ಸಾಂದರ್ಭಿಕ ಚಿತ್ರ | Photo Credit : NDTV 

ಅಹಮದಾಬಾದ್: ಗುಜರಾತ್‌ ನ ಸೂರತ್‌ ನಲ್ಲಿ ಗ್ರಾಹಕರಿಗೆ ತಲುಪಿಸಬೇಕಾಗಿದ್ದ ಪಾರ್ಸೆಲ್‌ಗಳನ್ನು ಕದ್ದ ಆರೋಪದಲ್ಲಿ ಫ್ಲಿಪ್‌ ಕಾರ್ಟ್ ಸಂಸ್ಥೆಯ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 4.60 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್‌ ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾವನಗರ ಸ್ಥಳೀಯ ಅಪರಾಧ ವಿಭಾಗದ ಪೊಲೀಸರು ರುತ್ವಿಕ್ ಮಕ್ವಾನಾ ಎಂಬಾತನನ್ನು ಬಂಧಿಸಿದ್ದಾರೆ. ಸುಮಾರು 15 ದಿನಗಳ ಹಿಂದೆ ಗ್ರಾಹಕರಿಗೆ ತಲುಪಿಸಬೇಕಿದ್ದ ಪಾರ್ಸೆಲ್‌ಗಳಿಂದ ಈ ವಸ್ತುಗಳನ್ನು ಕದ್ದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾವನಗರ ಜಿಲ್ಲೆಯ ಮೋತಿಬಾಗ್ ರಸ್ತೆಯಲ್ಲಿರುವ ಗಂಗಾಜಲಿಯಾ ಸರೋವರದ ದಂಡೆಯ ಬಳಿ ವ್ಯಕ್ತಿಯೊಬ್ಬ ಯಾವುದೇ ಬಿಲ್‌ ಗಳು ಅಥವಾ ದಾಖಲೆಗಳಿಲ್ಲದೆ ಮೊಬೈಲ್ ಫೋನ್‌ ಗಳು ಮತ್ತು ಇತರ ವಸ್ತುಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಪರಾಧ ವಿಭಾಗದ (ಎಲ್‌ಸಿಬಿ) ಪೊಲೀಸರು ಅಕ್ಟೋಬರ್ 23ರಂದು ಆತನನ್ನು ಬಂಧಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ರುತ್ವಿಕ್ ಬಳಿ ಮೊಬೈಲ್ ಫೋನ್‌ಗಳು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದವು. ಅವುಗಳಿಗೆ ಸಂಬಂಧಿಸಿದ ಬಿಲ್‌ ಗಳು ಅಥವಾ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ತೋರಿಸುವಂತೆ ಕೇಳಿದಾಗ, ಆತ ಅವುಗಳನ್ನು ನೀಡಲು ವಿಫಲನಾಗಿದ್ದ. ಅಲ್ಲದೆ, ವಸ್ತುಗಳ ಬಗ್ಗೆ ತೃಪ್ತಿದಾಯಕ ವಿವರಣೆಯನ್ನೂ ನೀಡಿರಲಿಲ್ಲ. ಹೀಗಾಗಿ, ಅವು ಕದ್ದ ವಸ್ತುಗಳಾಗಿರಬಹುದು ಎಂಬ ಶಂಕೆಯಲ್ಲಿ ಪೊಲೀಸರು ಅವುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.

ವಿಚಾರಣೆಯ ವೇಳೆ ರುತ್ವಿಕ್ ಸೂರತ್‌ನಲ್ಲಿ ಫ್ಲಿಪ್‌ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ. ಅಲ್ಲದೆ, 15 ದಿನಗಳ ಹಿಂದೆ ಪಾರ್ಸೆಲ್‌ಗಳನ್ನು ಕದ್ದಿರುವುದನ್ನೂ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಗ್ರಾಹಕರಿಗೆ ತಲುಪಿಸಬೇಕಾಗಿದ್ದ ಮೊಬೈಲ್ ಫೋನ್‌ ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳಿದ್ದ ಡೆಲಿವರಿ ಬ್ಯಾಗ್‌ಗಳನ್ನು ರುತ್ವಿಕ್ ಪಡೆದುಕೊಳ್ಳುತ್ತಿದ್ದ. ಬಳಿಕ ಅವುಗಳನ್ನು ಗ್ರಾಹಕರಿಗೆ ತಲುಪಿಸುವ ಅಥವಾ ಕಂಪೆನಿಗೆ ಹಿಂತಿರುಗಿಸುವ ಬದಲು ತನ್ನ ಬಳಿಯೇ ಇಟ್ಟುಕೊಂಡು ಪರಾರಿಯಾಗುತ್ತಿದ್ದ.

ಆರೋಪಿಯು ಭಾವನಗರದ ಅಕ್ಳೋಲ್ ಜಕಾತ್‌ನಾಕಾದ ಹುಸೈನಿ ಚೌಕ್ ಬಳಿಯ ರಾಜ್ ಮಂದಿರ್ ಪಾನ್‌ವಾಲಾ ಲೇನ್‌ ನಲ್ಲಿ ವಾಸಿಸುವ ಕಾರ್ಮಿಕ ಎಂದು ಪೊಲೀಸರು ಗುರುತಿಸಿದ್ದಾರೆ. ಹೆಚ್ಚಿನ ಕಾನೂನು ಕ್ರಮ ಮತ್ತು ತನಿಖೆಗಾಗಿ ಆತನನ್ನು ಗಂಗಾಜಲಿಯಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ 4,60,512 ರೂ. ಆಗಿದೆ. ಇವುಗಳಲ್ಲಿ 13 ಮೊಬೈಲ್ ಫೋನ್‌ ಗಳು, ಬ್ಲೂಟೂತ್ ಸಾಧನಗಳು, ಸ್ಮಾರ್ಟ್‌ವಾಚ್, ಕೈಗಡಿಯಾರಗಳು, ಸುಗಂಧ ದ್ರವ್ಯಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಬಟ್ಟೆಗಳು ಮತ್ತು ಎಲೆಕ್ಟ್ರಾನಿಕ್ ಪರಿಕರಗಳು ಸೇರಿವೆ.

ಕದ್ದ ವಸ್ತುಗಳಲ್ಲಿ ಗೂಗಲ್ ಪಿಕ್ಸೆಲ್, ಸ್ಯಾಮ್‌ ಸಂಗ್ ಗ್ಯಾಲಕ್ಸಿ, ಲಾವಾ ವಿರಾಟ್ ಕರ್ವ್, ಎಐ ನೋವಾ ಪ್ರೊ, ವಿವೊ ಮತ್ತು ಪೋಕೊ ಮೊದಲಾದ ಬ್ರ್ಯಾಂಡ್‌ ಗಳ ಮೊಬೈಲ್ ಫೋನ್‌ ಗಳಿದ್ದವು. ಉಳಿದಂತೆ ಸ್ಮಾರ್ಟ್‌ ವಾಚ್‌ಗಳು, ಬ್ಲೂಟೂತ್ ಸಾಧನಗಳು, ಕೈಗಡಿಯಾರಗಳು, ಬಾಡಿ ಸ್ಪ್ರೇಗಳು, ಉಡುಪುಗಳು, ಟೂತ್‌ಪೇಸ್ಟ್‌, ಸುಗಂಧ ದ್ರವ್ಯಗಳು, ಮಾಯಿಶ್ಚರೈಸರ್‌ಗಳು, ಸಾಬೂನುಗಳು ಮತ್ತು ಫೇಸ್‌ವಾಶ್‌ಗಳು ಪತ್ತೆಯಾಗಿವೆ.

ಭಾವನಗರ ಸ್ಥಳೀಯ ಅಪರಾಧ ವಿಭಾಗ ಪತ್ತೆಹಚ್ಚಿದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ನಗರದ ಸರೋಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor