ಸಂವಿಧಾನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ : ಸಚಿವ ಶರಣಬಸಪ್ಪ ದರ್ಶನಾಪುರ
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ
ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಹಗಲಿರುಳು ಶ್ರಮಿಸಿ ಬಲಿಷ್ಠ ಹಾಗೂ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ದೇಶದ ಐಕ್ಯತೆಗಾಗಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ದೇಶಭಕ್ತಿಯನ್ನು ಹೆಚ್ಚಿಸಿ ಅಂಧಕಾರವನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜಾತಿ, ಭಾಷೆಗಳ ಬೇಧವಿಲ್ಲದೆ ನಾಡು–ನುಡಿ ಕಟ್ಟಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಐತಿಹಾಸಿಕ ದಿನವಾಗಿದ್ದು, ನಮ್ಮ ಹಿರಿಯರ ಪರಿಶ್ರಮ ಹಾಗೂ ತ್ಯಾಗವನ್ನು ಸ್ಮರಿಸಿ ಅದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.
ಸಹೋದರತ್ವ, ಸಮಗ್ರತೆ ಹಾಗೂ ಎಲ್ಲರೂ ಸಮಾನರೆಂಬ ತತ್ವಗಳನ್ನೊಳಗೊಂಡ ಸಂವಿಧಾನದ ಕರಡನ್ನು ಸುಮಾರು 2 ವರ್ಷ 11 ತಿಂಗಳುಗಳ ಅವಧಿಯಲ್ಲಿ ರಚಿಸಿ, ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಡಾ. ಅಂಬೇಡ್ಕರ್ ಅವರು ದೇಶಕ್ಕೆ ಅರ್ಪಿಸಿದ್ದಾರೆ. ಅದನ್ನು ನಾವು ಗೌರವದಿಂದ ಪಾಲಿಸಬೇಕು ಎಂದು ಹೇಳಿದರು.
ಪ್ರಸ್ತುತ ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬಡವರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ತಿಳಿಸಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಆರ್ಟಿಕಲ್ 371(ಜೆ) ಜಾರಿಗೊಳಿಸಲಾಗಿದ್ದು, ಈ ಭಾಗದ ಯುವಕ–ಯುವತಿಯರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ವರ್ಷಕ್ಕೆ ಸುಮಾರು 5,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಕಟ್ಟಕಡೆಯ ತಾಲೂಕಾದ ವಡಗೇರಾದಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳಿಗಾಗಿ ಕೊನೆಹಳ್ಳಿ ಜನರಿಗಾಗಿ 350 ಕೋಟಿ ರೂ. ಮೌಲ್ಯದ ಯೋಜನೆ ಜಾರಿಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಕೆಬಿಜಿಎನ್‌ಎಲ್ ಮಟ್ಟದಲ್ಲಿ ರೈತರಿಗೆ ಶಕ್ತಿ ತುಂಬುವ ಕಾರ್ಯಗಳು ನಡೆಯುತ್ತಿವೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ವಿವಿಧ ಕವಾಯತ್ತು ತುಕಡಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೌರವ ವಂದನೆ ಸಲ್ಲಿಸಿವೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವದ ಮಹತ್ವ ಸಾರುವ ದೇಶಭಕ್ತಿ ಗೀತೆಗಳಿಗೆ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಇದೇ ವೇಳೆ ಪತ್ರಿಕೋದ್ಯಮ, ಕೃಷಿ, ಮಹಿಳಾ ಸ್ವಾವಲಂಬನೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗಣರಾಜ್ಯೋತ್ಸವದ ಜಿಲ್ಲಾ ಮಟ್ಟದ ಗೌರವ ಸತ್ಕಾರ ನೀಡಿ ಅಭಿನಂದಿಸಲಾಯಿತು.