ತನ್ನ ಏಳು ಮಕ್ಕಳ ಸಹಿತ 8 ಮಕ್ಕಳನ್ನು ಗುಂಡಿಕ್ಕಿ ಕೊಂದ ಶಮರ್ ಎಲ್ಕಿನ್ಸ್ ಯಾರು?
Photo Credit : NDTV
ಲೂಸಿಯಾನದ ಶ್ರವೆಪೋರ್ಟ್ ನ ಮನೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಎಂಟು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಶಂಕಿತನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಸತ್ತವರಲ್ಲಿ ಏಳು ಮಂದಿ ಶಂಕಿತನ ಸ್ವಂತ ಮಕ್ಕಳಾಗಿದ್ದರು. ಪೊಲೀಸರು ಈ ಪ್ರಕರಣವನ್ನು ಕೌಟುಂಬಿಕ ಹಿಂಸೆಯ ಪ್ರಕರಣ ಎಂದು ವಿವರಿಸಿದ್ದಾರೆ. ಶಮರ್ ಎಲ್ಕಿನ್ಸ್ ಎಂದು ಗುರುತಿಸಲಾದ ಶಂಕಿತನನ್ನು ನಂತರ ಕಾರಿನಲ್ಲಿ ಬೆನ್ನಟ್ಟಿದ ಪೊಲೀಸರು ಕೊಂದಿದ್ದಾರೆ.
ರವಿವಾರ ಸ್ಥಳೀಯ ಸಮಯ ಬೆಳಿಗ್ಗೆ 6 ಗಂಟೆಯ ನಂತರ ಹಲವಾರು ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಿಯಾದವರು 18 ತಿಂಗಳಿಂದ ಆರಂಭಿಸಿ ಹದಿಹರೆಯದವರಾಗಿದ್ದಾರೆ. ಬಹುತೇಕರನ್ನು ನಿದ್ದೆಯಲ್ಲಿಯೇ ಕೊಲೆ ಮಾಡಲಾಗಿದೆ.
ಪೊಲೀಸರು ಇನ್ನೂ ವಿವರ ಬಿಡುಗಡೆ ಮಾಡದೆ ಇದ್ದರೂ, ಮಾಜಿ ಕ್ಯಾಡೋ ಪ್ಯಾರಿಷ್ ಕಾನ್ಸ್ಟೇಬಲ್ ಪ್ಯಾಟ್ರಿಕ್ ಯಂಗ್ ಮಾಧ್ಯಮಗಳಿಗೆ ಶಂಕಿತ ಎಲ್ಕಿನ್ಸ್ ಕುರಿತ ವಿವರ ನೀಡಿದ್ದಾರೆ. ಎಲ್ಲರನ್ನೂ ಎಲ್ಕಿನ್ಸ್ ಸ್ವತಃ ಕೊಂದಿರುವುದನ್ನು ಅವರು ದೃಢಪಡಿಸಿದ್ದಾರೆ. ಶಂಕಿತ ಸ್ವಯಂ ಗುಂಡೇಟಿನಿಂದ ಸತ್ತಿದ್ದಾನೆಯೇ ಅಥವಾ ಪೊಲೀಸರ ಗುಂಡಿನ ದಾಳಿಯಲ್ಲಿ ಸತ್ತಿದ್ದಾನೆಯೇ ಎಂದು ಅಧಿಕಾರಿಗಳು ದೃಢಪಡಿಸಿಲ್ಲ. ಆದರೆ ಯಾವುದೇ ಅಧಿಕಾರಿಗೂ ಗಾಯಗಳಾಗಿಲ್ಲ ಎಂದು ಕಾನ್ಸ್ಟೇಬಲ್ ತಿಳಿಸಿದ್ದಾರೆ.
ಬಹು ಸ್ಥಳಗಳಲ್ಲಿ ಕೊಲೆ:
ಪೊಲೀಸರು ಮೂರು ನಿವಾಸಗಳನ್ನು ಅಪರಾಧ ನಡೆದ ಸ್ಥಳಗಳೆಂದು ಗುರುತಿಸಿದ್ದಾರೆ. ಆರಂಭದಲ್ಲಿ ಸೀಡರ್ ಗ್ರೋವ್ ನೆರೆಹೊರೆಯಲ್ಲಿ ಗುಂಡಿನ ಚಕಮಕಿ ನಡೆದಿತ್ತು. ನಂತರ ಪಶ್ಚಿಮ 79ನೇ ಬೀದಿ ಮತ್ತು ಹ್ಯಾರಿಸನ್ ಬೀದಿಯಲ್ಲಿರು ಮನೆಗಳಲ್ಲೂ ಕೊಲೆ ನಡೆದಿರುವ ವರದಿಯಾಗಿತ್ತು. ಮೊದಲ ಸ್ಥಳದಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಶಂಕಿತ ನಂತರ ಮತ್ತೊಂದು ನಿವಾಸಕ್ಕೆ ತೆರಳಿದ್ದ. ಆ ನಿವಾಸದಲ್ಲಿ ಹೆಚ್ಚಿನ ಮಕ್ಕಳು ಸಾವನಪ್ಪಿದ್ದಾರೆ. ಮೂರನೇ ಸ್ಥಳದಲ್ಲೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಒಂದು ಮಗುವಿನ ಮೃತದೇಹ ಛಾವಣಿಯಲ್ಲಿ ದೊರೆತರೆ, ಇನ್ನೊಂದು ಮಗು ತಪ್ಪಿಸಿಕೊಳ್ಳಲು ಹಾರಿ ಪ್ರಾಣಾಪಾಯವಿಲ್ಲದ ಗಾಯಗಳೊಂದಿಗೆ ಬದುಕುಳಿದಿದೆ.
ಬಲಿಯಾದವರಲ್ಲಿ ಶಂಕಿತನ ಮಕ್ಕಳೇ ಹೆಚ್ಚು:
ಎಲ್ಕಿನ್ಸ್ ತನ್ನ ಸ್ವಂತ ಮಕ್ಕಳನ್ನೇ ಸಾಯಿಸಿದ್ದಾನೆ. ಮೃತಪಟ್ಟ ಎಂಟು ಮಕ್ಕಳಲ್ಲಿ ಏಳು ಮಂದಿ ಎಲ್ಕಿನ್ಸ್ ಅವರ ಸ್ವಂತ ಮಕ್ಕಳಾಗಿದ್ದಾರೆ. ಎಂಟನೇ ಮಗು ಕುಟುಂಬದ ಪರಿಚಿತರ ಕುಟುಂಬಕ್ಕೆ ಸೇರಿದೆ. ಗಂಭೀರ ಗಾಯಗೊಂಡಿರುವ ಇಬ್ಬರು ಹಿರಿಯ ವಯಸ್ಕ ಮಹಿಳೆಯರಲ್ಲಿ ಒಬ್ಬರು ಶಂಕಿತನ ಪತ್ನಿಯಾದರೆ, ಮತ್ತೊಬ್ಬರು ಆತನ ಸ್ನೇಹಿತೆ. “ಮನೆಯೊಳಗೆ ಇದ್ದ ಕೆಲವು ಮಕ್ಕಳು ಶಂಕಿತನ ಕುಟುಂಬದವರಾಗಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ. ಒಂದು ಮನೆಯಲ್ಲಿ ಒಂಭತ್ತು ಮಕ್ಕಳಿದ್ದು, ಒಂದು ಮಗು ಮಾತ್ರ ಬದುಕುಳಿದಿದೆ.
ಸರಣಿ ಕೊಲೆಯ ನಂತರ ತಪ್ಪಿಸಿಕೊಳ್ಳುವ ಪ್ರಯತ್ನ:
ಗುಂಡು ಹಾರಿಸಿ ಮಕ್ಕಳನ್ನು ಮತ್ತು ಮಹಿಳೆಯರನ್ನು ಕೊಂದ ಮೇಲೆ ಎಲ್ಕಿನ್ಸ್ ಸ್ಥಳದಿಂದ ಓಡಿ ಹೋಗಿದ್ದಾನೆ. ವಾಹನ ಅಪಹರಿಸಿ ನೆರೆಯ ಬೋಸಿಯರ್ ಪ್ಯಾರಿಷ್ಗೆ ತೆರಳುವ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಶಂಕಿತ ಕಾರು ನಿಲ್ಲಿಸದೆ ಇದ್ದ ಕಾರಣ ಅಧಿಕಾರಿಗಳು ಗುಂಡು ಹಾರಿಸಬೇಕಾಗಿ ಬಂದಿದೆ. ಶಂಕಿತನ ಬಳಿ ಸಣ್ಣ ಕ್ಯಾಲಿಬರ್ ಹ್ಯಾಂಡ್ಗನ್ ಮತ್ತು ರೈಫಲ್ ಸ್ಟೈಲ್ನ ಪಿಸ್ತೂಲ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಬಲಿಯಾದವರನ್ನು ನಿದ್ರೆಯಲ್ಲಿ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ದಾಳಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕೌಟುಂಬಿಕ ಕಾರಣಗಳಿಂದ ಹಿಂಸೆಗೆ ಇಳಿದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನಿಸಿದ್ದಾರೆ.