ಕೃಷಿ ಕಸದಿಂದ ರಸ ತೆಗೆದ ಅವಳಿ ಸಹೋದರಿಯರು; ಪ್ರಶಂಸಾರ್ಹ ಹಸಿರು ಬ್ಯಾಟರಿ ಸಾಧನೆ
'ಫೋರ್ಬ್ಸ್ 30 ಅಂಡರ್ 30' ಪಟ್ಟಿಯಲ್ಲಿ ಸ್ಥಾನ
Photo Credit : indiatoday.in
ಒಡಿಶಾ ಮೂಲದ ನಿಶಿತಾ ಮತ್ತು ನಿಖಿತಾ ಬಲಿಯಾರ್ ಸಿಂಗ್ ಅವರಿಗೆ 2021ರಲ್ಲಿ ʼಫೋರ್ಬ್ಸ್ ಇಂಡಿಯಾ 30 ಅಂಡರ್ 30ʼ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಅವರ ಉದ್ಯಮ ಪ್ರಯಾಣದ ಪ್ರಮುಖ ಮೈಲಿಗಲ್ಲಾಗಿದೆ. ಆದರೆ ಈ ಮನ್ನಣೆಯ ಹಿಂದೆ ಅನಿಶ್ಚಿತತೆ, ತಪ್ಪುಗಳು, ವಿಫಲ ಪ್ರಯೋಗಗಳು ಮತ್ತು ವರ್ಷಗಳ ಕಲಿಕೆಯಿದೆ. ಆದರೆ ಈ ವಿವರಗಳು ಸಾಮಾಜಿಕ ಮಾಧ್ಯಮ ಮತ್ತು ಅವರ ಪ್ರೊಫೈಲ್ಗಳಲ್ಲಿ ವಿರಳವಾಗಿ ಬರುತ್ತದೆ.
ಭುವನೇಶ್ವರದ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಮತ್ತು ಡೀಪ್ ಟೆಕ್ ಸ್ಟಾರ್ಟಪ್ ‘ನೆಕ್ಸಸ್ ಪವರ್’ನ ಸಹ ಸಂಸ್ಥಾಪಕರಾದ ಅವಳಿ ಸಹೋದರಿಯರು, “ತಮ್ಮ ಸಾಧನೆ ಅಥವಾ ಕಂಪನಿ ನಿರ್ಮಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ಎದುರಿಸಿದ ಅನುಭವಗಳು ನಯವಾದ ಪ್ರೊಫೈಲ್ನಲ್ಲಿ ಕಂಡುಬರುವುದಿಲ್ಲ” ಎನ್ನುತ್ತಾರೆ.
“ಬಹಳಷ್ಟು ವಿಷಯಗಳು ಅಗೋಚರವಾಗಿರುತ್ತವೆ. ತಪ್ಪುಗಳು, ಗಾಯಗಳು ಮತ್ತು ನಿರ್ಧಾರ ಕೈಗೊಳ್ಳುವ ದೋಷಗಳು ಬಹುಶಃ ಅಗೋಚರವಾಗಿರುತ್ತವೆ. ಹೀಗಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುವ ವಿವರಗಳು, ತಮ್ಮ ಲಿಂಕ್ಡ್ಇನ್ ಪ್ರೊಫೈಲ್ನಲ್ಲಿ ಕಂಡು ಬರುವುದು ಬಹಳ ಪಾಲಿಶ್ ಮಾಡಿದ ಆವೃತ್ತಿಯಾಗಿರುತ್ತದೆ” ಎಂದು ನಿಶಿತಾ ಅಭಿಪ್ರಾಯಪಟ್ಟಿದ್ದಾರೆ.
ಸಹೋದರಿಯರ ಪ್ರಯಾಣದಲ್ಲಿ ಕುಟುಂಬ, ಸ್ನೇಹಿತರು, ಶಾಲೆ ಮತ್ತು ಕಾಲೇಜು ಸ್ನೇಹಿತರು, ಪ್ರಾದ್ಯಾಪಕರು, ಸರ್ಕಾರಿ ಸಂಸ್ಥೆಗಳು, ಹೂಡಿಕೆದಾರರು ಮತ್ತು ಸಂಶೋಧನಾ ಸಂಸ್ಥೆಗಳು ವಿಭಿನ್ನ ಹಂತಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. “ಕಂಪನಿ ದಿಕ್ಕುತಪ್ಪಿದಾಗ ಮತ್ತೆ ಹಳಿಗೆ ತರಲು ಮತ್ತೊಬ್ಬರ ಸಹಾಯದ ಅಗತ್ಯವಿತ್ತು. ಪ್ರೇರಣೆ, ಬಂಡವಾಳ, ಈಕೋಸಿಸ್ಟಂ ಆ್ಯಕ್ಸೆಸ್ ಅಥವಾ ನಂಬಿದ ಯಾರಾದರೂ ನೀಡಿದ ಬೆಂಬಲವಾಗಿರಬಹುದು” ಎಂದು ನಿಖಿತಾ ಹೇಳಿದ್ದಾರೆ.
ಸಹೋದರಿಯರು ಬಾಲ್ಯದಿಂದಲೂ ಯಂತ್ರಗಳು, ವಿಮಾನಗಳು ಮತ್ತು ಅಟೋಮೊಬೈಲ್ಗಳಲ್ಲಿ ಆಸಕ್ತಿ ಹೊಂದಿದ್ದರು. 2017-18 ಸುಮಾರಿಗೆ ಅವರು ವಿದ್ಯುತ್ ವಾಹನ ನಿರ್ಮಿಸಲು ಬಯಸಿದ್ದರು. ಆದರೆ ಪ್ರೊಟೋಟೈಪ್ಗಳಲ್ಲಿ ಕೆಲಸ ಮಾಡುವಾಗ ಬ್ಯಾಟರಿಯ ಸವಾಲು ಅರಿತುಕೊಂಡರು. ಹೀಗೆ ಅವರು ಬ್ಯಾಟರಿ ಸೆಲ್ಗಳು, ಉತ್ಪಾದನೆ ಮತ್ತು ವಸ್ತುಗಳನ್ನು ಸಂಶೋಧಿಸಲು ಪ್ರಾರಂಭಿಸಿದರು. ಬ್ಯಾಟರಿ ತಂತ್ರಜ್ಞಾನದಲ್ಲಿ ಕೈಗಾರಿಕಾ ಮತ್ತು ಕೃಷಿ ಅವಶೇಷಗಳಿಂದ ಪಡೆದ ಜೈವಿಕ ವಸ್ತುಗಳನ್ನು ಬಳಸುವ ಸಾಧ್ಯತೆಗೆ ಕಾರಣವಾಯಿತು. ಈ ಕಲ್ಪನೆ ಅಂತಿಮವಾಗಿ 2019ರಲ್ಲಿ ‘ನೆಕ್ಸಸ್ ಪವರ್’ ಆಗಿ ಮಾರ್ಪಟ್ಟಿತು.
“ನಾವು ಮ್ಯಾನೇಜ್ಮೆಂಟ್ ಪದವೀಧರರು. 11 ಮತ್ತು 12ನೇ ತರಗತಿಗಳಲ್ಲಿ ವಾಣಿಜ್ಯ ಅಧ್ಯಯನ ಮಾಡಿದ್ದೇವೆ. ನಂತರ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಓದಿರುವ ಕಾರಣದಿಂದ ವೈಜ್ಞಾನಿಕ ಜರ್ನಲ್ಗಳನ್ನು ಅರ್ಥಮಾಡಿಕೊಳ್ಳುವುದು, ಉಪಕರಣಗಳು, ಪ್ರಕ್ರಿಯೆಗಳು ಮತ್ತು ರಾಸಾಯನಿಕ ಹೆಸರುಗಳು ಬಹುಶಃ ಅತ್ಯಂತ ಕಠಿಣ ಭಾಗವಾಗಿತ್ತು” ಎನ್ನುತ್ತಾರೆ ನಿಶಿತಾ.
ಕೋವಿಡ್ ಸಂದರ್ಭವನ್ನು ಅವರು ಈ ಕಲಿಕೆಗೆ ಬಳಸಿಕೊಂಡರು. ತಾಂತ್ರಿಕ ಕೋರ್ಸ್ಗಳನ್ನು ತೆಗೆದುಕೊಂಡರು. ವೈಜ್ಞಾನಿಕ ಸಂಶೋಧನೆಗಳನ್ನು ಓದಿದರು. ಕ್ರಮೇಣ ಪಿಎಚ್ಡಿ ಮತ್ತು ವರ್ಷಗಳ ಅನುಭವವಿರುವ ಸಂಶೋಧಕರನ್ನು ಒಳಗೊಂಡ ತಂಡವನ್ನು ನಿರ್ಮಿಸಿದರು. ಆದರೆ ತಜ್ಞರನ್ನು ನೇಮಿಸುವುದು ಸಾಕಾಗಿರಲಿಲ್ಲ. ವಿಜ್ಞಾನವನ್ನು ಸ್ವತಃ ಅರ್ಥಮಾಡಿಕೊಳ್ಳಬೇಕಾಗಿತ್ತು. ಆಗಷ್ಟೇ ಅವರಿಗೆ ಮಾರ್ಗದರ್ಶನ ನೀಡಬಹುದಾಗಿತ್ತು.
ಕೋವಿಡ್ ಸಂದರ್ಭದಲ್ಲಿ ಅವರು ಈ ವಿಚಾರಗಳಲ್ಲಿ ಕಳೆದರು. ಆ ಸಂದರ್ಭದ ಅವರ ಮುಖ್ಯ ಪ್ರಯೋಗವೆಂದರೆ ರಾಜ್ಮಾ-ಚೋಲೆ ಪ್ರಯತ್ನವಾಗಿತ್ತು. ದೈನಂದಿನ ದ್ವಿದಳ ಧಾನ್ಯಗಳಿಂದ ಅವರು ಎಲೆಕ್ಟ್ರೋಡ್ಗಳನ್ನು ಸಿಂಥೆಸೈಸ್ ಮಾಡಿ ಸ್ಥಿರವಾದ 5V ಔಟ್ಪುಟ್ ದಾಖಲಿಸಿದರು. ಈ ಪ್ರಯೋಗ ಅವರಿಗೆ ಆತ್ಮವಿಶ್ವಾಸ ನೀಡಿತು. ಡೀಪ್ ಟೆಕ್ ಕಂಪನಿಗೆ ಅಡಿಪಾಯ ದೊರೆಯಿತು. ಆದರೂ ಆರಂಭ ವಿಫಲವಾದ ಪ್ರಯೋಗಗಳಿಂದಲೇ ತುಂಬಿತ್ತು.
ಒಂದು ಹಂತದಲ್ಲಿ ಅವರ ಮೆಟೀರಿಯಲ್ ಸಿಂಥೆಸಿಸ್ ಮತ್ತು ಸೆಲ್ ಉತ್ಪಾದನಾ ತಂಡಗಳು ಪರಸ್ಪರರನ್ನು ದೂಷಿಸುತ್ತಿದ್ದರು. ಏಕೆಂದರೆ ಸೆಲ್ಗಳು ನಿರೀಕ್ಷಿತ ಪರಿಣಾಮ ಕೊಡುತ್ತಿರಲಿಲ್ಲ. ನಂತರ ಅದಕ್ಕೂ ಅವರು ಪರಿಹಾರ ಕಂಡುಕೊಂಡರು.
ನೆಕ್ಸಸ್ ಇದೀಗ ಕಮರ್ಶಿಲೈಸೇಶನ್ ಕಡೆಗೆ ಮುನ್ನುಗ್ಗುತ್ತಿದ್ದರೂ ಸವಾಲು ಇನ್ನೂ ಮುಂದುವರಿದಿದೆ. ಸರ್ಟಿಫಿಕೇಶನ್ ಮತ್ತು ಲೈಸೆನ್ಸ್ ಪಡೆಯುವುದರಿಂದ ತೊಡಗಿ ಉತ್ಪಾದನಾ ವೆಚ್ಚದವರೆಗೆ, ಪೂರೈಕೆ ಸರಪಳಿಗಳು ಮತ್ತು ಬ್ಯಾಟರಿ ತಂತ್ರಜ್ಞಾನ ವಿಕಸನಗೊಳ್ಳುತ್ತಿರುವ ವೇಗದವರೆಗೆ ಸವಾಲುಗಳು ಮುಂದುವರಿದಿವೆ. ನಿಶಿತಾ ಮತ್ತು ನಿಖಿತಾ ನಡುವೆ ಅಭಿಪ್ರಾಯಭೇದ ಹೆಚ್ಚು ಇದೆ. ಒಬ್ಬರು ಮಹತ್ವಾಕಾಂಕ್ಷಿಯಾಗಿದ್ದರೆ, ಮತ್ತೊಬ್ಬರು ಕಾರ್ಯತಂತ್ರಕ್ಕೆ ಹೆಚ್ಚು ಮನ್ನಣೆ ಕೊಡುವವರು. ಅದಕ್ಕೆ ಅನುಗುಣವಾಗಿ ಜವಾಬ್ದಾರಿ ವಿಂಗಡಣೆಯಾಗಿದೆ.
ಕೃಪೆ: indiatoday.in