ಹಿಂದಿನ ಕಾಲದ ಪಟಾಕಿಗಳು ವಾತಾವರಣವನ್ನು ಸ್ವಚ್ಛಗೊಳಿಸುತ್ತಿದ್ದವು: RSS ಮುಖ್ಯಸ್ಥ ಮೋಹನ್ ಭಾಗವತ್
‘ಸುಗ್ಗಿಯ ಕಾಲದಲ್ಲಿ ಕ್ರಿಮಿಕೀಟಗಳನ್ನು ಕೊಲ್ಲಲು ಪಟಾಕಿಗಳ ಬಳಕೆ’
ಮೋಹನ್ ಭಾಗವತ್ | Photo Credit : PTI
ನಾಗ್ಪುರ (ಮಹಾರಾಷ್ಟ್ರ): ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ಪಟಾಕಿಗಳು ಸುಗ್ಗಿಯ ಕಾಲದಲ್ಲಿ ಕ್ರಿಮಿಕೀಟಗಳನ್ನು ಕೊಲ್ಲಲು ನೆರವಾಗುತ್ತಿದ್ದವು ಮತ್ತು ವಾತಾವರಣವನ್ನು ಸ್ವಚ್ಛಗೊಳಿಸುತ್ತಿದ್ದವು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಈ ಮೂಲಕ ಪಟಾಕಿ ಸಿಡಿಸುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ನಾಗ್ಪುರದಲ್ಲಿ ಆಯೋಜಿಸಿದ್ದ ‘ದೀಪಾವಳಿ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಬ್ಬಗಳ ಸಂದರ್ಭದಲ್ಲಿ ದೀಪ ಹಚ್ಚುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳ ಹಿಂದೆ ವೈಜ್ಞಾನಿಕ ಚಿಂತನೆಯಿದೆ ಎಂದು ಹೇಳಿದರು.
“ಹಬ್ಬಗಳಿಗೆ ಸಂಬಂಧಿಸಿದ ಆಚರಣೆಗಳ ಹಿಂದೆ ನಿರ್ದಿಷ್ಟ ಉದ್ದೇಶಗಳಿವೆ. ಹಿಂದೆ ಇಂತಹ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಬೇರೆ ಪರ್ಯಾಯ ಮಾರ್ಗಗಳಿಲ್ಲದ ಕಾರಣ ಪಟಾಕಿಗಳನ್ನು ಬಳಸಲಾಗುತ್ತಿತ್ತು. ಹಿಂದಿನ ದಿನಗಳಲ್ಲಿ ಬಳಸುತ್ತಿದ್ದ ಪಟಾಕಿಗಳು ಇಂದಿನ ಪಟಾಕಿಗಳಿಗಿಂತ ಭಿನ್ನವಾಗಿದ್ದವು. ಅವುಗಳಿಂದ ಹೊರಬರುತ್ತಿದ್ದ ಹೊಗೆ ಕ್ರಿಮಿಕೀಟಗಳನ್ನು ಕೊಲ್ಲಲು ನೆರವಾಗುತ್ತಿತ್ತು. ಆ ಮೂಲಕ ವಾತಾವರಣವನ್ನು ಸ್ವಚ್ಛಗೊಳಿಸುತ್ತಿತ್ತು” ಎಂದು ಭಾಗವತ್ ವಿವರಿಸಿದರು.
ತುಪ್ಪ ಮತ್ತು ತೈಲದ ದೀಪಗಳನ್ನು ಹಚ್ಚುವುದರ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ ಎಂದು ಅವರು ಪ್ರತಿಪಾದಿಸಿದರು. ಇಂತಹ ದೀಪಗಳನ್ನು ಹಚ್ಚಿದಾಗ ವಾತಾವರಣದಲ್ಲಿ ನಿರ್ದಿಷ್ಟ ಬಗೆಯ ಗಾಳಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಸಾಂಪ್ರದಾಯಿಕ ಆಚರಣೆಗಳ ಮಹತ್ವ ಅರಿತು ಹಬ್ಬಗಳನ್ನು ಸೂಕ್ತ ರೀತಿಯಲ್ಲಿ ಆಚರಿಸುವಂತೆ ಜನರಿಗೆ ಮನವಿ ಮಾಡಿದ ಅವರು, ಇದರಿಂದ ಮನುಷ್ಯರು ಮತ್ತು ಪರಿಸರ ಎರಡಕ್ಕೂ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹಬ್ಬಗಳು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಾಗವತ್ ಹೇಳಿದರು. ಸಮಾಜವನ್ನು ಜೀವಂತವಾಗಿ ಮತ್ತು ಚಲನಶೀಲವಾಗಿ ಇರಿಸುವಲ್ಲಿ ಹಬ್ಬಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವುಗಳನ್ನು ಸೂಕ್ತ ರೀತಿಯಲ್ಲಿ ಆಚರಿಸಿ, ಅವುಗಳ ಉದ್ದೇಶವನ್ನು ಈಡೇರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದೀಪಾವಳಿಯನ್ನು ಅಂಧಕಾರದ ಮೇಲಿನ ಬೆಳಕಿನ ವಿಜಯದ ಸಂಕೇತವೆಂದು ಬಣ್ಣಿಸಿದ ಅವರು, ಜ್ಞಾನದ ಬೆಳಕನ್ನು ಹರಡುವ ಹಾಗೂ ಸೌಹಾರ್ದಯುತ ಸಮಾಜ ನಿರ್ಮಿಸುವ ಸಂದೇಶವನ್ನೂ ಈ ಹಬ್ಬ ಸಾರುತ್ತದೆ ಎಂದರು.
ದೀಪಾವಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿರುವುದನ್ನು ಉಲ್ಲೇಖಿಸಿದ ಭಾಗವತ್, ಅಮೆರಿಕ ಮತ್ತು ಬ್ರಿಟನ್ ಸಂಸತ್ತುಗಳಲ್ಲಿಯೂ ದೀಪಾವಳಿ ಆಚರಣೆಗಳಿಗೆ ಮಾನ್ಯತೆ ದೊರೆತಿದೆ.. ಗಮನಾರ್ಹ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿರುವ ದೇಶಗಳಲ್ಲಿ ದೀಪಾವಳಿ ಶುಭಾಶಯಗಳ ವಿನಿಮಯವೂ ವ್ಯಾಪಕವಾಗುತ್ತಿದೆ ಎಂದರು.