ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.27: ಕಲಬುರಗಿಯ ವಾಡಿಯಲ್ಲಿ ಸುಣ್ಣದ ಕಲ್ಲು ಗಣಿಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿರುವ ಅದಾನಿ ಎಸಿಸಿ ಸಿಮೆಂಟ್ಸ್ ಲಿಮಿಟೆಡ್ ಬಾಕಿ ಉಳಿಸಿಕೊಂಡಿರುವ 850.20 ಕೋಟಿ ರೂ. ಬೃಹತ್ ಮೊತ್ತದ ರಾಜಧನ ಪಾವತಿಗೆ ಕ್ರಮ ವಹಿಸದೇ ವಿವಾದ ಮಾಡುತ್ತಿದೆ. ಅಲ್ಲದೇ ಪಾವತಿಸಬೇಕಾದ ಬಾಕಿಯನ್ನು ಪಾವತಿಸುವ ಲಕ್ಷಣಗಳು ಸಹ ಗೋಚರಿಸುತ್ತಿಲ್ಲ. ಹೀಗೆಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು ಆರ್ಥಿಕ ಇಲಾಖೆಗೆ ತಿಳಿಸಿದೆ.

ಅಲ್ಲದೇ ಈ ಸಂಬಂಧ ಆರ್ಥಿಕ ಇಲಾಖೆಯು ಕೋರಿದ್ದ ಹಲವು ಸ್ಪಷ್ಟನೆ, ವಿವರವಾದ ಮಾಹಿತಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು 3 ತಿಂಗಳಾದರೂ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ. ಈಚೆಗಷ್ಟೇ ಹೆಸರಾಂತ ಮತ್ತು ವಿವಾದಿತ ಉದ್ಯಮಿ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಅದಾನಿ ಎಸಿಸಿ ಸಿಮೆಂಟ್ಸ್ ಲಿಮಿಟೆಡ್ ಬಾಕಿ ಇರುವ ರಾಜಧನ ಪಾವತಿಸುವ ಬದಲು ಅದನ್ನು ವಿವಾದ ಮಾಡುತ್ತಿದೆ ಎಂದು ಕಡತದಲ್ಲಿ ಪ್ರಸ್ತಾವಿಸಿರುವುದು ಮುನ್ನೆಲೆಗೆ ಬಂದಿದೆ.

ಈ ಸಂಬಂಧ "the-file.in" ಆರ್‌ಟಿಐ ಮೂಲಕ 184ಕ್ಕೂ ಅಧಿಕ ಪುಟಗಳನ್ನು ಪಡೆದಿದೆ.

ಅದಾನಿ ಎಸಿಸಿ ಸಿಮೆಂಟ್ಸ್ ಲಿಮಿಟೆಡ್‌ಗೆ 2021ರಂದು ನೀಡಿದ್ದ ಗಣಿ ಅಭಿವೃದ್ಧಿ ಮತ್ತು ಉತ್ಪಾದನೆ ಒಪ್ಪಂದ (ಎಂಡಿಪಿಎ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕುಗಳು ಉದ್ಭವಿಸಿವೆ. ಈ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಆರ್ಥಿಕ ಇಲಾಖೆ ಕದ ತಟ್ಟಿದೆ. ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಕಡತದಲ್ಲಿ ಅದಾನಿ ಎಸಿಸಿ ಸಿಮೆಂಟ್ಸ್ ಲಿಮಿಟೆಡ್ ಬಾಕಿ ಪಾವತಿಗೆ ಸಂಬಂಧಿಸಿದಂತೆ ವಿವಾದ ಮಾಡುತ್ತಿರುವ ಸಂಗತಿಯನ್ನು ಕೈಗಾರಿಕೆ ವಾಣಿಜ್ಯ ಇಲಾಖೆ (ಗಣಿ) ಪ್ರಸ್ತಾವಿಸಿದೆ.

ಅಲ್ಲದೇ ಈ ಪ್ರಕರಣವನ್ನು ತಾರ್ಕಿಕವಾಗಿ ಇತ್ಯರ್ಥಪಡಿಸಲು ಇದುವರೆಗೂ ಸರಕಾರಕ್ಕೆ ಸಾಧ್ಯವಾಗಿಲ್ಲ. ಈ ಬಗ್ಗೆ ಹಲವು ಬಾರಿ ಪ್ರಯತ್ನ ಮಾಡಿದೆ ಎಂದು ಇಲಾಖೆಯು ಕಡತದಲ್ಲಿ ಹೇಳಿದೆಯಾದರೂ ಯಾವುದೇ ತೀರ್ಮಾನ, ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿರುವುದು ಕಡತದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

‘ಎಸಿಸಿ ಲಿಮಿಟೆಡ್ ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶವನ್ನು ಹರಾಜು ಮೂಲಕ ಪಡೆದಿದೆ. ಈ ಕಂಪೆನಿಯನ್ನು ಯಶಸ್ವಿ ಬಿಡ್‌ದಾರರು ಎಂದು ಪರಿಗಣಿಸುವ ಸಮಯದಲ್ಲಿ ಈ ಕಂಪೆನಿಯು ಈಗಾಗಲೇ ಹೊಂದಿರುವ ಗಣಿ ಗುತ್ತಿಗೆಯಲ್ಲಿ (2641) ರ ರಾಜಧನ ಪಾವತಿಗೆ ಸಂಬಂಧಿಸಿದಂತೆ 2021ರ ಜನವರಿ 11 ಮತ್ತು ಸೆ.8ರಂದು ಅಫಡವಿಟ್ ಕಂ ಅಂಡರ್ ಟೇಕಿಂಗ್‌ನಲ್ಲಿ ಸರಕಾರಕ್ಕೆ ಇರುವ ಬಾಕಿಯನ್ನು ಪಾವತಿಸುವುದಾಗಿ ತಿಳಿಸಿರುತ್ತಾರೆ. ಆದರೆ ಅದರಂತೆ ಬಾಕಿ ಪಾವತಿಗೆ ಕ್ರಮ ವಹಿಸದೇ ವಿವಾದ ಮಾಡುತ್ತಿರುವುದನ್ನು ಗಮನಿಸಿದಾಗ ಸರಕಾರಕ್ಕೆ ಪಾವತಿಸಬೇಕಾದ ಬಾಕಿಯನ್ನು ಪಾವತಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ತಿಳಿಸಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅಧಿಕಾರಿಗಳ ಕೈ ಕಟ್ಟಿ ಹಾಕಲಾಗಿದೆಯೇ?: ಈ ಕುರಿತು ಗಣಿ ಇಲಾಖೆಯ ಸರಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಬಾಕಿ ವಸೂಲಾತಿ ಕ್ರಮಗಳನ್ನು ಕೈಗೊಳ್ಳಲು ಇಲಾಖೆಯ ಕ್ಷೇತ್ರಮಟ್ಟದ ಅಧಿಕಾರಿಗಳ ಕೈಗಳು ಕಟ್ಟಿಹಾಕಿದಂತಾಗಿದೆ ಎಂದು ಅರ್ಥಿಕ ಇಲಾಖೆಯ ಗಮನ ಸೆಳೆದಿರುವುದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

‘ಬಾಕಿ ಇರುವ ಮೊತ್ತವನ್ನು ಪಾವತಿಸುವ ಕುರಿತು ವಿವಾದವು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಎಸಿಸಿ ಲಿಮಿಟೆಡ್ ಅವರ ಪರವಾಗಿ ಗಣಿಗಾರಿಕೆ ಗುತ್ತಿಗೆಯನ್ನು (Mining Lease) ಜಾರಿಗೊಳಿಸಲಾಗಿಲ್ಲ. ಪುನಃಪುನಃ ಪ್ರಯತ್ನಗಳನ್ನು ನಡೆಸಿದರೂ ಪ್ರಕರಣವು ಇನ್ನೂ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರು ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ದಾಖಲೆಯಲ್ಲಿ ತಿಳಿಸಿದ್ದಾರೆ. ಹಾಗೂ ಪದೇಪದೇ ಮುಂದೂಡಿಕೆಗಳನ್ನು ಕೋರುತ್ತಿದ್ದಾರೆ. ಬಾಕಿ ವಸೂಲಾತಿ ಕ್ರಮಗಳನ್ನು ಕೈಗೊಳ್ಳಲು ಇಲಾಖೆಯ ಕ್ಷೇತ್ರಮಟ್ಟದ ಅಧಿಕಾರಿಗಳ ಕೈಗಳು ಕಟ್ಟಿಹಾಕಿದಂತಾಗಿದೆ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.

ಕನ್ನೂರು ವಾಡಿಯ ಗಣಿಗಾರಿಕೆ ಗುತ್ತಿಗೆ ಮತ್ತು ಚಾಮನೂರು ಗ್ರಾಮದ LOI (Letter of Intent) ಎರಡೂ 850.20 ಕೋಟಿ ರೂ.ಯಷ್ಟು ಬಾಕಿ ಮೊತ್ತವನ್ನು ಪಾವತಿಸುವುದಕ್ಕಾಗಿ ಬಾಕಿ ಉಳಿದಿವೆ. ಕಾನೂನು ಸಚಿವರ ಟಿಪ್ಪಣಿಯಂತೆ ಕಡತವನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಎಂದೂ ಟಿಪ್ಪಣಿಯಲ್ಲಿ ಹೇಳಿರುವುದು ಗೊತ್ತಾಗಿದೆ.

ಅಲ್ಲದೇ ಈ ಕಂಪೆನಿಯು (ಗಣಿ ಗುತ್ತಿಗೆ ಸಂಖ್ಯೆ 2641) ಸರಕಾರಕ್ಕೆ ಒಟ್ಟು 367.51 ಕೋಟಿ ರೂ. ರಾಜಧನ ಪಾವತಿಸಲು ಬಾಕಿ ಇದೆ. ಇದೇ ಗಣಿ ಗುತ್ತಿಗೆಯಲ್ಲಿ ಗಣಿ ಗುತ್ತಿಗೆ ಅವಧಿ ಮುಕ್ತಾಯಗೊಂಡ ನಂತರವೂ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ. ಇದಕ್ಕೆ ಸರಕಾರವು ದಂಡ ವಿಧಿಸಿತ್ತು. ಈ ದಂಡದ ಮೊತ್ತವು 482.69 ಕೋಟಿ ರೂ. ಇದೆ. ಎಸಿಸಿ ಲಿಮಿಟೆಡ್ ಕಂಪೆನಿಯು ರಾಜ್ಯ ಸರಕಾರಕ್ಕೆ ಒಟ್ಟು 850.20 ಕೋಟಿ ರೂ.ಮೊತ್ತ ಪಾವತಿಸಲು ಬಾಕಿ ಇದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಯು ಆರ್ಥಿಕ ಇಲಾಖೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor