಕ ಸ್ವರೂಪವನ್ನು ಸೂಚಿಸುತ್ತದೆ ಎಂದು ಮೂಲಗಳು ಹೇಳಿವೆ.
ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ತನಿಖೆ ನಡೆಸುತ್ತಿರುವ ಪ್ರಶ್ನೆಪತ್ರಿಕೆಯನ್ನು ಡೆಹ್ರಾಡೂನ್‌ನಲ್ಲಿದ್ದ ಸಿಕಾರ್ ಮೂಲದ ವ್ಯಕ್ತಿಯೊಬ್ಬರು ‘ಊಹೆ ಪತ್ರಿಕೆ’ ರೂಪದಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ‘ಊಹೆ ಪತ್ರಿಕೆ’ಯನ್ನು ಡೆಹ್ರಾಡೂನ್‌ನಿಂದ ಕೇರಳದಲ್ಲಿ ಓದುತ್ತಿರುವ ರಾಜಸ್ಥಾನದ ಚುರುವಿನ MBBS ವಿದ್ಯಾರ್ಥಿಯೊಬ್ಬರೊಂದಿಗೆ ಹಂಚಿಕೊಳ್ಳಲಾಗಿತ್ತು. ಆ ವಿದ್ಯಾರ್ಥಿ ಮೇ 1ರ ಸುಮಾರಿಗೆ ರಾಜಸ್ಥಾನದ ಸಿಕಾರ್ ನಲ್ಲಿದ್ದ ತನ್ನ ಸ್ನೇಹಿತನಿಗೆ ಅದನ್ನು ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನು ನಂತರ ಪೇಯಿಂಗ್ ಗೆಸ್ಟ್ ವಸತಿ ಸೌಕರ್ಯದ ಮಾಲೀಕರೊಂದಿಗೆ ಹಂಚಿಕೊಳ್ಳಲಾಯಿತು. ಅವರು ಅದನ್ನು ಮತ್ತಷ್ಟು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಅದನ್ನು ಇತರ ವಿದ್ಯಾರ್ಥಿಗಳು ಮತ್ತು ವೃತ್ತಿ ಸಲಹೆಗಾರರೊಂದಿಗೆ ಹಂಚಿಕೊಂಡಿದ್ದಾರೆ. ಹೀಗೆ ಅದು ವ್ಯಾಪಕವಾಗಿ ಹರಡಿದೆ. ‘ಊಹೆ ಪತ್ರಿಕೆ’ಯ ಮುದ್ರಣ ಪ್ರತಿಗಳೂ ಹರಡಿರಬಹುದಾದ ಕಾರಣ, ಸೋರಿಕೆಯ ಮೂಲವನ್ನು ಪತ್ತೆಹಚ್ಚುವುದು ಹೆಚ್ಚು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋರಿಕೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ಸಿಕಾರ್‌ನ ಪೇಯಿಂಗ್ ಗೆಸ್ಟ್ ವಸತಿಗೃಹದ ಮಾಲೀಕರ ಮೇಲೂ ನಿಗಾ ಇಡಲಾಗಿದೆ. ಸೋರಿಕೆ ವ್ಯಾಪಕವಾದ ಬಳಿಕ ಬಂಧನ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವರು ದೂರು ನೀಡಿರಬಹುದು ಎಂದು ಮೂಲಗಳು ಹೇಳಿವೆ.
ಜೈಪುರದ ಪೊಲೀಸ್ ಅಧಿಕಾರಿಗಳು, ಸೋರಿಕೆಯ ನಿಖರ ಮೂಲ ಅಥವಾ ‘ಊಹೆ ಪತ್ರಿಕೆ’ ಎಲ್ಲಿಂದ ಬಂದಿದೆ ಎಂಬುದನ್ನು ಇನ್ನೂ “ನಿರ್ಣಾಯಕವಾಗಿ ಸ್ಥಾಪಿಸಲಾಗಿಲ್ಲ” ಎಂದು ತಿಳಿಸಿದ್ದಾರೆ.
ಜೈಪುರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಶಾಲ್ ಬನ್ಸಾಲ್, “ಈ ‘ಊಹೆ ಪತ್ರಿಕೆ’ಯಲ್ಲಿ 400ಕ್ಕೂ ಹೆಚ್ಚು ಪ್ರಶ್ನೆಗಳಿದ್ದು, ಅವುಗಳಲ್ಲಿ ಸುಮಾರು 120 ಪ್ರಶ್ನೆಗಳು ನಿಜವಾದ ಪರೀಕ್ಷೆಯಲ್ಲಿ ಕಾಣಿಸಿಕೊಂಡಿವೆ. ಈ ಊಹೆ ಪತ್ರಿಕೆ ಪರೀಕ್ಷೆಗೆ ವಾರಗಳ ಮುಂಚೆಯೇ, ಕೆಲವರ ಬಳಿ ಒಂದು ತಿಂಗಳ ಹಿಂದಿನಿಂದಲೂ ಇತ್ತು. ಇದುವರೆಗಿನ ವಿಚಾರಣೆಯಲ್ಲಿ ಪ್ರಶ್ನೆ ಪತ್ರಿಕೆ ಎಲ್ಲಿಂದ ಬಂದಿದೆ ಎಂಬುದು ಬಹಿರಂಗವಾಗಿಲ್ಲ. ಅದು ವಾಟ್ಸಾಪ್ ನಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮೊಬೈಲ್ ಗಳಲ್ಲಿ ಇದು ಸುಮಾರು 150 ಪುಟಗಳ PDF ಫೈಲ್ ರೂಪದಲ್ಲಿದ್ದು, 400ಕ್ಕೂ ಹೆಚ್ಚು ಪ್ರಶ್ನೆಗಳನ್ನು ಒಳಗೊಂಡಿದೆ. ಆದ್ದರಿಂದ ನಾವು ಹಂತ ಹಂತವಾಗಿ ತನಿಖೆ ನಡೆಸುತ್ತಿದ್ದೇವೆ. ಇದು ಪ್ರಯಾಸಕರ ಪ್ರಕ್ರಿಯೆ” ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ, ಎರಡು ಡಜನ್‌ಗಿಂತಲೂ ಹೆಚ್ಚು ಜನರನ್ನು ವಿಶೇಷ ಕಾರ್ಯಾಚರಣೆ ಗುಂಪು ವಶಕ್ಕೆ ತೆಗೆದುಕೊಂಡಿದೆ. ಆದರೆ ಇನ್ನೂ ಯಾವುದೇ ಬಂಧನವಾಗಿಲ್ಲ. ವಶಕ್ಕೆ ಪಡೆದವರಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿ ಸಲಹೆಗಾರರು ಸೇರಿದ್ದಾರೆ.
►ಈ ಹಿಂದೆಯೂ ಕೇಳಿಬಂದಿತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಅದೇನಾಯ್ತು?
ನೀಟ್-ಯುಜಿ ಪರೀಕ್ಷೆಯ ಪ್ರಮಾಣವನ್ನು ಪರಿಗಣಿಸಿದರೆ, ಪ್ರತಿ ವರ್ಷವೂ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಕೇಳಿಬರುತ್ತವೆ. ಆದರೆ ನೀಟ್-ಯುಜಿಯನ್ನು ಈ ಹಿಂದೆ ಎಂದಿಗೂ ರದ್ದುಗೊಳಿಸಲಾಗಿರಲಿಲ್ಲ. 2024ರಲ್ಲಿ ಜಾರ್ಖಂಡ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷದ ನಾಯಕರು ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದರು. ಪ್ರಕರಣದ ಸಿಬಿಐ ತನಿಖೆಯಲ್ಲಿ, ಅಭ್ಯರ್ಥಿಗಳು ಪರೀಕ್ಷೆಗೆ ಕೆಲ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಹಣ ಪಾವತಿಸಿದ್ದರೆಂಬುದು ಬಹಿರಂಗಗೊಂಡಿತ್ತು. ಜಾರ್ಖಂಡ್‌ನ ಪರೀಕ್ಷಾ ಕೇಂದ್ರದ ಸಂಯೋಜಕರು ಸೋರಿಕೆಯಲ್ಲಿ ಭಾಗಿಯಾಗಿದ್ದರೆಂದು ಕಂಡುಬಂದಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರೂ, ದಾಖಲೆಯಲ್ಲಿರುವ ಮಾಹಿತಿಗಳು “ಪ್ರಶ್ನೆ ಪತ್ರಿಕೆಯ ವ್ಯವಸ್ಥಿತ ಸೋರಿಕೆಯನ್ನು ಸೂಚಿಸುವುದಿಲ್ಲ; ಅದು ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ತರುವ ಮಟ್ಟದಲ್ಲಿಲ್ಲ” ಎಂದು ಹೇಳಿ ಮರುಪರೀಕ್ಷೆಯ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು. ನೀಟ್-ಯುಜಿ ಪ್ರಶ್ನೆ ಪತ್ರಿಕೆಯ ಸೋರಿಕೆ ಜಾರ್ಖಂಡ್ ನ ಹಜಾರಿಬಾಗ್ ಮತ್ತು ಬಿಹಾರದ ಪಾಟ್ನಾದಲ್ಲಿ ನಡೆದಿರುವುದು ವಿವಾದದಲ್ಲಿಲ್ಲ ಎಂದು ನ್ಯಾಯಾಲಯ ಗಮನಿಸಿತ್ತು.
ಪರೀಕ್ಷೆಯ ಬಗ್ಗೆ ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾದರೂ, ಕೇಂದ್ರ ಸರ್ಕಾರ ಮರುಪರೀಕ್ಷೆ ನಡೆಸಲು ನಿರಾಕರಿಸುವ ನಿಲುವಿನಲ್ಲೇ ಇತ್ತು. ದೊಡ್ಡ ಪ್ರಮಾಣದಲ್ಲಿ ಗೌಪ್ಯತೆಯ ಉಲ್ಲಂಘನೆಯಾಗಿಲ್ಲ ಎಂದು ಶಿಕ್ಷಣ ಸಚಿವಾಲಯ ಸಮರ್ಥಿಸಿತ್ತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, “ಕೆಲವು ಪ್ರತ್ಯೇಕ ಘಟನೆಗಳಿಗಾಗಿ ಗ್ರಾಮೀಣ ಪ್ರದೇಶದ ಅನೇಕ ಅಭ್ಯರ್ಥಿಗಳ ಭವಿಷ್ಯವನ್ನು ದೇಶವು ಒತ್ತೆಯಾಗಿರಿಸಬಾರದು” ಎಂದು ಹೇಳಿದ್ದರು.
2024ರಲ್ಲಿ ನೀಟ್-ಯುಜಿ ಫಲಿತಾಂಶಗಳನ್ನು ಆರಂಭದಲ್ಲಿ ಜೂನ್ ನಲ್ಲಿ ಘೋಷಿಸಲಾಯಿತು. ಪರೀಕ್ಷೆಯ ವೇಳೆ ‘ಸಮಯ ನಷ್ಟ’ಕ್ಕೆ ಪರಿಹಾರವಾಗಿ ‘ಗ್ರೇಸ್ ಅಂಕ’ ಪಡೆದಿದ್ದ 1,563 ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಯಿತು. ಬಳಿಕ ಜುಲೈನಲ್ಲಿ ಪರಿಷ್ಕೃತ ಫಲಿತಾಂಶಗಳನ್ನು ಪ್ರಕಟಿಸಲಾಯಿತು.
ಆ ವರ್ಷ, ಡಾರ್ಕ್‌ನೆಟ್ ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರಬಹುದು ಎಂಬ ಕಾರಣದಿಂದ ಯುಜಿಸಿ-ನೆಟ್ ಪರೀಕ್ಷೆಯನ್ನು ಅದು ನಡೆದ ಒಂದು ದಿನದ ನಂತರ ರದ್ದುಗೊಳಿಸಲಾಯಿತು. CSIR-UGC NET ಮತ್ತು NEET-PG ಪರೀಕ್ಷೆಗಳನ್ನೂ ಮುಂದೂಡಲಾಗಿತ್ತು.
►ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಕೊನೆಯ ಬಾರಿಗೆ ಯಾವಾಗ ರದ್ದುಗೊಳಿಸಲಾಗಿತ್ತು?
2015ರಲ್ಲಿ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, ಸಿಬಿಎಸ್ಇ ನಡೆಸುತ್ತಿದ್ದ ಆಲ್ ಇಂಡಿಯಾ ಪ್ರೀ ಮೆಡಿಕಲ್/ಪ್ರೀ ಡೆಂಟಲ್ ಟೆಸ್ಟ್ (AIPMT) ಅನ್ನು ರದ್ದುಗೊಳಿಸಲಾಗಿತ್ತು.
ಆ ವರ್ಷ, ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳು ಉತ್ತರಗಳನ್ನು ಪಡೆಯಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪದ ಆಧಾರದ ಮೇಲೆ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹರಿಯಾಣದ ರೋಹ್ಟಕ್ ನಲ್ಲಿ ಮೈಕ್ರೋ ಸಿಮ್ ಮತ್ತು ಬ್ಲೂಟೂತ್ ಸಾಧನಗಳನ್ನು ಹೊಂದಿದ್ದ ನಾಲ್ವರು ಶಂಕಿತರ ಕಾರನ್ನು ಪೊಲೀಸರು ತಡೆದಿದ್ದರು. ತಪಾಸಣೆ ನಡೆಸಿದಾಗ ಅವರ ಫೋನ್ ಗಳಲ್ಲಿ ಉತ್ತರಗಳು ಪತ್ತೆಯಾಗಿದ್ದವು. 44 ಅಭ್ಯರ್ಥಿಗಳು ಈ ಉತ್ತರಗಳಿಂದ ಪ್ರಯೋಜನ ಪಡೆದಿದ್ದಾರೆ ಎಂದು ಹರಿಯಾಣ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ನಂತರ ನ್ಯಾಯಾಲಯ ಪರೀಕ್ಷೆಯನ್ನು ರದ್ದುಗೊಳಿಸಿ ನಾಲ್ಕು ವಾರಗಳೊಳಗೆ ಮರುಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.
2016ರಲ್ಲಿ AIPMT ಅನ್ನು NEET-UG ಆಗಿ ಪರಿವರ್ತಿಸಲಾಯಿತು. ಆರಂಭದಲ್ಲಿ ಈ ಪರೀಕ್ಷೆಯನ್ನು ಸಿಬಿಎಸ್ಇ ನಡೆಸುತ್ತಿದ್ದರೂ, 2019ರಿಂದ ಎನ್‌ಟಿಎ ನಡೆಸಲು ಪ್ರಾರಂಭಿಸಿತು.
►2024ರ ಸೋರಿಕೆಯ ನಂತರ ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಯಾವ ಕ್ರಮಗಳನ್ನು ಜಾರಿಗೆ ತಂದವು?
2024ರಲ್ಲಿ ನೀಟ್-ಯುಜಿ ಪರೀಕ್ಷೆಯ ಸುತ್ತ ಉಂಟಾದ ವಿವಾದವು ಬಿಜೆಪಿ ನೇತೃತ್ವದ ಸರ್ಕಾರ ಮೂರನೇ ಅವಧಿಗೆ ಕಾಲಿಟ್ಟ ಸಮಯದಲ್ಲೇ ಭುಗಿಲೆದ್ದಿತ್ತು.
ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಕ್ರಮಗಳನ್ನು ಶಿಫಾರಸು ಮಾಡುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಮಾಜಿ ಇಸ್ರೋ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದ ಏಳು ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 2024ರ ಕೊನೆಯಲ್ಲಿ ಶಿಕ್ಷಣ ಸಚಿವಾಲಯಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಿತು. ಚುನಾವಣೆಗಳನ್ನು ನಡೆಸುವ ವ್ಯವಸ್ಥೆಯ ಮಾದರಿಯಲ್ಲೇ ಸಾರ್ವಜನಿಕ ಪರೀಕ್ಷೆಗಳ ಭದ್ರತೆಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
ಜಿಲ್ಲಾಡಳಿತ ಮತ್ತು ಪೊಲೀಸರ ಸಮ್ಮುಖದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸೀಲ್ ಮಾಡಬೇಕು ಹಾಗೂ ಪರೀಕ್ಷೆ ಆರಂಭವಾಗುವವರೆಗೆ ಅವುಗಳ ಭದ್ರತೆಯನ್ನು ಕಾಪಾಡಬೇಕು ಎಂದು ಸಮಿತಿ ಹೇಳಿತ್ತು. ಪರೀಕ್ಷೆಗಳನ್ನು ನಡೆಸುವಲ್ಲಿ ಎನ್‌ಟಿಎ ರಾಜ್ಯ ಮತ್ತು ಜಿಲ್ಲಾಡಳಿತಗಳೊಂದಿಗೆ ಸಮನ್ವಯ ಸಾಧಿಸಬೇಕೆಂದು ಶಿಫಾರಸು ಮಾಡಲಾಗಿತ್ತು. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಬಹು ಪಾಳಿಗಳಲ್ಲಿ ನಡೆಸುವಂತೆಯೂ ಸಮಿತಿ ಸೂಚಿಸಿತ್ತು. ಆದರೆ ನೀಟ್-ಯುಜಿ ಇನ್ನೂ ಲಿಖಿತ ಪರೀಕ್ಷೆಯಾಗಿಯೇ ಮುಂದುವರಿದಿದೆ.
ಈ ವರ್ಷದ ನೀಟ್ ಪರೀಕ್ಷೆ ಮತ್ತು ಕಳೆದ ವರ್ಷದ ಪರೀಕ್ಷೆಗಳಲ್ಲಿ ಈ ಶಿಫಾರಸುಗಳ ಕೆಲವು ಭಾಗಗಳನ್ನು ಜಾರಿಗೆ ತರಲಾಗಿತ್ತು. ಉದಾಹರಣೆಗೆ, ಪರೀಕ್ಷಾ ಕೇಂದ್ರಗಳು ಮತ್ತು ಪರೀಕ್ಷಾ ಸಾಮಗ್ರಿಗಳ ಭದ್ರತೆಯನ್ನು ಖಚಿತಪಡಿಸಲು ಎನ್‌ಟಿಎ ಜಿಲ್ಲಾಡಳಿತಗಳೊಂದಿಗೆ ಸಹಕರಿಸಿತು. ಅಭ್ಯರ್ಥಿಗಳ ಬಯೋಮೆಟ್ರಿಕ್ ಪರಿಶೀಲನೆ ನಡೆಸಲಾಯಿತು. ಪರೀಕ್ಷಾ ಸಾಮಗ್ರಿಗಳನ್ನು ಜಿಪಿಎಸ್ ಸಕ್ರಿಯಗೊಳಿಸಿದ ವಾಹನಗಳಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಸಾಗಿಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯ ಜೊತೆಗೆ, ದೆಹಲಿಯ ಎನ್‌ಟಿಎ ಪ್ರಧಾನ ಕಚೇರಿಯಲ್ಲಿ ಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.
ಭದ್ರತಾ ವ್ಯವಸ್ಥೆಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಅಣಕು ಕಸರತ್ತುಗಳನ್ನೂ ನಡೆಸಲಾಗಿತ್ತು.