×
Ad

ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ಟಿಎಂಸಿ ಕಚೇರಿ ಕೆಡವಿದ ಬುಲ್ಡೋಝರ್‌, ಬಿರಿಯಾನಿ ಅಂಗಡಿ ಸ್ಥಳಾಂತರಕ್ಕೆ ಆದೇಶ, ರಸ್ತೆ ಮರುನಾಮಕರಣ

Update: 2026-05-08 23:04 IST

Screengrab : X


ಮೇ 4ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಒಂದು ದಿನದೊಳಗೆ, ರಾಜ್ಯದ ವಿವಿಧ ಭಾಗಗಳಿಂದ ದಂಗೆ ಮತ್ತು ಕೋಮು ಉದ್ವಿಗ್ನತೆಯ ಹಲವಾರು ಘಟನೆಗಳು ವರದಿಯಾಗಿವೆ.

►ಪ್ರಕರಣ 1 ಮತ್ತು 2: ಉತ್ತರ 24 ಪರಗಣ

ಬರಾಸತ್‌ ನ ನೊಪಾರಾ ಪ್ರದೇಶದ ಮಸೀದಿ ಬಾರಿ ರಸ್ತೆಯ ಅಲಂಕಾರಿಕ ಗೇಟ್‌ ವೇ ಕಮಾನು ಹತ್ತಿದ ಹಲವಾರು ಯುವಕರು ಅಲ್ಲಿದ್ದ ಬೋರ್ಡ್‌ಗಳನ್ನು ಮುರಿದು, “ನೇತಾಜಿ ಪಲ್ಲಿ” ಎಂದು ಬರೆದಿರುವ ಹೋರ್ಡಿಂಗ್ ಅಳವಡಿಸಿದರು.

ಅವರು ಕೇಸರಿ ಬಣ್ಣ ಎರಚಿ ಸಂಭ್ರಮಿಸುತ್ತಿರುವಾಗ ಸಿಆರ್‌ಪಿಎಫ್ ಸಿಬ್ಬಂದಿ ಜನಸಮೂಹದ ಹಿಂಭಾಗದಲ್ಲಿ ನಿಂತಿರುವುದನ್ನು ಕಾಣಬಹುದು.

ಬರಾಸತ್‌ ನ ಚಂಪದಲಿಯಲ್ಲಿರುವ ‘ಸಿರಾಜ್ ಉದ್ಯಾನ್’ ಎಂಬ ಉದ್ಯಾನವನವನ್ನು ‘ಶಿಬಾಜಿ ಉದ್ಯಾನ್’ ಎಂದು ‘ಮರುನಾಮಕರಣ’ ಮಾಡಲಾಯಿತು.

ವಿಡಿಯೊದಲ್ಲಿ ಕಾರ್ಯಕರ್ತರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಾ ಉದ್ಯಾನವನದ ದ್ವಾರವನ್ನು ಹತ್ತಿ, ಅದರ ಮೇಲಿದ್ದ ಸಿರಾಜ್-ಉದ್-ದೌಲಾ ಅವರ ಮಿನಿಯೇಚರ್ ಶಿಲ್ಪವನ್ನು ಮುರಿದು, ಬಂಗಾಳಿ ಭಾಷೆಯಲ್ಲಿ “ಶಿಬಾಜಿ ಉದ್ಯಾನ್” ಎಂದು ಬರೆದ ಬ್ಯಾನರ್ ಅಳವಡಿಸುತ್ತಿರುವುದು ಕಾಣುತ್ತದೆ.

“ನವಾಬ್ ಸಿರಾಜುದೌಲಾ ಅಥವಾ ಸಿರಾಜ್ ಎಂಬ ಹೆಸರಿನ ಯಾರೂ ಬರಾಸತ್‌ಗೆ ಬಂದಿಲ್ಲ. ಸಿರಾಜ್‌ ಗೆ ಇಲ್ಲಿ ಯಾವುದೇ ಪಾತ್ರವಿಲ್ಲ. ಆದರೆ ನಮ್ಮ ಪಕ್ಕದಲ್ಲೇ ಒಂದು ಉದ್ಯಾನವನಕ್ಕೆ ಸಿರಾಜ್ ಉದ್ಯಾನ್ ಎಂದು ಹೆಸರಿಡಲಾಗಿತ್ತು. ಬರಾಸತ್‌ ನ ಜನರಿಗೆ ಅದು ಹಿಡಿಸಲಿಲ್ಲ. ಅಲ್ಲಿ ಮಸ್ಜಿದ್‌ ಬಾರಿ ರಸ್ತೆ ಇದೆ. ಮುಸ್ಲಿಮರಿಗೆ ಅಲ್ಲಿರುವುದು ಕೇವಲ ಎರಡು ಬೂತ್‌ ಗಳು. ಎರಡು ಬೂತ್‌ ಗಳಿಗೆ ಇರುವ ಒಂದು ರಸ್ತೆಯನ್ನು ಮಸ್ಜಿದ್‌ ಬಾರಿ ರಸ್ತೆ ಎಂದು ಹೆಸರಿಸಲಾಗುತ್ತದೆಯೇ? ಅಲ್ಲಿನ ಜನರು ಹೋಗಿ ಅದನ್ನು ನೇತಾಜಿ ಪಲ್ಲಿ ರಸ್ತೆ ಎಂದು ಬದಲಾಯಿಸಿದರು. ಬಿಜೆಪಿ ಇದನ್ನು ಮಾಡಲಿಲ್ಲ; ಅಲ್ಲಿನ ನಾಗರಿಕರು ಇದನ್ನು ಮಾಡಿದರು. ಸೋನಾರ್ ಬಾಂಗ್ಲಾವನ್ನು ನಿರ್ಮಿಸಲು ಅವರು ಇನ್ನೂ ಹೆಚ್ಚಿನದನ್ನು ಮಾಡಬಹುದು ಎಂದು ಅವರು ಭಾವಿಸಿದರೆ, ಅವರು ಮಾಡಬಹುದು. ಅದು ಸಾಂವಿಧಾನಿಕವಾಗಿರಬೇಕು ಹಾಗೂ ಅದಕ್ಕೆ ಸಾಮಾನ್ಯ ಜನರ ಬೆಂಬಲವಿರಬೇಕು” ಎಂದು ಬಿಜೆಪಿ ಬೆಂಬಲಿಗ ಅನಿರ್ಬನ್ ಬಿಸ್ವಾಸ್ ಹೇಳಿರುವುದನ್ನು ಝೀ 24 ಘಂಟಾ ಉಲ್ಲೇಖಿಸಿದೆ.

ಆದರೆ, “ಹಾಗಾದರೆ ಶಿವಾಜಿ ಬರಾಸತ್‌ಗೆ ಬಂದಿದ್ದಾರಾ?” ಎಂದು ವರದಿಗಾರ ಅವರು ಅವರನ್ನು ಪ್ರಶ್ನಿಸಲಿಲ್ಲ.

►ಪ್ರಕರಣ 3: ಬೊಂಗಾನ್, ಉತ್ತರ 24 ಪರಗಣ

ಬಿಜೆಪಿ ಕಾರ್ಯಕರ್ತರು ಉತ್ತರ 24 ಪರಗಣದ ಬೊಂಗಾನ್‌ನಲ್ಲಿರುವ ದೇವಸ್ಥಾನದ ಪಕ್ಕದ ಬಿರಿಯಾನಿ ಅಂಗಡಿಯ ಬಳಿ ಬಂದು, ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. “ನಾವು ಮಸೀದಿಯ ಹೊರಗೆ ಇದನ್ನು ಮಾಡಿದರೆ ನಿಮಗೂ ಬೇಸರವಾಗುತ್ತಿತ್ತು” ಎಂದು ಕಾರ್ಯಕರ್ತರಲ್ಲೊಬ್ಬ ಅಂಗಡಿಯ ಕೆಲಸಗಾರನಿಗೆ ಹೇಳುತ್ತಿರುವುದು ವೈರಲ್ ವಿಡಿಯೊದಲ್ಲಿ ಕೇಳಿಬಂದಿದೆ.

ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಹ್ಯಾಂಡಲ್ ಈ ವಿಡಿಯೊವನ್ನು ಹಂಚಿಕೊಂಡು, ಇದನ್ನು ‘ದುಃಸ್ವಪ್ನ’ ಎಂದು ಕರೆದಿದೆ.

“ಅವರಿಗೆ ಇನ್ನೊಂದು ದಿನ ನೀಡಿ; ಅವರು ಮಾಂಸಾಹಾರ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ಕೈಗೊಳ್ಳುತ್ತಾರೆ. ಅವರು ನಿಮ್ಮ ಮನೆ ಬಾಗಿಲಲ್ಲಿ ನಿಂತು ನೀವು ಏನು ತಿನ್ನಬೇಕು, ಏನು ಬೇಯಿಸಬೇಕು ಮತ್ತು ನಿಮ್ಮ ಮಕ್ಕಳಿಗೆ ಏನು ಬಡಿಸಬೇಕು ಎಂದು ನಿರ್ದೇಶಿಸುತ್ತಾರೆ. ತಮ್ಮ ಗುರುತು ಮತ್ತು ಸಂಸ್ಕೃತಿಯ ಭಾಗವಾಗಿರುವ ಆಹಾರ, ಅದರ ರುಚಿ ಹಾಗೂ ಆಯ್ಕೆಯ ಸ್ವಾತಂತ್ರ್ಯ ಹೊಂದಿರುವ ಈ ನೆಲದಲ್ಲಿ ಜನರು ಯಾವ ಆಹಾರ ತಿನ್ನಬೇಕು ಎಂಬುದನ್ನು ಅವರು ಆದೇಶಿಸುತ್ತಿದ್ದಾರೆ” ಎಂದು ಟಿಎಂಸಿ ಹೇಳಿದೆ.

►ಪ್ರಕರಣ 4: ಲಾಲ್‌ಬಾಗ್, ಮುರ್ಷಿದಾಬಾದ್

ಬಿಜೆಪಿ ಕಾರ್ಯಕರ್ತರು ಮುರ್ಷಿದಾಬಾದ್‌ನ ಲಾಲ್‌ಬಾಗ್ ಈದ್ಗಾಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಆನ್‌ ಲೈನ್‌ ನಲ್ಲಿ ಹರಿದಾಡುತ್ತಿರುವ ವಿಡಿಯೊವೊಂದರಲ್ಲಿ, ಕೇಸರಿ ಬಟ್ಟೆ ತೊಟ್ಟ ಕಾರ್ಯಕರ್ತರು ಬ್ಯಾರಿಕೇಡ್ ಮುರಿದು “ಜೈ ಶ್ರೀರಾಮ್” ಘೋಷಣೆಗಳನ್ನು ಕೂಗುತ್ತಾ ಮೈದಾನಕ್ಕೆ ನುಗ್ಗುತ್ತಿರುವುದು ಕಾಣಿಸುತ್ತದೆ.

ಸ್ಥಳೀಯ ಮೂಲಗಳೊಂದಿಗೆ ಮಾತನಾಡಿದಾಗ, ಮೇ 5ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದನ್ನು ಅವರು ದೃಢಪಡಿಸಿದ್ದಾರೆ ಎಂದು Alt News ವರದಿ ಮಾಡಿದೆ. ಮೂಲತಃ ವಕ್ಫ್ ಆಸ್ತಿಯಾಗಿದ್ದ ಈ ಭೂಮಿ ನ್ಯಾಯಾಂಗ ವಿವಾದದಲ್ಲಿದ್ದು, ವಿಷಯ ಬಗೆಹರಿಯುವವರೆಗೆ ಬ್ಯಾರಿಕೇಡ್ ಅನ್ನು ಸ್ಥಳದಲ್ಲಿಯೇ ಇರಿಸುವಂತೆ ನ್ಯಾಯಾಲಯ ಆದೇಶಿಸಿತ್ತು.

Alt News ಜತೆ ಮಾತನಾಡಿದ ಸಿಪಿಐ(ಎಂ) ಮುರ್ಷಿದಾಬಾದ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಮೀರ್ ಮೊಲ್ಲಾ, “ಬಿಜೆಪಿ ನಾಯಕರೊಬ್ಬರ ನೇತೃತ್ವದಲ್ಲಿ ಪಟ್ಟಣದ ಬಿಜೆಪಿ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಯಿತು. ಇನ್‌ಸ್ಪೆಕ್ಟರ್-ಇನ್-ಚಾರ್ಜ್ (ಐಸಿ) ಹಾಗೂ ಕೇಂದ್ರ ಪಡೆಗಳ ಸಮ್ಮುಖದಲ್ಲೇ ಸ್ಥಳದಲ್ಲಿದ್ದ ಬ್ಯಾರಿಕೇಡ್ ಅನ್ನು ಮುರಿಯಲಾಯಿತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಸೀದಿ ಸಮಿತಿಯ ಕಾರ್ಯದರ್ಶಿ ಮೊಹಮ್ಮದ್ ಕಬೀರುಲ್ ಇಸ್ಲಾಂ ಕೆಲವು ಸದಸ್ಯರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯ ಐಸಿಯನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದರು. ಅವರು ಎಸ್‌ಡಿಪಿಒ ಮತ್ತು ಎಸ್‌ಪಿಗೆ ಫೋನ್ ಮೂಲಕ ವಿಷಯ ತಿಳಿಸಿದರು” ಎಂದು ಹೇಳಿದ್ದಾರೆ.

►ಪ್ರಕರಣ 5: ನ್ಯೂ ಮಾರ್ಕೆಟ್, ಕೋಲ್ಕತ್ತಾ

ಸರ್ ಸ್ಟುವರ್ಟ್ ಹಾಗ್ ಮಾರುಕಟ್ಟೆ, ಅಂದರೆ ನ್ಯೂ ಮಾರ್ಕೆಟ್ ಸಂಕೀರ್ಣದ ಹೊರಗಿನ ಟಿಎಂಸಿ ಪಕ್ಷದ ಕಚೇರಿಯನ್ನು ಬುಲ್ಡೋಝರ್‌ ಮೂಲಕ ಕೆಡವಲಾಯಿತು. ಸ್ಥಳದಲ್ಲಿ ಜೋರಾಗಿ ಸಂಗೀತ ಮೊಳಗುತ್ತಿದ್ದು, ಬಿಜೆಪಿ ಬೆಂಬಲಿಗರು ಸಂಭ್ರಮಿಸುತ್ತಿದ್ದರು.

ಬಿಜೆಪಿ ಧ್ವಜಗಳನ್ನು ಹಿಡಿದ ಜನರು ಬುಲ್ಡೋಝರ್‌ ಮೇಲೆ ನಿಂತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.

ಲಾಲ್‌ಬಜಾರ್ ಪೊಲೀಸರು, ನ್ಯೂ ಮಾರ್ಕೆಟ್ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ಸ್ಥಳದಲ್ಲಿದ್ದರೂ ಏನೂ ಮಾಡಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ Alt News ವರದಿ ಮಾಡಿದೆ. ಮಾಂಸದ ಅಂಗಡಿಯನ್ನು ನೆಲಸಮಗೊಳಿಸಲಾಗಿದೆ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರೇನ್ ಆರೋಪಿಸಿದ್ದರೂ, ಯಾವುದೇ ಪ್ರತ್ಯಕ್ಷದರ್ಶಿ ಅದನ್ನು ದೃಢಪಡಿಸಲಿಲ್ಲ.

ಅದೇ ಸಮಯದಲ್ಲಿ ಕೆಎಂಸಿ ಪ್ರಧಾನ ಕಚೇರಿಯ ಎದುರಿನ ಮತ್ತೊಂದು ಅಂಗಡಿಯನ್ನೂ ಕೆಡವಲಾಯಿತು. ಅಂಗಡಿ ಮಾಲೀಕರು ಟಿಎಂಸಿ ಬೆಂಬಲಿಗರಾಗಿದ್ದ ಕಾರಣ ಅವರನ್ನು ಗುರಿಯಾಗಿಸಿಕೊಂಡರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬುಲ್ಡೋಝರ್‌ ಮೂಲಕ ನೆಲಸಮಗೊಳಿಸುವ ಕ್ರಮ ಕ್ರಿಮಿನಲ್ ನ್ಯಾಯದ ಸಾಧನವಾಗಿ ಬಳಕೆಯಾಗುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವ್ಯವಸ್ಥೆಯ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರು. ಪ್ರಕರಣ ಅಥವಾ ವಿವಾದ ಕುರಿತು ನ್ಯಾಯಾಲಯ ತೀರ್ಪು ಬರುವ ಮುನ್ನವೇ ಅಧಿಕಾರಿಗಳು ಆರೋಪಿಗಳ ಮನೆ ಅಥವಾ ಅಂಗಡಿಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸುತ್ತಿದ್ದಾರೆ. ಈ ವಿವಾದಾತ್ಮಕ ಕ್ರಮದ ಜನಪ್ರಿಯತೆಯಿಂದಾಗಿ ಆದಿತ್ಯನಾಥ್ ಅವರನ್ನು ‘ಬುಲ್ಡೋಝರ್‌ ಬಾಬಾ’ ಎಂದೂ ಕರೆಯಲಾಗುತ್ತದೆ. ಮೇ 17, 2024ರಂದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ‘ಬುಲ್ಡೋಝರ್‌ ನ್ಯಾಯ’ವನ್ನು ಉಲ್ಲೇಖಿಸಿ, ಪ್ರತಿಪಕ್ಷಗಳು ಬುಲ್ಡೋಝರ್‌ ಅನ್ನು ಹೇಗೆ ಬಳಸಬೇಕು ಎಂಬುದನ್ನು ಯೋಗಿ ಆದಿತ್ಯನಾಥ್ ಅವರಿಂದ ಕಲಿಯಬೇಕು ಎಂದು ಹೇಳಿದ್ದರು.

►ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತನ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಉತ್ತರ 24 ಪರಗಣ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಬುಧವಾರ ರಾತ್ರಿ ರಥ್ ಅವರು ಕೋಲ್ಕತ್ತದಿಂದ ತಮ್ಮ ಫ್ಲಾಟ್‌ ಗೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಜೆಸ್ಸೋರ್ ರಸ್ತೆಯ ದೊಹರಿಯಾ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಚಂದ್ರನಾಥ್ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಪಶ್ಚಿಮ ಬಂಗಾಳದಲ್ಲಿ ಹತ್ಯೆಗೀಡಾದ ಕನಿಷ್ಠ ಮೂವರು ವ್ಯಕ್ತಿಗಳಲ್ಲಿ ರಥ್ ಕೂಡ ಒಬ್ಬರಾಗಿದ್ದಾರೆ. ಹಿಂಸಾಚಾರ ಮತ್ತು ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿ 400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

►ಬಂಗಾಳದ ಹೌರಾದಲ್ಲಿ ಹಿಂಸಾಚಾರ: ಬಾಂಬ್ ದಾಳಿ ನಡೆಸಿದ್ದು ಟಿಎಂಸಿ ಎಂದು ಆರೋಪಿಸಿದ ಬಿಜೆಪಿ

ಪಶ್ಚಿಮ ಬಂಗಾಳದ ಹೌರಾದ ಶಿಬ್‌ಪುರ ಪ್ರದೇಶದಲ್ಲಿ ಒಂದು ಗುಂಪು ಬಾಂಬ್ ಎಸೆಯುವುದು, ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡುವುದು ಮತ್ತು ಬೀದಿಗಳಲ್ಲಿ “ಅಲ್ಲಾಹು ಅಕ್ಬರ್” ಹಾಗೂ “ನಾರಾ-ಎ-ತಕ್ಬೀರ್” ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಶಿಬ್‌ಪುರದ ಚೌರಬಸ್ತಿ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ಇಬ್ಬರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಈ ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂದು ಬಿಜೆಪಿ ನೇರ ಆರೋಪ ಮಾಡಿದೆ.

ಬಿಜೆಪಿ ನಾಯಕರ ಪ್ರಕಾರ, ಸ್ಥಳೀಯ ನಾಯಕ ಶಮೀಮ್ ಅಹ್ಮದ್ ನೇತೃತ್ವದಲ್ಲಿ ಟಿಎಂಸಿ ಬೆಂಬಲಿಗರು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡ ನಂತರ ಹಿಂಸಾಚಾರ ಭುಗಿಲೆದ್ದಿತು. ಘರ್ಷಣೆಯ ವೇಳೆ ಕಲ್ಲು, ಇಟ್ಟಿಗೆ ಹಾಗೂ ಕಚ್ಚಾ ಬಾಂಬ್‌ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ಹೇಳಿದೆ.

ಇಬ್ಬರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಕೇಂದ್ರ ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಆರೋಪಗಳು ಅಥವಾ ಹಿಂಸಾಚಾರದಲ್ಲಿ ಭಾಗಿಯಾದವರ ಕುರಿತು ಅಧಿಕಾರಿಗಳು ಇನ್ನೂ ವಿವರವಾದ ಹೇಳಿಕೆ ನೀಡಿಲ್ಲ.

ಮೇ 4ರಂದು ಫಲಿತಾಂಶಗಳು ಪ್ರಕಟವಾದ ನಂತರದಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರಾಜಕೀಯ ಘರ್ಷಣೆಗಳು, ಬಾಂಬ್ ದಾಳಿಗಳು, ವಿಧ್ವಂಸಕ ಕೃತ್ಯಗಳು ಹಾಗೂ ಪ್ರತೀಕಾರದ ಹಿಂಸಾಚಾರ ವರದಿಯಾಗಿವೆ. ಈ ಹಿಂಸಾಚಾರಗಳಿಗೆ ಬಿಜೆಪಿ ಮತ್ತು ಟಿಎಂಸಿ ಪರಸ್ಪರ ಆರೋಪ ಮಾಡಿವೆ.

ಹೌರಾ ಹಿಂಸಾಚಾರವು ಉತ್ತರ 24 ಪರಗಣದ ಪಾಣಿಹಟಿಯಲ್ಲಿ ಬುಧವಾರ ತಡರಾತ್ರಿ ನಡೆದ ಮತ್ತೊಂದು ಘಟನೆಯ ನಂತರ ಸಂಭವಿಸಿದೆ. ದುಷ್ಕರ್ಮಿಗಳು ಕಚ್ಚಾ ಬಾಂಬ್‌ಗಳನ್ನು ಎಸೆದ ಪರಿಣಾಮ ಐದು ಬಿಜೆಪಿ ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಸೇಂಟ್ ಕ್ಸೇವಿಯರ್ ಸಂಸ್ಥೆಯ ಬಳಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ನಿವಾಸಿಗಳೊಂದಿಗೆ ಸಂವಹನ ನಡೆಸುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಮೋಟಾರ್‌ಸೈಕಲ್‌ನಲ್ಲಿ ಬಂದ ದಾಳಿಕೋರರು ಬಾಂಬ್‌ಗಳನ್ನು ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಮಧ್ಯಮಗ್ರಾಮದಲ್ಲಿ ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳ ಬಳಿಕ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News